ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಂಕ್‌ಗಳಲ್ಲಿನ ಠೇವಣಿ ಎಷ್ಟು ಸುರಕ್ಷಿತ?

Last Updated 12 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ, ‘ಹಣಕಾಸು ಪರಿಹಾರ ಮತ್ತುಠೇವಣಿ ವಿಮೆ ಮಸೂದೆ’ಯು (Financia* Reso*ution and Deposit Insurance -FRDI) ವಿವಾದಕ್ಕೆ ಕಾರಣವಾಗಿದೆ. ಹಣಕಾಸು ವೈಫಲ್ಯ ಮತ್ತು ದಿವಾಳಿ ಏಳುವುದರಿಂದ ಪಾರಾಗಲು ಬ್ಯಾಂಕ್‌ಗಳು ಠೇವಣಿದಾರರ ಹಣ ಬಳಸಿಕೊಳ್ಳಲು ಅವಕಾಶ ಮಾಡಿಕೊಡುವ ವಿವಾದಾತ್ಮಕ ಕಲಂ ಒಳಗೊಂಡಿದೆ. ಇದು ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದೆ. ಮಧ್ಯಮ ವರ್ಗದವರೆಲ್ಲ ಚಿಂತಿತರಾಗಿದ್ದಾರೆ.

‘ಹಣಕಾಸು ಸಂಸ್ಥೆಗಳಲ್ಲಿನ ಸಾರ್ವಜನಿಕರ ಠೇವಣಿಗೆ ಸರ್ಕಾರ ಸಂಪೂರ್ಣ ರಕ್ಷಣೆ ನೀಡಲು ಬದ್ಧವಾಗಿದೆ’ ಎಂದು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಭರವಸೆ ನೀಡಿದ್ದಾರೆ. ಆದಾಗ್ಯೂ, ತಮ್ಮ ದುಡಿಮೆಯ ಹಣ ಕಳೆದುಕೊಳ್ಳುವ ಆತಂಕ ಬ್ಯಾಂಕ್‌ ಗ್ರಾಹಕರಲ್ಲಿ ಮನೆ ಮಾಡಿದೆ.

ಬ್ಯಾಂಕ್‌, ವಿಮೆ ಸಂಸ್ಥೆಗಳು, ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳು (ಎನ್‌ಬಿಎಫ್‌ಸಿ) ಮತ್ತು ಷೇರುಪೇಟೆಗಳು ಹಣಕಾಸು ನಷ್ಟಕ್ಕೆ ಗುರಿಯಾದ ಸಂದರ್ಭದಲ್ಲಿ ಅವುಗಳ ಉಸ್ತುವಾರಿ ವಹಿಸಿಕೊಳ್ಳುವ ನಿಯಮಾವಳಿ ರೂಪಿಸುವುದು ಈ ಮಸೂದೆಯ ಉದ್ದೇಶವಾಗಿದೆ.

* ಜನರ ಹಣ ಬಳಕೆ
ವಸೂಲಾಗದ ಸಾಲದ ಸುಳಿಗೆ ಸಿಲುಕಿರುವ ಬ್ಯಾಂಕ್‌ಗಳನ್ನು ಪ್ರಪಾತದಿಂದ ಮೇಲೆತ್ತಲು ಸರ್ಕಾರ ₹ 2.11 ಲಕ್ಷ ಕೋಟಿಗಳ ಪುನರ್ಧನ ಘೋಷಿಸಿದೆ. ಇಲ್ಲಿಯೂ ಸಾರ್ವಜನಿಕರ ಹಣದ ದುರ್ಬಳಕೆ ನಡೆಯಲಿದೆ. ಇದು ಎಲ್ಲ ತೆರಿಗೆದಾರರ ಪಾಲಿಗೆ ಹೊರೆಯಾಗಲಿದೆ. ಬ್ಯಾಂಕ್‌ಗಳನ್ನು ಉಳಿಸಲು ಜನರು ತಮ್ಮ ಉಳಿತಾಯದ ಹಣ ಇರಿಸಿರುವ ಠೇವಣಿಗಳ ಮೇಲೆ ಸರ್ಕಾರದ ದೃಷ್ಟಿ ಬಿದ್ದಿದೆ.

ಸದ್ಯಕ್ಕೆ ಬ್ಯಾಂಕ್‌ ಠೇವಣಿಗಳಲ್ಲಿನ ₹ 1 ಲಕ್ಷದ ಮೊತ್ತಕ್ಕೆ ಕಾನೂನು ಪ್ರಕಾರ ವಿಮೆ ಸೌಲಭ್ಯ ಇದೆ. ಅಂದರೆ, ಒಂದು ವೇಳೆ ಬ್ಯಾಂಕ್‌ ದಿವಾಳಿ ಎದ್ದರೂ ಜನರು ಬ್ಯಾಂಕ್‌ಗಳಲ್ಲಿ ಇರಿಸಿರುವ ಈ ಮೊತ್ತವನ್ನು ಠೇವಣಿದಾರರಿಗೆ ಮರಳಿಸುವ ಹೊಣೆಗಾರಿಕೆಯನ್ನು ಸರ್ಕಾರ ಹೊತ್ತುಕೊಂಡಿದೆ. ಉಳಿದ ಮೊತ್ತವನ್ನು ಮುಟ್ಟುಗೋಲು ಹಾಕಿಕೊಳ್ಳಬಹುದಾಗಿದೆ. ಹೀಗಾಗಿ ಒಂದು ಲಕ್ಷ ರೂಪಾಯಿವರೆಗೆ ಮಾತ್ರ ಠೇವಣಿ ಇರಿಸುವ ಪ್ರವೃತ್ತಿ ಹೆಚ್ಚಾಗಿ ಬಳಕೆಯಲ್ಲಿ ಇದೆ. ಈಗ ವಿಮೆ ಖಾತರಿಯನ್ನೇ ರದ್ದುಪಡಿಸುವ ಪ್ರಸ್ತಾವ ಕೇಳಿ ಬರುತ್ತಿದೆ.

* ಪರಿಹಾರ ನಿಗಮ ಸ್ಥಾಪನೆ
ಮಸೂದೆಯಲ್ಲಿನ ಪ್ರಸ್ತಾವವೊಂದು ಈ ಖಾತರಿ ರದ್ದುಪಡಿಸಲಿದೆ. ಎರಡು ಬ್ಯಾಂಕ್‌ಗಳು ನಷ್ಟಕ್ಕೆ ಒಳಗಾಗಿ ಬಾಗಿಲು ಹಾಕಿದಾಗ 1960ರಲ್ಲಿ ಠೇವಣಿ ವಿಮೆ ಮತ್ತು ಸಾಲ ಖಾತರಿ ನಿಗಮ (Deposit Insurance and Credit Guarantee Corporation -DICGC) ಸ್ಥಾಪಿಸಲಾಗಿತ್ತು. ಈಗ ಇದರ ಬದಲಿಗೆ,  ಪರಿಹಾರ ನಿಗಮವನ್ನು (Reso*ution Corporation- RC) ಸ್ಥಾಪಿಸಲು ಉದ್ದೇಶಿಸಲಾಗಿದೆ. ಇದು ಬ್ಯಾಂಕ್‌ಗಳಲ್ಲಿನ ಠೇವಣಿಗಳ ಮೇಲೆ ನಿಯಂತ್ರಣ ಸಾಧಿಸಲಿದೆ.

