ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗಶಂಕರದಲ್ಲಿ ಇಂದಿನಿಂದ ಯುವ ನಾಟಕೋತ್ಸವ

Last Updated 11 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ರಂಗಭೂಮಿಯ ಜೀವಂತಿಕೆ ಇರುವುದು ಅಂದಂದಿನ ಪ್ರಸ್ತುತತೆಯಲ್ಲಿ. ಅಂಥ ಪ್ರಸ್ತುತತೆ ದಕ್ಕುವುದು ನಾಟಕಕಾರ, ನಿರ್ದೇಶಕ ಮತ್ತು ಪ್ರೇಕ್ಷಕನ ಮೂಲಕ. ಈ ಮೂಲಕವೇ ರಂಗಭೂಮಿ ತಲೆಮಾರಿನಿಂದ ತಲೆಮಾರಿನ ನಡುವಿನ ಕೊಂಡಿಯನ್ನು ಭದ್ರಪಡಿಸಬಲ್ಲದು. ಇಂದಿನ ತಲೆಮಾರಿಗೆ ರಂಗಭೂಮಿಯನ್ನು ತಲುಪಿಸಬೇಕೆನ್ನುವ ಚೆಂದನೆಯ ಕನಸು ಕಟ್ಟಿಕೊಂಡಿದೆ ರಂಗಶಂಕರ. ಈ ನಿಟ್ಟಿನಲ್ಲಿ ಎರಡು ವರ್ಷಗಳಿಂದ ಕಾರ್ಯತತ್ಪರವಾಗಿರುವ ರಂಗಶಂಕರ, ರಾಜ್ಯಾದ್ಯಂತ ಯುವನಿರ್ದೇಶಕರ ಪಡೆ ಕಟ್ಟುವ ಕೆಲಸದಲ್ಲಿ ತೊಡಗಿಕೊಂಡಿದೆ.

‘ಮೇಕಿಂಗ್ ಥಿಯೇಟರ್’ ನಡೆಸುತ್ತಿರುವ ರಂಗಶಂಕರ, ಆಯ್ದ 20 ಜಿಲ್ಲೆಗಳ 35 ವರ್ಷ ಮೀರದ ಯುವ ನಿರ್ದೇಶಕರಿಗೆ ರಂಗಭೂಮಿಯ ಸಮಗ್ರ ಅನುಭವವನ್ನು ತರಬೇತಿ, ಕಾರ್ಯಾಗಾರ ರೂಪದಲ್ಲಿ ನೀಡುತ್ತಿದೆ. ಇಂಥ ಕಾರ್ಯಾಗಾರದಲ್ಲಿ ರೂಪುಗೊಂಡ ಐವರು ಯುವ ನಿರ್ದೇಶಕರಿಗಾಗಿಯೇ ರಂಗಶಂಕರ ಯುವ ನಾಟಕೋತ್ಸವನ್ನೂ ನಡೆಸುತ್ತಿದೆ. ಈ ಬಾರಿ ಡಿಸೆಂಬರ್ 12ರಿಂದ 16ರವರೆಗೆ ರಂಗಶಂಕರದಲ್ಲಿ ಐವರು ಯುವ ನಿರ್ದೇಶಕರ ಕೌಶಲದ ಪ್ರದರ್ಶನಕ್ಕೆ ವೇದಿಕೆ ನಿರ್ಮಿಸಲಾಗಿದೆ.

‘ನಾಟಕದ ಬಗ್ಗೆ ಹವ್ಯಾಸ ಮತ್ತು ಅಭ್ಯಾಸ ಇರುವ ಇಪ್ಪತ್ತು ಯುವ ನಿರ್ದೇಶಕರನ್ನು ಆರಿಸಿಕೊಂಡು ಅವರಿಗೆ ರಂಗಶಂಕರದಲ್ಲಿ ಖ್ಯಾತ ರಂಗಕರ್ಮಿಗಳು ಒಂದು ತಿಂಗಳ ಕಾಲ ತರಬೇತಿ ನೀಡುತ್ತಾರೆ. ಈ ಯುವ ನಿರ್ದೇಶಕರು ಆಯ್ದುಕೊಂಡ ನಾಟಕವನ್ನು ಅವರವರ ಜಿಲ್ಲೆಗಳಲ್ಲಿಯೇ ಪ್ರದರ್ಶಿಸುತ್ತಾರೆ. ಈ ಬಾರಿ 20 ಜಿಲ್ಲೆಗಳ ಬದಲಾಗಿ 16 ಜಿಲ್ಲೆಗಳಲ್ಲಿ ಮಾತ್ರ ನಾಟಕ ಪ್ರದರ್ಶನ ನಡೆದಿದೆ. ನಾಲ್ವರು ನಿರ್ದೇಶಕರ ನಾಟಕಗಳು ಸೂಕ್ತವೆನಿಸದ ಕಾರಣಕ್ಕಾಗಿ ಕೈಬಿಡಲಾಗಿದೆ. ಹಿರಿಯ ರಂಗಕರ್ಮಿಗಳಾದ ಶಶಿಧರ ಬಾರಿಘಾಟ್, ಶ್ರೀಪತಿ ಮಂಜನಬೈಲ್, ಕೆ.ಜಿ. ಕೃಷ್ಣಮೂರ್ತಿ ಅವರು 16 ಜಿಲ್ಲೆಗಳಲ್ಲಿ ಸಂಚರಿಸಿ, 5 ಅತ್ಯುತ್ತಮ ನಾಟಕಗಳನ್ನು ಈ ಬಾರಿಯ ರಂಗಶಂಕರ ಯುವ ನಾಟಕೋತ್ಸವಕ್ಕೆ ಆಯ್ಕೆ ಮಾಡಿದ್ದಾರೆ’ ಎಂದು ಮಾಹಿತಿ ನೀಡುತ್ತಾರೆ ರಂಗಶಂಕರದ ಕ್ರಿಯೇಟಿವ್ ಡೈರೆಕ್ಟರ್ ಎಸ್.ಸುರೇಂದ್ರನಾಥ್.

ಪ್ರದರ್ಶನವಾದ ನಾಟಕಗಳಿಗೆ ₹ 30 ಸಾವಿರ ಧನಸಹಾಯವನ್ನೂ ನೀಡಲಾಗುತ್ತದೆ. ಬೆಂಗಳೂರಿನಲ್ಲಿ ನಡೆಯುವ ಯುವ ನಾಟಕೋತ್ಸದಲ್ಲಿ ಐದು ನಾಟಕಗಳಿಗೆ ಮಾತ್ರ ಅವಕಾಶವಿದೆ. ಈ ಬಾರಿ ಯುವ ನಿರ್ದೇಶಕರಾದ ರೋಹಿತ್ ಬೈಕಾಡಿ, ಶ್ರೀನಿವಾಸ ಮೂರ್ತಿ, ಕಾರ್ತಿಕ್ ವಿ.ಗೌತಮ್, ಚಂದ್ರಕೀರ್ತಿ ಬಿ, ಪ್ರಶಾಂತ್ ಉದ್ಯಾವರ ಅವರ ನಾಟಕಗಳು ಪ್ರದರ್ಶನವಾಗಲಿವೆ ಎಂದು ಮಾಹಿತಿ ನೀಡುತ್ತಾರೆ ಅವರು.

‘ಅನುಭವದ ಜತೆಗೇ ನಾಟಕದ ಅರಿವು ಬೆಳೆಯುತ್ತದೆ. ಟೈಟಾನ್ ಜತೆಗೂಡಿ ರಂಗಶಂಕರ ಹಮ್ಮಿಕೊಂಡಿರುವ ‘ಮೇಕಿಂಗ್ ಥಿಯೇಟರ್’ ಮೂಲಕ ಮೂರು ವರ್ಷಗಳಲ್ಲಿ 60 ಯುವ ನಿರ್ದೇಶಕರನ್ನು ಸಜ್ಜುಗೊಳಿಸಬೇಕು ಎಂಬುದು ನಮ್ಮ ಆಸೆ. ಇದರಲ್ಲಿ ಕನಿಷ್ಠ 10 ಮಂದಿ ಒಳ್ಳೆಯ ನಿರ್ದೇಶಕರು ದೊರೆತರೂ ನಮ್ಮ ಶ್ರಮ ಸಾರ್ಥಕವಾಗುತ್ತದೆ. ಮುಂದಿನ ವರ್ಷಕ್ಕೆ ಟೈಟಾನ್ ಸಹಯೋಗ ಕೊನೆಗೊಳ್ಳಲಿದೆ. ಆದರೆ, ಯುವ ನಾಟಕೋತ್ಸವವನ್ನು ನಿರಂತರವಾಗಿ ನಡೆಸಬೇಕನ್ನುವ ಉದ್ದೇಶ ರಂಗಶಂಕರದ್ದು. ಈ ಒತ್ತಾಸೆಯ ಹಿಂದೆ ರಂಗಕರ್ಮಿಗಳಾದ ರಘುನಂದನ್, ಜಮೀಲ್ ಅಹಮದ್, ಅಭಿಷೇಕ್ ಹೀಗೆ ಅನೇಕರ ಪರಿಶ್ರಮವಿದೆ’ ಎಂಬುದು ಅವರ ವಿವರಣೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT