7

ಮೌನ ಮುರಿದವರಿಂದ ಅರಿವಿನ ಮಿಂಚು

Published:
Updated:
ಮೌನ ಮುರಿದವರಿಂದ ಅರಿವಿನ ಮಿಂಚು

‘ಮಾತು ಬೆಳ್ಳಿ, ಮೌನ ಬಂಗಾರ’ ಎಂಬುದು ಗಾದೆ ಮಾತು. ಆದರೆ ಎಲ್ಲಾ ಸಂದರ್ಭಕ್ಕೂ ಈ ಮಾತು ಸರಿ ಹೊಂದದು. ಕಾಯಕ ತೊರೆದು ಬರೀ ಮಾತಿನ ಮನೆ ಕಟ್ಟುವವರಿಗೆ ಇದು ಸರಿಹೊಂದಬಹುದು. ಆದರೆ ‘ಮೌನ’ಕ್ಕೆ ರಾಜಕೀಯ ಅರ್ಥಗಳೂ ಇವೆ. ಮಾತನಾಡಲು ಸಾಧ್ಯವಿಲ್ಲದ ವಾತಾವರಣದಲ್ಲಿ ದಮನಕ್ಕೊಳಪಡಿಸುವ ಸಂಸ್ಕೃತಿ ಇರುತ್ತದೆ.

ಹೆಣ್ಣು ಸುಕೋಮಲೆ. ಗಟ್ಟಿಯಾಗಿ ಮಾತನಾಡುವುದು ಹೆಣ್ತನಕ್ಕೆ ಶೋಭೆಯಲ್ಲ ಎಂಬಂತಹ ಸಾಂಸ್ಕೃತಿಕ ಮೌಲ್ಯಗಳು ಹೆಣ್ಣಿನ ಮಾತುಗಳನ್ನು ನಿರ್ಬಂಧಿಸುವಂತಹದ್ದು. ಜಗತ್ತಿನ ಎಲ್ಲೆಡೆ ಇಂತಹ ಮೌಲ್ಯಗಳು ಕಂಡುಬರುತ್ತವೆ.

‘ಮಾತಾಡಬೇಡ, ಬಾಯಿ ಮುಚ್ಚಿಕೊ’ (ಷಟ್ ಅಪ್) ಎಂದು ಮಹಿಳೆಗೆ ಪುರುಷ ಹೇಳುವಂತಹ ‘ಮೊದಲ ದಾಖಲಾದ ಉದಾಹರಣೆ’, ಸುಮಾರು 3000 ವರ್ಷಗಳಿಗೂ ಹಿಂದೆ ಬರೆಯಲಾದ ಹೋಮರ್‌ನ ಗ್ರೀಕ್ ಮಹಾಕಾವ್ಯ ‘ಒಡಿಸ್ಸಿ’ಯಲ್ಲೇ ಇದೆ ಎಂದು ಕೇಂಬ್ರಿಜ್ ಯೂನಿವರ್ಸಿಟಿ ಪ್ರೊಫೆಸರ್ ಹಾಗೂ ಲೇಖಕಿ ಮೇರಿ ಬಿಯರ್ಡ್ ಅವರು ತಮ್ಮ ಇತ್ತೀಚಿನ ಪುಸ್ತಕ ‘ವಿಮೆನ್ ಅಂಡ್ ಪವರ್: ಎ ಮ್ಯಾನಿಫೆಸ್ಟೊ’ದಲ್ಲಿ ಬರೆಯುತ್ತಾರೆ.

ಈ ಮಹಾಕಾವ್ಯದ ಕಥಾನಾಯಕ ಒಡಿಸ್ಸಿಯಸ್‌ನ ಪತಿವ್ರತಾ ಪತ್ನಿ ಪೆನೆಲೋಪ್‌ಗೆ ಆಕೆಯ ಮಗ, ಯುವಕ ಟೆಲಿಮಾಕಸ್ ಹೇಳುವ ಮಾತುಗಳಿವು: ‘ಅಮ್ಮ, ನಿಮ್ಮ ಅಂತಃಪುರಕ್ಕೆ ವಾಪಸ್ ಹೋಗಿ ನಿಮ್ಮ ಕೆಲಸ, ಮಗ್ಗ, ನೇಯ್ಗೆ ಕೆಲಸ ನೋಡಿ... ಮಾತೆಂಬುದು ಪುರುಷರ ವ್ಯವಹಾರ, ಇವೆಲ್ಲಾ ಪುರುಷರದು’. ಸಾರ್ವಜನಿಕ ವಲಯಗಳಲ್ಲಿ ಮಹಿಳೆಯ ಮಾತು ನಿರ್ಬಂಧಿಸುವ ಇಂತಹ ಸಂಸ್ಕೃತಿಯ ಎಳೆಗಳು ಜಗತ್ತಿನ ಎಲ್ಲೆಡೆ ಕಂಡುಬರುವಂತಹದ್ದು.

