ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಧಾರ್ ಅದಾಲತ್‌ಗೆ ಉತ್ತಮ ಸ್ಪಂದನೆ

Last Updated 12 ಡಿಸೆಂಬರ್ 2017, 10:14 IST
ಅಕ್ಷರ ಗಾತ್ರ

ಹಾವೇರಿ: ಆಧಾರ್‌ ಕಾರ್ಡ್‌ಗಾಗಿ ಅಲೆದಾಡುತ್ತಿರುವ ಜನರ ಸಮಸ್ಯೆಗೆ ಸ್ಪಂದಿಸಿದ ಜಿಲ್ಲಾಡಳಿತವು, ನಗರದ ದೇವರಾಜು ಅರುಸು ಭವನದಲ್ಲಿ ಸೋಮವಾರದಿಂದ ‘ಆಧಾರ್ ಅದಾಲತ್’ ಆರಂಭಿಸಿದೆ.

ಯುಐಡಿ, ಇ–ಆಡಳಿತದ ಸಹಯೋಗದಲ್ಲಿ ಆರಂಭಗೊಂಡ ‘ಆಧಾರ್ ಅದಾಲತ್’ಗೆ ಉಪವಿಭಾಗಾಧಿಕಾರಿ ಪಿ.ಎನ್‌. ಲೋಕೇಶ್ ಸೋಮವಾರ ಬೆಳಿಗ್ಗೆ ಚಾಲನೆ ನೀಡಿದರು. ಡಿ.15ರ ತನಕ ಅದಾಲತ್ ನಡೆಯಲಿದೆ.

ಆರು ಮೇಜುಗಳು: ‘ಆಧಾರ್ ಅದಾಲತ್’ನಲ್ಲಿ 2 ಹೊಸ ಆಧಾರ್ ನೋಂದಣಿ, 2 ಮೊಬೈಲ್ ಸಂಖ್ಯೆ ಹಾಗೂ ವಿಳಾಸ ದಾಖಲಿಸುವ ಘಟಕ ಹಾಗೂ 5 ವರ್ಷದೊಳಗಿನ ಮಕ್ಕಳ ನೋಂದಣಿ ಮಾಡುವ ಮೇಜುಗಳನ್ನು ಇಡಲಾಗಿದೆ.

ಅಲ್ಲದೇ, ಇನ್ನೊಂದು ವಿಶೇಷ ಘಟಕವಿದ್ದು, ಇಲ್ಲಿ ಸಮಸ್ಯೆಗಳನ್ನು ಬಗೆಹರಿಸಕೊಡಲಾಗುತ್ತಿದೆ. ಇ–ಆಡಳಿತದ ರಾಜ್ಯ ಸಂಯೋಜಕ ಅಮೃತ್‌ರಾಜ್ ಮತ್ತು ಯುಐಡಿಯ ಸಮಾಲೋಚಕ ಓಬಯ್ಯ ಕಾರ್ಡ್ ಸಿಗದಿರುವ, ಕಾರ್ಡ್ ಹೊಂದಾಣಿಕೆ ಆಗದಿರುವ ಮತ್ತಿತರ ಸಮಸ್ಯೆಗಳನ್ನು ಪರಿಶೀಲಿಸುತ್ತಿದ್ದಾರೆ.

‘ಈ ಹಿಂದೆ ಸುಮಾರು 150 ಖಾಸಗಿ ಏಜೆನ್ಸಿಗಳು ಆಧಾರ್ ಕಾರ್ಡ್ ನೋಂದಣಿ ಮಾಡುತ್ತಿದ್ದವು. ಆದರೆ, ನೋಂದಣಿಯಾದ ಕೆಲವರಿಗೆ ಕಾರ್ಡ್ ಬಾರದ ಕಾರಣ ಸಮಸ್ಯೆಗಳು ಉಂಟಾಗಿದ್ದವು. ಅಂತಹ ಏಜೆನ್ಸಿಗಳ ವಿರುದ್ಧ ಯುಐಡಿ ಹಾಗೂ ಇ– ಆಡಳಿತವು ಕ್ರಮ ಕೈಗೊಂಡಿದೆ. ಸದ್ಯ ಜಿಲ್ಲೆಯ 19 ನಾಡ ಕಚೇರಿ ಹಾಗೂ ಜಿಲ್ಲಾಡಳಿತ ಭವನ ಸೇರಿದಂತೆ ಒಟ್ಟು 20 ಸರ್ಕಾರಿ ಸ್ಥಳಗಳು ಹಾಗೂ 13 ಬ್ಯಾಂಕ್‌ಗಳಲ್ಲಿ ನೋಂದಣಿ ಕೇಂದ್ರ ತೆರೆಯಲಾಗಿದೆ’ ಎಂದು ಆಧಾರ್‌ ಜಿಲ್ಲಾ ಸಂಚಾಲಕ ವೀರೇಶ್ ಬಿ. ‘ಪ್ರಜಾವಾಣಿ’ಗೆ ತಿಳಿಸಿದರು.

