ಸೋಮವಾರ, ಮಾರ್ಚ್ 8, 2021
32 °C

‘ಕನಿಷ್ಠ ಬೆಂಬಲ ಬೆಲೆ ಭಾಗ್ಯ’ ನೀಡದ ರಾಜ್ಯಸರ್ಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಕನಿಷ್ಠ ಬೆಂಬಲ ಬೆಲೆ ಭಾಗ್ಯ’ ನೀಡದ ರಾಜ್ಯಸರ್ಕಾರ

ಮೊಳಕಾಲ್ಮುರು: ಜನಮನ್ನಣೆ ಪಡೆಯಲು ಹಲವು ಭಾಗ್ಯಗಳ ಸರಣಿಯನ್ನೇ ಜಾರಿ ಮಾಡಿರುವ ರಾಜ್ಯಸರ್ಕಾರ ರೈತರು ಬೆಳೆದ ಬೆಳೆಗಳಿಗೆ ಮಾತ್ರ ‘ಕನಿಷ್ಠ ಬೆಂಬಲ ಬೆಲೆ ಭಾಗ್ಯ’ ಯೋಜನೆ ಮಾತ್ರ ಜಾರಿಗೊಳಿಸಲಿಲ್ಲ ಎಂದು ಎಐಟಿಯುಸಿ ಜಿಲ್ಲಾ ಕಾರ್ಯದರ್ಶಿ ಸಿ.ವೈ. ಶಿವರುದ್ರಪ್ಪ ಆರೋಪಿಸಿದರು.

ಇಲ್ಲಿನ ಕನ್ನಡ ಭವನದಲ್ಲಿ ಸೋಮವಾರ ನಡೆದ ಸಿಪಿಐ 9 ನೇ ತಾಲ್ಲೂಕು ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ಕೇಂದ್ರಸರ್ಕಾರದ ಅಸಹಕಾರ ಮಧ್ಯೆಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ರೂ 50 ಸಾವಿರ ವರೆಗಿನ ರೈತರ ಸಾಲ ಮನ್ನಾ ಮಾಡಿದ್ದು ಮಾತ್ರ ಶ್ಲಾಘನೀಯ ಎಂದು ಹೇಳಿದರು.

ಪ್ರಧಾನಮಂತ್ರಿ ನರೇಂದ್ರಮೋದಿ ರೈತ ವಿರೋಧಿ, ಕಾರ್ಮಿಕ ವಿರೋಧಿ ನೀತಿಗಳನ್ನು ಅನುಸರಿಸುತ್ತಿದ್ದಾರೆ. ಜನವರಿಯಲ್ಲಿ ಕೇರಳದ ತಿರಚಿಯಲ್ಲಿ ನಡೆಯುತ್ತಿರುವ ಪಕ್ಷದ ರಾಷ್ಟ್ರೀಯ ಸಮ್ಮೇಳನದಲ್ಲಿ ಮುಂದಿನ ರಾಜಕೀಯ ನಡೆ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.

ಎಐಕೆಎಸ್‌ ರಾಜ್ಯ ಕಾರ್ಯದರ್ಶಿ ದೊಡ್ಡ ಉಳ್ಳಾರ್ಥಿ ಕರಿಯಣ್ಣ ಮಾತನಾಡಿ, ‘ನರೇಂದ್ರ ಮೋದಿ ಚುನಾವಣೆ ಮುನ್ನ ನೀಡಿದ್ದ ‘ಅಚ್ಚೆ ದಿನ್‌ ಆಯೆಗಾ’ ಬದಲಾಗಿ ‘ಆಚೆ ದಿನ್‌ ಆಯೆಗಾ’ ಎಂಬ ಸ್ಥಿತಿ ನಿರ್ಮಾಣವಾಗಿ ಶ್ರಮಿಕ ವರ್ಗ ಹಾಗೂ ಮಧ್ಯಮ ವರ್ಗದವರು ಸ್ವಾತಂತ್ರ್ಯಪೂರ್ವ ಪರಿಸ್ಥಿತಿ ಅನುಭವಿಸುತ್ತಿದ್ದಾರೆ ಎಂದು ಹೇಳಿದರು.

ಸ್ವಾಮಿನಾಥನ್‌ ವರದಿ ಜಾರಿ ಮಾಡುತ್ತೇವೆ ಎಂದು ಭರವಸೆ ನೀಡಿ ಅಧಿಕಾರಕ್ಕೆ ಬಂದ ಮೋದಿ ಸರ್ಕಾರ ಈಗ ವರದಿ ಜಾರಿ ಮಾಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯಕ್ಕೆ ಹೇಳಿಕೆ ನೀಡಿದೆ. ಈ ಬಗ್ಗೆ ಸರ್ಕಾರ ಗಮನಹರಿಸಿ ಹೇಳಿಕೆ ವಾಪಸ್‌ ಪಡೆದು ವರದಿ ಜಾರಿಗೆ ಮುಂದಾಗದಿದ್ದಲ್ಲಿ ದೇಶದಾದ್ಯಂತ ನಮ್ಮ ಸಂಘಟನೆಗಳು ಪ್ರತಿಭಟನೆ ನಡೆಸಲಿವೆ ಎಂದು ಹೇಳಿದರು.

ಸಿಪಿಐ ತಾಲ್ಲೂಕು ಅಧ್ಯಕ್ಷ ಜಾಫರ್‌ ಷರೀಫ್‌ ಮಾತನಾಡಿ, ಡಿ. 27, 28 ರಂದು ಮೊಳಕಾಲ್ಮುರಿನಲ್ಲಿ ಸಿಪಿಐ ಜಿಲ್ಲಾ ಸಮ್ಮೇಳನ ಆಯೋಜಿಸಲಾಗಿದೆ ಎಂದು ಹೇಳಿದರು. ಎಐಕೆಎಸ್ ತಾಲ್ಲೂಕು ಅಧ್ಯಕ್ಷ ಡಿ. ಪೆನ್ನಯ್ಯ, ಅಂಗನವಾಡಿ ಫೆಡರೇಷನ್‌ ತಾಲ್ಲೂಕು ಅಧ್ಯಕ್ಷೆ ಅರವಿಂದ ಬಾಯಿ, ಕಾರ್ಯದರ್ಶಿ ನಾಗರತ್ನಮ್ಮ, ಸಿಪಿಐನ ಕೆ.ಟಿ. ನಾಗರಾಜ್‌, ಅಮಕುಂದಿ ಈರಣ್ಣ, ವೀರೇಶ್‌, ಓಬಣ್ಣ, ಕಾಮಯ್ಯ, ಮುತ್ತಯ್ಯ, ಮಾಣಿಕ್ಯ ಅವರೂ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.