ಈ ಮೌನಸಂಸ್ಕೃತಿಯಲ್ಲಿ ಹೆಣ್ಣಿನ ಅನೇಕ ಅನುಭವಗಳು ಮಾತುಗಳಾಗದೆ ಒಳಗುದಿಗಳಾಗಿ ಹೆಣ್ಣುಹೃದಯಗಳೊಳಗೆ ಮುಚ್ಚಿಹೋದ ಕಥಾನಕಗಳೆಷ್ಟೋ. ಈ ಮೌನ ಸಂಸ್ಕೃತಿಯನ್ನು ಒಡೆದು ಮಾತನಾಡುವಂತಹದ್ದು ಸುಲಭವಲ್ಲ. ಅದೂ ತೀರಾ ವೈಯಕ್ತಿಕ ನೆಲೆಯ ಲೈಂಗಿಕ ಕಿರುಕುಳಗಳ ಅನುಭವಗಳನ್ನು ಹೇಳಿಕೊಳ್ಳುವುದು ಇನ್ನೂ ಕ್ಲಿಷ್ಟಕರ. ಹೀಗಾಗಿಯೇ ಈ ಮೌನ ಸಂಸ್ಕೃತಿಯನ್ನು ಮುರಿದು ಲೈಂಗಿಕ ಕಿರುಕುಳಗಳ ಕಥೆಗಳನ್ನು ಹೇಳಿದ ಮಹಿಳೆಯರು ‘ಟೈಮ್’ ನಿಯತಕಾಲಿಕೆಯ 2017ರ ವರ್ಷದ ವ್ಯಕ್ತಿಗಳಾಗಿ ಆಯ್ಕೆಯಾಗಿದ್ದಾರೆ ಎಂಬುದು ವಿಶೇಷ.

‘ಮೌನ ಮುರಿದವರು’ ಹಾಗೂ ‘ಆಂದೋಲನಕ್ಕೆ ಚಾಲನೆ ನೀಡಿದ ದನಿಗಳು’ ಎಂಬಂಥ ಶೀರ್ಷಿಕೆಗಳನ್ನು ಮುಖಪುಟದಲ್ಲಿ ನೀಡಲಾಗಿದೆ. ಮುಖಪುಟದಲ್ಲಿ ಐವರು ಮಹಿಳೆಯರು ಹಾಗೂ ಒಬ್ಬರ ತೋಳಿನ ಚಿತ್ರವಿದೆ. ಈ ಪೈಕಿ, ಹಾಲಿವುಡ್ ನಟಿ ಆಸ್ಲಿ ಜುಡ್- ಹಾಲಿವುಡ್ ನಿರ್ಮಾಪಕ ಹಾರ್ವೆ ವೈನ್‌ಸ್ಟೀನ್ ಮೇಲೆ ಅಕ್ಟೋಬರ್ ತಿಂಗಳಲ್ಲಿ ಲೈಂಗಿಕ ಕಿರುಕುಳದ ಆರೋಪ ಮಾಡಿದವರಲ್ಲಿ ಮೊದಲನೆಯವರು. ಕಾರ್ಪೊರೇಟ್ ಲಾಬಿದಾರರಾದ ಅಡಾಮಾ ಈವು ಅವರು ಕ್ಯಾಲಿಫೊರ್ನಿಯಾ ರಾಜಕಾರಣದಲ್ಲಿ ವ್ಯಾಪಕವಾಗಿರುವ ಕಿರುಕುಳ, ದುರ್ನಡತೆಗಳ ಬಗ್ಗೆ ಬಹಿರಂಗ ಪತ್ರ ಬರೆದಿದ್ದಾರೆ.

