ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದೇಶಿ ಮರಳು ಮಾರಾಟ: ಖಾಸಗಿಯವರಿಗೂ ಅವಕಾಶ

ಎರಡು ದಿನಗಳಲ್ಲಿ ಹೊಸ ನಿಯಮ ಪ್ರಕಟಿಸಲಿರುವ ಗಣಿ ಮತ್ತು ಭೂ ವಿಜ್ಞಾನ ಇಲಾಖೆ
Last Updated 11 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಮಂಗಳೂರು: ರಾಜ್ಯ ಸರ್ಕಾರಿ ಸ್ವಾಮ್ಯದ ಮೈಸೂರು ಸೇಲ್ಸ್‌ ಇಂಟರ್‌ನ್ಯಾಷಲ್‌ (ಎಂಎಸ್‌ಐಎಲ್‌) ಜೊತೆಯಲ್ಲೇ ಖಾಸಗಿ‌‌‌‌ಯವರೂ ವಿದೇಶಿ ಮರಳು ಆಮದು ಮಾಡಿಕೊಂಡು, ರಾಜ್ಯದ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅವಕಾಶ ನೀಡಲಿದೆ. ಇದಕ್ಕೆ ಸಂಬಂಧಿಸಿದ ಪರಿಷ್ಕೃತ ನಿಯಮಗಳು ಎರಡು ದಿನಗಳಲ್ಲಿ ಪ್ರಕಟವಾಗಲಿವೆ.

ರಾಜ್ಯದಲ್ಲಿ ಉದ್ಭವಿಸಿರುವ ಮರಳಿನ ಕೊರತೆಯನ್ನು ನೀಗಿಸಲು ಎಂಎಸ್‌ಐಎಲ್‌ ಮೂಲಕ ವಿದೇಶದಿಂದ ಮರಳು ಆಮದು ಮಾಡಿಕೊಂಡು, ಮಾರಾಟ ಮಾಡಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿತ್ತು. ಅದಕ್ಕೆ ಪೂರಕವಾಗಿ ಗಣಿ ಮತ್ತು ಖನಿಜ (ಉಪ ಖನಿಜ) ನಿಯಮಗಳಿಗೆ ತಿದ್ದುಪಡಿ ತರುವ ಪ್ರಕ್ರಿಯೆ ಆರಂಭವಾಗಿತ್ತು. ಸರ್ಕಾರಿ ಮತ್ತು ಖಾಸಗಿಯವರಿಗೆ ಮರಳು ಆಮದು, ಮಾರಾಟಕ್ಕೆ ಅವಕಾಶ ನೀಡುವ ಅಂಶವನ್ನು ಈ ತಿದ್ದುಪಡಿಯಲ್ಲಿ ಸೇರಿಸಲಾಗಿದೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ (ಉಪ ಖನಿಜ) ಉಪ ನಿರ್ದೇಶಕ ಎಂ.ಸಿ.ಕುಮಾರ್‌, ‘ವಿದೇಶಿ ಮರಳನ್ನು ಆಮದು ಮಾಡಿಕೊಂಡು ರಾಜ್ಯದ ಜನರಿಗೆ ಪೂರೈಸುವ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ. ಅದನ್ನು ಜಾರಿಗೊಳಿಸುವ ಹಂತದಲ್ಲಿ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಿಗೆ ಮಾತ್ರ ಅವಕಾಶ ಕಲ್ಪಿಸಲು ಸಾಧ್ಯವಿಲ್ಲ. ಈ ಅಂಶವನ್ನು ಗಮನದಲ್ಲಿ ಇರಿಸಿಕೊಂಡು ನಿಯಮಗಳನ್ನು ತಿದ್ದುಪಡಿ ಮಾಡಲಾಗುತ್ತಿದೆ’ ಎಂದರು.

ಎಂಎಸ್‌ಐಎಲ್‌ ಸೇರಿದಂತೆ ಯಾವುದೇ ಸರ್ಕಾರಿ ಸಂಸ್ಥೆ ಹಾಗೂ ಯಾವುದೇ ಖಾಸಗಿ ವ್ಯಕ್ತಿ ಅಥವಾ ಸಂಸ್ಥೆಗಳು ವಿದೇಶಗಳಿಂದ ಮರಳು ಆಮದು ಮಾಡಿಕೊಳ್ಳಲು ಅವಕಾಶ ನೀಡಲಾಗುತ್ತಿದೆ. ಆಮದು ಮಾಡಿಕೊಂಡ ಮರಳನ್ನು ಸಾಗಣೆ ಮತ್ತು ಮಾರಾಟ ಮಾಡುವುದಕ್ಕೆ ಸಂಬಂಧಿಸಿದಂತೆಯೂ ಕೆಲವು ಮಾರ್ಗಸೂಚಿಗಳನ್ನು ಹೊರಡಿಸಲಾಗುವುದು. ಅವುಗಳನ್ನು ಪೂರೈಸುವ ಎಲ್ಲರಿಗೂ ಅವಕಾಶ ದೊರೆಯುತ್ತದೆ ಎಂದು ಅವರು ಹೇಳಿದರು.

ಒಜಿಎಲ್‌ಗೂ ಅನ್ವಯ: ಕೇಂದ್ರ ಸರ್ಕಾರದಿಂದ ಮುಕ್ತ ಸಾಮಾನ್ಯ ಪರವಾನಗಿ (ಒಜಿಎಲ್‌) ಪಡೆದುಕೊಂಡು ಮರಳು ಆಮದು ಮಾಡಿಕೊಳ್ಳುವವರಿಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹೊಸ ನಿಯಮಗಳು ಅನ್ವಯವಾಗುತ್ತವೆ. ವಿದೇಶದಿಂದ ರಾಜ್ಯದ ಬಂದರು ಪ್ರವೇಶಿಸುವವರೆಗೆ ಮಾತ್ರ ಒಜಿಎಲ್‌ ಆಧಾರದಲ್ಲಿ ವಹಿವಾಟು ನಡೆಸಬಹುದು. ಅಲ್ಲಿಂದ ಮರಳನ್ನು ಹೊರಕ್ಕೆ ಸಾಗಿಸುವುದು ಮತ್ತು ಮಾರಾಟ ಮಾಡಲು ರಾಜ್ಯದ ನಿಯಮಗಳ ಅನುಸಾರ ಪರವಾನಗಿ ಪಡೆಯಬೇಕಾಗುತ್ತದೆ ಎಂದು ವಿವರಿಸಿದರು.

ಮರಳು ಆಮದು ಮತ್ತು ಮಾರಾಟ ಮಾಡುವವರಿಗೆ ಕೆಲವು ಅರ್ಹತೆಗಳನ್ನು ನಿಗದಿ ಮಾಡಲು ಇಲಾಖೆ ನಿರ್ಧರಿಸಿದೆ. ಅವುಗಳನ್ನು ಸರಿದೂಗಿಸಿದ ಬಳಿಕವೇ ಪರವಾನಗಿ ದೊರೆಯುತ್ತದೆ. ವಿದೇಶಿ ಮರಳು ಮತ್ತು ಸ್ಥಳೀಯ ಮರಳು ಮಿಶ್ರಣವಾಗಿ ಮಾರುಕಟ್ಟೆ ಪ್ರವೇಶಿಸದಂತೆ ನಿಯಂತ್ರಿಸುವ ಬಗ್ಗೆಯೂ ಇಲಾಖೆಯಲ್ಲಿ ಚರ್ಚೆ ನಡೆಯುತ್ತಿದೆ. ಈ ಸಂಬಂಧ ಕೆಲವು ಮಾರ್ಗಸೂಚಿಗಳನ್ನು ಪ್ರಕಟಿಸುವ ಸಾಧ್ಯತೆ ಇದೆ.

ಎರಡು ಅರ್ಜಿ ಸಲ್ಲಿಕೆ: ವಿದೇಶಿ ಮರಳು ಆಮದು ಮತ್ತು ಮಾರಾಟಕ್ಕೆ ಅವಕಾಶ ಕೋರಿ ಎಂಎಸ್‌ಐಎಲ್‌ ಸೇರಿದಂತೆ ಇಬ್ಬರಿಂದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಅರ್ಜಿಗಳು ಸಲ್ಲಿಕೆಯಾಗಿವೆ. ಈ ಪೈಕಿ ಒಂದು ಖಾಸಗಿ ಸಂಸ್ಥೆಯ ಅರ್ಜಿ. ನಿಯಮಗಳ ತಿದ್ದುಪಡಿ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಈ ಅರ್ಜಿಗಳ ಪರಿಶೀಲನೆ ಆರಂಭವಾಗಲಿದೆ ಎಂದು ಕುಮಾರ್ ತಿಳಿಸಿದರು.

ತಮಿಳುನಾಡಿನಲ್ಲಿ ಮರಳು ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಕೆಲವರು ಸೇರಿದಂತೆ ಹಲವು ಖಾಸಗಿ ಸಂಸ್ಥೆಗಳು ರಾಜ್ಯದಲ್ಲಿ ವಿದೇಶಿ ಮರಳು ಆಮದು, ಮಾರಾಟ ಆರಂಭಿಸುವುದಕ್ಕೆ ತುದಿಗಾಲ ಮೇಲೆ ನಿಂತಿವೆ. ನಿಯಮಗಳ ತಿದ್ದುಪಡಿ ಅಂತಿಮಗೊಂಡ ಬಳಿಕ ಹಲವು ಅರ್ಜಿಗಳು ಸಲ್ಲಿಕೆಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಮಾರಾಟ ಮಾಡದಂತೆ ಸೂಚನೆ

ಚೆನ್ನೈನ ಆಕಾರ್‌ ಎಂಟರ್‌ಪ್ರೈಸಸ್‌ ಎಂಬ ಕಂಪೆನಿ ಕೇಂದ್ರ ಸರ್ಕಾರದ ಮುಕ್ತ ಸಾಮಾನ್ಯ ಪರವಾನಗಿ (ಒಜಿಎಲ್‌) ಬಳಸಿಕೊಂಡು ಮಲೇಷ್ಯಾದಿಂದ 52,169 ಟನ್‌ ಮರಳನ್ನು ಆಮದು ಮಾಡಿಕೊಂಡಿದೆ. ಈ ಮರಳು ನವ ಮಂಗಳೂರು ಬಂದರಿನಲ್ಲಿದೆ. ಅದನ್ನು ಬಂದರಿನಿಂದ ಹೊರಕ್ಕೆ ಸಾಗಿಸದಂತೆ ಮತ್ತು ಮಾರಾಟ ಮಾಡದಂತೆ ಸೂಚನೆ ನೀಡಲಾಗುವುದು ಎಂದು ಎಂ.ಸಿ.ಕುಮಾರ್‌ ತಿಳಿಸಿದರು.

‘ಮರಳು ಮಾರಾಟಕ್ಕೆ ಸಂಬಂಧಿಸಿದ ನಿಯಮಗಳ ತಿದ್ದುಪಡಿ ಜಾರಿಯಾದ ಬಳಿಕವೇ ಆಕಾರ್‌ ಕಂಪೆನಿಗೂ ಅನುಮತಿ ದೊರೆಯುತ್ತದೆ. ಅಲ್ಲಿಯವರೆಗೂ ಅವರು ರಾಜ್ಯದ ಮಾರುಕಟ್ಟೆಯಲ್ಲಿ ಮರಳು ಮಾರಲು ಅವಕಾಶವಿಲ್ಲ. ಬಂದರಿನಿಂದ ಹೊರಕ್ಕೆ ಸಾಗಿಸದಂತೆಯೂ ನಿರ್ದೇಶನ ನೀಡಲಾಗುವುದು’ ಎಂದರು.

ಮುಖ್ಯಾಂಶಗಳು

* ಎಂಎಸ್‌ಐಎಲ್‌ ಸೇರಿದಂತೆ ಇಬ್ಬರಿಂದ ಮರಳು ಆಮದಿಗೆ ಅರ್ಜಿ

* ನಿಯಮಗಳ ತಿದ್ದುಪಡಿ ಮುಗಿದ ಬಳಿಕ ಪರವಾನಗಿ ವಿತರಣೆ

* ರಾಜ್ಯದ ಮರಳು ಉದ್ಯಮ ಪ್ರವೇಶಿಸಲು ಸಜ್ಜಾದ ಹೊರ ರಾಜ್ಯದ ಉದ್ಯಮಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT