ಶುಕ್ರವಾರ, ಫೆಬ್ರವರಿ 26, 2021
28 °C

ಕೊಲೆಯನ್ನು ರಾಜಕೀಯಕ್ಕೆ ಬಳಸುವವರು ರಾಕ್ಷಸರು: ನಟ ಪ್ರಕಾಶ್‌ ರೈ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಲೆಯನ್ನು ರಾಜಕೀಯಕ್ಕೆ ಬಳಸುವವರು ರಾಕ್ಷಸರು: ನಟ ಪ್ರಕಾಶ್‌ ರೈ

ಮಾಣಿ (ಬಂಟ್ವಾಳ): ‘ರಾಜಸ್ಥಾನದಲ್ಲೇ ಇರಲಿ, ಹೊನ್ನಾವರದಲ್ಲೇ ಇರಲಿ, ಕೊಲೆಯಂತಹ ಖಂಡನೀಯ ಅಪರಾಧ ಕೃತ್ಯಗಳನ್ನೂ ರಾಜಕೀಯಕ್ಕೆ ಬಳಸಿಕೊಳ್ಳುವವರು ರಾಕ್ಷಸರು’ ಎಂದು ಬಹುಭಾಷಾ ಸಿನಿಮಾ ನಟ ಪ್ರಕಾಶ್‌ ರೈ ಹೇಳಿದರು.

ಜಾತ್ಯತೀತ ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳು ಬಂಟ್ವಾಳ ತಾಲ್ಲೂಕಿನ ಮಾಣಿಯ ನೇರಳಕಟ್ಟೆ ಮೈದಾನದಲ್ಲಿ ಆಯೋಜಿಸಿದ್ದ ‘ಸಾಮರಸ್ಯ ನಡಿಗೆ’ಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ‘ರಾಜಸ್ಥಾನದಲ್ಲಾಗಲೀ ಅಥವಾ ಹೊನ್ನಾವರದಲ್ಲೇ ಆಗಿರಲಿ. ಯಾವ ಮತದವರಾಗಲೀ, ಯಾವ ಪಕ್ಷದವರಾಗಲೀ ಅಥವಾ ಯಾವ ಅಭಿಪ್ರಾಯವಿದ್ದವರಾಗಲೀ ಒಬ್ಬ ಮನುಷ್ಯನನ್ನು ಕೊಲ್ಲುವುದು ಖಂಡನೀಯ’ ಎಂದರು.

‘ನಮ್ಮಂತಹ ಇನ್ನೊಬ್ಬ ಮನುಷ್ಯನನ್ನು ಕೊಂದಾಗ ನಮಗೆ ನೋವಾಗಬೇಕು, ಅಳು ಬರಬೇಕು. ವೇದನೆ ಆಗಬೇಕು, ಆತಂಕವಾಗಬೇಕು. ಆದರೆ, ಈ ತರಹದ ಸನ್ನಿವೇಶಗಳನ್ನು ಇಟ್ಟುಕೊಂಡು ಸಮಾಜದಲ್ಲಿ, ಯುವಕರಲ್ಲಿ ದ್ವೇಷ ಬಿತ್ತುವ, ಅವರನ್ನು ಚಿವುಟಿ ಎಬ್ಬಿಸುವ, ಕೊಲೆಗೆ ಕೊಲೆ ಎಂಬಂತೆ ರೌದ್ರ ತಾಂಡವವಾಡುವಂತೆ ಮಾಡುವ ರಾಜಕೀಯದ ವಿರುದ್ಧ ನಾವು ಸಾಮರಸ್ಯದ ನಡೆಯನ್ನು ನಡೆಸಬೇಕಿದೆ’ ಎಂದು ಹೇಳಿದರು.

‘ಜನರು ಮೂರ್ಖರಲ್ಲ, ಎಲ್ಲರಿಗೂ ಎಲ್ಲವೂ ಗೊತ್ತಿದೆ. ಚಮಚದಲ್ಲಿ ಊಟ ತಿನ್ನಿಸಬೇಕಾದ ಅವಶ್ಯಕತೆ ಇಲ್ಲ. ಯಾರು ಮತೀಯ ಗಲಭೆಗಳನ್ನು ಮಾಡುತ್ತಿದ್ದಾರೆ ಎಂಬುದು ಎಲ್ಲರಿಗೂ ಗೊತ್ತು. ಯಾರಿಗೆ ಮತ ಹಾಕಿ ಎಂದು ಹೇಳಲು ಬಂದಿಲ್ಲ. ಪ್ರತಿಯೊಬ್ಬ ಮನುಷ್ಯರೂ ಬುದ್ಧಿವಂತರಾಗಿ ಯೋಚಿಸಬೇಕು. ಕೌಟುಂಬಿಕ, ರಾಜಕೀಯ ಸಾಮರಸ್ಯವನ್ನು ಹದಗೆಡಿಸುತ್ತಿರುವವರು ಯಾರು ಎಂಬುದು ನಿಮಗೆ ಗೊತ್ತಿದೆ. ಅವರು ನಮ್ಮನ್ನು ಆಳಿದರೆ ನಮ್ಮ ಸಮಾಜ ಎತ್ತ ಹೋಗುತ್ತದೆ ಎಂಬುದು ನಮಗೆ ಗೊತ್ತಿದೆ’ ಎಂದರು.

‘ನಾವು ಆರಿಸುವ ನಮ್ಮ ನಾಯಕರು ತೆಗೆದುಕೊಳ್ಳುವ ನೀತಿ, ನಿರ್ಧಾರಗಳು ಆಲೋಚನೆಗಳು ನಮ್ಮ ನಿತ್ಯದ ಬದುಕಿನ ಮೇಲೆ ಪರಿಣಾಮ ಬೀರುತ್ತವೆ. ಮೌನವಾಗಿ, ಕೆಲವೊಮ್ಮೆ ಜೋರಾಗಿ ಮಾತನಾಡುತ್ತಾ ಕೋಮು ಗಲಭೆಯನ್ನು ಉದ್ದೀಪಿಸುವವರನ್ನೂ, ನಮ್ಮ ಮನಸ್ಸಿ

ನೊಳಗೆ, ಮನೆಯಲ್ಲಿರಬೇಕಾದ ದೇವರುಗಳನ್ನು ಉಪಯೋಗಿಸಿ ರಾಜಕೀಯ ಮಾಡುವವರನ್ನೂ ಎದುರಿಸಬೇಕು. ನಮ್ಮ ಮನೆಯನ್ನು ನಾವೇ ಸ್ವಚ್ಛ ಮಾಡಿಕೊಳ್ಳಬೇಕಿದೆ. ಅದಕ್ಕಾಗಿ ನಾಯಕರು ಬೇಕಿಲ್ಲ. ನಿಮಗೆ ಅಂತ ಸಮಯ ಬಂದಾಗ ನಿಮ್ಮನ್ನು ಆಳುವವರು ಸಮಾಜದ ಹಿತ ಕಾಯುವವರನ್ನು ಆರಿಸುವಂತಹ ಜವಾಬ್ದಾರಿ ಇದೆ’ ಎಂದರು.

ಕಾಡನ್ನು ನೋಡಿ ನಾವು ಕಲಿಯಬೇಕಿದೆ. ಒಂದೇ ಜಾತಿಯ ಮರಗಳಿದ್ದರೆ ಅದು ಕಾಡಲ್ಲ. ಮಹಾವೃಕ್ಷದ ಕೆಳಗೆ ಸಣ್ಣ ಮರಗಳು, ಗಿಡಗಳು, ಬಳ್ಳಿಗಳು ಆಶ್ರಯ ಪಡೆಯುತ್ತವೆ. ಅವು ತಮ್ಮ ಶಕ್ತಿಯನ್ನು ಮಹಾವೃಕ್ಷಕ್ಕೆ ಧಾರೆ ಎರೆಯುತ್ತಾ ಸಾಮರಸ್ಯದಿಂದ ಬದುಕುತ್ತವೆ. ಒಂದೇ ಜಾತಿಯ ಮರಗಳಿದ್ದರೆ ಒಂದೇ ಜಾತಿಯ ಕೀಟಗಳು, ಹಕ್ಕಿಗಳು ಬರುತ್ತವೆ. ಅದು ನಿಸರ್ಗವಲ್ಲ. ಧರ್ಮ, ಜಾತಿ, ಭಾಷೆ ಎಲ್ಲವೂ ಮನುಷ್ಯನಿಂದ ಹುಟ್ಟಿದ್ದೇ ಹೊರತು ಅವು ಮನುಷ್ಯನನ್ನು ಹುಟ್ಟಿಸಲಿಲ್ಲ. ಯಾವ ಧರ್ಮವೂ ಕೊಲ್ಲು ಎನ್ನುವುದಿಲ್ಲ. ಕೊಲ್ಲು ಎಂಬುದು ಧರ್ಮವೇ ಅಲ್ಲ ಎಂದರು.

‘ನೈತಿಕತೆಯನ್ನು ಕಳೆದುಕೊಳ್ಳಬೇಡಿ. ಮನುಷ್ಯರಾಗಿ ಬದುಕೋಣ, ಭಿನ್ನಾಭಿಪ್ರಾಯಗಳ ಜೊತೆ ಬದುಕೋಣ, ಪುಟ್ಟ ಜಗಳಗಳೊಂದಿಗೆ ಬದುಕೋಣ. ಕೊಲೆ, ರಕ್ತಪಾತ ಮತ್ತು ದ್ವೇಷದ ಜೊತೆಗೆ ಅಲ್ಲ’ ಎಂದು ಭಾವುಕವಾಗಿ ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.