ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡಂಚಿನಲ್ಲಿ ನೈರ್ಮಲ್ಯದ ಮಿಂಚು!

Last Updated 11 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

‘ನನ್ನ ಪ್ರೀತಿಯ ನಾಗರಿಕ ಬಂಧುಗಳೇ, ನಿಮ್ಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಮಾತನಾಡುತ್ತಿದ್ದೇನೆ. ಇದು ಬಯಲು ಬಹಿರ್ದೆಸೆ ಮುಕ್ತ ಗ್ರಾಮವನ್ನಾಗಿ ಮಾಡುವ ಸಮರದ ಪ್ರಕಟಣೆ. ನಮ್ಮ ಹೆಣ್ಣುಮಕ್ಕಳ ಮಾನ ರಕ್ಷಣೆಗಾಗಿ, ಗೌರವದ ಬದುಕಿಗಾಗಿ ಪ್ರತಿಯೊಂದು ಮನೆಯಲ್ಲಿ ಶೌಚಾಲಯ ನಿರ್ಮಿಸಿಕೊಳ್ಳಿ...’

ಇದು ಯಾವುದೋ ಸಭೆಯಲ್ಲಿ ಕೇಳಿಬಂದ ಭಾಷಣದ ತುಣುಕಲ್ಲ; ಸಾಂಸ್ಕೃತಿಕ ನಗರಿ ಹಾಗೂ ದೇಶದ ಸ್ವಚ್ಛನಗರಿ ಎಂಬ ಹೆಗ್ಗಳಿಕೆಗೆ ಒಳಗಾದ ಮೈಸೂರು ಜಿಲ್ಲೆಯ ಕುಗ್ರಾಮಗಳಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯೊಬ್ಬರು ಬಯಲು ಬಹಿರ್ದೆಸೆ ಮುಕ್ತ ವಾತಾವರಣ ನಿರ್ಮಾಣಕ್ಕೆ ಕಂಡುಕೊಂಡ ವಿನೂತನ ಮಾರ್ಗ.

ನಂಜನಗೂಡು ತಾಲ್ಲೂಕಿನ ಹರದನಹಳ್ಳಿ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಎಂ.ಸಿ.ಮಹದೇವ ಸ್ವಾಮಿ ಇಂಥ ಆಂದೋಲನ ನಡೆಸುತ್ತಿದ್ದು, ತಮ್ಮ ವ್ಯಾಪ್ತಿಗೆ ಒಳಪಡುವ ಇಬ್ಜಾಲ, ಕಾಟೂರು, ಅಲ್ಲಯ್ಯನಪುರ, ಬಸಾಪುರ, ಹುಚ್ಚಗಣಿ... ಹೀಗೆ ತಾಲ್ಲೂಕಿನ ಕಾಡಂಚಿನ ಗ್ರಾಮಗಳಲ್ಲಿ ಬಯಲು ಬಹಿರ್ದೆಸೆ ತಡೆಗಟ್ಟಲು ಪ್ರಚಾರಾಂದೋಲನ ಆರಂಭಿಸಿದ್ದಾರೆ.

ಬಯಲಿನಲ್ಲಿ ಮಲ ವಿಸರ್ಜನೆ ಮಾಡುವುದರಿಂದ ಆಗುವ ದುಷ್ಪರಿಣಾಮ, ಗರ್ಭಿಣಿ ಮತ್ತು ಬಾಣಂತಿಯರ ಸಂಕಟ, ಋತುಮತಿಯರಾದ ಹೆಣ್ಣು ಮಕ್ಕಳು ಅನುಭವಿಸುವ ಪಾಡು ಹಾಗೂ ಕತ್ತಲಿಗಾಗಿ ಕನವರಿಸುವ ಮಹಿಳೆಯರ ಸಂಕಷ್ಟವನ್ನು‌ ಬಿಡಿಸಿ ಹೇಳುವ ಮೂಲಕ ಜನರ ಗಮನ ಸೆಳೆಯುತ್ತಿದ್ದಾರೆ.

ಪಂಚಾಯಿತಿ ನೌಕರರಾದ ವಿಜಯ್‌ಕುಮಾರ, ಮಂಜು, ಸುರೇಶ್, ನಾಗೇಂದ್ರ, ಬಸವರಾಜು ಹಾಗೂ ಆಟೊ ಚಾಲಕರಾದ ಮಹೇಶ್, ಸಿದ್ದಪ್ಪ ಅವರನ್ನು ಒಳಗೊಂಡ ಅಭಿವೃದ್ಧಿ ಅಧಿಕಾರಿ ನೇತೃತ್ವದ ತಂಡ ನಿತ್ಯ ಊರೂರು ಸುತ್ತುತ್ತದೆ. ಮುಂಜಾನೆ 5.30ರ ವೇಳೆಗೆ ಟಂಟಂ ಮೂಲಕ ಕಾರ್ಯಾಚರಣೆಗೆ ಧುಮುಕುತ್ತದೆ. ತಮಟೆ, ಮೈಕ್‌ ಹಿಡಿದುಕೊಂಡು ಪ್ರಚಾರಕ್ಕೆ ಇಳಿಯುವ ಈ ತಂಡ, ನಿತ್ಯ ಬೆಳಿಗ್ಗೆ ಮತ್ತು ಸಂಜೆ ಅಭಿಯಾನ ನಡೆಸುತ್ತದೆ.

ಮಲಕ್ಕೆ ಮಣ್ಣು ಹಾಕುತ್ತಾ...: ಶೌಚಾಲಯವನ್ನು ಕಟ್ಟಿಸುವುದ ನ್ನಷ್ಟೇ ಪರಮೋಚ್ಛ ಗುರಿಯನ್ನಾಗಿ ಮಾಡಿಕೊಳ್ಳದೆ ಶೌಚಕ್ಕಾಗಿ ಬಯಲಿನಲ್ಲಿ ಕೂರುವುದನ್ನು ತಡೆಗಟ್ಟುವುದು ಈ ತಂಡದ ಪ್ರಮುಖ ಉದ್ದೇಶ. ಅಲ್ಲಿ–ಇಲ್ಲಿ ಕಕ್ಕ ಮಾಡಿದ ಸ್ಥಳದಲ್ಲಿ ಮಣ್ಣನ್ನು ಹರಡುವ ಕೆಲಸವೂ ಇಲ್ಲಿ ಶುರುವಾಗಿದೆ. ಪಂಚಾಯಿತಿಯ ವ್ಯಾಪ್ತಿಯ ಗ್ರಾಮಗಳ ಬಯಲಿನಲ್ಲಿ ಎಲ್ಲೆಲ್ಲಿ ಮಲ ಮೂತ್ರ ಇದೆಯೋ ಅಲ್ಲಲ್ಲಿ ಮಣ್ಣು ಸುರಿಯುವ ಹಾಗೂ ಕಾಂಕ್ರಿಟ್‌ ರಸ್ತೆಯಾಗಿದ್ದರೆ ನೀರು ಹಾಕಿ ಸ್ವಚ್ಛಗೊಳಿಸುವ ಕೆಲಸ ನಡೆದಿದೆ. ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಈ ಕಾರ್ಯಕ್ಕೆ ಕೈಜೋಡಿ ಸಿದ್ದು, ಬಯಲಿನಲ್ಲಿ ಮಲ ವಿಸರ್ಜನೆ ಮಾಡುವುದು ಅವಮಾನ ಎಂಬಂತೆ ಬಿಂಬಿಸಿ ಶೌಚಾಲಯ ಬಳಸುವುದಕ್ಕೆ ಪ್ರೇರಣೆ ನೀಡಲಾಗುತ್ತಿದೆ. ಪ್ರತಿಯೊಬ್ಬರ ಕೈಯಲ್ಲೂ ಮೊಬೈಲ್‌ ಇದೆ. ಪ್ರತಿಯೊಂದು ಮನೆಯಲ್ಲಿ ಟಿ.ವಿ, ಬೈಕ್‌ಗಳಿವೆ. ಇವು ನಮಗೆ ಬದುಕಿನ ಅನಿವಾರ್ಯ ಭಾಗವಾಗಿವೆ. ಆದರೆ, ಶೌಚಾಲಯ ಮಾತ್ರ ನಮಗೆ ಅನಿವಾರ್ಯವಾಗಿಲ್ಲ ಯಾಕೆ? ಸಾಲ ಮಾಡಿ ಬೈಕ್‌ ಕೊಳ್ಳುವ ನೀವು, ಸರ್ಕಾರ ಸಹಾಯಧನ ಕೊಟ್ಟರೂ ಶೌಚಾಲಯವನ್ನು ಕಟ್ಟಿಕೊಳ್ಳದಿರಲು ಏನು ಕಾರಣ’ ಎಂದು ಜನರನ್ನು ಪ್ರಶ್ನಿಸುತ್ತಿದೆ ಈ ಜಾಗೃತಿ ತಂಡ.

ಪ್ರತಿಷ್ಠೆಗಾಗಿ ಮನೆಯ ಸದಸ್ಯರ ಮದುವೆಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತೀರಿ. ಆದರೆ, ನಿಮ್ಮ ಮನೆಗೆ ಬರುವ ಹೆಣ್ಣು ಮಗಳಿಗೆ ಸಾವಿರಾರು ರೂಪಾಯಿ ಖರ್ಚು ಮಾಡಿ ಶೌಚಾಲಯ ಕಟ್ಟಿಕೊಳ್ಳಲು ಹಿಂದೇಟು ಹಾಕುತ್ತೀರಿ. ಮದುವೆ ಪ್ರತಿಷ್ಠೆಯ ವಿಷಯವಾದರೆ, ನಮ್ಮ ಮಗಳು ಅಥವಾ ಸೊಸೆ ಬಯಲಿಗೆ ಹೋಗುವುದು ಮಾನದ ಪ್ರಶ್ನೆಯಲ್ಲವೇ ಎಂದು ಕೇಳುವ ಮೂಲಕ ಶೌಚಾಲಯದ ಅಗತ್ಯವನ್ನು ಮನದಟ್ಟು ಮಾಡುತ್ತಿದೆ.

ಕಾರ್ಯಾಚರಣೆ ವಿಧಾನ: ಅಭಿವೃದ್ಧಿ ಅಧಿಕಾರಿಯ ನೇತೃತ್ವದಲ್ಲಿ ಮೂರು ತಂಡಗಳನ್ನು ರಚಿಸಿಕೊಳ್ಳಲಾಗಿದೆ. ಈ ತಂಡದ ಸದಸ್ಯರು ಪಂಚಾಯಿತಿಯ ಕಚೇರಿ ಹಾಗೂ ಗ್ರಾಮಗಳ ಸರ್ಕಾರಿ ಶಾಲೆಗಳಲ್ಲಿ ವಾಸ್ತವ್ಯ ಮಾಡಿ, ಮುಂಜಾನೆಯೇ ಅಖಾಡಕ್ಕೆ ಇಳಿಯುತ್ತಿದ್ದಾರೆ. ಪ್ರಸಾರ ತಂಡ (ಪ್ರಚಾರದ ಹೊಣೆ), ಸಂದರ್ಶನ ತಂಡ (ಶೌಚಾಲಯ ಹೊಂದಿಲ್ಲದ ಮನೆಗೆ ಭೇಟಿ, ಮನವೊಲಿಕೆ), ದಾಖಲೀಕರಣ ತಂಡ (ಶೌಚಾಲಯ ಹೊಂದಿಲ್ಲದ ಕುಟುಂಬದ ಮಾಹಿತಿ ಸಂಗ್ರಹ, ಜಿಪಿಎಸ್‌ ಮೂಲಕ ಜಾಗ ಗುರುತಿಸುವಿಕೆ, ಸಹಾಯಧನ ಮಂಜೂರಾತಿ) ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದ್ದು, ಪ್ರತಿ ತಂಡದಲ್ಲಿ ಸ್ವಯಂಸೇವಕರೂ ಇದ್ದಾರೆ. ಕೆಲವು ವಿಶಿಷ್ಟ ಪ್ರಕರಣಗಳಲ್ಲಿ ಪಿಡಿಒ ನೇತೃತ್ವದಲ್ಲಿ ಜಾಗ ವಿವಾದ, ಹಣದ ಸಮಸ್ಯೆ, ಕಲಹದಂತಹ ಪ್ರಕರಣಗಳನ್ನು ಬಗೆಹರಿಸಲಾಗುತ್ತಿದೆ.

