ಮಂಗಳವಾರ, ಮಾರ್ಚ್ 9, 2021
18 °C

ಸ್ವಾಧೀನಾನುಭವ ಪತ್ರ: ಪಾಲಿಕೆ ನಿಯಮ ಪಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸ್ವಾಧೀನಾನುಭವ ಪತ್ರ: ಪಾಲಿಕೆ ನಿಯಮ ಪಾಲನೆ

ಬೆಂಗಳೂರು: ‘ಬಿಬಿಎಂಪಿ ಯಾವ ಮಾದರಿಯ ಕಟ್ಟಡಗಳಿಗೆ ಸ್ವಾಧೀನಾನುಭವ ಪತ್ರ (ಒ.ಸಿ) ಪಡೆದುಕೊಳ್ಳುವುದನ್ನು ಕಡ್ಡಾಯಗೊಳಿಸಿದೆಯೋ ಅಂತಹ ಕಟ್ಟಡಗಳಿಂದ ಮಾತ್ರ ನೀರು ಮತ್ತು ಒಳಚರಂಡಿ ಸಂಪರ್ಕ ನೀಡುವಾಗ ಒ.ಸಿ ಕೇಳಲಾಗುವುದು’ ಎಂದು ಜಲಮಂಡಳಿ ಅಧ್ಯಕ್ಷ ತುಷಾರ್‌ ಗಿರಿನಾಥ್‌ ತಿಳಿಸಿದರು.

ಬಿಬಿಎಂಪಿಯಲ್ಲಿ ಮುಂದುವರಿದ ವಿಶೇಷ ಸಭೆಯಲ್ಲಿ ಮಂಗಳವಾರ ಸದಸ್ಯರು, ನೀರು ಮತ್ತು ಒಳಚರಂಡಿ ಸಂಪರ್ಕ ನೀಡಲು ಜಲಮಂಡಳಿ ಎಲ್ಲ ಕಟ್ಟಡಗಳಿಗೆ ಒ.ಸಿ ಕಡ್ಡಾಯಗೊಳಿಸಿರುವ ಆದೇಶ ವಾಪಸ್‌ ಪಡೆಯುವಂತೆ ಒತ್ತಾಯಿಸಿದಾಗ ಅವರು ಈ ಸ್ಪಷ್ಟನೆ ನೀಡಿದರು.

'2016ರ ಮೇ ನಂತರ ನಿರ್ಮಿಸಿರುವ ನೆಲಮಹಡಿ ಜತೆಗೆ ಎರಡು ಮಹಡಿ (ಜಿ+2) ಮೇಲ್ಪಟ್ಟ ವಸತಿ ಮತ್ತು ವಾಣಿಜ್ಯ ಕಟ್ಟಡಗಳು ನೀರು, ಒಳಚರಂಡಿ ಸೌಲಭ್ಯ ‍ಪಡೆಯಬೇಕೆಂದರೆ ಒ.ಸಿ ನೀಡಬೇಕೆಂಬ ಆದೇಶ ಹೊರಡಿಸಲಾಗಿತ್ತು. ಒ.ಸಿ ಇಲ್ಲದ ವಸತಿ ಕಟ್ಟಡಗಳಿಗೆ ನೀರಿನ ತೆರಿಗೆಯಲ್ಲಿ ಶೇ 50ರಷ್ಟು ದಂಡ ಶುಲ್ಕ ಮತ್ತು ವಾಣಿಜ್ಯ ಕಟ್ಟಡಗಳಿಗೆ ಶೇ 100ರಷ್ಟು ದಂಡ ಶುಲ್ಕ ವಿಧಿಸಲಾಗುತ್ತಿತ್ತು. ಈ ಬಗ್ಗೆ ಪಾಲಿಕೆಯಿಂದಲೂ ಪ್ರತಿಕ್ರಿಯೆ ಬಯಸಿ ಪತ್ರ ಬರೆಯಲಾಗಿತ್ತು. ಆಯುಕ್ತರು ಪರಿಷ್ಕೃತ ನಿಯಮದ ಬಗ್ಗೆ ಈಗಷ್ಟೆ ಗಮನಕ್ಕೆ ತಂದಿದ್ದಾರೆ. ಬುಧವಾರವೇ ಈಗಿನ ಆದೇಶ ಮಾರ್ಪಡಿಸಿ, ಹೊಸ ಆದೇಶ ಹೊರಡಿಸಲಾಗುವುದು’ ಎಂದು ಅವರು ತಿಳಿಸಿದರು.

ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ್‌ ಪ್ರಸಾದ್‌, ‘ಕೆಎಂಸಿ ಕಾಯ್ದೆ ಪ್ರಕಾರ ಒಂದು ಮಹಡಿಗಿಂತ ಹೆಚ್ಚಿಗೆ ಇರುವ ಕಟ್ಟಡಗಳು ಸ್ವಾಧೀನಾನುಭವ ಪ್ರಮಾಣಪತ್ರ ಪಡೆಯಬೇಕು. ಆದರೆ, ವಸತಿ ಕಟ್ಟಡ ಎಷ್ಟೇ ಮಹಡಿ ಹೊಂದಿದ್ದರೂ 5 ಅಡುಗೆ ಕೋಣೆಗಳಿಗಿಂತ ಮೇಲ್ಪಟ್ಟಿದ್ದರೆ ಅಥವಾ ಐದಕ್ಕಿಂತ ಹೆಚ್ಚು ಅಡುಗೆ ಕೋಣೆಗಳು ಒಂದೇ ಮಹಡಿಯಲ್ಲಿ ಇದ್ದರೂ ಒ.ಸಿ ಪಡೆಯುವುದು ಕಡ್ಡಾಯ. ಹಾಗೆಯೇ ವಾಣಿಜ್ಯ ಕಟ್ಟಡ 300 ಚದರ ಮೀಟರ್‌ಗಿಂತ ಹೆಚ್ಚಿದ್ದರೆ ಈ ಪ್ರಮಾಣಪತ್ರ ಕಡ್ಡಾಯಗೊಳಿಸಿ ಆದೇಶ ಹೊರಡಿಸಲಾಗಿದೆ’ ಎಂದು ಸ್ಪಷ್ಟಪಡಿಸಿದರು.

‘2015ರಿಂದ ಈಚೆಗೆ ಪಾಲಿಕೆಯಿಂದ 16,500 ಕಟ್ಟಡಗಳ ನಿರ್ಮಾಣಕ್ಕೆ ಯೋಜನಾ ಮಂಜೂರಾತಿ ನೀಡಿದ್ದೇವೆ. ಆದರೆ, ಇದರಲ್ಲಿ 110 ಮಂದಿ ಮಾತ್ರ ಇದನ್ನು ಪಡೆದಿದ್ದಾರೆ. 1009 ಬಹುಮಹಡಿ ಕಟ್ಟಡಗಳಿಗೆ ಯೋಜನಾ ಮಂಜೂರಾತಿ ನೀಡಲಾಗಿದೆ. ಇದರಲ್ಲಿ 386 ಬಹುಮಹಡಿ ಕಟ್ಟಡ ಮಾಲೀಕರು ಮಾತ್ರ ಒ.ಸಿ ಪಡೆದುಕೊಂಡಿದ್ದಾರೆ’ ಎಂದರು.

‘ನಿಯಮ ಉಲ್ಲಂಘಿಸಿರುವುದು ಅಥವಾ ಅನಧಿಕೃತವಾಗಿ ಕಟ್ಟಡ ನಿರ್ಮಿಸಿಕೊಂಡಿರುವುದರಿಂದ ಈ ಪತ್ರ ಪಡೆಯಲು ಕಟ್ಟಡ ಮಾಲೀಕರು ಆಸಕ್ತಿ ತೋರುತ್ತಿಲ್ಲ. ಕಟ್ಟಡಗಳಿಗೆ ಸುಲಭವಾಗಿ ನೀರು ಮತ್ತು ವಿದ್ಯುತ್‌ ಸಿಗುತ್ತಿರುವುದರಿಂದಲೂ ಈ ಪತ್ರ ಪಡೆಯುತ್ತಿಲ್ಲ. ಇದನ್ನು ಪಡೆಯದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕಿದೆ. ಇದನ್ನು ನೀಡುವಾಗ ಮರಳಿಸುವ ಷರತ್ತಿನೊಂದಿಗೆ ಭದ್ರತಾ ಠೇವಣಿಯನ್ನು ಕಟ್ಟಡ ನಿರ್ಮಾಣ ಮಂಜೂರಾತಿ ಕೊಡುವಾಗಲೇ ಇರಿಸಿಕೊಳ್ಳಲಾಗುತ್ತದೆ. ಈ ರೀತಿ ಠೇವಣಿ ಇಟ್ಟುಕೊಂಡಿರುವ ಹಣವೇ ಪ್ರತಿ ವರ್ಷ ₹100 ಕೋಟಿಗೂ ಹೆಚ್ಚು ಸಂಗ್ರಹವಾಗುತ್ತಿದೆ. ಇದನ್ನು ಪಡೆಯಲು ಯಾರೂ ಬರುತ್ತಿಲ್ಲ’ ಎಂದು ತಿಳಿಸಿದರು.

ಜಲಮಂಡಳಿ ಅಧ್ಯಕ್ಷರ ಉತ್ತರಕ್ಕೆ ತೃಪ್ತರಾಗದ ಶಾಸಕ ಕೆ.ಗೋಪಾಲಯ್ಯ, ಪಾಲಿಕೆ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ, ಸದಸ್ಯರಾದ ಮಂಜುನಾಥ ರೆಡ್ಡಿ, ಸತ್ಯನಾರಾಯಣ, ‘ಸಣ್ಣಪುಟ್ಟ ಯಾವುದೇ ಕಟ್ಟಡಗಳಿಗೆ ಬಿಬಿಎಂಪಿ ಒ.ಸಿ ನೀಡುತ್ತಿಲ್ಲ. ಇದನ್ನು ಕಡ್ಡಾಯಗೊಳಿಸುವುದು ಅಥವಾ ಬಿಡುವುದು ಬಿಬಿಎಂಪಿಗೆ ಬಿಟ್ಟ ವಿಷಯ. ಆದರೆ, ಜಲಮಂಡಳಿ ಅನವಶ್ಯಕವಾಗಿ ಇದರಲ್ಲಿ ಮೂಗು ತೂರಿಸುವುದು ಸರಿಯಲ್ಲ. ಎಲ್ಲ ಕಟ್ಟಡಗಳಿಗೂ ಪ್ರಮಾಣಪತ್ರ ಕಡ್ಡಾಯಗೊಳಿಸಿದರೆ ಇಡೀ ಬೆಂಗಳೂರು ನಗರವನ್ನು ನಿರ್ನಾಮ ಮಾಡಿ, ‍ಹೊಸದಾಗಿ ನಿರ್ಮಿಸಬೇಕಾದ ಸನ್ನಿವೇಶ ಎದುರಾಗುತ್ತದೆ. ಹೀಗಾಗಿ ಕಡ್ಡಾಯಗೊಳಿಸಿರುವ ಆದೇಶವನ್ನು ಜಲಮಂಡಳಿ ಕೈಬಿಡಬೇಕು’ ಎಂದು ಒತ್ತಾಯಿಸಿದರು.

‘ವಿದ್ಯುತ್‌ ಮತ್ತು ನೀರು ನೀಡಲು ನಿರಾಕರಿಸುವಂತಿಲ್ಲ. ದಾಖಲೆಗಳಿಲ್ಲವೆಂದು ಈ ಸೌಲಭ್ಯ ನಿರಾಕರಿಸಿದರೆ ಮಾನವ ಹಕ್ಕು ಉಲ್ಲಂಘನೆ ಎಂದೇ ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ ಹೇಳಿವೆ. ಈ ಹಿನ್ನೆಲೆಯಲ್ಲಿ ಜಲಮಂಡಳಿ ಆದೇಶ ಮರುಪರಿಶೀಲಿಸಬೇಕಿದೆ. ಅಪಾರ್ಟ್‌ಮೆಂಟ್‌ಗಳಲ್ಲಿ ತ್ಯಾಜ್ಯ ನೀರು ಸಂಸ್ಕರಣ ಘಟಕ (ಎಸ್‌ಟಿಪಿ) ಅಳವಡಿಕೆ ಕಡ್ಡಾಯಗೊಳಿಸಿರುವುದು, ನೀರು, ಯುಜಿಡಿ ಸಂಪರ್ಕಕ್ಕೆ ಸ್ವಾಧೀನಾನುಭವ ಪ್ರಮಾಣಪತ್ರ ಕೇಳುತ್ತಿರುವುದು ರಾಜ್ಯ ಮತ್ತು ಕೇಂದ್ರ ಸರ್ಕಾರದ ಮಟ್ಟದಲ್ಲೇ ಚರ್ಚೆಯಾಗಿ, ಸ್ಪಷ್ಟ ತೀರ್ಮಾನಕ್ಕೆ ಬರಬೇಕಾದ ವಿಷಯಗಳಾಗಿವೆ. ಈ ಬಗ್ಗೆ ಪಾಲಿಕೆಯಿಂದಲೂ ನಿರ್ಣಯ ಮಾಡಿ, ಸರ್ಕಾರಕ್ಕೆ ಕಳುಹಿಸೋಣ’ ಎಂದು ಮೇಯರ್‌ ಆರ್‌.ಸಂಪತ್‌ರಾಜ್‌, ಸದಸ್ಯರನ್ನು ಸಮಾಧಾನಪಡಿಸಿದರು.

ಹೊಸದಾಗಿ ನಿರ್ಮಿಸುವ, 20 ಮನೆಗಳಿಗಿಂತ ಹೆಚ್ಚಿರುವ ಅಪಾರ್ಟ್‌ಮೆಂಟ್‌ಗಳಲ್ಲಿ ಮತ್ತು ಈಗಾಗಲೇ ಕಟ್ಟಿರುವ 50 ಮನೆಗಳಿಗಿಂತ ಹೆಚ್ಚಿರುವ ಅಪಾರ್ಟ್‌ಮೆಂಟ್‌ಗಳಲ್ಲಿ ಎಸ್‌ಟಿಪಿ ಅಳವಡಿಕೆ ಕಡ್ಡಾಯ ಮಾಡಿರುವುದನ್ನು ಕೈಬಿಡುವಂತೆ ಸದಸ್ಯರು ಪಟ್ಟುಹಿಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಲಮಂಡಳಿ ಅಧ್ಯಕ್ಷರು, ‘ಕೆಲವು ಅಪಾರ್ಟ್‌ಮೆಂಟ್‌ ಮಾಲೀಕರು ಈ ವಿಷಯದಲ್ಲಿ ನಮ್ಮನ್ನು ಪ್ರತಿವಾದಿ ಮಾಡಿ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ. ನ್ಯಾಯಾಲಯ ಮಧ್ಯಂತರ ತಡೆಯಾಜ್ಞೆ ನೀಡಿದೆ. ಕೇಂದ್ರ ಸರ್ಕಾರದ ಪರಿಸರ ಮತ್ತು ಅರಣ್ಯ ಸಚಿವಾಲಯ, ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳ ಆದೇಶದ ಅನುಸಾರವೇ ಅಪಾರ್ಟ್‌ಮೆಂಟ್‌ಗಳಿಗೆ ಎಸ್‌ಟಿಪಿ ಕಡ್ಡಾಯಗೊಳಿಸಲಾಗಿದೆ. ನ್ಯಾಯಾಲಯದಲ್ಲಿ ನಮ್ಮ ವಾದ ಮಂಡಿಸುತ್ತೇವೆ. ನ್ಯಾಯಾಲಯ ನೀಡುವ ಆದೇಶ ಪಾಲಿಸುತ್ತೇವೆ’ ಎಂದು ಸ್ಪಷ್ಟಪಡಿಸಿದರು.

**

ಬಿಬಿಎಂಪಿ ನಮಗೆ ಯಾವಾಗಲೂ ದೊಡ್ಡಣ್ಣನೇ. ಜಲಮಂಡಳಿ ತ‌ಮ್ಮನಾಗಿದ್ದುಕೊಂಡೇ ಹೊಂದಾಣಿಕೆಯಿಂದ ಕೆಲಸ ಮಾಡುತ್ತದೆ.

–ತುಷಾರ್‌ ಗಿರಿನಾಥ್‌, ಜಲಮಂಡಳಿ ಅಧ್ಯಕ್ಷ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.