ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಲ್ಕಿಯ ಅಂದ ಹೆಚ್ಚಿಸಿದ ಕೆರೆ ಸೌಂದರ್ಯೀಕರಣ

Last Updated 12 ಡಿಸೆಂಬರ್ 2017, 9:05 IST
ಅಕ್ಷರ ಗಾತ್ರ

ಭಾಲ್ಕಿ: ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಗೆ ಒಳಪಟ್ಟಿರುವ ಇಲ್ಲಿನ ಸಣ್ಣ ನೀರಾವರಿ ಕೆರೆಯ ಆಧುನೀಕರಣ, ಸೌಂದರ್ಯೀಕರಣದಿಂದ ಪಟ್ಟಣದ ಅಂದ ಹೆಚ್ಚಿರುವುದರ ಜತೆಗೆ ಸಾರ್ವಜನಿಕರನ್ನು ಆಕರ್ಷಿಸುವ ಪ್ರಮುಖ ಸ್ಥಳವಾಗಿ ಪರಿವರ್ತನೆಗೊಂಡಿದೆ. ಡಿ. 13ರಂದು ಪಟ್ಟಣಕ್ಕೆ ಬರುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆರೆ ಲೋಕಾರ್ಪಣೆ ಮಾಡಲಿದ್ದಾರೆ.

ಪಟ್ಟಣದಲ್ಲಿ ಚನ್ನಬಸವ ಪಟ್ಟದ್ದೇವರ ಲಿಂಗೈಕ್ಯ ಸ್ಥಳವಾದ ಚನ್ನಬಸವಾಶ್ರಮ ಹೊರತುಪಡಿಸಿ ನಾಗರಿಕರನ್ನು ಸೆಳೆಯುವಂತಹ ಉದ್ಯಾನ ಅಥವಾ ಇತರ ಯಾವುದೇ ಸ್ಥಳವಿರಲಿಲ್ಲ. ಇದರಿಂದ ಜನರಿಗೆ ಮನೆಯಿಂದ ಕುಟುಂಬ ಸಮೇತರಾಗಿ ಹೊರಗಡೆ ಹೋಗಲು ತುಂಬಾ ತೊಂದರೆ ಆಗುತ್ತಿತ್ತು. ಮುಂಜಾನೆ, ಸಂಜೆ ವಾಯು ವಿಹಾರಕ್ಕೆ ತೆರಳಲು ಜನರು ಅನಿವಾರ್ಯವಾಗಿ ಬೀದರ್‌–ಭಾಲ್ಕಿ, ಭಾಲ್ಕಿ–ಹುಮನಾಬಾದ್‌, ಭಾತಂಬ್ರಾ ಇಲ್ಲವೇ ಮರೂರ ರಸ್ತೆಯ ಕಡೆಗೆ ಹೋಗಬೇಕಾಗಿತ್ತು. ಈಗ ಪಟ್ಟಣ ವಾಸಿಗಳಿಗೆ ಆ ಬವಣೆ ತಪ್ಪುತ್ತದೆ ಎಂದು ಸಂತಸ ವ್ಯಕ್ತಪಡಿಸುತ್ತಾರೆ ಪುರಸಭೆ ಸದಸ್ಯೆ ಮಹಾದೇವ ಸ್ವಾಮಿ.

ಈ ಕೆರೆಯನ್ನು1974 ರಲ್ಲಿ ನಿರ್ಮಿಸಲಾಗಿದೆ. ಕೆರೆಯ ನೀರಿನ ಸಂಗ್ರಹಣೆ ವಿಸ್ತೀರ್ಣ 39 ಹೆಕ್ಟರ್‌, ಗರಿಷ್ಠ ನೀರಿನ ಶೇಖರಣೆ ಎತ್ತರ 4.10 ಮೀಟರ್ ಇದ್ದು, ಕೆರೆಯ ಕೆಳಗೆ
ಒಟ್ಟು 255 ಹೆಕ್ಟರ್‌ ಅಚ್ಚುಕಟ್ಟು ಪ್ರದೇಶವಿದೆ.

ಸಣ್ಣ ನೀರಾವರಿ ಇಲಾಖೆ, ಎಚ್‌ಕೆಆರ್‌ಡಿಬಿ ವತಿಯಿಂದ ಕೆರೆಯ ಸೌಂದರ್ಯೀಕರಣ ಕ್ಕಾಗಿ ಒದಗಿಸಲಾದ ₹ 6.70 ಕೋಟಿ ಅನುದಾನದಲ್ಲಿ ಕೆರೆಯ ಒಡ್ಡಿನ ವಿಸ್ತರಣೆಗೆ ₹ 100 ಲಕ್ಷ, ಕೆರೆ ಕೋಡಿ ಮೇಲು ಸೇತುವೆ ನಿರ್ಮಾಣಕ್ಕೆ ₹ 100 ಲಕ್ಷ, ಕೆರೆಯ ಸುತ್ತ ವಾಯು ವಿಹಾರದ ಪಾದಚಾರಿ ಮಾರ್ಗ ನಿರ್ಮಾಣಕ್ಕೆ ₹ 200 ಲಕ್ಷ, ಪಾದಚಾರಿ ಮಾರ್ಗದ ಎರಡು ಬದಿ ತಂತಿ ಬೇಲಿ ನಿರ್ಮಾಣಕ್ಕೆ ₹ 100 ಲಕ್ಷ, ವಿದ್ಯುತ್‌ ಕಂಬ ಅಳವಡಿಸಲು ₹ 90 ಲಕ್ಷ, ಹುಲ್ಲು ಹಾಸಲು ₹ 60 ಲಕ್ಷ, ಪಿ.ಡಬ್ಲೂ.ಡಿ ಮುಖ್ಯರಸ್ತೆಯಿಂದ ಕೆರೆವರೆಗಿನ ರಸ್ತೆ ಡಾಂಬರೀಕರಣಕ್ಕೆ ₹ 20 ಲಕ್ಷ ವೆಚ್ಚ ಮಾಡಲಾಗಿದೆ ಎಂದು ಸಣ್ಣ ನೀರಾವರಿ ಇಲಾಖೆ ಎಇಇ ವಿಲಾಸ ಮಾಶೆಟ್ಟೆ ತಿಳಿಸುತ್ತಾರೆ.

ವಿವಿಧ ಕಾಮಗಾರಿಗಳಿಗೆ ಶಂಕು ಸ್ಥಾಪನೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 3ನೇ ನಗರೋತ್ಥಾನ, ಎಸ್‌ಸಿಪಿ, ಟಿಎಸ್‌ಪಿ ಯೋಜನೆ ಅಡಿ ₹ 70 ಕೋಟಿ ಅನುದಾನದಲ್ಲಿ ನಿರ್ಮಾಣ ಆಗಲಿರುವ ಪುರಸಭೆಯ ನೂತನ ಕಟ್ಟಡ, ಕಾರಂಜಾ ಜಲಾಶಯದ ಒಳಹರಿವಿನ ಕೊರತೆಯನ್ನು ಸರಿದೂಗಿಸಲು ಮಾಣಿಕೇಶ್ವರ, ಹಾಲಹಳ್ಳಿ ಬ್ಯಾರೇಜ್‌ನಿಂದ ನೀರನ್ನು ಒದಗಿಸಿ ಅಚ್ಚುಕಟ್ಟನ್ನು ಸ್ಥರೀಕರಿಸುವ ₹ 126 ಕೋಟಿ ಯೋಜನೆ, ₹ 482 ಕೋಟಿ ವೆಚ್ಚದ ಕಾರಂಜಾ ಯೋಜನೆ ಜಾಲದ ಆಧುನೀಕರಣ ಕಾಮಗಾರಿ ಸೇರಿದಂತೆ ತಾಲ್ಲೂಕಿನ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿ ₹ 7 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಸಿಸಿ ರಸ್ತೆ, ಚರಂಡಿ ಕಾಮಗಾರಿಗಳನ್ನು ಉದ್ಘಾಟಿಸಲಿದ್ದಾರೆ.

* * 

ಮುಂಬರುವ ದಿನಗಳಲ್ಲಿ ಕೆರೆಯ ಹೂಳೆತ್ತಿ, ನೀರಿನ ಸಂಗ್ರಹ ಸಾಮರ್ಥ್ಯ ಹೆಚ್ಚಿಸಿ ಬೋಟಿಂಗ್‌ಗೆ ವ್ಯವಸ್ಥೆ ಮಾಡಲಾಗುವುದು
ವಿಲಾಸ ಮಾಶೆಟ್ಟೆ ಎಇಇ, ಸಣ್ಣ ನೀರಾವರಿ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT