ಮಂಗಳವಾರ, ಮಾರ್ಚ್ 9, 2021
31 °C
‘ನಮ್ಮ ಕಾಂಗ್ರೆಸ್’ ಪಕ್ಷದ ಸಂಸ್ಥಾಪಕ ಅಧ್ಯಕ್ಷ ವರ್ತೂರು ಪ್ರಕಾಶ್ ಘೋಷಣೆ

ಅಹಿಂದ ವರ್ಗಕ್ಕೆ ನ್ಯಾಯ ‘ನಮ್ಮ ಕಾಂಗ್ರೆಸ್’ ಧ್ಯೇಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಹಿಂದ ವರ್ಗಕ್ಕೆ ನ್ಯಾಯ ‘ನಮ್ಮ ಕಾಂಗ್ರೆಸ್’ ಧ್ಯೇಯ

ಯಲಬುರ್ಗಾ: ‘ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರದ ಗದ್ದುಗೆ ಹಿಡಿಯಲು ಅಹಿಂದ ವರ್ಗದವರನ್ನು ಬಳಸಿಕೊಂಡು ಅಭಿವೃದ್ಧಿಗೊಳಿಸುವಲ್ಲಿ ಸಂಪೂರ್ಣ ನಿರ್ಲಕ್ಷಿಸಿದ್ದರಿಂದ ಅವರಿಗೆ ತಕ್ಕಪಾಠ ಕಲಿಸಲು ಕಾಲ ಸನ್ನಿಹಿತವಾಗಿದೆ’ ಎಂದು ‘ನಮ್ಮ ಕಾಂಗ್ರೆಸ್’ ಪಕ್ಷದ ಸಂಸ್ಥಾಪಕ ವರ್ತೂರು ಪ್ರಕಾಶ್‌ ಹೇಳಿದರು‌.

ಪಟ್ಟಣದ ಬುದ್ಧ –ಬಸವ– ಅಂಬೇಡ್ಕರ್ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ನಮ್ಮ ಕಾಂಗ್ರೆಸ್ ಪಕ್ಷ’ ಸಂಘಟನಾ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

‘ರಾಷ್ಟ್ರೀಯ ಪಕ್ಷಗಳಿಂದ ಆಗುತ್ತಿರುವ ನಿರಂತರ ಶೋಷಣೆಗೆ ಬೇಸತ್ತು ನಮ್ಮ ಕಾಂಗ್ರೆಸ್ ಪಕ್ಷದ ಮೂಲಕ ಅಲ್ಪಸಂಖ್ಯಾತರ, ಹಿಂದುಳಿದವರ ಹಾಗೂ ದಲಿತ ಸಮುದಾಯಗಳ ಸಮಗ್ರ ಅಭಿವೃದ್ಧಿಗೆ ಶ್ರಮಿಸುವ ಉದ್ದೇಶ ಹೊಂದಲಾಗಿದೆ. ರಾಜ್ಯದ ಅನೇಕ ಭಾಗಗಳಲ್ಲಿ ಪಕ್ಷ ಸಂಘಟನೆಗೆ ಸಭೆಗಳನ್ನು ನಡೆಸಿದ ಸಂದರ್ಭದಲ್ಲಿ ನಿರೀಕ್ಷೆಗೂ ಮೀರಿ ಬೆಂಬಲ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಗೆ ಭಾರೀ ಹಿನ್ನೆಡೆ ಯಾಗಲಿದೆ’ ಎಂದು ವಿವರಿಸಿದರು.

‘ಅಹಿಂದ ಹೆಸರು ಹೇಳಿಕೊಂಡು ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ತಮ್ಮ ಸ್ವಾರ್ಥಕ್ಕಾಗಿ ಮೇಲ್ವರ್ಗದವರಿಗೆ ಮಣೆ ಹಾಕಿದರು. ಕೊಪ್ಪಳದಲ್ಲಿ ಸಿದ್ದರಾಮಯ್ಯನವರು ಸ್ಪರ್ಧಿಸಿದ ಸಂದರ್ಭದಲ್ಲಿ ಸೋಲಿಸಿದವರಿಗೆ ಆದ್ಯತೆ ನೀಡಿ ಅಹಿಂದ ವರ್ಗಕ್ಕೆ ಅನ್ಯಾಯ ಮಾಡಿದ್ದಾರೆ. ಅದರ ಪರಿಣಾಮ ಜಿಲ್ಲೆಯಲ್ಲಿಯೇ ಅತ್ಯಲ್ಪ ಸಂಖ್ಯೆಯಲ್ಲಿರುವ ಮೇಲ್ವರ್ಗದ ಮುಖಂಡರ ಕಪಿಮುಷ್ಟಿಯಲ್ಲಿ ರಾಜಕೀಯ, ಅಧಿಕಾರ ಹಾಗೂ ಅಂತಸ್ತು ಸಿಲುಕಿಕೊಂಡಿದೆ. ಈ ಎಲ್ಲ ಆತಂಕಗಳಿಂದ ಮುಕ್ತಿ ಹೊಂದಬೇಕಾದರೆ ಅಹಿಂದ ವರ್ಗ ಒಗ್ಗೂಡುವುದು ಅನಿವಾರ್ಯವಾಗಿದೆ’ ಎಂದು ಅಭಿಪ್ರಾಯಪಟ್ಟರು.

