ಮಂಗಳವಾರ, ಮಾರ್ಚ್ 2, 2021
30 °C

ನೇಪಾಳದ ಹೊಸ ಸರ್ಕಾರ ಸಮನ್ವಯದಿಂದ ಮುನ್ನಡೆಯಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೇಪಾಳದ ಹೊಸ ಸರ್ಕಾರ ಸಮನ್ವಯದಿಂದ ಮುನ್ನಡೆಯಲಿ

ನೇಪಾಳ ಕಮ್ಯುನಿಸ್ಟ್‌ ಪಾರ್ಟಿ– ಮಾವೊವಾದಿ (ಸಿಪಿಎನ್‌– ಎಂ) ಮತ್ತು ನೇಪಾಳ ಕಮ್ಯುನಿಸ್ಟ್‌ ಪಾರ್ಟಿ (ಯುನೈಟೆಡ್‌ ಮಾರ್ಕ್ಸಿಸ್ಟ್‌– ಲೆನಿನಿಸ್ಟ್‌) ಈ ಎರಡೂ ಪಕ್ಷಗಳ ಮೈತ್ರಿಕೂಟವು ನೇಪಾಳದ ಸಂಸತ್‌ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ್ದು, ಮುಂದಿನ ಸರ್ಕಾರ ರಚಿಸುವುದು ಖಚಿತವಾಗಿದೆ. ಇವೆರಡೂ ಪಕ್ಷಗಳು ಕೆಲವೇ ವರ್ಷಗಳ ಹಿಂದೆ ಬದ್ಧ ರಾಜಕೀಯ ವೈರಿಗಳಾಗಿದ್ದರೂ ಈ ಚುನಾವಣೆಯಲ್ಲಿ ಮೈತ್ರಿ ಸಾಧಿಸಿದ್ದು ಆಶ್ಚರ್ಯದ ನಡೆಯೇ ಆಗಿತ್ತು. ಈ ಚಾಣಾಕ್ಷ ನಡೆಗೆ ಜನರು ಸ್ಪಷ್ಟ ಬಹುಮತದ ಒಲವು ವ್ಯಕ್ತಪಡಿಸಿದ್ದಾರೆ.

ನೇಪಾಳ ಕಾಂಗ್ರೆಸ್‌ ನೇತೃತ್ವದ ಮೈತ್ರಿಕೂಟದ ಚುನಾವಣಾ ಸಾಧನೆ ನಿರಾಶಾದಾಯಕವಾಗಿದ್ದು, ಪ್ರತಿಪಕ್ಷದ ಸ್ಥಾನದಲ್ಲಿ ಕುಳಿತುಕೊಳ್ಳುವುದು ಖಚಿತವಾಗಿದೆ. 1990ರಲ್ಲಿ ರಾಜಪ್ರಭುತ್ವವನ್ನು ತ್ಯಜಿಸಿ ಪ್ರಜಾಪ್ರಭುತ್ವವನ್ನು ಒಪ್ಪಿಕೊಂಡ ನೇಪಾಳದಲ್ಲಿ, ರಾಜಕೀಯ ಅಸ್ಥಿರತೆ ಸದಾ ಕಾಡುತ್ತಿದೆ. ಹತ್ತು ವರ್ಷಗಳಲ್ಲಿ ಹತ್ತು ಸರ್ಕಾರಗಳು ಬಂದು ಹೋಗಿವೆ.

ಈ ಹಿನ್ನೆಲೆಯಲ್ಲಿ ಈಗ ಸ್ಥಿರ ಸರ್ಕಾರವೊಂದರ ರಚನೆಯ ಆಶಾವಾದ ಮೂಡಿದೆ. ರಾಜಕೀಯ ಸ್ಥಿರತೆಯು ಆ ದೇಶದ ಆರ್ಥಿಕ ಮತ್ತು ಸಾಮಾಜಿಕ ಬದುಕನ್ನು ಸುಸ್ಥಿರಗೊಳಿಸುವ ಹಿನ್ನೆಲೆಯಲ್ಲಿ ಭಾರತವೂ ಈ ಫಲಿತಾಂಶವನ್ನು ಸ್ವಾಗತಿಸಬೇಕಿದೆ. ನೆರೆಯ ದೇಶದಲ್ಲಿ ಸ್ಥಿರ ಸರ್ಕಾರವಿದ್ದಲ್ಲಿ ಏಷ್ಯಾ ಉಪಖಂಡದ ಆರ್ಥಿಕ ಮತ್ತು ವಾಣಿಜ್ಯ ಚಟುವಟಿಕೆಗಳಿಗೂ ಹುಮ್ಮಸ್ಸು ಉಕ್ಕುವುದು ಸಹಜ.

ನೇಪಾಳದ ಎಡಪಕ್ಷಗಳ ಜತೆಗೆ ಇತ್ತೀಚಿನ ವರ್ಷಗಳಲ್ಲಿ ಭಾರತದ ಸಂಬಂಧ ಅಷ್ಟೇನೂ ಉತ್ತಮವಾಗಿಲ್ಲ ಎನ್ನುವುದು ನಿಜ. ಸಿಪಿಎನ್‌ (ಯುಎಂಎಲ್‌) ಪಕ್ಷದ ಮುಖಂಡ ಕೆ.ಪಿ.ಒಲಿ ನೇತೃತ್ವದ ಸರ್ಕಾರ ರಾಜೀನಾಮೆ ನೀಡುವುದರಲ್ಲಿ ಭಾರತದ ಕೈವಾಡವಿತ್ತು ಎನ್ನುವ ಗಾಳಿಸುದ್ದಿಯೂ ಹಬ್ಬಿತ್ತು. ಒಲಿ ಅವರು ಚೀನಾದ ಪರ ಹೆಚ್ಚಿನ ಒಲವು ಹೊಂದಿರುವ ರಾಜಕಾರಣಿಯಾಗಿರುವುದು ಭಾರತದ ಆಳುವವರಿಗೆ ಇರುಸುಮುರುಸು ಉಂಟು ಮಾಡಿದ ಸಂಗತಿ.

ಈಗ ಮತ್ತೆ ಒಲಿ ಅವರ ನೇತೃತ್ವದಲ್ಲೇ ನೇಪಾಳದ ಹೊಸ ಸರ್ಕಾರ ರಚನೆಯಾಗುವುದು ಖಚಿತವಾಗಿದೆ. ನೇಪಾಳದ ಜನರಲ್ಲಿ ಇರುವ ಭಾರತ ವಿರೋಧಿ ಭಾವನೆಗಳನ್ನು ಚುನಾವಣೆಯ ಸಂದರ್ಭದಲ್ಲಿ ಕೆದಕಿ ಎರಡೂ ಎಡಪಂಥೀಯ ಪಕ್ಷಗಳು ರಾಜಕೀಯ ಲಾಭ ಪಡೆದಿವೆ ಎನ್ನುವುದೂ ನಿಜ.

ಈ ಸನ್ನಿವೇಶವನ್ನು ನಿಭಾಯಿಸಲು ಭಾರತ ಹೆಚ್ಚು ಮುತ್ಸದ್ದಿತನದಿಂದ ವರ್ತಿಸಬೇಕಾದ ಅಗತ್ಯವಿದೆ. ಆ ದೇಶದ ಜನರ ತೀರ್ಪನ್ನು ಗೌರವಿಸುವುದರ ಜತೆಗೇ, ನೇಪಾಳ ಸರ್ಕಾರದ ಚೀನಾ ಪರ ಒಲವು ಉಪಖಂಡದಲ್ಲಿ ರಾಜಕೀಯ ಅಸಮತೋಲನ ಉಂಟು ಮಾಡದಂತೆ ನೋಡಿಕೊಳ್ಳಬೇಕಾಗಿದೆ. ಹಾಗೆ ನೋಡಿದರೆ, ಸಿಪಿಎನ್‌–ಎಂ ಮತ್ತು ಸಿಪಿಎನ್‌–ಯುಎಂಎಲ್‌ ಪಕ್ಷಗಳು ಪರಸ್ಪರ ರಾಜಕೀಯ ವೈರತ್ವವನ್ನು ಮರೆತು ಎಷ್ಟು ವರ್ಷಗಳ ಕಾಲ ಒಟ್ಟಿಗೇ ಇರಬಹುದೆಂಬುದರ ಬಗ್ಗೆಯೂ ಹೊರಜಗತ್ತಿಗೆ ಅನುಮಾನಗಳಿವೆ.

ಒಲಿ ಮತ್ತು ಸಿಪಿಎನ್‌–ಎಂ ನಾಯಕ ಪ್ರಚಂಡ ಇಬ್ಬರೂ ವ್ಯಕ್ತಿಕೇಂದ್ರಿತ ನಿರ್ಧಾರಗಳಿಗೆ ಹೆಸರುವಾಸಿಯಾದವರು. ಈಗ ಜನರು ನೀಡಿರುವ ಭರ್ಜರಿ ಬಹುಮತವನ್ನು ದೇಶದ ಅಭಿವೃದ್ಧಿಗೆ ಸಾಧನವನ್ನಾಗಿ ಬಳಸಿಕೊಳ್ಳಬೇಕಾದ ಹೊಣೆಗಾರಿಕೆ ಇಬ್ಬರ ಮೇಲೂ ಇದೆ. ಸ್ಥಿರ ಸರ್ಕಾರ ಮತ್ತು ಸುಸ್ಥಿರ ಅಭಿವೃದ್ಧಿಯ ನಿಟ್ಟಿನಲ್ಲಿ ನೇಪಾಳ ಸರ್ಕಾರದ ಉಪಕ್ರಮಗಳಿಗೆ ಭಾರತವೂ ಬೆಂಬಲಿಸಬೇಕಿದೆ.

ಉಪಖಂಡದ ಎರಡು ಪ್ರಬಲ ಶಕ್ತಿಗಳಾದ ಚೀನಾ ಮತ್ತು ಭಾರತದ ಮಧ್ಯೆ ಸಮತೋಲನದ ಸಂಬಂಧ ಇಟ್ಟುಕೊಂಡು, ಆಡಳಿತ ನಡೆಸುವ ಅನಿವಾರ್ಯವನ್ನು ನೇಪಾಳದ ಹೊಸ ಸರ್ಕಾರ ಅರ್ಥಮಾಡಿಕೊಂಡಷ್ಟೂ ಒಳ್ಳೆಯದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.