ಗುರುವಾರ , ಮಾರ್ಚ್ 4, 2021
20 °C

ದಶಕ ಕಳೆದರೂ ಫಲಾನುಭವಿಗಿಲ್ಲ ಸೌಲಭ್ಯ

ಜಗನ್ನಾಥ ಡಿ. ಶೇರಿಕಾರ Updated:

ಅಕ್ಷರ ಗಾತ್ರ : | |

ದಶಕ ಕಳೆದರೂ ಫಲಾನುಭವಿಗಿಲ್ಲ ಸೌಲಭ್ಯ

ಚಿಂಚೋಳಿ: ಪಟ್ಟಣ ಪಂಚಾಯಿತಿ ಇರುವಾಗ ಮಂಜೂರಾದ 220 ಕೊಳಚೆ ಪ್ರದೇಶ ನಿರ್ಮೂಲನಾ ಮಂಡಳಿಯ ಮನೆಗಳು ಮುಹೂರ್ತಕ್ಕಾಗಿ ಕಾಯುತ್ತಿವೆ.

‌ 2007–08ರಲ್ಲಿ ಮಂಜೂರಾದ ಈ ಮನೆಗಳು ದಶಕ ಕಳೆದರೂ ಫಲಾನುಭವಿಗಳಿಗೆ ವಿತರಣೆಯಾಗಿಲ್ಲ. ಇದರಲ್ಲಿ ಕೊಳಚೆ ಪ್ರದೇಶ ನಿರ್ಮೂಲನಾ ಮಂಡಳಿಯ ಅಧಿಕಾರಿಗಳ ನಿರ್ಲಕ್ಷ ಮತ್ತು ಪುರಸಭೆಯ ಬೇಜಬ್ದಾರಿಯೇ ಕಾರಣವಾಗಿದೆ.

ಮಾಜಿ ಸಚಿವ ವೈಜನಾಥ ಪಾಟೀಲರು ಎರಡನೇ ಬಾರಿ ಶಾಸಕರಾಗಿ ಆಯ್ಕೆಯಾದಾಗ ವ್ಯಕ್ತಿಯೊಬ್ಬರಿಂದ ಜಮೀನು ಪಟ್ಟಣ ಪಂಚಾಯಿತಿ ವತಿಯಿಂದ ಖರೀದಿಸಿ ನೀಡಿದ ಜಾಗದಲ್ಲಿ ಮನೆ ನಿರ್ಮಾಣಕ್ಕೆ ಮಂಡಳಿ ಟೆಂಡರ್‌ ಪ್ರಕ್ರಿಯೆ ನಡೆಸಿತು.

ಗುತ್ತಿಗೆ ಪಡೆದ ಗುತ್ತಿಗೆದಾರ ಸಕಾಲದಲ್ಲಿ ಮನೆ ನಿರ್ಮಿಸದ ಕಾರಣ ನನೆಗುದಿಗೆ ಬಿದ್ದ ಈ ಮನೆಗಳು ಈಗ ಕಾಟಾಚಾರಕ್ಕೆ ಎಂಬಂತೆ ನಿರ್ಮಿಸಿ ಮಂಡಳಿಯ ಅಧಿಕಾರಿಗಳು ಕೈತೊಳೆದುಕೊಂಡಿದ್ದಾರೆ. ಗುತ್ತಿಗೆದಾರ ಕೈಚೆಲ್ಲಿದ್ದರಿಂದ ಅಧಿಕಾರಿಗಳು ಬೆನ್ನುಬಿದ್ದು ಮನೆ ಪೂರ್ಣಗೊಳ್ಳುವಂತೆ ಮಾಡಿದ್ದಾರೆ. ಆದರೆ, ಅವರು ಗುಣಮಟ್ಟದ ಕಡೆಗೆ ಗಮನ ಹರಿಸಿಲ್ಲ ಎಂಬುದು ಸ್ಥಳೀಯ ಆರೋಪವಾಗಿದೆ.

ಈಗಾಗಲೇ ಮನೆಗಳ ನಿರ್ಮಾಣ ಪೂರ್ಣಗೊಂಡಿವೆ. ಒಳರಸ್ತೆ ಮತ್ತು ಚರಂಡಿ ಕಾಮಗಾರಿ ಕೆಲವೆಡೆ ಕೈಗೊಳ್ಳಲಾಗಿದೆ. ವಿದ್ಯುತ್‌ ಸೌಕರ್ಯ ಕಲ್ಪಿಸಲು ವಿದ್ಯುತ್‌ ಕಂಬ ಸ್ಥಾಪಿಸಿ, ತಂತಿ ಅಳವಡಿಸಲಾಗಿದೆ. ಮನೆಗಳಿಗೂ ವಿದ್ಯುತ್‌ ತಂತಿ ಬಿಗಿಯಲಾಗಿದೆ ಮೀಟರ್‌ ಅಳವಡಿಸದಿದ್ದರೂ ಮೀಟರ್‌ ಬಾಕ್ಸ್‌ ಸ್ಥಾಪಿಸಲಾಗಿದೆ.

ಕುಡಿಯುವ ನೀರಿಗಾಗಿ ಸಿಸ್ಟರ್ನ್‌ ಅಲ್ಲಲ್ಲಿ ಸ್ಥಾಪಿಸಿದ್ದಾರೆ. ಆದರೆ, ಇಲ್ಲಿ ನೀರಿನ ಅಭಾವವಿದೆ. ಪ್ರಸ್ತುತ ಕೊಳವೆ ಮೂಲಕ ಮುಲ್ಲಾಮಾರಿ ನದಿಯಿಂದ ನೀರು ಸರಬರಾಜಿಗೆ ಅಧಿಕಾರಿಗಳು ಉದ್ದೇಶಿಸಿದ್ದಾರೆ. ಈ ಕುರಿತು ಇನ್ನೂ ಕಾಮಗಾರಿ ಮಾತ್ರ ಪ್ರಾರಂಭಿಸಿಲ್ಲ. ಇಂತಹ ನೆಪಗಳಲ್ಲಿಯೇ ಹಲವು ವರ್ಷಗಳು ಗತಿಸಿವೆ. ಈಗ ಅನೈತಿಕ ಚಟುವಟಿಕೆಗಳ ತಾಣವಾಗಿ ಪರಿಣಮಿಸಿವೆ.

‘ಇವುಗಳು ಬೇಗ ಫಲಾನುಭವಿಗಳಿಗೆ ವಿತರಿಸಿದರೆ 8/10 ವರ್ಷ ಜನರು ಈ ಮನೆಗಳಲ್ಲಿ ವಾಸ ಮಾಡಬಹುದಾಗಿದೆ. ವಿಳಂಬ ಮಾಡುತ್ತ ಸಾಗಿದರೆ, ಫಲಾನುಭವಿಗಳಿಗೆ ಈ ಮನೆಗಳು ಗಗನಕುಸುಮವಾಗಲಿವೆ’ ಎನ್ನುತ್ತಾರೆ ಸ್ಥಳೀಯ ಮುಖಂಡ ಸಂತೋಷ ಕಡಗದ್‌.

ಕಾಮಗಾರಿ ಕಳಪೆಯಾಗಿದ್ದರಿಂದ ಹೆಚ್ಚು ಬಾಳಿಕೆ ಬರುವುದು ಅನುಮಾನವಾಗಿದೆ. ಒಂದೊಂದು ಕೋಣೆಯಲ್ಲಿ ತಂದೆ, ತಾಯಿ, ಮಕ್ಕಳು ಹಾಗೂ ಮೊಮ್ಮಕ್ಕಳು ವಾಸಿಸುವ ಸ್ಥಿತಿಯಲ್ಲಿ ಅನೇಕ ಕುಟುಂಬಗಳು ಪಟ್ಟಣದಲ್ಲಿ ಕಾಣಬಹುದಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಮಂಜೂರು ಮಾಡಿದ ಮನೆಗಳು ಫಲಾನುಭವಿಗಳಿಗೆ ಲಭಿಸದ ಕಾರಣ ಜನರಿಗೆ ಕೊಳಚೆ ಪ್ರದೇಶಗಳಲ್ಲಿಯೇ ಜೀವನ ನಡೆಸುವುದು ಅನಿವಾರ್ಯವಾಗಿದೆ.

2013ರ ಪೂರ್ವದಲ್ಲಿ ಚಿಂಚೋಳಿ ಪಟ್ಟಣ ಪಂಚಾಯಿತಿಯಲ್ಲಿ ಕೇವಲ 5 ವಾರ್ಡ್‌ಗಳು ಕೊಳಚೆ ಪ್ರದೇಶ ಎಂದು ಘೋಷಿಸಲಾಗಿತ್ತು. ಆದರೆ, ಈಗ ಪುರಸಭೆ ವ್ಯಾಪ್ತಿಯಲ್ಲಿ ಕೊಳವೆ ಪ್ರದೇಶಗಳ ಸಂಖ್ಯೆ(ವಾರ್ಡ್‌) ಸಂಖ್ಯೆ 11ಕ್ಕೇರಿದೆ. ಆದರೆ, ಇವರಿಗೆ ಸೌಲಭ್ಯಮಾತ್ರ ಮರೀಚಿಕೆಯಾಗಿದೆ.

ಪ್ರಸ್ತುತ ಗೃಹಪ್ರವೇಶದ ಮುಹೂರ್ತಕ್ಕಾಗಿ ಕಾಯುತ್ತಿರುವ ಮನೆಗಳ ಫಲಾನುಭವಿಗಳನ್ನು ಬೇಗ ಆಯ್ಕೆ ಮಾಡಬೇಕು. ಜತೆಗೆ, ವಸತಿರಹಿತರಿಗೆ ಪಕ್ಕದಲ್ಲಿಯೇ ಖಾಲಿ ಇರುವ ನಿವೇಶನ ಹಂಚಬೇಕು. ಇದಕ್ಕಾಗಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ವ್ಯರ್ಥ ಕಾಲಹರಣ ಮಾಡಬಾರದು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಈ ಕುರಿತು ಪ್ರತಿಕ್ರಿಯೆಗಾಗಿ ಕೊಳಚೆ ನಿರ್ಮೂಲನಾ ಮಂಡಳಿಯ ಅಧಿಕಾರಿಗಳನ್ನು ಸಂಪರ್ಕಕ್ಕೆ ಲಭಿಸಿಲ್ಲ.

* * 

ಪಟ್ಟಣದ ನೀಮಾ ಹೊಸಳ್ಳಿ ರಸ್ತೆಯಲ್ಲಿ ಪುರಸಭೆಯ ಜಮೀನಿನಲ್ಲಿ ನಿರ್ಮಿಸಿದ ಕೊಳಚೆ ಪ್ರದೇಶ ನಿರ್ಮೂಲನಾ ಮಂಡಳಿಯ ಮನೆಗಳು ದಶಕದಿಂದ ಮುಹೂರ್ತಕ್ಕಾಗಿ ಕಾಯುತ್ತಿವೆ.

ಸಂತೋಷ ಕಡಗದ, ಸ್ಥಳೀಯ ನಿವಾಸಿ

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.