‘ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಸುಮಾರು 35 ಸಾವಿರ ಆಧಾರ್‌ ಕಾರ್ಡ್‌ಗಳನ್ನು ಇ–ಡೌನ್‌ಲೋಡ್ ಮಾಡಲಾಗಿದೆ. ಕಾರಡಗಿ ಗ್ರಾಮದಲ್ಲೇ ಹೆಚ್ಚು ಸಮಸ್ಯೆ ಬಗೆಹರಿಸಲಾಗಿದೆ. ಅಲ್ಲದೇ, ಅಂಚೆ ಮೂಲಕ ಬಂದ ಆಧಾರ್‌ ಕಾರ್ಡ್‌ ವಿಳಾಸ ತಪ್ಪಿ ವಾಪಸ್ ಹೋದ ಪ್ರಕರಣಗಳಲ್ಲಿ ಆನ್‌ಲೈನ್ ಮೂಲಕ ಕೊಡಿಸಲಾಗಿದೆ. ಸದ್ಯ ಶುಕ್ರವಾರ ತನಕ ಅದಾಲತ್ ನಡೆಯಲಿದೆ’ ಎಂದು ವಿವರಿಸಿದರು.

ಕೊನೆಗೂ ಸಿಕ್ಕಿತು ಪರಿಹಾರ!

ಅಗಡಿಯ ಮಂಜುನಾಥ ಮಾಳೋದೆ ಮೂರು ವರ್ಷಗಳಲ್ಲಿ 14 ಬಾರಿ ಆಧಾರ್ ನೋಂದಣಿ ಮಾಡಿಸಿದ್ದರು. ಆದರೂ, ಆಧಾರ್ ಕಾರ್ಡ್ ಬಂದಿರಲಿಲ್ಲ. ಈ ಸಮಸ್ಯೆಗೆ ಅವರಿಗೆ ಸೋಮವಾರ ಪರಿಹಾರ ಸಿಕ್ಕಿತು.

ತಾಯಿ ಸರಸ್ವತಮ್ಮ ಮಾಳೋದೆ ನೋಂದಣಿ ಸಂದರ್ಭದಲ್ಲಿ ಮಂಜುನಾಥ ಅವರು ತಮ್ಮ ಬೆರಳಚ್ಚು ನೀಡಿದ್ದರು. ಹೀಗಾಗಿ, ತಾಯಿಯ ಹೆಸರಿನಲ್ಲಿರುವ ಬೆರಳಚ್ಚನ್ನು ಮತ್ತೊಮ್ಮೆ ಮಂಜುನಾಥ ಮಾಳೋದೆ ಹೆಸರಿನಲ್ಲಿ ನೊಂದಣಿ ಮಾಡಿಕೊಳ್ಳಲು ಆಧಾರ್‌ ಸರ್ವರ್‌ ನಿರಾಕರಿಸುತ್ತಿತ್ತು. ಇದರಿಂದಾಗಿ ಪ್ರತಿ ಬಾರಿ ಅವರ ನೋಂದಣಿಯು ತಿರಸ್ಕೃತಗೊಳ್ಳುತ್ತಿತ್ತು.

ಮಂಜುನಾಥ ಮಾಳೋದೆ ತಾಯಿ ಈಚೆಗ ನಿಧನ ಹೊಂದಿದ್ದು, ಅವರ ಮರಣ ಪತ್ರ ನೀಡಿದರೆ, ಆಧಾರ್ ಸಂಖ್ಯೆ ರದ್ದುಗೊಳ್ಳುತ್ತದೆ. ಆ ಬಳಿಕ ಮಂಜುನಾಥ್ ಅವರು ತಮ್ಮ ಕಾರ್ಡ್ ಮಾಡಿಸಿಕೊಳ್ಳಬಹುದು ಎಂದು ಸಮಸ್ಯೆಗೆ ಪರಿಹಾರವನ್ನು ಅಧಿಕಾರಿಗಳು ನೀಡಿದರು.

* *

ಆಧಾರ್ ಸಂಖ್ಯೆಯನ್ನು ಸತತ 3 ವರ್ಷ ಬಳಸದಿದ್ದರೆ, ನಿಷ್ಕ್ರಿಯಗೊಳ್ಳುತ್ತದೆ. ಐದು ವರ್ಷಕ್ಕೊಮ್ಮೆ ಮರು ನೋಂದಣಿ ಮಾಡುವುದು ಉತ್ತಮ
ವೀರೇಶ್ ಬಿ. ‘ಆಧಾರ್’ ಜಿಲ್ಲಾ ಸಂಚಾಲಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT