ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಳು ಭಾಷೆ 8ನೇ ಪರಿಚ್ಚೇದ ಸೇರ್ಪಡೆಗೆ 'ಠರಾವು ಮಂಡನೆ'

Last Updated 12 ಡಿಸೆಂಬರ್ 2017, 5:50 IST
ಅಕ್ಷರ ಗಾತ್ರ

ಬಂಟ್ವಾಳ (ಸಿರಿದೊಂಪ ಸಭಾಂಗಣ, ಧರ್ಮಚಾವಡಿ ವೇದಿಕೆ): ತುಳು ಸಾಹಿತ್ಯ ಮತ್ತು ಸಂಸ್ಕೃತಿ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದರ ಜತೆಗೆ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ಲೇಖಕರು ಮತ್ತು ಜನಪದ ಕಲಾವಿದರಿಗೆ ಸಿಗುವ ವಿವಿಧ ಸೌಲಭ್ಯಗಳ ಬಗ್ಗೆ ಜಾಗೃತಿ ಮೂಡಿಸಲು ತುಳು ಸಾಹಿತ್ಯ ಸಮ್ಮೇಳನ ಅಗತ್ಯವಾಗಿದೆ' ಎಂದು  ಸಾಹಿತಿ ಡಾ. ಕೆ. ಚಿನ್ನಪ್ಪ ಗೌಡ ಹೇಳಿದ್ದಾರೆ.

ಬಿ.ಸಿ.ರೋಡಿನಲ್ಲಿ ಭಾನುವಾರ ನಡೆದ ತಾಲ್ಲೂಕು ಮಟ್ಟದ ಪ್ರಥಮ ತುಳು ಸಾಹಿತ್ಯ ಸಮ್ಮೇಳನದಲ್ಲಿ ಅವರು ಸಮಾರೋಪ ಭಾಷಣ ಮಾಡಿದರು. ತುಳು ಭಾಷೆಯು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸುವ ಬಗ್ಗೆ ತುಳುನಾಡಿನ ಎಲ್ಲಾ ವರ್ಗದ ಜನತೆ ಸಹಿತ ರಾಜಕಾರಣಿಗಳು ಸಂಘಟಿತರಾಗಿ ಶ್ರಮಿಸಬೇಕು ಎಂದರು.

ಸಮ್ಮೇಳನಾಧ್ಯಕ್ಷ ಹಿರಿಯ ಸಾಹಿತಿ ಮಲಾರು ಜಯರಾಮ ರೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿಶಿಷ್ಟ ಲಿಪಿ ಹೊಂದಿರುವ ತುಳು ಭಾಷೆ ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸಲು ಇದೀಗ ಕಾಲ ಪರಿಪಕ್ವವಾಗಿದೆ ಎಂದರು.

ಅಕಾಡೆಮಿ ರಿಜಿಸ್ಟ್ರಾರ್ ಚಂದ್ರಹಾಸ ರೈ ಮಾತನಾಡಿ, ತುಳು ಸಾಹಿತ್ಯ ಅಕಾಡೆಮಿಯು ಮಂಗಳೂರಿನ ಉರ್ವಸ್ಟೋರಿನಲ್ಲಿ ₹5ಕೋಟಿ ವೆಚ್ಚದಲ್ಲಿ ಸುಸಜ್ಜಿತ ಸಭಾಂಗಣ ಸಹಿತ ಸ್ವಂತ ಕಟ್ಟಡ ನಿರ್ಮಿಸುತ್ತಿದೆ ಎಂದು ತಿಳಿಸಿದರು.

ತುಳು ಸಿರಿ ಪ್ರಶಸ್ತಿ ಪ್ರದಾನ: ಇದೇ ವೇಳೆ ತಾಲ್ಲೂಕಿನ ಹಿರಿಯ ಯಕ್ಷಗಾನ ಕಲಾವಿದ ಶಿವರಾಮ ಜೋಗಿ ಮತ್ತು ದೈವಪಾತ್ರಿ ದೇಜಪ್ಪ ಬಾಚಕೆರೆ ಇವರಿಗೆ 'ತುಳು ಸಿರಿ' ಪ್ರಶಸ್ತಿ ನೀಡಿ ಗೌರವಿಸಲಾಯಿತು. ವಿವಿಧ ಕ್ಷೇತ್ರಗಳ ಸಾಧನೆಗಾಗಿ ಗಿರಿರಾಜ್ ವಗ್ಗ, ಕಾಂತಪ್ಪ ಶೆಟ್ಟಿ ಅಗರಿ, ಬಿ.ಆರ್. ಕುಲಾಲ್, ವಾಸು ಪಂಡಿತ, ಅಣ್ಣು ಪೂಜಾರಿ ಅಮ್ಟಾಡಿ, ಗೌರಿ ಪಾಲ್ತಾಜೆ, ಎಸ್. ರಹಿಮಾನ್ ಸಾಹೇಬ್, ಮೀನಾಕ್ಷಿ ಆಚಾರ್ಯ, ವಿಶ್ವನಾಥ ಶೆಟ್ಟಿ ಸೋರ್ಣೋಡು, ನಾರಾಯಣದಾಸ್ ಕಕ್ಯಪದವು, ಅಂತೋನಿ ಪಿಂಟೋ, ಶಶಿ ಬಂಡಿಮಾರ್, ಶೇಖರ ಪಂಬದ ಇವರನ್ನು ಸನ್ಮಾನಿಸಲಾಯಿತು.

ಠರಾವು ಮಂಡನೆ:  'ತುಳು ಭಾಷೆ ಎಂಟನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸಬೇಕು.' ಎಂಬ ಏಕೈಕ ಠರಾವು ಇಲ್ಲಿನ ಸಮ್ಮೇಳನದಲ್ಲಿ ಮಂಡಿಸಲಾಯಿತು.

ಬಹುಮಾನ ವಿತರಣೆ: ತುಳು ಆಟೋಟ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕ್ರೀಡಾಕೂಟ ಸಂಚಾಲಕ ಸುಕುಮಾರ್ ಬಂಟ್ವಾಳ, ದಾಮೋದರ ಏರ್ಯ, ಜಯರಾಜ್ ಭಂಡಾರಿಬೆಟ್ಟು, ಮಧುಸೂದನ್ ಶೆಣೈ ಸಹಕರಿಸಿದರು.

ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ. ಭಂಡಾರಿ, ತಹಶೀಲ್ದಾರ್ ಪುರಂದರ ಹೆಗ್ಡೆ, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಅಬ್ಬಾಸ್ ಅಲಿ, ಅಕಾಡೆಮಿ ಸದಸ್ಯರಾದ ಗೋಪಾಲ ಅಂಚನ್, ವಿಜಯ ಶೆಟ್ಟಿ ಸಾಲೆತ್ತೂರು, ಮಾಜಿ ಸದಸ್ಯ ಡಿ.ಎಂ. ಕುಲಾಲ್, ಸ್ಥಳೀಯ ಪುರಸಭಾ ಸದಸ್ಯ ಭಾಸ್ಕರ ಟೈಲರ್, ಸಮಿತಿ ಸದಸ್ಯ ಸುಭಾಶ್ಚಂದ್ರ ಜೈನ್ ಮತ್ತಿತರರು ಇದ್ದರು.

ಸಮಿತಿ ಅಧ್ಯಕ್ಷ ಸುದರ್ಶನ್ ಜೈನ್ ಸ್ವಾಗತಿಸಿ, ನಿವೃತ್ತ ಮುಖ್ಯಶಿಕ್ಷಕ ಸೇಸಪ್ಪ ಮಾಸ್ಟರ್ ವಂದಿಸಿದರು. ಮಲ್ಲಿಕಾ ಶೆಟ್ಟಿ ಮತ್ತು ದಿನೇಶ್ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT