ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: ನಾಲ್ಕು ದಿನಗಳ ಕೃಷಿ ಮೇಳ ಮುಕ್ತಾಯ

Last Updated 12 ಡಿಸೆಂಬರ್ 2017, 6:17 IST
ಅಕ್ಷರ ಗಾತ್ರ

ರಾಯಚೂರು: ಜಲ– ನೆಲ ಸಿರಿ, ಧಾನ್ಯ ಸಿರಿ, ಜೀವನ ಸಿರಿ ಧ್ಯೇಯ ವಾಕ್ಯದಡಿ ರಾಯಚೂರು ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ನಾಲ್ಕು ದಿನಗಳವರೆಗೆ ಆಯೋಜಿಸಿದ್ದ ಕೃಷಿ ಮೇಳವು ಸೋಮವಾರ ಸಮಾರೋಪಗೊಂಡಿತು.

ವಿಶ್ವವಿದ್ಯಾಲಯದ ವ್ಯಾಪ್ತಿಯ ಹೈದರಾಬಾದ್‌ ಕರ್ನಾಟಕ ಭಾಗದ ಆರು ಜಿಲ್ಲೆಗಳಿಂದಲೂ ರೈತರು ಪಾಲ್ಗೊಳ್ಳಬೇಕು ಎನ್ನುವ ನಿರೀಕ್ಷೆ ಹೊಂದಲಾಗಿತ್ತು. ಪ್ರಮುಖವಾಗಿ ರಾಯಚೂರು ಜಿಲ್ಲೆಯ ಜನರು ಹಾಗೂ ಕೃಷಿಕರು ಭೇಟಿ ನೀಡಿದ್ದಾರೆ. ಯಾದಗಿರಿ ಹಾಗೂ ಕೊಪ್ಪಳ ಜಿಲ್ಲೆಗಳಿಂದ ಆಸಕ್ತಿದಾಯಕ ಕೆಲವು ರೈತರು ಕೃಷಿ ಮೇಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು.

ಕೃಷಿ ಹಾಗೂ ಕೃಷಿ ಸಂಬಂಧಿತ ಮಳಿಗೆಗಳು ಸೇರಿದಂತೆ ಜಾತ್ರೆಯಲ್ಲಿ ನೆರೆಯುವ ಎಲ್ಲ ರೀತಿಯ ವಸ್ತುಗಳ ಮಾರಾಟಕ್ಕೂ ಅವಕಾಶ ನೀಡಲಾಗಿತ್ತು. ಹೀಗಾಗಿ ನಾಲ್ಕು ದಿನಗಳ ಕೃಷಿ ಮೇಳವು ಜಾತ್ರೆಯೋಪಾದಿಯಲ್ಲಿ ಕಂಡು ಬಂತು ಎಂದು ವಿಶ್ವವಿದ್ಯಾಲಯದ ಅಧಿಕಾರಿಗಳು ತಿಳಿಸಿದರು.

‘ಮುಂಗಾರು ಬೆಳೆಗಳಾದ ತೊಗರಿ ಮತ್ತು ಹತ್ತಿ ಬೆಳೆಗಳು ಈಗ ಫಸಲು ಕೊಡುವ ಸಮಯ. ಹಿಂಗಾರು ಅವಧಿಯಲ್ಲಿ ಬಿತ್ತಿರುವ ಕಡಲೆ, ಜೋಳ ಮತ್ತು ಕುಸುಬಿ ಈಗ ಹೂವು ಬಿಡುತ್ತಿವೆ. ಕೃಷಿ ಮೇಳ ಆಯೋಜಿಸುವುದಕ್ಕೆ ಇದು ಸರಿಯಾದ ಸಮಯ ಎನ್ನುವುದನ್ನು ಮನಗಂಡು ಡಿಸೆಂಬರ್‌ನಲ್ಲಿ ಆಯೋಜಿಸಲಾಗಿತ್ತು. ನಗರದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರೂ, ರೈತರು ಕೂಡಾ ಸಾಕಷ್ಟು ಸಂಖ್ಯೆಯಲ್ಲಿ ಭೇಟಿ ನೀಡಿದ್ದಾರೆ ಎಂದು ರಾಯಚೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಪಿ.ಎಂ. ಸಾಲಿಮಠ ಹೇಳಿದರು.

ಕಳೆದ ವರ್ಷ ಜಂಟಿ ಕೃಷಿ ಇಲಾಖೆಯಿಂದ ರೈತರನ್ನು ಕರೆ ತರುವುದಕ್ಕೆ ಬಸ್‌ ವ್ಯವಸ್ಥೆ ಮಾಡಿದ್ದರು. ಈ ವರ್ಷ ಮಾಡುವುದಕ್ಕೆ ಅವರಿಗೆ ಸಾಧ್ಯವಾಗಿಲ್ಲ. ಪ್ರತಿವರ್ಷ ನಡೆಯುವ ಕೃಷಿ ಮೇಳದಿಂದ ಹೊಸ ಪಾಠ ಕಲಿಯುತ್ತೇವೆ. ಇನ್ನೂ ಉತ್ತಮ ರೀತಿಯಲ್ಲಿ ಕೃಷಿ ಮೇಳ ಆಯೋಜಿಸುವುದಕ್ಕೆ ಯೋಜಿಸುತ್ತೇವೆ. ಈ ವರ್ಷ ಕೂಡಾ ಮೇಳವು ಒಳ್ಳೆಯ ರೀತಿಯಲ್ಲಿ ನಡೆದಿದೆ ಎಂದರು.

ಕೃಷಿ ಮೇಳಕ್ಕೆ ಭೇಟಿ ನೀಡಿ ರೈತರು ಹಾಗೂ ಮೇಳದಲ್ಲಿ ಮಳಿಗೆ ಸ್ಥಾಪಿಸಿದ್ದ ಮಳಿಗೆದಾರರನ್ನು ‘ಪ್ರಜಾವಾಣಿ’ ಮಾತನಾಡಿಸಿದಾಗ ಹೇಳಿದ ಮಾತುಗಳು ಇಲ್ಲಿವೆ.

ಬಹಳ ಮಳಿಗೆಗಳು

ಈ ವರ್ಷ ಕೃಷಿ ಮೇಳದಲ್ಲಿ ಬಹಳ ಮಳಿಗೆಗಳು ಬಂದಿವೆ. ಬೀಜ, ಗೊಬ್ಬರ ಹಾಗೂ ಯಂತ್ರೋಪಕರಣ ಮಳಿಗೆಗಳನ್ನು ನೋಡುವುದಕ್ಕೆ ರೈತರಿಗೆ ತುಂಬಾ ಅನುಕೂಲವಾಯಿತು. ಕೃಷಿ ಮೇಳದಲ್ಲಿ ನೋಡಿದ್ದನ್ನು ಮುಂದಿನ ದಿನಗಳಲ್ಲಿ ಜಮೀನುಗಳಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತೇನೆ ಎಂದು ರಾಯಚೂರು ತಾಲ್ಲೂಕು ಉಡಮಗಲ್‌ ಖಾನಾಪುರದ ರೈತ ಈರಣ್ಣ ಬಿಚ್ಚಾಲಿ ಹೇಳಿದರು.

ಹೊಸ ಯಂತ್ರಗಳು

ಬರಗಾಲದಲ್ಲಿ ಏನು ಬೆಳೆಯಬೇಕು ಎಂಬುದು ರೈತರಿಗೆ ತಿಳಿಯುವುದಿಲ್ಲ. ಮೇವಿನ ಕೊರತೆಯಿಂದ ಜಾನುವಾರು ಮಾರಾಟ ಮಾಡುತ್ತಿದ್ದರು. ಬರಗಾಲದಲ್ಲಿ ಬೆಳೆಯುವ ಬೆಳೆಗಳು ಮತ್ತು ಮೇವು ಕತ್ತರಿಸುವ, ಸಂಗ್ರಹಿಸುವ ಹೊಸ ಹೊಸ ವಿಧಾನಗಳ ಬಗ್ಗೆ ಕೃಷಿ ಮೇಳದಲ್ಲಿ ಮಾಹಿತಿ ಕೊಟ್ಟಿದ್ದಾರೆ. ಇದರಿಂದ ಅನುಕೂಲವಾಗುತ್ತದೆ ಎಂದು ಮಾನ್ವಿ ತಾಲ್ಲೂಕಿನ ಗವಿಗಟ್ಟಾದ ರೈತ ಶರಣಪ್ಪ ತಿಳಿಸಿದರು.

ಸಹಾಯಧನ ಕೊಡಬೇಕಿತ್ತು

ಕೃಷಿ ಮೇಳದಲ್ಲಿ ರೈತರಿಗೆ ಉಪಯುಕ್ತವಾಗುವ ಸಾಕಷ್ಟು ಯಂತ್ರೋಪಕರಣಗಳು ಬಂದಿದ್ದವು. ಆದರೆ ಯಂತ್ರ ಖರೀದಿಗೆ ಸಹಾಯಧನ ಪಡೆಯಲು ಇಲಾಖೆಗಳಿಗೆ ಪ್ರತ್ಯೇಕ ಅರ್ಜಿ ಸಲ್ಲಿಸಬೇಕು ಎನ್ನುತ್ತಿದ್ದಾರೆ. ಮೇಳದಲ್ಲೆ ಕೃಷಿ ಇಲಾಖೆ ಅಧಿಕಾರಿಗಳು ಸಹಾಯಧನದ ಅರ್ಜಿ ನಮೂನೆ ಪಡೆದು, ಅನುಕೂಲ ಮಾಡಬೇಕಿತ್ತು ಎಂದು ರಾಯಚೂರು ತಾಲ್ಲೂಕು ರಘುನಾಥಹಳ್ಳಿಯ ಮೆಹಬೂಬ್‌ ಅಸಮಾಧಾನ ವ್ಯಕ್ತಪಡಿಸಿದರು.

ನಗರದ ಜನ ಬರಲಿಲ್ಲ

ಈ ಬಾರಿ ಕೃಷಿ ಮೇಳದಲ್ಲಿ ನಗರದ ಜನರು ಹೆಚ್ಚಾಗಿ ಭೇಟಿ ನೀಡಿದ್ದಾರೆ. ನಿರೀಕ್ಷಿಸಿದಷ್ಟು ರೈತರು ಬರಲಿಲ್ಲ. ನಾಲ್ಕು ದಿನಗಳ ಮೇಳದಲ್ಲಿ 10 ಜನರು ಮಾತ್ರ ಯಂತ್ರ ಖರೀದಿಸಲು ನೋಂದಾಯಿಸಿದ್ದಾರೆ. ಗ್ರಾಮಗಳಿಂದ ರೈತರನ್ನು ಕರೆತರುವುದಕ್ಕೆ ವಿಶ್ವವಿದ್ಯಾಲಯದಿಂದ ವ್ಯವಸ್ಥೆ ಮಾಡಬೇಕಿತ್ತು. ಮೇಳದಲ್ಲಿ ಪ್ರತಿಕ್ರಿಯೆ ಪರವಾಗಿಲ್ಲ. ಆದರೆ ಮಳಿಗೆದಾರರಿಗೆ ಸರಿಯಾದ ವ್ಯವಸ್ಥೆ ಮಾಡಿಲ್ಲ ಎಂದು ಶ್ರೀರಂಗಪಟ್ಟಣದಿಂದ ಬಂದಿದ್ದ ಭವಾನಿ ಎಂಟರ್‌ಪ್ರೈಜಸ್‌ನ ತಂತ್ರಜ್ಞ ಸತೀಶ್‌ ಹೇಳಿದರು.

ವ್ಯಾಪಾರ ಚೆನ್ನಾಗಿತ್ತು

ರಾಯಚೂರಿನಲ್ಲಿ ಕೃಷಿ ಮೇಳಕ್ಕೆ ಆರಂಭದಿಂದಲೂ ಬರುತ್ತಿದ್ದೇನೆ. ಪ್ರತಿ ವರ್ಷ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಈ ವರ್ಷ ವ್ಯಾಪಾರ ಚೆನ್ನಾಗಿ ಆಗಿದೆ ಎಂದು ಮೈಸೂರಿನ ನರಸೀಪುರದಿಂದ ಬಂದಿದ್ದ ವಿವಿಧ ನಮೂನೆಯ ಚಿಪ್ಸ್‌ ಮಾರಾಟ ಮಾಡುವ ಶಾಂತಮೂರ್ತಿ ಹೇಳಿದ ಮಾತಿದು.

ಟ್ರ್ಯಾಕ್ಟರ್‌ ಖರೀದಿಸಿದೆ

ಕೃಷಿ ಮೇಳಕ್ಕೆ ಮೊದಲೆ ಬರಬೇಕಿತ್ತು. ರೈತರಿಗೆ ಅನುಕೂಲವಾಗುವ ಬಹಳ ಮಾಹಿತಿ ಇದೆ. ಇದನ್ನೆಲ್ಲ ನೋಡುವುದಕ್ಕೆ ಇನ್ನೊಂದು ದಿನ ಮೊದಲೆ ಬರಬೇಕಿತ್ತು ಅನಿಸಿತು. ಎರಡು ಸಾಲು ಕೊರೆಯುವ ಟ್ರ್ಯಾಕ್ಟರ್‌ ಬುಕ್‌ ಮಾಡಿದ್ದೇವೆ ಎಂದು ರಾಯಚೂರು ತಾಲ್ಲೂಕಿನ ಹೆಂಬೆರಾಳದ ರಮೇಶ ಯಲ್ಲಪ್ಪ ಹೇಳಿದರು.

* * 

ಕೃಷಿಕರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಕೃಷಿ ಮೇಳದಲ್ಲಿ ಪಾಲ್ಗೊಂಡಿದ್ದರು. ಸಿರಿಧಾನ್ಯಗಳನ್ನು ಬೆಳೆಯುವುದು, ಅವುಗಳನ್ನು ಬಳಸುವ ಬಗ್ಗೆ ಮಾಹಿತಿ ತಲುಪಿಸುವಲ್ಲಿ ಸಫಲರಾಗಿದ್ದೇವೆ.
ಡಾ.ಪಿ.ಎಂ. ಸಾಲಿಮಠ
ರಾಯಚೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT