ಸೋಮವಾರ, ಮಾರ್ಚ್ 1, 2021
20 °C

ರೈತರ ಮರೆತ ಕಾಂಗ್ರೆಸ್‌ ಸರ್ಕಾರ ಮನೆಯತ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರೈತರ ಮರೆತ ಕಾಂಗ್ರೆಸ್‌ ಸರ್ಕಾರ ಮನೆಯತ್ತ

ಶಹಾಪುರ: ನಗರಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆ ಜಾರಿಗೊಳಿಸುವುದು. ಕಾಲುವೆ ಕೊನೆ ಭಾಗದ ರೈತರಿಗೆ ನೀರು ತಲುಪಿಸುವುದು. ನನೆಗುದಿಗೆ ಬಿದ್ದ ಏತ ನೀರಾವರಿ ಯೋಜನೆ ತ್ವರಿತ ಅನುಷ್ಠಾನಗೊಳಿಸುವುದು ಸೇರಿದಂತೆ ಬಿಜೆಪಿ ಅಧಿಕಾರಕ್ಕೆ ಬಂದ ಮರುದಿನವೇ ಕೆಂಭಾವಿ ತಾಲ್ಲೂಕು ಕೇಂದ್ರವಾಗಿ ಘೋಷಣೆ ಮಾಡುವ ಭರವಸೆಯನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೀಡಿದರು.

ಇಲ್ಲಿನ ಸಿಪಿಎಸ್ ಶಾಲಾ ಮೈದಾನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬಿಜೆಪಿಯ ಪರಿವರ್ತನಾ ಯಾತ್ರೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ರೈತರು ಬೆಳೆದ ತೊಗರಿ, ಮೆಕ್ಕೆ ಜೋಳ, ಹತ್ತಿ ಬೆಳೆಗೆ ಪ್ರತಿ ಕ್ವಿಂಟಲ್‌ಗೆ ₹1,000 ಬೆಂಬಲ ಬೆಲೆ ಘೋಷಣೆ ಮಾಡಬೇಕು. ಸಂಕಷ್ಟದಲ್ಲಿರುವ ರೈತರ ನೆರವಿಗೆ ಬಾರದ ಸರ್ಕಾರ ಮನೆಗೆ ಕಳುಹಿಸಬೇಕು’ ಎಂದು ಆಗ್ರಹಿಸಿದರು.

‘ಅನ್ನಭಾಗ್ಯ ಹೆಸರಲ್ಲಿ ಕೇಂದ್ರ ಸರ್ಕಾರದ ಸಿಂಹಪಾಲು ಪಡೆದುಕೊಂಡು ಹಸಿದ ಹೊಟ್ಟೆಗೆ ಅನ್ನ ಎನ್ನುವುದಕ್ಕೆ ಸಿದ್ದರಾಮಯ್ಯ ಅವರಿಗೆ ನಾಚಿಕೆಯಾಗುವುದಿಲ್ಲವೇ? ಸ್ಥಳೀಯವಾಗಿ ಸಿಗುತ್ತಿರುವ ಮರಳು ಸಾಗಣೆ ನಿರ್ವಹಣೆಯಲ್ಲಿ ವಿಫಲರಾಗಿ ವಿದೇಶದಿಂದ ತರಿಸುವುದು ಸರಿಯಲ್ಲ. ಸ್ವತ ಸಚಿವರೇ ಮರಳು ಮಾಫಿಯಾದಲ್ಲಿ ಸಿಲುಕಿದ್ದಾರೆ’ ಎಂದು ಆರೋಪಿಸಿದರು.

‘ಕೇಂದ್ರ ಸರ್ಕಾರದ ಬಗ್ಗೆ ಅಚ್ಛೆ ದಿನ ಯಾವಾಗ ಎಂದು ಮೂದಲಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಅನ್ನು ಮನೆಗೆ ಕಳುಹಿಸಿದ ದಿನವೇ ಅಚ್ಛೆ ದಿನ ಆಗುತ್ತದೆ. ಬಿಜೆಪಿ ಅಧಿಕಾರಕ್ಕೆ ಬರುವುದು ಸೂರ್ಯ–ಚಂದ್ರನಷ್ಟೆ ಸತ್ಯ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಶಾಸಕ ಗುರು ಪಾಟೀಲ ಶಿರವಾಳ ಮಾತನಾಡಿ, ‘ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ಕೆಲಸಗಳಿಗೆ ಅಡ್ಡಗಾಲು ಹಾಕುತ್ತಾ ಬಂದಿದೆ. ಕೆಂಭಾವಿ ತಾಲ್ಲೂಕು ಘೋಷಣೆ, ನಗರಕ್ಕೆ ₹130 ಕೋಟಿ ವೆಚ್ಚದ ಶಾಶ್ವತ ಕುಡಿಯುವ ನೀರಿನ ಯೋಜನೆ, ಗಂಗಾಕಲ್ಯಾಣ ಯೋಜನೆ, ಏತ ನೀರಾವರಿ ಯೋಜನೆ ಜಾರಿಗೆ ತರುವಲ್ಲಿ ನಮ್ಮ ಕ್ಷೇತ್ರವನ್ನು ಕಡೆಗಣಿಸಿದೆ. ಶಾಶ್ವತ ಯೋಜನೆಗಳು ಜಾರಿಯಾಗಬೇಕಾದರೆ ಬಿಜೆಪಿ ಅಧಿಕಾರಕ್ಕೆ ತರಬೇಕು’ ಎಂದು ಮನವಿ ಮಾಡಿದರು.

ಸಂಸದ ಬಿ.ಶ್ರೀರಾಮುಲು, ಸಿ.ಟಿ.ರವಿ, ರಾಜುಗೌಡ, ಪುರಂದರೇಶ್ವರಿ ದೇವಿ, ರಘುನಾಥ ಮಲ್ಕಾಪುರೆ ಮಾತನಾಡಿ, ‘ಮುಖ್ಯಮಂತ್ರಿ ಸಿದ್ದರಾಮಯ್ಯನವರು ₹2.54 ಸಾವಿರ ಕೋಟಿ ಸಾಲಭಾಗ್ಯವನ್ನು ರಾಜ್ಯದ ಜನರಿಗೆ ಕರುಣಿಸಿದ್ದಾರೆ. ರಾಜ್ಯದ ಸಿಐಡಿ ಕಾಂಗ್ರೆಸ್ ಸರ್ಕಾರದ ಹಗರಣ ಮುಚ್ಚಿ ಹಾಕುವ ಸಂಸ್ಥೆಯನ್ನಾಗಿ ಮಾರ್ಪಡಿಸಿದ್ದಾರೆ. ಅಂದಿನ ಕೇಂದ್ರ ಕಾಂಗ್ರೆಸ್ ಸರ್ಕಾರ ದೇಶವು ಕಂಡರಿಯದ ಹಗರಣಗಳನ್ನು ಮಾಡಿ ದೇಶವನ್ನು ದಿವಾಳಿ ಅಂಚಿಗೆ ತಲುಪಿಸಿತ್ತು’ ಎಂದು ಟೀಕಿಸಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ ಮಾಗನೂರ, ಎನ್.ರವಿಕುಮಾರ, ಡಾ.ಭೀಮಣ್ಣ ಮೇಟಿ, ಡಾ.ಮಲ್ಲಣ್ಣಗೌಡ ಉಕ್ಕನಾಳ, ಅಮಾತೆಪ್ಪ ಕಂದಕೂರ, ಮಲ್ಲಣ್ಣ ಮಡ್ಡಿ ಸಾಹು, ಡಾ.ಚಂದ್ರಶೇಖರ ಸುಬೇದಾರ, ಲಾಲ್‌ ಅಹ್ಮದ್‌ ಖುರೇಶಿ, ವಸಂತ ಸುರಪುರಕರ್, ಎಸ್.ಪಿ.ನಾಡಕರ್, ರಾಮಚಂದ್ರ ಕಾಶಿರಾಜ, ನಾಗರತ್ನ ಕುಪ್ಪಿ, ಬಸಮ್ಮ ರಾಂಪುರೆ, ಚಂದ್ರಶೇಖರ ಯಾಳಗಿ, ಅಶೋಕ ದಿಗ್ಗಿ, ದೇವರಾಜ ನಾಯಕ, ಆರ್.ಚೆನ್ನಬಸ್ಸು ವನದುರ್ಗ, ಅಡಿವೆಪ್ಪ ಜಾಕಾ, ಯಲ್ಲಯ್ಯ ನಾಯಕ, ವನದುರ್ಗ, ಬಸವರಾಜ ಆನೇಗುಂದಿ, ಶ್ರೀಕಾಂತ ಸುಬೇದಾರ, ಮಲ್ಲಿಕಾರ್ಜುನ ಚಿಲ್ಲಾಳ, ಚಂದ್ರು ಚಕ್ರವರ್ತಿ, ಭೀಮಯ್ಯಗೌಡ, ದೊಡ್ಡ ಮಾನಯ್ಯ ಹಾದಿಮನಿ ಇದ್ದರು.

‘ಕೆ.ಕೆ.ಜಾರ್ಜ್ ಕಾಂಗ್ರೆಸ್‌ ಎಟಿಎಂ’

ಶಹಾಪುರ: ‘ಸಚಿವ ಕೆ.ಕೆ.ಜಾರ್ಜ್ ಕಾಂಗ್ರೆಸ್‌ನ ಎಟಿಎಂ ಆಗಿದ್ದಾರೆ. ಕೊಲೆ ಆರೋಪ ಎದುರಿಸುತ್ತಿದ್ದರೂ ಸಹ ಎಟಿಎಂ ಬಿಟ್ಟುಕೊಡಲು ಸಿದ್ದರಾಮಯ್ಯ ಸಿದ್ಧರಿಲ್ಲ’ ಬಿಜೆಪಿಯ ಹಿರಿಯ ಮುಖಂಡ ಸಿ.ಟಿ.ರವಿ ಆರೋಪಿಸಿದರು.

‘ಶಾಲಾ ಮಕ್ಕಳಲ್ಲಿ ಜಾತಿಯ ವಿಷ ಬೀಜ ಬಿತ್ತನೆ ಮಾಡಿ, ಕೋಮುಪಕ್ಷ ಎಂದು ಜರಿಯುವ ನಿಮಗೆ ಯಾವ ನೈತಿಕತೆ ಇದೆ. ಉಡಾಫೆಯ ಮಾತನ್ನು ಬಂಡವಾಳ ಮಾಡಿಕೊಂಡಿರುವ ಮುಖ್ಯಮಂತ್ರಿ ನಾಲ್ಕು ತಿಂಗಳಲ್ಲಿ ಮನೆಗೆ ತೆರಳುವುದರಲ್ಲಿ ಅನುಮಾನವಿಲ್ಲ’ ಎಂದಾಗ ಕರತಾಡನ ಮೊಳಗಿತು.

* * 

ಬಿಜೆಪಿ ಅಧಿಕಾರಕ್ಕೆ ಬಂದರೆ ಸಂತ ಸೇವಾಲಾಲರ ಜಯಂತಿಗೆ ಸರ್ಕಾರಿ ರಜೆ ಘೋಷಿಸಿ, ತಾಂಡಾಗಳ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುವುದು.

ಬಿ.ಎಸ್.ಯಡಿಯೂರಪ್ಪ

ಅಧ್ಯಕ್ಷ, ಬಿಜೆಪಿ ರಾಜ್ಯ ಘಟಕ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.