ಸಚಿವ ಬಸವರಾಜ ರಾಯರಡ್ಡಿ ಅವರು ವ್ಯಾಪಕ ಭ್ರಷ್ಟಾಚಾರ ಒಂದೇ ವರ್ಷದಲ್ಲಿ ಮಾಡಿದ್ದಾರೆ. ಅಂಕಪಟ್ಟಿ, ಲ್ಯಾಪ್‌ ಟಾಪ್ ಹಾಗೂ ಅಕ್ರಮ ನೇಮಕಾತಿ ಹಗರಣಗಳ ಸುಳಿಯಲ್ಲಿ ಸಿಲುಕಿ, ಅವರ ಪಕ್ಷದವರಿಂದಲೇ ಟೀಕೆಗೆ ಗುರಿಯಾಗಿದ್ದಾರೆ. ಆದರೂ ಅಧಿಕಾರದಲ್ಲಿ ಮುಂದುವರೆದಿದ್ದು ನೈತಿಕತೆ ಕಳೆದುಕೊಂಡಿದ್ದರ ಸಂಕೇತ. ಮುಳುಗುವ ಹಡಗಿನಂತಿರುವ ಕಾಂಗ್ರೆಸ್ ನಮಗೆ ಪೈಪೋಟಿಯಲ್ಲ. ಬಿಜೆಪಿ ಮಾತ್ರ ಪ್ರತಿಸ್ಪರ್ಧಿ’ ಎಂದು ಹೇಳಿದರು.

‘ಹೊಸ ಪಕ್ಷದ ಸಂಘಟನೆ ಉದ್ದೇಶದಿಂದ ಇದೇ ಡಿ.19ರಂದು ಕೂಡಲಸಂಗಮದಲ್ಲಿ ಪಕ್ಷದ ಉದ್ಘಾಟನೆಗೆ ಸಿದ್ಧತೆ ಕೈಗೊಳ್ಳಲಾಗಿದೆ. ರಾಜ್ಯದ ವಿವಿಧ ಮೂಲೆಗಳಿಂದ ಸುಮಾರು 5 ಲಕ್ಷಕ್ಕೂ ಅಧಿಕ ಸಂಖ್ಯೆಯ ಜನರು ಸೇರಿಸುವ ಉದ್ದೇಶ ಹೊಂದಲಾಗಿದೆ. ನಂತರ ಮುಂದಿನ ವರ್ಷ ಜನವರಿ ಮೊದಲ ವಾರದಲ್ಲಿ ಯಲಬುರ್ಗಾದಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ’ ಎಂದು ತಿಳಿಸಿದರು.

ಅಹಿಂದ ತಾಲ್ಲೂಕು ಸಂಚಾಲಕ ಅಂದಾನಗೌಡ ಪೊಲೀಸ್‌ ಪಾಟೀಲ, ಅಹಿಂದ ಯುವ ಮುಖಂಡ ಡಿ.ಕೆ.ಪರಶುರಾಮ ಛಲವಾದಿ, ನ್ಯಾಯವಾದಿ ಲಂಕೇಶ ಮಾತನಾಡಿದರು.

ರ‍್ಯಾಲಿ: ವರ್ತೂರ್‌ ಪ್ರಕಾಶ ಮತ್ತು ಅಹಿಂದ ಮುಖಂಡರು ನೇತೃತ್ವದಲ್ಲಿ ಕನಕದಾಸ ವೃತ್ತದಿಂದ ಪಟ್ಟಣದಲ್ಲಿ ಬೃಹತ್  ಬೈಕ್ ‍ರ‍್ಯಾಲಿ ನಡೆಯಿತು.

ಮುಖಂಡ ವೀರನಗೌಡ ಪೊಲೀಸ್‌ ಪಾಟೀಲ, ಸುರೇಶ ಜಮಾದಾರ, ದೇವಪ್ಪ ಹಟ್ಟಿ, ಶೇಖರ ಗುರಾಣಿ, ಶಿವು ರಾಜೂರು, ಅಹಿಂದ ಮುಖಂಡರು ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.