ಪಂಚಾಯಿತಿ ವ್ಯಾಪ್ತಿಯಲ್ಲಿ ಇರುವ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಭೇಟಿ ನೀಡಿ ‘ಬಯಲು ಬಹಿರ್ದೆಸೆ ಮುಕ್ತ ಶಾಲೆ’ಗಾಗಿ ಶ್ರಮಿಸಲಾಗುತ್ತಿದೆ. ಮಕ್ಕಳೊಂದಿಗೆ ಸಂವಾದ ನಡೆಸಿ ಶೌಚಾಲಯ ಬಳಕೆ ಬಗ್ಗೆ ತಿಳಿವಳಿಕೆ ನೀಡಲಾಗುತ್ತಿದೆ. ಮೈಸೂರು ಜಿಲ್ಲಾ ಪಂಚಾಯಿತಿ ಸಿಇಒ ಶಿವಶಂಕರ್‌, ತಾಲ್ಲೂಕು ಪಂಚಾಯಿತಿ ಇಒ ರೇವಣ್ಣ ತಂಡಕ್ಕೆ ಬೆಂಬಲವಾಗಿ ನಿಂತಿದ್ದಾರೆ.

ರಾಜ್ಯದಲ್ಲಿ ಶೌಚಾಲಯ ನಿರ್ಮಾಣದಲ್ಲಿ ಮೈಸೂರಿಗೆ 18ನೇ ಸ್ಥಾನ. ಮೈಸೂರು ಜಿಲ್ಲೆಯಲ್ಲಿ ನಂಜನಗೂಡು ತಾಲ್ಲೂಕಿಗೆ ಕೊನೆಯ ಸ್ಥಾನ. ಆದರೆ, ಅತಿ ಹೆಚ್ಚು ಶೌಚಾಲಯಗಳು ನಿರ್ಮಾಣ ಆಗಬೇಕಿರುವುದು ಈ ತಾಲ್ಲೂಕಿನಲ್ಲಿಯೇ. ಹರದನಹಳ್ಳಿ ಪಂಚಾಯಿತಿಯ ವ್ಯಾಪ್ತಿಯಲ್ಲಿ 1,300 ಕುಟುಂಬಗಳಿದ್ದು, 690 ಕುಟುಂಬಗಳು ಶೌಚಾಲಯ ಹೊಂದಿವೆ. ಉಳಿದ 610 ಕುಟುಂಬಗಳ ಶೌಚಾಲಯ ನಿರ್ಮಾಣ ಬಹುತೇಕ ಮುಗಿಯುವ ಹಂತದಲ್ಲಿದ್ದು, ಡಿಸೆಂಬರ್‌ ಅಂತ್ಯಕ್ಕೆ ತಾಲ್ಲೂಕಿನ ಕಾಡಂಚಿನ ಮೊದಲ ಬಯಲು ಬಹಿರ್ದೆಸೆ ಮುಕ್ತ ಗ್ರಾಮ ಪಂಚಾಯಿತಿಯಾಗಿ ಘೋಷಣೆಯಾಗಲಿದೆ.

ಕೋಳಿ ಗೂಡಾಗಿದ್ದ ಶೌಚಾಲಯಗಳು: ‘ಹರದನಹಳ್ಳಿ ಗ್ರಾಮದಲ್ಲಿ 340 ಕುಟುಂಬಗಳು ಶೌಚಾಲಯ ಕಟ್ಟಿಕೊಂಡಿದ್ದರೂ ಅವುಗಳಲ್ಲಿ ಕೆಲ ಶೌಚಾಲಯಗಳು ಕೋಳಿಗೂಡು, ಸ್ನಾನದಮನೆ, ಸೌದೆ, ಮರಳು, ಜಲ್ಲಿ ಹಾಗೂ ಗುಜರಿ ಸಂಗ್ರಹ ಕೋಣೆಯಾಗಿ ಬಳಕೆಯಾಗುತ್ತಿದ್ದವು. ಶೌಚಾಲಯಕ್ಕಾಗಿ ಅನುದಾನ ಪಡೆದು ಬಳಸದೇ ಇರುವ ಕುಟುಂಬಗಳ ವಿರುದ್ಧ ಅನುದಾನ ದುರ್ಬಳಕೆ ಮಾಡಿಕೊಂಡ ಪ್ರಕರಣ ದಾಖಲಿಸುತ್ತೇವೆ ಎಂಬ ಎಚ್ಚರಿಕೆ ನೀಡಿದ ನಂತರ ಗ್ರಾಮಸ್ಥರು ಅವುಗಳ ಬಳಕೆಗೆ ಮುಂದಾಗಿದ್ದಾರೆ’ ಎನ್ನುತ್ತಾರೆ ಮಹದೇವಸ್ವಾಮಿ.

ಅಧಿಕಾರಿಗಳ ದಂಡು: ಶೌಚಾಲಯ ಜಾಗೃತಿಯ ನೆಪದಲ್ಲಿ ಈ ಗ್ರಾಮಗಳ ಹಲವು ಸಮಸ್ಯೆಗಳು ಬಗೆಹರಿದಿವೆ. ಶೌಚಾಲಯ ಜಾಗೃತಿಗಾಗಿ ಜಿಲ್ಲಾ ಪಂಚಾಯಿತಿ ಸಿಇಒ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ, ತಹಶೀಲ್ದಾರ್‌, ಪೊಲೀಸ್‌ ಇನ್‌ಸ್ಪೆಕ್ಟರ್‌ ಹಾಗೂ ಸ್ಥಳೀಯ ಜನಪ್ರತಿನಿಧಿಗಳನ್ನು ಗ್ರಾಮಗಳಿಗೆ ಕರೆಸಿ ಗ್ರಾಮಸ್ಥರೊಂದಿಗೆ ಸಂವಾದ ನಡೆಸಿದೆ ಶೌಚಾಲಯ ಜಾಗೃತಿ ತಂಡ. ದಶಕಗಳಿಂದ ಬಗೆಹರಿಯದೆ ಉಳಿದಿದ್ದ ಹಲವು ಸಮಸ್ಯೆಗಳು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ತಂಡವೇ ಈ ಊರಿಗೆ ಬಂದಿದ್ದರಿಂದ ನೀಗಿವೆ.

ವಿಶಿಷ್ಟ ಕಾರ್ಯಕ್ರಮ ಹಾಗೂ ಶೌಚಾಲಯ ನಿರ್ಮಾಣದ ಕಾರ್ಯಕ್ಕಾಗಿ ಈ ಪಂಚಾಯಿತಿಗೆ ‘ಗಾಂಧಿ ಗ್ರಾಮ’ ಪುರಸ್ಕಾರ ಸಿಕ್ಕಿದೆ. ಶೌಚಾಲಯ ನಿರ್ಮಾಣ ಸಂಬಂಧ ಜಿಲ್ಲೆಗೆ ಕೆಲ ದಿನಗಳ ಹಿಂದೆ ಭೇಟಿ ನೀಡಿದ್ದ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಸ್ವಯಂಸೇವಾ ಸಂಸ್ಥೆಗಳ ಗಮನವನ್ನೂ ಸೆಳೆದಿದೆ. ಜಾಗೃತಿ ತಂಡದ ಪ್ರತಿನಿತ್ಯದ ಈ ಕಾಯಕವನ್ನು ನೋಡಿ, ಮರುಕಪಟ್ಟ ಜನ ಬಯಲು ಬಹಿರ್ದೆಸೆಗೆ ಹೋಗುವುದನ್ನು ನಿಲ್ಲಿಸಿದ್ದಾರೆ. ಗ್ರಾಮಸ್ಥರಲ್ಲಿ ಆಗಿರುವ ಈ ಬದಲಾವಣೆ ನೋಡಲು ನೀವು ಈ ಊರಿಗೆ ಭೇಟಿ ನೀಡಬೇಕಷ್ಟೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT