ಗುರುವಾರ , ಮಾರ್ಚ್ 4, 2021
18 °C

ದಟ್ಟಣೆ ಅವಧಿಯಲ್ಲಿ ತಡೆರಹಿತ ಪ್ರಯಾಣ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಟ್ಟಣೆ ಅವಧಿಯಲ್ಲಿ ತಡೆರಹಿತ ಪ್ರಯಾಣ?

ಬೆಂಗಳೂರು: ಪ್ರಯಾಣಿಕರ ದಟ್ಟಣೆ ಹೆಚ್ಚು ಇರುವ ಅವಧಿಯಲ್ಲಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೈಸ್ಪೀಡ್‌ ಹಾಗೂ ತಡೆರಹಿತ ಮೆಟ್ರೊ ರೈಲುಗಳನ್ನು ಓಡಿಸುವ ಪ್ರಸ್ತಾವವನ್ನು ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಅರ್‌ಸಿಎಲ್‌) ಹೊಂದಿದೆ.

ನಾಗವಾರದ ಮೂಲಕ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮೆಟ್ರೊ ಮಾರ್ಗದಲ್ಲಿ ರೈಲುಗಳ ವೇಗವು ಸಾಮಾನ್ಯ ಮೆಟ್ರೊ ರೈಲುಗಳ ವೇಗಕ್ಕಿಂತ ಶೇ 76ರಷ್ಟು ಹೆಚ್ಚು ಇರಲಿದೆ. ಈ ಮಾರ್ಗದಲ್ಲಿ ತಡೆರಹಿತ ಸೇವೆ ಒದಗಿಸುವ ಸಲುವಾಗಿ ಸಂವಹನ ಆಧಾರಿತ ರೈಲು ನಿಯಂತ್ರಣ (ಸಿಬಿಡಿಟಿ) ಹಾಗೂ ಸ್ವಯಂಚಾಲಿತ ಗ್ರೇಡ್‌ (ಜಿಒಎ) ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ನಿಗಮವು ಸಿದ್ಧತೆ ನಡೆಸಿದೆ.

‘ಈ ಮಾರ್ಗದಲ್ಲಿ ಕೇವಲ 7 ನಿಲ್ದಾಣಗಳು ಬರಲಿವೆ. ಹಾಗಾಗಿ ರೈಲು ಸಹಜವಾಗಿಯೇ ವೇಗವಾಗಿ ವಿಮಾನ ನಿಲ್ದಾಣವನ್ನು ತಲುಪಲಿದೆ. ಬೆಳಿಗ್ಗೆ ಹಾಗೂ ಸಂಜೆ ಪ್ರಯಾಣಿಕರ ದಟ್ಟಣೆ ಹೆಚ್ಚು ಇರುವ ಅವಧಿಯಲ್ಲಿ ಈ ಮಾರ್ಗದಲ್ಲಿ ತಡೆರಹಿತ ರೈಲು ಸೇವೆ ಒದಗಿಸುವ ಚಿಂತನೆಯೂ ಇದೆ. ದಟ್ಟಣೆ ಅವಧಿಯಲ್ಲಿ ಈ ಮಾರ್ಗವನ್ನು ಬಳಸುವ ಹೆಚ್ಚಿನ ಪ್ರಯಾಣಿಕರು ವಿಮಾನ ನಿಲ್ದಾಣವನ್ನು ತಲುಪುವವರೇ ಆಗಿರುತ್ತಾರೆ. ಹಾಗಾಗಿ ನಡುವೆ ನಿಲುಗಡೆ ಒದಗಿಸುವ ಅವಶ್ಯಕತೆ ಇರುವುದಿಲ್ಲ’  ಎಂದು ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಮಹೇಂದ್ರ ಜೈನ್‌ ತಿಳಿಸಿದರು.

ವಾಣಿಜ್ಯ ಸಂಚಾರಕ್ಕೆ ಬಳಸುವ ರೈಲುಗಳು ಸಾಮಾನ್ಯವಾಗಿ ಗಂಟೆಗೆ 60 ಕಿ.ಮೀ ವೇಗದಲ್ಲಿ ಸಂಚರಿಸುತ್ತವೆ. ಆದರೆ, ಈ ಮಾರ್ಗದಲ್ಲಿ ಓಡಿಸಲು ಬಳಸುವ ರೈಲು ಗಂಟೆಗೆ 90 ಕಿ.ಮೀ– 95 ಕಿ.ಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿರಲಿದೆ. ರೈಲಿನಲ್ಲಿ ಆರು ಬೋಗಿಗಳು ಇರಲಿವೆ.

ರೈಲುಗಳ ದಕ್ಷ ನಿರ್ವಹಣೆ ಸಲುವಾಗಿ ಈ ಮಾರ್ಗದಲ್ಲಿ (ವಿಮಾನ ನಿಲ್ದಾಣ– ಗೊಟ್ಟಿಗೆರೆವರೆಗೆ ನಿರಂತರ ಮಾರ್ಗ ಇರಲಿದೆ) ಎರಡು ಡಿಪೊಗಳನ್ನು ನಿರ್ಮಿಸಲಾಗುತ್ತದೆ. ಒಂದು ಡಿಪೊ ಕೊತ್ತನೂರಿನಲ್ಲಿ (ಗೊಟ್ಟಿಗೆರೆ ಬಳಿ) ಹಾಗೂ ಇನ್ನೊಂದು ಡಿಪೊ ವಿಮಾನ ನಿಲ್ದಾಣದ ಬಳಿ ನಿರ್ಮಾಣವಾಗಲಿದೆ. ಕೊತ್ತನೂರು ಡಿಪೊ ಗೊಟ್ಟಿಗೆರೆ– ನಾಗವಾರ ಮಾರ್ಗ ಯೋಜನೆಯಲ್ಲಿ ಸೇರಿದೆ.

ಈ ಯೋಜನೆಯಲ್ಲಿ ಮಾರ್ಗ ನಿರ್ಮಾಣಕ್ಕೆ ಹೆಚ್ಚಿನ (₹ 1,603 ಕೋಟಿ) ವೆಚ್ಚವಾಗಲಿದೆ. ಇದನ್ನು ಹೊರತುಪಡಿಸಿದರೆ ಭೂಸ್ವಾಧೀನಕ್ಕೆ (₹ 723 ಕೋಟಿ) ಹೆಚ್ಚು ವೆಚ್ಚ ತಗಲುತ್ತದೆ.

‘ಈ ಯೋಜನೆಗಾಗಿ 15 ಎಕರೆಯಿಂದ 20 ಎಕರೆಗಳಷ್ಟು ಭೂಸ್ವಾಧೀನ ನಡೆಸಬೇಕಾಗುತ್ತದೆ. ಇದರಲ್ಲಿ ಸರ್ಕಾರಿ ಜಮೀನುಗಳೇ ಹೆಚ್ಚು. ಹಾಗಾಗಿ ಭೂಸ್ವಾಧೀನ ಪ್ರಕ್ರಿಯೆ ವೇಳೆ ಹೆಚ್ಚು ಅಡೆತಡೆಗಳು ಎದುರಾಗದು’ ಎಂದು ಜೈನ್‌ ವಿಶ್ವಾಸ ವ್ಯಕ್ತಪಡಿಸಿದರು.

‘ಈ ಮಾರ್ಗದ ಬಹುಪಾಲು ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ಹಾದು ಹೋಗಲಿದೆ. ಜಕ್ಕೂರಿನಿಂದ ಟ್ರಂಪೆಟ್‌ ಜಂಕ್ಷನ್‌ವರೆಗೆ ಹೆದ್ದಾರಿಯುದ್ದಕ್ಕೂ 5 ಮೀ. ಜಾಗವನ್ನು ಮೆಟ್ರೊ ಮಾರ್ಗಕ್ಕಾಗಿ ಕಾದಿರಿಸಲಾಗಿದೆ’ ಎಂದು ಅವರು ತಿಳಿಸಿದರು.

ಯೋಜನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದರೆ ನಿತ್ಯ 1 ಲಕ್ಷ ಮಂದಿ ಮೆಟ್ರೊ ಮೂಲಕ ವಿಮಾನ ನಿಲ್ದಾಣ ತಲುಪಲಿದ್ದಾರೆ, ಸಾಧಾರಣ ಪ್ರತಿಕ್ರಿಯೆ ವ್ಯಕ್ತವಾದರೆ 80 ಸಾವಿರ ಮಂದಿ ಹಾಗೂ ತೀರಾ ಸಾಧಾರಣ ಪ್ರತಿಕ್ರಿಯೆ ವ್ಯಕ್ತವಾದರೆ 60 ಸಾವಿರ ಮಂದಿ ಈ ಮಾರ್ಗದಲ್ಲಿ ಪ್ರಯಾಣಿಸಲಿದ್ದಾರೆ ಎಂದು ಅಂದಾಜಿಸಲಾಗಿದೆ.

ಪ್ರಯಾಣದ ಅವಧಿಯಲ್ಲಿ 25 ನಿಮಿಷ ಕಡಿತ

ನಾಗವಾರದಿಂದ ವಿಮಾನ ನಿಲ್ದಾಣಕ್ಕೆ ಮೆಟ್ರೊ ಸಂಪರ್ಕ ಕಲ್ಪಿಸಿದರೆ ವಿಮಾನ ನಿಲ್ದಾಣ ತಲುಪಲು ತಗಲುವ ಪ್ರಯಾಣದ ಅವಧಿ 25 ನಿಮಿಷಗಳಷ್ಟು ಕಡಿಮೆ ಆಗಲಿದೆ. ಈ ಮೆಟ್ರೊ ಮಾರ್ಗವು ಸಂಚಾರ ಅವಧಿಯನ್ನು ಕಡಿಮೆ ಮಾಡುವುದರ ಜೊತೆಗೆ ಸಂಚಾರ ದಟ್ಟಣೆ ಸಮಸ್ಯೆಯಿಂದಲೂ ಮುಕ್ತಿ ನೀಡಲಿದೆ. ಪ್ರಯಾಣವೂ ಸುಗಮವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಟ್ವೀಟ್‌ ಮಾಡಿದ್ದಾರೆ.

₹ 2,191 ಕೋಟಿ ವೆಚ್ಚದ ಕಾಮಗಾರಿಗೆ ಒಪ್ಪಿಗೆ

ಬೆಂಗಳೂರು:
ನಗರದಲ್ಲಿ ₹ 2,191 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವ ಸಂಪುಟ ಸಭೆ ಸೋಮವಾರ ಆಡಳಿತಾತ್ಮಕ ಅನುಮೋದನೆ ನೀಡಿದೆ.

ಅಭಿವೃದ್ಧಿ ಕಾಮಗಾರಿಗಳ ಕ್ರಿಯಾ ಯೋಜನೆಯ ಪ್ರಸ್ತಾವವನ್ನು ಬೃಹತ್‌ ಬೆಂಗಳೂರು ಮಹಾನಗರಪಾಲಿಕೆ (ಬಿಬಿಎಂಪಿ) ಸಲ್ಲಿಸಿತ್ತು.

₹ 680 ಕೋಟಿ ವೆಚ್ಚದಲ್ಲಿ ರಸ್ತೆಗಳ ವೈಟ್‌ ಟಾಪಿಂಗ್‌, ₹ 250 ಕೋಟಿ ವೆಚ್ಚದಲ್ಲಿ ಟೆಂಡರ್‌ ಶ್ಯೂರ್‌ ರಸ್ತೆ ಅಭಿವೃದ್ಧಿ ಇದರಲ್ಲಿ ಸೇರಿವೆ ಎಂದು ಬಿಬಿಎಂಪಿ ಆಯುಕ್ತ ಎನ್‌. ಮಂಜುನಾಥ ಪ್ರಸಾದ್‌ ತಿಳಿಸಿದ್ದಾರೆ.

ವಿಕ್ಟೋರಿಯಾ ಆಸ್ಪತ್ರೆಯ ಹೊರ ರೋಗಿಗಳ ವಿಭಾಗದ ಹೊಸ ಕಟ್ಟಡದ ಮೇಲೆ ₹ 30 ಕೋಟಿ ವೆಚ್ಚದಲ್ಲಿ ಐದು ಹೆಚ್ಚುವರಿ ಮಹಡಿ ನಿರ್ಮಿಸಲು ಕೂಡ ಸಂಪುಟ ಒಪ್ಪಿಗೆ ನೀಡಿದೆ.

ಬೆಂಗಳೂರು ಸ್ಮಾರ್ಟ್‌ ಸಿಟಿ ಕಂಪೆನಿಯ ವಿಶೇಷ ಉದ್ದೇಶಿತ ವಾಹಕಕ್ಕೆ (ಎಸ್‌ಪಿವಿ) ಅಧಿಕಾರ ನೀಡಲಾಗಿದ್ದು, ಯೋಜನೆಯ ಅನುಷ್ಠಾನಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಒದಗಿಸುತ್ತಿರುವ ತಲಾ ₹ 500 ಕೋಟಿ ಅನುದಾನದ ಬಳಕೆಗೂ ಸಂಪುಟ ಒಪ್ಪಿಗೆ ನೀಡಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.