ಸೋಮವಾರ, ಮಾರ್ಚ್ 8, 2021
19 °C

ಪ್ರಚಾರದ ಮಧ್ಯೆ ಮೋದಿ ಜಲ ವಿಮಾನ ಪ್ರಯಾಣ

ಪಿಟಿಐ Updated:

ಅಕ್ಷರ ಗಾತ್ರ : | |

ಪ್ರಚಾರದ ಮಧ್ಯೆ ಮೋದಿ ಜಲ ವಿಮಾನ ಪ್ರಯಾಣ

ಅಹಮದಾಬಾದ್: ಇಲ್ಲಿನ ಸಾಬರಮತಿ ನದಿಯಿಂದ ಮೆಹ್ಸಾನಾ ಜಿಲ್ಲೆಯಲ್ಲಿರುವ ಧರೋಯಿ ಜಲಾಶಯಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಜಲ ವಿಮಾನದ ಮೂಲಕ ತೆರಳಿದರು.

‘ದೇಶದಲ್ಲಿ ಇದೇ ಮೊದಲ ಬಾರಿ ಜಲ ವಿಮಾನವನ್ನು ಬಳಸಲಾಗಿದೆ’ ಎಂದು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಹೇಳಿದ್ದಾರೆ.

ಪಶ್ಚಿಮ ಅಹಮದಾಬಾದ್‌ನ ಹೊರವಲಯದಲ್ಲಿ ಸಾಬರಮತಿ ನದಿಗೆ ಅಡ್ಡಲಾಗಿ ಕಟ್ಟಿರುವ ಸರ್ದಾರ್ ಸೇತುವೆ ಬಳಿಯಿಂದ ವಿಮಾನ ಹಾರಾಟ ಆರಂಭಿಸಿತು. ಸರ್ದಾರ್ ಸೇತುವೆ ಬಳಿ ಸೇರಿದ್ದ ಬಿಜೆಪಿ ಕಾರ್ಯಕರ್ತರು, ವಿಮಾನ ಹಾರಾಟ ಆರಂಭಿಸುತ್ತಿದ್ದಂತೆ ‘ಮೋದಿ, ಮೋದಿ...’ ಎಂದು ಜೈಕಾರ ಹಾಕಿದರು.

ನಂತರ ವಿಮಾನ ಧರೋಯಿ ಜಲಾಶಯದಲ್ಲಿ ಇಳಿಯಿತು. ಮೋದಿ ಅಲ್ಲಿಂದ ಅಂಬಾಜಿ ದೇವಾಲಯಕ್ಕೆ ತಮ್ಮ ಅಧಿಕೃತ ಕಾರಿನಲ್ಲಿ ತೆರಳಿದರು.

‘ನಾಳೆ ಇಲ್ಲಿ ರೋಡ್‌ ಷೋ ನಡೆಸಬೇಕಿತ್ತು. ಆದರೆ ನಗರಾಡಳಿತ ರೋಡ್‌ ಷೋಗೆ ಅನುಮತಿ ನೀಡಿಲ್ಲ. ಹೀಗಾಗಿ ಸಾಕಷ್ಟು ಸಮಯವಿದೆ. ನಾಳೆ ಇಲ್ಲಿಗೆ ದೇಶದ ಮೊದಲ ಜಲ ವಿಮಾನ ಬರುತ್ತದೆ. ಆ ವಿಮಾನದಲ್ಲಿ ನಾನು ಅಂಬಾಜಿಗೆ ತೆರಳುತ್ತೇನೆ’ ಎಂದು ಸೋಮವಾರ ಇಲ್ಲಿ ನಡೆದಿದ್ದ ಚುನಾವಣಾ ಪ್ರಚಾರದ ವೇಳೆ ಮೋದಿ ಹೇಳಿದ್ದರು.

‘ಎಲ್ಲೆಡೆ ವಿಮಾನ ನಿಲ್ದಾಣಗಳನ್ನು ನಿರ್ಮಿಸಲು ಸಾಧ್ಯವಿಲ್ಲ. ಹೀಗಾಗಿ ದೇಶದ ಹಲವೆಡೆ ಇಂತಹ ಜಲ ವಿಮಾನಗಳ ಸೇವೆಯನ್ನು ಆರಂಭಿಸಲು ನಮ್ಮ ಸರ್ಕಾರ ಉತ್ಸುಕವಾಗಿದೆ’ ಎಂದು ಮೋದಿ ಹೇಳಿದ್ದರು.

ಭದ್ರತೆ ಕಡೆಗಣನೆ’

‘ಪ್ರಧಾನಿಯ ಜಲ ವಿಮಾನದ ಪ್ರಯಾಣದ ವೇಳೆ ಭದ್ರತೆಯನ್ನು ಕಡೆಗಣಿಸಲಾಗಿದೆಯೇ’ ಎಂದು ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ ಪ್ರಶ್ನಿಸಿದ್ದಾರೆ.

‘ಈ ಹಾರಾಟಕ್ಕಾಗಿ ಭದ್ರತಾ ಕ್ರಮಗಳನ್ನು ಸಡಿಲಗೊಳಿಸಿದ್ದಾದರೂ ಹೇಗೆ? ಝಡ್‌ ಪ್ಲಸ್ ಸುರಕ್ಷತೆ ಹೊಂದಿರುವವರು ಏಕ ಎಂಜಿನ್‌ನ ಸಣ್ಣ ವಿಮಾನದಲ್ಲಿ ಪ್ರಯಾಣಿಸುವಂತಿಲ್ಲ. ಏಕ ಎಂಜಿನ್‌ನ ವಿಮಾನ. ವಿದೇಶಿ ಪೈಲಟ್. ಇಂದು ಕಡೆಗಣಿಸದೇ ಇರುವ ಸುರಕ್ಷತಾ ಮಾರ್ಗದರ್ಶಿ ಯಾವುದಾದರೂ ಉಳಿದಿದೆಯೇ’ ಎಂದು ಒಮರ್ ಅಬ್ದುಲ್ಲಾ ಟ್ವೀಟ್‌ನಲ್ಲಿ ಪ್ರಶ್ನಿಸಿದ್ದಾರೆ.

‘ಅಭಿವೃದ್ಧಿಗೆ ಸಂಬಂಧಿಸಿದ ಪ್ರಶ್ನೆಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ರಾಜಕೀಯ ಗಿಮಿಕ್ ಅಷ್ಟೆ’ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

‘ಜಲ ವಿಮಾನಕ್ಕೂ ಚುನಾವಣೆಗೂ ಸಂಬಂಧವಿಲ್ಲ. ಇಂತಹ ವಿಮಾನದಲ್ಲಿ ಪ್ರಧಾನಿ ಹಾರಾಟ ನಡೆಸಬಾರದು ಎಂಬ ನಿರ್ಬಂಧವೇನೂ ಇಲ್ಲ. ತಮಗೆ ಬೇಕೆನಿಸಿದರೆ ರಾಹುಲ್ ಗಾಂಧಿ ಸಹ ಇಂತಹ ವಿಮಾನವನ್ನು ಬಳಸಲಿ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ. ದೇಶದಲ್ಲಿ ಈ ವಿಮಾನದ ಪ್ರಾಯೋಗಿಕ ಹಾರಾಟದಲ್ಲಿ ಪ್ರಧಾನಿ ನರೇಂದ್ರ ಮೋದಿಯವರೇ ಭಾಗವಹಿಸಿದ್ದಕ್ಕೆ ಹೆಮ್ಮೆಯಾಗುತ್ತಿದೆ’ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ಜಲ ವಿಮಾನ ಹಾರಾಟದ ವಿವರ

ಏಕ ಎಂಜಿನ್ ವಿಮಾನ

* ವಿದೇಶಿ ಪೈಲಟ್

*ಪ್ರಧಾನಿ ವಿಮಾನವನ್ನು ಹತ್ತಿ ಇಳಿಯಲು ಸಾಬರಮತಿ ನದಿ ಮತ್ತು ಧರೋಯಿ ಜಲಾಶಯದಲ್ಲಿ ವಿಶೇಷ ಜೆಟ್ಟಿ ನಿರ್ಮಾಣ

ಅತಿಗಣ್ಯರ ವಿಮಾನಯಾನ ಸುರಕ್ಷತಾ ಮಾರ್ಗಸೂಚಿಗಳು

* ಜಲ ವಿಮಾನ ಹಾರಾಟಕ್ಕೆ ಸಂಬಂಧಿಸಿದಂತೆ ದೇಶದಲ್ಲಿ ಯಾವುದೇ ಕಾನೂನು, ನಿಯಮ, ಮಾರ್ಗದರ್ಶಿ ಸೂತ್ರ ಜಾರಿಯಲ್ಲಿಲ್ಲ.

* ಅತಿಗಣ್ಯರ ಹಾರಾಟ ಸಂಬಂಧ ‘1981ರ ವಾಯುಯಾನ ಸುರಕ್ಷತಾ ಸುತ್ತೋಲೆ–2ನ್ನು’ ಅನುಸರಿಸಬೇಕು ಎಂದು ‘2014ರ ವಾಯುಯಾನ ಸುರಕ್ಷತಾ ಸುತ್ತೋಲೆ–2’ ಹೇಳುತ್ತದೆ. 1981ರ ವಾಯುಯಾನ ಸುರಕ್ಷತಾ ಸುತ್ತೋಲೆ–2

* ಎರಡು ಎಂಜಿನ್‌ಗಳ ವಿಮಾನವಾಗಿದ್ದು, ಉತ್ತಮ ಹಾರಾಟ ಸಾಮರ್ಥ್ಯ ಹೊಂದಿರಬೇಕು.

* ವಿಮಾನದ ಬಾಗಿಲುಗಳನ್ನು ತೆಗೆಯುವ ಮತ್ತು ಹಾಕುವ ಬಗ್ಗೆ, ಬಾಗಿಲ ಬಳಿ ಕೂರುವ ಪ್ರಯಾಣಿಕರಿಗೆ ಪೈಲಟ್ ಪ್ರಾತಕ್ಷಿಕೆ ನೀಡಿರಬೇಕು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.