ಸೋಮವಾರ, ಮಾರ್ಚ್ 8, 2021
32 °C

ಕಾವೇರಿ ಸಂಗಮದಲ್ಲಿ ಶೌಚಕ್ಕೆ ಪರದಾಟ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾವೇರಿ ಸಂಗಮದಲ್ಲಿ ಶೌಚಕ್ಕೆ ಪರದಾಟ!

ಶ್ರೀರಂಗಪಟ್ಟಣ: ಸಮೀಪದ ಕಾವೇರಿ ಸಂಗಮದಲ್ಲಿ ಶೌಚಾಲಯ ಇಲ್ಲದೇ ಪ್ರವಾಸಿಗರು ಹಾಗೂ ಸ್ಥಳೀಯರು ತೊಂದರೆ ಅನುಭವಿಸುತ್ತಿದ್ದಾರೆ. ಪಟ್ಟಣದ ಬಸ್‌ ನಿಲ್ದಾಣದಿಂದ 3 ಕಿ.ಮೀ ದೂರದಲ್ಲಿರುವ ಸಂಗಮಕ್ಕೆ ಪ್ರತಿದಿನ ನೂರಾರು ಪ್ರವಾಸಿಗರು ಬಂದು ಹೋಗುತ್ತಾರೆ. ಶಾಲೆ, ಕಾಲೇಜುಗಳಲ್ಲಿ ಪ್ರವಾಸ ಕೈಗೊಳ್ಳುವ ತಿಂಗಳುಗಳಲ್ಲಿ, ಕ್ರಿಸ್‌ಮಸ್‌, ರಂಜಾನ್‌ ಮೊದಲಾದ ವಿಶೇಷ ದಿನಗಳಲ್ಲಿ ಇಲ್ಲಿಗೆ ದಿನಕ್ಕೆ ಸಹಸ್ರಾರು ಮಂದಿ ಭೇಟಿ ನೀಡುವುದುಂಟು. ಪಿಂಡ ಪ್ರದಾನ, ಅಸ್ಥಿ ವಿಸರ್ಜನೆಗೆಂದು ಜನರು ಇಲ್ಲಿಗೆ ಬರುವುದು ವಾಡಿಕೆ. ಮಹಾಲಯ ಅಮಾವಾಸ್ಯೆ ದಿನಗಳಲ್ಲಿ ಇಲ್ಲಿ ಜನಜಾತ್ರೆಯೇ ಸೇರುತ್ತದೆ.

ಇಲ್ಲಿಗೆ ಬರುವವರು ಶೌಚಕ್ಕಾಗಿ ಸಮೀಪದ ಕಬ್ಬಿನ ಗದ್ದೆ, ತೆಂಗಿನ ತೋಟಗಳ ಮೊರೆ ಹೋಗುತ್ತಾರೆ. ಮಹಿಳೆಯರಂತೂ ಇನ್ನಿಲ್ಲದ ಪಡಿಪಾಟಲು ಅನುಭವಿಸುತ್ತಾರೆ. ನದಿಯಲ್ಲಿ ಸ್ನಾನ ಮಾಡುವವರು ಬಟ್ಟೆ ಬದಲಿಸಿಕೊಳ್ಳಲೂ ಇಲ್ಲಿ ಸೂಕ್ತ ವ್ಯವಸ್ಥೆ ಇಲ್ಲ. ತಳಪಾಯ, ಚಾವಣಿಯೇ ಇಲ್ಲದ ತಾತ್ಕಾಲಿಕ ತಗಡಿನ ಮನೆಯನ್ನು ನಿರ್ಮಿಸಿ ಕೈತೊಳೆದುಕೊಳ್ಳಲಾಗಿದೆ.

‘ಶುದ್ಧ ಕುಡಿಯುವ ನೀರಿಲ್ಲ. ಶೌಚಾಲಯವೂ ಇಲ್ಲದೇ ಇರುವುದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ’ ಎಂದು ಸ್ಥಳೀಯ ಎಳನೀರು ವ್ಯಾಪಾರಿ ರಹಮತ್‌ ಉಲ್ಲಾ ಹೇಳುತ್ತಾರೆ.

ಪಾಳು ಬಿದ್ದ ಅಂಗಡಿಗಳು: ಸಂಗಮದಲ್ಲಿ ಪ್ರವಾಸೋದ್ಯ ಇಲಾಖೆ 20ಕ್ಕೂ ಹೆಚ್ಚು ಅಂಗಡಿಗಳನ್ನು ನಿರ್ಮಿಸಿದೆ. ಆದರೆ ಈ ಅಂಗಡಿಗಳನ್ನು ವ್ಯಾಪಾರಿಗಳಿಗೆ ಇದುವರೆಗೂ ಹಂಚಿಕೆ ಮಾಡಿಲ್ಲ. ಇವು ತೀರಾ ಕಿರಿದಾಗಿದ್ದು, ಟೀ, ಕಾಫಿ ಕಾಯಿಸುವುದೂ ಕಷ್ಟ ಎಂಬಂತಹ ಸ್ಥಿತಿಯಲ್ಲಿವೆ. ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಜನರು ತೊಂದರೆ ಎದುರಿಸುತ್ತಿದ್ದಾರೆ’ ಎಂಬುದು ಪುರಸಭೆ ಸದಸ್ಯ ಟಿ.ಕೃಷ್ಣ ಅವರ ದೂರು.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಪ್ರವಾಸೋದ್ಯಮ ಇಲಾಖೆ ಸಹ ನಿರ್ದೇಶಕ ಹರೀಶ್‌, ‘ತಾಂತ್ರಿಕ ಕಾರಣಗಳಿಂದಾಗಿ ಕಾವೇರಿ ಸಂಗಮದಲ್ಲಿ ಅಂಗಡಿ ಮಳಿಗೆಗಳ ಉದ್ಘಾಟನೆ ತಡವಾಗಿದೆ. ಶೌಚಾಲಯ ನಿರ್ಮಾಣ ಕಾರ್ಯದಲ್ಲಿ ತುಸು ಲೋಪವಿದೆ. ಅದನ್ನು ಸರಿಪಡಿಸಲಾಗುವುದು. ಆದಷ್ಟು ಶೀಘ್ರ ಈ ಎರಡೂ ಕೆಲಸಗಳನ್ನು ಪೂರ್ಣಗೊಳಿಸಲಾಗುವುದು’ ಎಂದು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.