ಹಣಕಾಸು ಸಂಸ್ಥೆಗಳ ಕಾರ್ಯನಿರ್ವಹಣೆ ಮೇಲೆ ನಿಗಾ ಇರಿಸುವ ಈ ನಿಗಮವು ಬ್ಯಾಂಕ್‌ಗಳು ದಿವಾಳಿ ಅಂಚಿಗೆ ತಲುಪುವ ಸಾಧ್ಯತೆ ಪರಿಶೀಲಿಸಿ ಅದನ್ನು ತಪ್ಪಿಸಲು ಕ್ರಮ ಕೈಗೊಳ್ಳಲಿದೆ. ಠೇವಣಿಗಳಿಗೆ ನಿಗಮವು ವಿಮೆ ಸುರಕ್ಷತೆ ಒದಗಿಸಲದ್ದರೂ ಬ್ಯಾಂಕ್‌ಗಳು ದಿವಾಳಿ ಎದ್ದರೆ ಆ ಮಿತಿ ಎಷ್ಟು ಎಂಬುದನ್ನು ನಿಗದಿಪಡಿಸಿಲ್ಲ. ಗ್ರಾಹಕರು ಠೇವಣಿ ಅರ್ಜಿಯಲ್ಲಿ ‘ಬೇಲ್‌ ಇನ್‌’ಗೆ ಸಮ್ಮತಿಸಿ ಸಹಿ ಹಾಕಿದ್ದರೆ ಮಾತ್ರ ಠೇವಣಿ ಕಳೆದುಕೊಳ್ಳಬಹುದು. ಇಲ್ಲದಿದ್ದರೆ ಠೇವಣಿ ಸುರಕ್ಷಿತವಾಗಿರಲಿದೆ.

* ಬೇಲ್‌ ಔಟ್‌ V/S ಬೇಲ್‌ ಇನ್‌ 
ಬ್ಯಾಂಕ್‌ಗಳ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಸರ್ಕಾರ ಪರಿಹಾರ ಧನ ಕೊಡುಗೆ ಘೋಷಿಸಿ, ತೆರಿಗೆದಾರರ ಹಣ ಬಳಸುವುದಕ್ಕೆ ಬೇಲ್‌ಔಟ್‌ (bai*-out) ಎನ್ನುತ್ತಾರೆ. ಇದರ ಬದಲಿಗೆ, ಠೇವಣಿದಾರರ ಹಣವನ್ನೇ ಬಳಸಿಕೊಳ್ಳುವುದಕ್ಕೆ ಬೇಲ್‌ ಇನ್‌ (bai*-in) ಎನ್ನುತ್ತಾರೆ.

ನಷ್ಟಪೀಡಿತ ಮತ್ತು ಸಾಲದ ಹೊರೆಗೆ ಮುಳುಗುತ್ತಿರುವ ಬ್ಯಾಂಕ್‌ಗಳು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಠೇವಣಿದಾರ ಹಣ ಬಳಸಿಕೊಳ್ಳುವ (bai*-in) ಕಲಂ ಈ ಕರಡು ಮಸೂದೆಯಲ್ಲಿ ಅಡಕವಾಗಿದೆ. ಇದೊಂದು ಠೇವಣಿದಾರರ ಶೇ 60ರಷ್ಟು ಹಣವನ್ನು ಕಾನೂನುಬದ್ಧವಾಗಿ ಲೂಟಿ ಮಾಡುವುದು ಎಂದೂ ವ್ಯಾಖ್ಯಾನಿಸಲಾಗುತ್ತಿದೆ. 2011ರಲ್ಲಿ ಡೆನ್ಮಾರ್ಕ್‌ ಮತ್ತು 2013ರಲ್ಲಿ ಸೈಪ್ರಸ್‌ನಲ್ಲಿ ಈ ಪ್ರಯೋಗ ನಡೆದಿದೆ. ಯುರೋಪ್ ದೇಶಗಳಲ್ಲಿ ‘ಬೇಲ್‌ ಔಟ್‌’ ಬದಲಿಗೆ ‘ಬೇಲ್‌ ಇನ್‌’ಗೆ ಒಲವು ಹೆಚ್ಚಿದೆ.

ಇದುವರೆಗಿನ ಅನುಭವ
ಇಲ್ಲಿಯವರೆಗೆ ಯಾವುದೇ ಬ್ಯಾಂಕ್‌ ದಿವಾಳಿ ಸ್ಥಿತಿಗೆ ತಲುಪಲು ಭಾರತೀಯ ರಿಸರ್ವ್ ಬ್ಯಾಂಕ್‌ ಅವಕಾಶ ಮಾಡಿಕೊಟ್ಟಿಲ್ಲ. ಹೀಗಾಗಿ ಇದುವರೆಗೆ ಠೇವಣಿದಾರರ ಹಣ ಸುರಕ್ಷಿತವಾಗಿದೆ. ಬ್ಯಾಂಕ್‌ಗಳ ಹಣಕಾಸು ಸಮಸ್ಯೆ ಮತ್ತು ಪರಿಹಾರ ಸೂತ್ರವು ಹೊಸ ಮಸೂದೆಯಲ್ಲಿ ಆರ್‌ಬಿಐ ಸುಪರ್ದಿಯಿಂದ ಕೈಜಾರಲಿದೆ.

* ಸಾರ್ವಜನಿಕರ ನಂಬಿಕೆಗೆ ಧಕ್ಕೆ
ತಮ್ಮ ಠೇವಣಿಗೆ ಕೇಂದ್ರ ಸರ್ಕಾರ ಖಾತರಿ ನೀಡುವ ಏಕೈಕ ಕಾರಣಕ್ಕೆ ಸಾರ್ವಜನಿಕರು ತಮ್ಮ ದುಡಿಮೆಯ ಹಣವನ್ನು ಬ್ಯಾಂಕ್‌ಗಳಲ್ಲಿ ಠೇವಣಿ ಇರಿಸುತ್ತಾರೆ. ಉದ್ದೇಶಿತ ಪ್ರಸ್ತಾವಗಳು ಕಾಯ್ದೆಯಾಗಿ ಜಾರಿಗೆ ಬಂದರೆ ಈ ವಿಶ್ವಾಸಕ್ಕೆ ಧಕ್ಕೆ ಒದಗಲಿದೆ.

* ಹಾನಿಯ ತೀವ್ರತೆ ಎಷ್ಟು?
ಪ್ರಧಾನಿ ನರೇಂದ್ರ ಮೋದಿ ಅವರು ಏಕಪಕ್ಷೀಯವಾಗಿ ನೋಟು ರದ್ದತಿ ಮಾಡಿ ಜನರ  ಹಣದ ಬಳಕೆ ಮತ್ತು ನಿಯಂತ್ರಣ ಅಧಿಕಾರ ಕಸಿದುಕೊಂಡ ನಿರ್ಧಾರಕ್ಕಿಂತ ಇದು ಹೆಚ್ಚು ಅಪಾಯಕಾರಿಯಾಗಿರಲಿದೆ.

* ಸಚಿವ ಜೇಟ್ಲಿ ಭರವಸೆ
ಠೇವಣಿದಾರರ ಹಣಕ್ಕೆ ಸಂಪೂರ್ಣ ರಕ್ಷಣೆ ಇದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಭರವಸೆ ನೀಡಿದ್ದಾರೆ. ಆದರೆ, ಇದು ಠೇವಣಿದಾರರಲ್ಲಿ ಮೂಡಿದ ಅನುಮಾನ ದೂರ ಮಾಡಲು ಸಾಲುವುದಿಲ್ಲ.

* ಜನಸಾಮಾನ್ಯರು ಬಲಿಪಶು
ರಾಜಕೀಯ ಸಂಪರ್ಕ ಹೊಂದಿದ ಪ್ರಭಾವಿ ಉದ್ಯಮಿಗಳು ಉದ್ದೇಶಪೂರ್ವಕವಾಗಿ ಸುಸ್ತಿದಾರರಾಗಿದ್ದಾರೆ. ಬ್ಯಾಂಕ್‌ಗಳ ವಸೂಲಾಗದ ಸಾಲದ ಮೊತ್ತ (ಎನ್‌ಪಿಎ) ₹ 7 ಲಕ್ಷ ಕೋಟಿ ದಾಟಿದೆ. ಸುಸ್ತಿದಾರರ ತಪ್ಪಿಗೆ ಜನಸಾಮಾನ್ಯರನ್ನು ಬಲಿಪಶು ಮಾಡಲು ಉದ್ದೇಶಿಸಲಾಗಿದೆ.

* ವಿಮೆ ಮೊತ್ತ
25 ವರ್ಷಗಳ ಹಿಂದೆ (1993) ವಿಮೆ ಮೊತ್ತವನ್ನು ₹30 ಸಾವಿರದಿಂದ ₹ 1 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಈ ಮಿತಿಯನ್ನು ₹ 10 ಲಕ್ಷಕ್ಕೆ ಹೆಚ್ಚಿಸುವ ಹಕ್ಕೊತ್ತಾಯ ಕೇಳಿ ಬರುತ್ತಿದೆ. ಮಿತಿಯನ್ನು ಇನ್ನೂ ಕಡಿಮೆ ಮಾಡುವ ಉದ್ದೇಶ  ಜನರ ಹಕ್ಕುಗಳನ್ನು ಕಸಿದುಕೊಳ್ಳುವ ಯತ್ನವಾಗಿದೆ.

ಮಸೂದೆಯು ಸದ್ಯಕ್ಕೆ ಸಂಸತ್ತಿನ ಸ್ಥಾಯಿ ಸಮಿತಿಯ ಪರಿಶೀಲನೆಯಲ್ಲಿ ಇದೆ. ಠೇವಣಿದಾರರ ಮನದಲ್ಲಿ ಮೂಡಿರುವ ಆತಂಕ ದೂರ ಮಾಡಲು ಅಗತ್ಯ ಬದಲಾವಣೆ ಮಾಡಬೇಕಾಗಿದೆ.

ಬ್ಯಾಂಕ್‌ಗಳಿಗೆ ಹೆಚ್ಚಿನ ಅಧಿಕಾರ
ಬ್ಯಾಂಕ್‌ಗಳು ಈ ವಿಮೆ ಮೊತ್ತವನ್ನು ಭಾಗಶಃ ಅಥವಾ ಪೂರ್ಣವಾಗಿ ರದ್ದುಪಡಿಸಬಹುದು. ಠೇವಣಿಗಳ ಕಾಲಾವಧಿಯನ್ನು ಏಕಪಕ್ಷೀಯವಾಗಿ ರದ್ದುಪಡಿಸಬಹುದು. ಬಡ್ಡಿ ದರ ಬದಲಿಸಬಹುದು. ಠೇವಣಿ ಮರಳಿ ಪಡೆಯಲು ಹೋದರೆ ನಗದು ಮರಳಿಸುವ ಬದಲಿಗೆ ಬಾಂಡ್‌ಗಳನ್ನು ವಿತರಿಸಬಹುದು. ಷೇರುಗಳನ್ನಾಗಿಯೂ ಪರಿವರ್ತಿಸಬಹುದು.

ಬಿಕ್ಕಟ್ಟು ದೂರ ಮಾಡಲು ನಿಗಮವು ಐದು ಮಾರ್ಗೋಪಾಯಗಳನ್ನು ಅನುಸರಿಸಲಿದೆ.

1. ಸಂಪತ್ತು ಮತ್ತು ಸಾಲಗಳನ್ನು ಇನ್ನೊಂದು ಸಂಸ್ಥೆಗೆ ವರ್ಗಾಯಿಸುವುದು.

2. ವಿಲೀನ ಅಥವಾ ಸ್ವಾಧೀನಕ್ಕೆ ಅವಕಾಶ ಕಲ್ಪಿಸುವುದು.

3. ಹೊಸ ಸಂಸ್ಥೆ ಹುಟ್ಟು ಹಾಕಿ ನಷ್ಟಪೀಡಿತ ಸಂಸ್ಥೆಯನ್ನು ಅದರ ವಶಕ್ಕೆ ಒಪ್ಪಿಸುವುದು.

4. ‘ಬೇಲ್‌ ಇನ್‌’ ಕ್ರಮ ಕೈಗೊಳ್ಳುವುದು.

5. ಹಣಕಾಸು ಸಂಸ್ಥೆಯ ಬಾಗಿಲು ಹಾಕುವುದು.

‘ಬೇಲ್‌ –ಇನ್‌’ ಉದ್ದೇಶಿತ ಕ್ರಮವಾಗಿದೆಯೇ ಹೊರತು ಅದೇ ಅಂತಿಮವಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT