ಸೋಮವಾರ, ಮಾರ್ಚ್ 8, 2021
29 °C

ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ...

ಪ್ರತಿಯೊಂದು ಕೆಲಸದ ಹಿಂದೆ ಹಣ, ಕೀರ್ತಿ, ಯಶಸ್ಸು ಮೇಳೈಸಿರುತ್ತದೆ. ಸೇವಾ ಮನೋಭಾವ ಇರುವುದು ತೀರಾ ಅಪರೂಪ. ಹಾಗಾಗಿಯೇ, ಕನಕದಾಸರು ‘ಎಲ್ಲಾರು ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ...’ ಎಂದು ಅರ್ಥಗರ್ಭಿತವಾಗಿ ಹೇಳಿದ್ದಾರೆ. ಈ ಕೀರ್ತನೆಯ ಪದಗಳನ್ನು ಇಟ್ಟುಕೊಂಡೇ ‘ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಸಿನಿಮಾದ ಮೂಲಕ ಎರಡು ತಲೆಮಾರುಗಳ ಕಥೆ ಹೇಳಲು ಹೊರಟಿದ್ದಾರೆ ನಿರ್ದೇಶಕ ನರೇಂದ್ರಬಾಬು. ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಕೂಡ ಅವರದ್ದೇ.

‘ನನ್ನ ತಮ್ಮ ಶಂಕರ’ ಪುಸ್ತಕದ ಬಿಡುಗಡೆ ವೇಳೆ ಅನಂತನಾಗ್‌ ಸರ್ ಅವರನ್ನು ಭೇಟಿ ಮಾಡಿದ್ದೆ. ಅವರಿಗೆ ಮೂರು ಕಥೆಗಳ ಬಗ್ಗೆ ಹೇಳಿದೆ. ಅವರು ಈ ಕಥೆಯನ್ನು ಆಯ್ಕೆ ಮಾಡಿಕೊಂಡರು. ಅವರು ಪ್ರಶಾಂತ ಸಮುದ್ರ ಇದ್ದಂತೆ. ಸಮುದ್ರ ಎಲ್ಲಾ ನದಿಗಳನ್ನು ಸ್ವೀಕರಿಸುತ್ತದೆ. ಅಂತೆಯೇ ಅವರು ಹೊಸಬರಿಗೆ ಅವಕಾಶ ಕಲ್ಪಿಸಿದ್ದಾರೆ. ಗಾಯತ್ರಿ ಮೇಡಂ ಕೂಡ ಸಲಹೆ ಕೊಟ್ಟಿದ್ದಾರೆ ಎಂದರು ನಿರ್ದೇಶಕ ನರೇಂದ್ರಬಾಬು.

ಚಿತ್ರದ ಸನ್ನಿವೇಶಕ್ಕೆ ತಕ್ಕಂತೆ ಅದ್ಭುತವಾದ ಕಟ್ಟಡದ ಅಗತ್ಯವಿತ್ತಂತೆ. ಅನಂತನಾಗ್‌ ಅವರ ಸಲಹೆಯಂತೆ ದುಬೈನ ಬುರ್ಜ್ ಖಲೀಫಾ ಕಟ್ಟಡದಲ್ಲಿ ಸಿನಿಮಾದ ಚಿತ್ರೀಕರಣ ಮಾಡಲಾಗಿದೆಯಂತೆ. ಪಾಲುದಾರರೇ ಅಲ್ಲಿನ ಸಂಪೂರ್ಣ ವೆಚ್ಚ ಭರಿಸಿದ್ದಾರಂತೆ.

ನಟ ಅನಂತನಾಗ್, ‘ನಿರ್ದೇಶಕರು ರಂಗಭೂಮಿ ಹಿನ್ನೆಲೆಯಿಂದ ಬಂದಿದ್ದಾರೆ. ಎಲ್ಲದರ ಬಗ್ಗೆ ಅವರಿಗೆ ಅರಿವು ಇದೆ. ಕಬೀರ ಚಿತ್ರದ ರಮಾನಂದ ಪಾತ್ರದಲ್ಲಿ ಮೋಕ್ಷ, ದೀಕ್ಷೆ, ಕೃಪೆ ಏನೂ ಇಲ್ಲ. ಎಲ್ಲವೂ ಪ್ರೇಮ ಅಂತ ಹೇಳಿದಾಗ ಅವರ ಬುದ್ಧಿವಂತಿಕೆಯ ಅರಿವಾಯಿತು. ಪ್ರತಿದಿನ ಅವರು ಚನ್ನಪಟ್ಟಣದಿಂದ ಮನೆಗೆ ಬಂದು ಕಥೆ ಹೇಳುವ ರೀತಿಯೇ ಚೆನ್ನಾಗಿತ್ತು’ ಎಂದು ನಿರ್ದೇಶಕರ ಬದ್ಧತೆಗೆ ಮೆಚ್ಚುಗೆ ಸೂಚಿಸಿದರು.

‘ಗಾರ್ಮೆಂಟ್ಸ್ ವ್ಯಾಪಾರ ಮಾಡುವ ಶ್ರೀಮಂತ ಮಹಿಳೆಯಾಗಿ ಕಾರ್ಪೊರೇಟ್ ಸ್ಟೈಲ್‍ನಲ್ಲಿ ಅನಂತನಾಗ್‌ ಸರ್ ಜೊತೆ ನಟಿಸಿರುವುದು ಖುಷಿ ನೀಡಿದೆ’ ಎಂದರು ನಾಯಕಿ ರಾಧಿಕಾ ಚೇತನ್.

‘ಅನಂತನಾಗ್ ಅವರೊಂದಿಗೆ ಮೂರನೇ ಚಿತ್ರ ನಿರ್ಮಾಣ ಮಾಡುವ ಅವಕಾಶ ಸಿಕ್ಕಿದೆ. ಯೂಟರ್ನ್‌ನಂತೆ ರಾಧಿಕಾ ಅವರಿಗೆ ಹೆಸರು ಬರಲಿದೆ’ ಎಂದರು ನಿರ್ಮಾಪಕ ಹರೀಶ್‍ ಶೇರಿಗಾರ್.

ನಟಿ ಗಾಯತ್ರಿ ಅನಂತನಾಗ್‌ ಚಿತ್ರದ ಹಾಡುಗಳನ್ನು ಲೋಕಾರ್ಪಣೆ ಮಾಡಿದರು. ಹಿಂದೂಸ್ತಾನಿ ಸಂಗೀತಗಾರ ರಾಮಚಂದ್ರ ಹಡಪದ್ ಈ ಚಿತ್ರದ ನಾಲ್ಕು ಗೀತೆಗಳಿಗೆ ಸಂಗೀತ ಸಂಯೋಜಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.