ಉಬೆರ್‌ನ ಮಾಜಿ ಎಂಜಿನಿಯರ್ ಸೂಸಾನ್ ಫೌಲರ್ ಅವರು ಉಬೆರ್‌ನ ವಿಷಯುಕ್ತ ಕೆಲಸದ ಸಂಸ್ಕೃತಿಯ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಾಕಿದ ನಂತರ ಸಿಲಿಕಾನ್ ಕಣಿವೆಯಲ್ಲಿ ಲೈಂಗಿಕ ಕಿರುಕುಳ ಆರೋಪ ಹೊತ್ತವರ ರಾಜೀನಾಮೆಗಳ ಪರ್ವವೇ ಆರಂಭವಾಯಿತು. ವೈನ್‌ಸ್ಟೀನ್ ಮೇಲಿನ ಆರೋಪ ಬಹಿರಂಗವಾಗುವ ಮುಂಚೆಯೇ ಡಿಜೆ ಯೊಬ್ಬನಿಂದ ಲೈಂಗಿಕ ಕಿರುಕುಳಕ್ಕೆ ಒಳಗಾದ ಬಗ್ಗೆ ಪಾಪ್ ಸಂಗೀತ ತಾರೆ ಟೇಲರ್ ಸ್ವಿಫ್ಟ್, ಕೋರ್ಟ್‌ನಲ್ಲಿ ಸಾಕ್ಷ್ಯ ನುಡಿದಿದ್ದರು. ತನ್ನನ್ನು ಹಿಂಬಾಲಿಸಿ ಕಿರುಕುಳ ನೀಡುವವನ ಬಗ್ಗೆ (ಸ್ಟಾಕಿಂಗ್) ಹಲವು ಸಂಕಷ್ಟಗಳ ನಡುವೆಯೂ ಇಸಾಬೆಲ್ ಪಾಸ್ಕ್ಯುಯಲ್ ಮಾತನಾಡಿದ್ದರು.

ಮೆಕ್ಸಿಕೋದ ಈ ವಲಸಿಗ ಮಹಿಳೆಯ ಕಾಯಕ ಸ್ಟ್ರಾಬೆರ್ರಿ ಕೀಳುವುದು. ತೋಳು– ಟೆಕ್ಸಾಸ್‌ನ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುವ ಅನಾಮಿಕ ಯುವತಿಗೆ ಸೇರಿದ್ದು. ತನ್ನ ಗುರುತು ಬಹಿರಂಗವಾದಲ್ಲಿ ತನ್ನ ಕುಟುಂಬದ ಮೇಲೆ ಪರಿಣಾಮ ಬೀರುತ್ತದೆ ಎಂಬ ಭೀತಿಯಿಂದ ಗುರುತು ಹೇಳಿಕೊಳ್ಳಲು ಹಿಂಜರಿದಾಕೆ ಈಕೆ. ಮಾತನಾಡಿವದರಿಗೆ ಬೆಂಬಲ ಸೂಚಿಸುವ ಸಂಕೇತವಾಗಿ ತೋಳು ಪ್ರದರ್ಶಿಸಿದ್ದಾರೆ. ಹಲವರ ಮೌನ ಇನ್ನೂ ಮುರಿದಿಲ್ಲ ಎಂಬುದಕ್ಕೆ ಪ್ರತೀಕ ಇದು. ಈ ಮಹಿಳೆಯರೆಲ್ಲರ ಒಟ್ಟುಗೂಡುವಿಕೆ, ಮಹಿಳೆಯರ ಅನುಭವಗಳ ಸಾರ್ವತ್ರೀಕರಣಕ್ಕೂ ಸಂಕೇತ. ವೈಯಕ್ತಿಕವಾದದ್ದು ರಾಜಕೀಯವಾಗುವ ಬಗೆ ಇದು.

ಹೊಸ ಆಂದೋಲನಕ್ಕೆ ಚಾಲನೆ ನೀಡಿದ ಈ ದನಿಗಳು ಒಂದೇ ದಿನದಲ್ಲಿ ಮೂಡಿದ್ದಲ್ಲ. 2017ರ ವರ್ಷ, ಮಹಿಳೆಯರಿಗೆ ಶುಭದಾಯಕವಾಗಿಯಂತೂ ಆರಂಭವಾಗಿರಲಿಲ್ಲ. ತನ್ನ ಲೈಂಗಿಕ ಆಕ್ರಮಣ ಸಾಹಸಗಳ ಬಗ್ಗೆ ಬಡಾಯಿ ಕೊಚ್ಚಿಕೊಂಡಿದ್ದ ವ್ಯಕ್ತಿ ಅಮೆರಿಕದ ಅತ್ಯುನ್ನತ ಅಧ್ಯಕ್ಷ ಪದವಿಗೆ ಏರಿದ್ದನ್ನು ಜಗತ್ತು ಕಂಡಿತ್ತು. ಆಗ, ‘ಅಶಕ್ತರಾದಂತಹ ಭಾವನೆ ನನ್ನನ್ನು ಆವರಿಸಿಕೊಂಡಿತ್ತು’ ಎಂದಿದ್ದಾರೆ ಉಬೆರ್ ಕಂಪೆನಿಯಲ್ಲಿ ಎಂಜಿನಿಯರ್ ಆಗಿದ್ದ ಫೌಲರ್. ಆದರೆ ಇದನ್ನು ಮೀರುವ ಪ್ರಯತ್ನ ಹಾಗೂ ಅನುಭವಗಳನ್ನು ಅನಾವರಣಗೊಳಿಸುವಂತಹ ಸಾಹಸ ಪ್ರದರ್ಶಿಸಿದ ವೈಯಕ್ತಿಕ ನಡೆಗಳು ಹುಟ್ಟಿ ಹಾಕಿದ ಆಂದೋಲನ ಅಭೂತಪೂರ್ವ.

50 ವರ್ಷಗಳಿಗೂ ಹಿಂದೆ ಮಹಾಯುದ್ಧಗಳ ನಂತರ ಅಮೆರಿಕದ ಗೃಹಿಣಿಯರಲ್ಲಿ ಒಂದು ಬಗೆಯ ಹತಾಶ ಭಾವ ಆವರಿಸಿತ್ತು. ಇದು ‘ಹೆಸರಿಲ್ಲದ ಸಮಸ್ಯೆ‘ ಎಂದು ಸ್ತ್ರೀವಾದಿ ಲೇಖಕಿ ಬೆಟ್ಟಿ ಫ್ರೀಡನ್ ಗುರುತಿಸಿದ್ದರು. ಈಗಲೂ ಹಲ ಬಗೆಗಳ ತಳಮಳ, ಒಳಗುದಿಗಳು ಮಹಿಳೆಯ ಅನುಭವಲೋಕದಲ್ಲಿವೆ. ಇಂತಹ ಒಳಗುದಿಗಳನ್ನು ಯಾವುದೇ ನಾಯಕತ್ವ ಇಲ್ಲದೆ ಹೊರಚೆಲ್ಲುವ ಪ್ರಕ್ರಿಯೆ ಆಂದೋಲನ ರೂಪ ತಾಳಿದ್ದು ಅನನ್ಯ. ನಮ್ಮ ಸಂಸ್ಕೃತಿಯಲ್ಲಿ 1960ರ ದಶಕದ ನಂತರ ಅತ್ಯಂತ ವೇಗದ ಗತಿಯಲ್ಲಿ ಬದಲಾವಣೆಗಳಿಗೆ ಪ್ರೇರಕವಾದದ್ದು ಎಂದು ‘ಟೈಮ್’ ಪತ್ರಿಕೆ ಈ ಪ್ರಕ್ರಿಯೆಯನ್ನು ಬಣ್ಣಿಸಿದೆ. ಸಾಮಾಜಿಕ ಮಾಧ್ಯಮಗಳು ಈ ವೇಗಕ್ಕೆ ತಿದಿಯೊತ್ತಿವೆ.

ಹ್ಯಾಷ್‌ಟ್ಯಾಗ್ #Me Too ( # ಮೀ ಟೂ) ಈಗ ಕನಿಷ್ಠ 85 ರಾಷ್ಟ್ರಗಳಲ್ಲಿ ಲಕ್ಷಾಂತರ ಜನರಿಂದ ಬಳಕೆಯಾಗಿದೆ. ದೌರ್ಜನ್ಯ, ಕಿರುಕುಳ, ಅತ್ಯಾಚಾರಗಳ ಕಥೆಗಳನ್ನು ಸಾರ್ವಜನಿಕವಾಗಿ ಬಹಿರಂಗವಾಗಿ ಮೊದಲ ಬಾರಿಗೆ ಹೇಳಿದ್ದಾರೆ. ಸಮಸ್ಯೆಯ ವ್ಯಾಪ್ತಿಯನ್ನು ವಿಶ್ವಕ್ಕೆ ತೋರಿಸುವಲ್ಲಿ ಈ ಹ್ಯಾಷ್‌ಟ್ಯಾಗ್ ಆಂದೋಲನ ಯಶಸ್ವಿಯಾಯಿತು. ಈ ಆಂದೋಲನದಲ್ಲಿ ‘ಮೀ ಟೂ’ ಹ್ಯಾಷ್ ಟ್ಯಾಗ್ ಬಳಸಿ ಜನಪ್ರಿಯಗೊಳಿಸಿದ ಮೊದಲಿಗರು ಅಲಿಸ್ಸಾ ಮಿಲಾನೊ. ಆದರೆ ಮಿಲಾನೊ ಅವರೇ ತರಾನಾ ಬರ್ಕ್ ಬಗ್ಗೆ ನೆನಪಿಸಿದ್ದಾರೆ. 2006ರಲ್ಲೇ ‘ಮೀ ಟೂ’ ನುಡಿಗಟ್ಟು ಬಳಸಿದಂತಹ ತರಾನಾ ಬರ್ಕ್, ಕರಿಯರ ಹಕ್ಕುಗಳ ಹೋರಾಟಗಾರ್ತಿ.

‘ಮೀ ಟೂ’ ಆಂದೋಲನ ಭಾರತದಲ್ಲಿ ಸ್ತ್ರೀವಾದಿ ಆಂದೋಲನದ ಕುರಿತಂತೆ ಬೇರೊಂದು ಬಗೆಯ ವಾಗ್ವಾದಗಳಿಗೂ ಕಾರಣವಾಗಿಹೋಯಿತು. ಅಕ್ಟೋಬರ್ 24ರಂದು ಕ್ಯಾಲಿಫೋರ್ನಿಯಾ ಮೂಲದ ಭಾರತೀಯ ವಕೀಲೆ ರಾಯಾ ಸರ್ಕಾರ್ ಅವರು ಶೈಕ್ಷಣಿಕ ವಲಯದ ಅನೇಕ ಮಂದಿಯನ್ನು ಲೈಂಗಿಕ ಕಿರುಕುಳ ನೀಡುವ ಆರೋಪಿಗಳಾಗಿ ಹೆಸರಿಸಿ ಅಂತರ್ಜಾಲದಲ್ಲಿ ಪಟ್ಟಿ ಪ್ರಕಟಿಸಿದರು.

ಸಹಜ ನ್ಯಾಯದಾನದ ಪ್ರಕ್ರಿಯೆಯಲ್ಲಿ ಅನುಸರಿಸಬೇಕಾದ ಯಾವುದೇ ವಿಧಾನಗಳನ್ನೂ ಅನುಸರಿಸದೆ ಇದ್ದಕ್ಕಿದ್ದಂತೆ ಹೆಸರುಗಳನ್ನು ಪ್ರಕಟಿಸುವ ವಿಧಾನಕ್ಕೆ ಕವಿತಾ ಕೃಷ್ಣನ್, ವೃಂದಾ ಗ್ರೋವರ್, ನಿವೇದಿತಾ ಮೆನನ್ ಸೇರಿದಂತೆ ಅನೇಕ ಸ್ತ್ರೀವಾದಿಗಳು ಆಕ್ಷೇಪ ವ್ಯಕ್ತಪಡಿಸಿ ಹೇಳಿಕೆಯನ್ನು ಬಿಡುಗಡೆ ಮಾಡಿದರು. ಈ ಹೇಳಿಕೆಯೂ ವ್ಯಾಪಕ ಚರ್ಚೆಗೆ ನಾಂದಿಯಾಯಿತು.

ಭಾರತೀಯ ಸ್ತ್ರೀವಾದಿ ಚಳವಳಿಯಲ್ಲಿ ಅಧಿಕಾರ ಹಾಗೂ ಜಾತಿಯ ಶ್ರೇಣೀಕರಣದ ಚರ್ಚೆಯನ್ನೂ ಇದು ಹುಟ್ಟುಹಾಕಿತು. ಜೊತೆಗೆ, ಮಹಿಳಾ ಚಳವಳಿಯಲ್ಲಿ ಪೀಳಿಗೆಗಳ ತಿಕ್ಕಾಟವನ್ನೂ ಇದು ಪ್ರದರ್ಶಿಸಿತು. ಹೀಗಾಗಿ ಭಾರತದಲ್ಲಿ ‘ಮೀ ಟೂ’ ಆಂದೋಲನ ಲೈಂಗಿಕ ಕಿರುಕುಳ ವಿಚಾರ ಚರ್ಚೆಗಷ್ಟೇ ಸೀಮಿತವಾಗಿ ಉಳಿಯಲಿಲ್ಲ.

ಆದರೆ, ಹಾಲಿವುಡ್‌ನಲ್ಲಿ ಹುಟ್ಟಿದ ಈ ಚಳವಳಿ ನಮ್ಮ ಬಾಲಿವುಡ್ ಅನ್ನೂ ಆವರಿಸಿಕೊಂಡಿದ್ದರಲ್ಲಿ ಅಚ್ಚರಿ ಇಲ್ಲ. ಸ್ವರ ಭಾಸ್ಕರ್ ಹಾಗೂ ಪ್ರಿಯಾಂಕಾ ಚೋಪ್ರಾ ಹೆಸರುಗಳನ್ನು ಹೇಳದೇ ಕಿರುಕುಳಗಳ ಅನುಭವಗಳ ಬಗ್ಗೆ ಹೇಳಿದರು. ಲೈಂಗಿಕ ಕಿರುಕುಳದ ಬಗ್ಗೆ ಬಾಲಿವುಡ್ ಮುಕ್ತವಾಗಿ ತೆರೆದುಕೊಂಡರೆ, ನಾವು ಅನೇಕ ನಾಯಕರನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದರು ರಿಚಾ ಛಡ್ಡಾ.

89 ವರ್ಷಗಳ ಕಾಲದಿಂದ ‘ವರ್ಷದ ವ್ಯಕ್ತಿ’ ಗುರುತಿಸಿಕೊಂಡು ಬರುತ್ತಿದೆ ‘ಟೈಮ್’ ನಿಯತಕಾಲಿಕ. ಮಹಿಳೆಯರು ಮುಖಪುಟದ ಸುದ್ದಿಯಾಗಿರುವುದು ಇದು ಕೇವಲ 8ನೇ ಬಾರಿ ಎಂಬುದನ್ನು ಮರೆಯಲಾಗದು. 1928ರಲ್ಲಿ ಈ ವರ್ಷದ ವ್ಯಕ್ತಿ ಗುರುತಿಸುವ ಪ್ರಕ್ರಿಯೆ ಆರಂಭವಾದಾಗ ಲಿಂಗತ್ವ ನಿರಪೇಕ್ಷತೆಯೇನೂ ಇರಲಿಲ್ಲ. 1999ರವರೆಗೂ ‘ವರ್ಷದ ಪುರುಷ ಹಾಗೂ ಮಹಿಳೆ’ ಎಂದು ಸ್ಪಷ್ಟವಾಗಿ ವಿಭಜಿಸಲಾಗುತ್ತಿತ್ತು. ಅಲ್ಲಿಯವರೆಗೆ ಕೇವಲ ಐವರು ಮಹಿಳೆಯರು ಮಾತ್ರ ಮುಖಪುಟಕ್ಕೆ ಬಂದಿದ್ದರು.

1999ರಿಂದ ‘ವರ್ಷದ ವ್ಯಕ್ತಿ’ ಎಂಬಂಥ ಅಭಿದಾನ ನೀಡಿ ಗುರುತಿಸುವ ಪ್ರಕ್ರಿಯೆ ಆರಂಭವಾಯಿತು. ಆದರೆ ಮಹಿಳೆಯ ಕೊಡುಗೆಯನ್ನು ಗುರುತಿಸಲು ನಿಯತಕಾಲಿಕೆಗೆ ಮತ್ತೆ 16 ವರ್ಷಗಳು ಬೇಕಾದವು. 2002ರಲ್ಲಿ ಷೆರ್ರಾನ್ ವಾಟ್ ಕಿನ್ಸ್, ಕೊಲೀನ್ ರೌಲಿ, ಸಿಂಥಿಯಾ ಕೂಪರ್‍ ಅವರು ವಿಷಲ್ ಬ್ಲೋವರ್‌ಗಳಾಗಿ ನಿಯತಕಾಲಿಕೆಯ ಮುಖಪುಟದಲ್ಲಿ ವರ್ಷದ ವ್ಯಕ್ತಿಗಳಾಗಿ ಒಟ್ಟಾಗಿ ಕಾಣಿಸಿಕೊಂಡರು. ಮತ್ತೆ 13 ವರ್ಷಗಳ ನಂತರ, 2015ರಲ್ಲಿ ‘ಟೈಮ್’ ವರ್ಷದ ವ್ಯಕ್ತಿಯಾಗಿ ಜರ್ಮನ್ ಚಾನ್ಸೆಲರ್ ಏಂಜೆಲಾ ಮರ್ಕೆಲ್ ಆಯ್ಕೆಯಾಗಿದ್ದರು. ಅಮೆರಿಕದ ಮಾಜಿ ಅಧ್ಯಕ್ಷ ಫ್ರಾಂಕ್ಲಿನ್ ರೂಸ್‌ವೆಲ್ಟ್ ಅವರಿಗೆ ಈ ಗೌರವ ಮೂರು ಬಾರಿ ದಕ್ಕಿದೆ (1932, 1934, 1941).

ಬಿಲ್ ಕ್ಲಿಂಟನ್ ಗೆ ಎರಡು ಬಾರಿ (1992, 1998). ಆದರೆ ಮಹಿಳೆ ವಿಚಾರದಲ್ಲಿ ಇದು ಕಂಡುಬರುವುದಿಲ್ಲ. ಬ್ರಿಟನ್ ಮಾಜಿ ಪ್ರಧಾನಿ ಮಾರ್ಗರೆಟ್ ಥ್ಯಾಚರ್ ಅವರು 1979ರಲ್ಲಿ ಈ ನಿಯತಕಾಲಿಕೆಯ ಮುಖಪುಟದಲ್ಲಿ ರಾರಾಜಿಸಿದ್ದರು. ಆದರೆ ವರ್ಷದ ವ್ಯಕ್ತಿಯಾಗಲ್ಲ. ಅವರು ಅಧಿಕಾರದಲ್ಲಿದ್ದಾಗಲೂ ಅವರಿಗೆ ಈ ಅವಕಾಶ ಸಿಕ್ಕಿಲ್ಲ. ಆದರೆ 1990ರಲ್ಲಿ ಅಧಿಕಾರದಿಂದ ಕೆಳಗಿಳಿದಾಗ ‘ಟೈಮ್’ ಮುಖಪುಟದ ಶೀರ್ಷಿಕೆ ಹೀಗಿತ್ತು: ‘ದಿ ಲೇಡಿ ಬೋಸ್ ಔಟ್’.

ನಮ್ಮ ಹಿಂದಿನ ಪ್ರಧಾನಿ ಇಂದಿರಾ ಗಾಂಧಿ ಕೂಡ ಮೂರು ಬಾರಿ ‘ಟೈಮ್’ ಮುಖಪುಟದ ಸುದ್ದಿಯಾಗಿದ್ದಾರೆ (1966, 1971 ಹಾಗೂ ನಂತರ 1884ರಲ್ಲಿ ಹತ್ಯೆಯಾದ ನಂತರ). ಆದರೆ, ಅವರಿಗೂ ಒಮ್ಮೆಯೂ ‘ವರ್ಷದ ವ್ಯಕ್ತಿ’ ಬಿರುದು ಸಂದಿಲ್ಲ. ಹೀಗಾಗಿ ಈನಿಯತಕಾಲಿಕೆಯಲ್ಲಿ ಮುಖಪುಟದ ಆಯ್ಕೆಯಾಗುವುದೂ ಮಹಿಳೆ ಸಾಗಿ ಬಂದ ಹಾದಿಗೆ ಸಶಕ್ತ ರೂಪಕ ಎನ್ನಲಡ್ಡಿ ಇಲ್ಲ. ‘ಸಾಮಾನ್ಯವಾಗಿ ವರ್ಷದ ವ್ಯಕ್ತಿ ಆಯ್ಕೆ, ಸಾಂಸ್ಥಿಕ ಅಧಿಕಾರವನ್ನು ಪ್ರತಿಬಿಂಬಿಸುತ್ತದೆ– ಅಧ್ಯಕ್ಷ, ಪ್ರಧಾನಿ, ಪೋಪ್... ಹೀಗೆ. ಆದರೆ ನೆಲಮೂಲದಿಂದಲೂ ಪ್ರಪಂಚವನ್ನು ಬದಲಿಸಲು ಶಕ್ತಿಯಿದೆ ಎಂಬುದನ್ನು ಈ ವರ್ಷದ ವಿದ್ಯಮಾನ ನಮಗೆ ನೆನಪಿಸುತ್ತದೆ’ ಎಂದಿದ್ದಾರೆ ‘ಟೈಮ್’ ಪ್ರಧಾನ ಸಂಪಾದಕ ಎಡ್ವರ್ಡ್ ಫೆಲ್ಸೆಂಥಾಲ್.

ಗೊತ್ತಿರುವ ಗುಟ್ಟುಗಳಿಗೆ ಧ್ವನಿ ನೀಡಿದ್ದಕ್ಕಾಗಿ, ಪಿಸುಗುಡುವ ಜಾಲಗಳನ್ನು ಸಾಮಾಜಿಕ ಜಾಲತಾಣಗಳಿಗೆ ಸರಿಸಿದ್ದಕ್ಕಾಗಿ, ಅನಪೇಕ್ಷಣೀಯವಾದದನ್ನು ಒಪ್ಪಿಕೊಳ್ಳಲು ಹಾಗೂ ಅವನ್ನು ತಡೆಯಲು ನಮ್ಮನ್ನು ಮುಂದೆ ತಳ್ಳಿದ್ದಕ್ಕಾಗಿ ಈ ‘ಮೌನ ಮುರಿದವರು’ ‘2017ರ ವರ್ಷದ ವ್ಯಕ್ತಿ’ ಎಂದು ನಿಯತಕಾಲಿಕೆ ಹೇಳಿರುವುದು ಅರ್ಥಪೂರ್ಣ.

ಆದರೆ. #ಮೀ ಟೂ ಆಂದೋಲನ ದುಡಿಯುವ ಮಹಿಳೆಯರ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದೇ? ಈ ಒಂದು ಅನುಮಾನವನ್ನು ಫೇಸ್‌ಬುಕ್‌ನ ಶೆರ್ಲಿ ಸ್ಯಾಂಡ್‌ಬರ್ಗ್‌ ವ್ಯಕ್ತಪಡಿಸಿದ್ದಾರೆ. ಪುರುಷ ಹಾಗೂ ಮಹಿಳೆ ಒಟ್ಟಾಗಿ ಕೆಲಸ ಮಾಡುವುದು ಕಷ್ಟಕರ ಎಂಬ ಭಾವನೆ ಉಂಟಾಗುವುದಕ್ಕೆ ಇದು ಕಾರಣವಾಗಬಾರದು.

ಈ ವಿದ್ಯಮಾನದ ಚರ್ಚೆ ಚಾಲ್ತಿಯಲ್ಲಿರುವಾಗಲೇ ಬಾಲಿವುಡ್‌ನ ಪ್ರಖ್ಯಾತ ಹದಿಹರೆಯದ ನಟಿ, ವಿಮಾನ ಪ್ರಯಾಣ ವೇಳೆಯಲ್ಲಿ ಲೈಂಗಿಕ ಕಿರುಕುಳಕ್ಕೊಳಗಾದ ಪ್ರಕರಣ ದಾಖಲಾಗಿದೆ. ಹೆಣ್ಣಿನ ದೇಹದ ಮೇಲಿನ ಹಕ್ಕು ಅವಳದೇ ಎಂಬ ಅರಿವಿನ ಬೆಳಕು ಪಸರಿಸಬೇಕಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry