ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲು ನಿಲ್ದಾಣದ ‘ರಾಜಬೀದಿ’ಯೊಳಗಿಂದ...

Last Updated 12 ಡಿಸೆಂಬರ್ 2017, 19:36 IST
ಅಕ್ಷರ ಗಾತ್ರ

ಬೆಂಗಳೂರು: ಇದು ‘ಕನಕನ ಕಿಂಡಿ’ ಅಲ್ಲ, ಯಶವಂತಪುರ ರೈಲು ನಿಲ್ದಾಣ ಪ್ರವೇಶಿಸಲು ಮತ್ತು ನಿರ್ಗಮಿಸಲು ಪ್ರಯಾಣಿಕರು ಬಳಸುತ್ತಿರುವ ‘ರಾಜಮಾರ್ಗ’! ಈ ನಿಲ್ದಾಣಕ್ಕೆ ಎರಡು ಕಡೆ ಅಧಿಕೃತ ಪ್ರವೇಶ ದ್ವಾರಗಳಿದ್ದರೂ ಎರಡು ಕಳ್ಳ ಕಿಂಡಿಗಳೇ ಅತೀ ಹೆಚ್ಚಾಗಿ ಬಳಕೆಯಾಗುತ್ತಿವೆ. 

ಈ ನಿಲ್ದಾಣಕ್ಕೆ ಬರುವ ಮತ್ತು ಇಲ್ಲಿಂದ ಹೊರಗೆ ಹೋಗುವ ಪ್ರಯಾಣಿಕರಲ್ಲಿ ಹೆಚ್ಚಿನವರು ಗೋವರ್ಧನ್ ಚಿತ್ರಮಂದಿರದ ಎದುರಿನ ಸ್ಕೈವಾಕ್‌ ಪಕ್ಕದ ಆವರಣ ಗೋಡೆಯಲ್ಲಿರುವ ಕಿಂಡಿಯನ್ನು ಬಳಸುತ್ತಿದ್ದಾರೆ. ಇಲ್ಲಿ ಪ್ರಯಾಣಿಕರನ್ನು ಮತ್ತು ಅವರ ಸರಕು–ಸರಂಜಾಮುಗಳನ್ನು ತಪಾಸಣೆಗೆ ಒಳಪಡಿಸಲು ಲೋಹ ಪರಿಶೋಧಕ ಯಂತ್ರವೂ ಇಲ್ಲ, ಟಿಕೆಟ್‌ ಪರಿಶೀಲಿಸಲು ಸಿಬ್ಬಂದಿಯೂ ಇಲ್ಲ. ಯಾರು ಬೇಕಾದರೂ ಬರಬಹುದು, ಹೋಗಬಹುದು!

‘ಶೇ 50ರಷ್ಟು ಪ್ರಯಾಣಿಕರು ಈ ಅನಧಿಕೃತ ಮಾರ್ಗ ಬಳಸುತ್ತಾರೆ. ಜತೆಗೆ ಗೋಲ್ಡನ್‌ ಗೇಟ್‌ ಅಪಾರ್ಟ್‌ಮೆಂಟ್‌ ಸಮುಚ್ಚಯದ ಕಡೆಯಿಂದ ರೈಲು ನಿಲ್ದಾಣ ಸೇರುವ, ಸರಕು ಸಾಗಣೆಗೆ ಸೀಮಿತವಾಗಿರುವ ಮಾರ್ಗದಲ್ಲೂ ಅಕ್ರಮವಾಗಿ ಪ್ರವೇಶಿಸುತ್ತಾರೆ. ಇಲ್ಲಿ ಭದ್ರತಾ ಲೋಪ ಎದ್ದು ಕಾಣುತ್ತದೆ. ರೈಲ್ವೆ ಪೊಲೀಸರು ಮತ್ತು ನಿಲ್ದಾಣದ ಅಧಿಕಾರಿಗಳು ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ. ಭಾರಿ ಅನಾಹುತಗಳು ಸಂಭವಿಸಿದ ಮೇಲೆ ಎಚ್ಚೆತ್ತುಕೊಳ್ಳಬಹುದೇನೊ’ ಎನ್ನುತ್ತಾರೆ ಪ್ರಯಾಣಿಕ ಚಂದ್ರು.

‘ಮೆಟ್ರೊ ರೈಲು ನಿಲ್ದಾಣ, ತುಮಕೂರು ರಸ್ತೆಯಲ್ಲಿರುವ ಸ್ಕೈವಾಕ್‌ಗೆ ಸುಲಭವಾಗಿ ಹೋಗಲು ಸಂಪರ್ಕ ಇಲ್ಲ. ತರಕಾರಿ ಮಾರುಕಟ್ಟೆ ಕಡೆಯಿಂದ ತುಮಕೂರು ರಸ್ತೆ ಕಡೆಗೆ ಬರುವ ಅಂಡರ್‌ಪಾಸ್‌ ಗಬ್ಬೆದ್ದು ಹೋಗಿದೆ. ಮೊದಲು ನಿಲ್ದಾಣದಲ್ಲಿರುವ ಅವ್ಯವಸ್ಥೆ ಸರಿಪಡಿಸಲು ಅಧಿಕಾರಿಗಳು ಗಮನ ಕೊಡಬೇಕು. ವೃದ್ಧರು, ಮಹಿಳೆಯರು ಮತ್ತು ಮಕ್ಕಳಿಗೆ ಸುರಕ್ಷತೆ ಒದಗಿಸಲು ಗಮನ ಕೊಡಬೇಕು’ ಎನ್ನುತ್ತಾರೆ ಅವರು.

‘ಪ್ರವೇಶ ದ್ವಾರಗಳಲ್ಲಿ ಶಾಶ್ವತ ಲೋಹಶೋಧಕ ಯಂತ್ರಗಳನ್ನು ಅಳವಡಿಸಲಾಗಿದೆ. ಸಿ.ಸಿ.ಟಿ.ವಿ ಕ್ಯಾಮೆರಾಗಳ ಕಣ್ಗಾವಲು ಇದೆ. ರೈಲ್ವೆ ರಕ್ಷಣಾ ಪಡೆ ಹಾಗೂ ರೈಲ್ವೆ ಪೊಲೀಸರು ತಪಾಸಣೆ ನಡೆಸುತ್ತಾರೆ. ಪ್ರಯಾಣಿಕರನ್ನು ನಿಲ್ದಾಣದ ಆವರಣ ಮತ್ತು ಪ್ಲಾಟ್‌ಫಾರಂಗಳಲ್ಲಿ ತಪಾಸಣೆಗೆ ಒಳಪಡಿಸಬಹುದು. ಆದರೆ, ಮುರಿದು ಬಿದ್ದ ಕಾಂಪೌಂಡ್ ಮತ್ತು ಕಳ್ಳ ಕಿಂಡಿ ಮೂಲಕ ಒಳ ಪ್ರವೇಶಿಸುವವರನ್ನು ಪತ್ತೆ ಹಚ್ಚುವುದು ಕಷ್ಟ' ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಾರೆ ಅಧಿಕಾರಿಗಳು.

ಯಶವಂತಪುರ ನಿಲ್ದಾಣಕ್ಕೆ ಪ್ರತಿದಿನ ಸರಾಸರಿ 1 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಬರುತ್ತಾರೆ.  ಒಂದರಿಂದ ಆರನೇ ಪ್ಲಾಟ್‌ಫಾರಂವರೆಗೆ ಮಧ್ಯದಲ್ಲಿ ಒಂದು ಪಾದಚಾರಿ ಮೇಲುರಸ್ತೆ ಬಿಟ್ಟರೆ, ಒಂದು ಕಡೆಯಿಂದ ಮತ್ತೊಂದು ಬದಿಗೆ ತೆರಳಲು ಬೇರೆ ಮಾರ್ಗಗಳೇ ಇಲ್ಲ. ಪ್ರಯಾಣಿಕರು ಬೇಗ ತೆರಳುವ ಧಾವಂತದಲ್ಲಿ ಮೇಲುರಸ್ತೆ ಬಳಸದೆ ಹಳಿಗಳ ಮೇಲೆಯೇ ದಾಟಲು ಹೋಗಿ ಅಪಾಯ ಆಹ್ವಾನಿಸಿಕೊಂಡ ಉದಾಹರಣೆಗಳೂ ಇವೆ.

‘ತುಮಕೂರು ರಸ್ತೆ ಕಡೆಗೆ ಇರುವ ಪ್ರವೇಶ ದ್ವಾರಗಳಲ್ಲಿ ಬಂದರೆ ಬಸ್‌ ಅಥವಾ ಆಟೊರಿಕ್ಷಾ ಹಿಡಿಯಲು, ಸ್ಕೈವಾಕ್‌ ಹತ್ತಲು ಸುತ್ತು ಹಾಕಬೇಕು. ತರಕಾರಿ ಮಾರುಕಟ್ಟೆ ಕಡೆಯ ದ್ವಾರದಲ್ಲಿ ಇಳಿದರೆ, ತುಮಕೂರು ರಸ್ತೆ ತಲುಪಲು ಅಂಡರ್‌ಪಾಸ್‌ ಸುತ್ತಿಬರಬೇಕು. ವಯಸ್ಸಾದವರಿಗೆ ಮತ್ತು ಮಹಿಳೆಯರಿಗೆ ಸುಲಭ ಮಾರ್ಗಗಳಿಲ್ಲ. ಅನಿವಾರ್ಯವಾಗಿಯೇ ಕಳ್ಳ ಕಿಂಡಿಯಲ್ಲಿ ನುಸುಳಬೇಕು’ ಎಂದು ಪ್ರಯಾಣಿಕ ರಾಮೇಗೌಡ ಮತ್ತು ಸುಭದ್ರಮ್ಮ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT