7

ಕೃಷಿ ಪಂಪ್‌ಸೆಟ್ ಹೆಚ್ಚುವರಿ ಶುಲ್ಕ: ತೀವ್ರ ಆಕ್ಷೇಪ

Published:
Updated:

ಉಡುಪಿ: ಪಂಪ್‌ಸೆಟ್‌ಗೆ ವಿದ್ಯುತ್ ಸಂಪರ್ಕ ಪಡೆದಿರುವ ರೈತರಿಗೆ ₹10 ಸಾವಿರ ಪಾವತಿಸುವಂತೆ ನೀಡಿರುವ ನೋಟಿಸ್‌ಅನ್ನು ಈ ಕೂಡಲೇ ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಉಡುಪಿ ಜಿಲ್ಲಾ ಕೃಷಿಕ ಸಂಘದ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮಾ ಬಂಟಕಲ್ಲು, ಹೊಸ ಪಂಪ್‌ಸೆಟ್‌ಗೆ ವಿದ್ಯುತ್ ಸಂಪರ್ಕ ಪಡೆಯಲು ಮೆಸ್ಕಾಂ ಹೆಚ್ಚುವರಿ ₹10,000 ಶುಲ್ಕ ವಿಧಿಸುತ್ತಿದೆ. ಇದು ರೈತರಿಗೆ ಹೊರೆಯಾಗಿದ್ದು ಈ ಕೂಡಲೇ ಶುಲ್ಕ ರದ್ದು ಮಾಡಬೇಕು. ರೈತರು ಬಂಡವಾಳ ಹಾಗೂ ಶ್ರಮ ಹಾಕಿ ಬೆಳೆದ ಬೆಳೆಗಳು ಕಾಡು ಪ್ರಾಣಿಗಳ ಹಾವಳಿಯಿಂದ ನಾಶವಾಗುತ್ತಿವೆ. ಇದರಿಂದಾಗಿ ರೈತರು ತೀವ್ರ ನಷ್ಟ ಎದುರಿಸುವಂತಾಗಿದೆ. ಈ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಕೃಷಿ ಬೆಲೆ ಆಯೋಗ ರಚಿಸಿದ್ದರೂ ಅದರಿಂದ ರೈತರಿಗೆ ಪ್ರಯೋಜನಾ ಆಗುತ್ತಿಲ್ಲ. ಬೆಳೆಗಳಿಗೆ ನ್ಯಾಯಯುತ ಬೆಲೆ ಸಿಗುತ್ತಿಲ್ಲ. ಮುಂಗಾರು ಹಂಗಾಮಿನ ಭತ್ತವನ್ನು ಖರೀದಿಸಲು ಅಕ್ಟೋಬರ್‌ ತಿಂಗಳಿನಲ್ಲಿಯೇ ಖರೀದಿ ಕೇಂದ್ರ ಆರಂಭಿಸಬೇಕು. ₹2,000 ಬೆಂಬಲ ಬೆಲೆಯಲ್ಲಿ ವರ್ಷಪೂರ್ತಿ ಖರೀದಿಸಲು ವ್ಯವಸ್ಥೆ ಮಾಡಬೇಕು.

ಗ್ರಾಮಾಂತರ ಭಾಗಕ್ಕೆ ಸಮರ್ಪಕ ಬಸ್ ಸೇವೆ ಇಲ್ಲದ ಕಾರಣ ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಗ್ರಾಮೀಣ ಪ್ರದೇಶಕ್ಕೆ ಬಸ್‌ ಸೇವೆ ನೀಡಬೇಕು ಎಂದರು.

ರೈತರು ಸುಮಾರು 120 ವರ್ಷಗಳಿಂದ ಅನುಭವಿಸಿಕೊಂಡು ಬರುತ್ತಿರುವ ಕುಮ್ಕಿ ಜಮೀನನ್ನು ಯಾವುದೇ ಕಾರಣಕ್ಕೂ ರದ್ದುಗೊಳಿಸಬಾರದು. ನಾಟಿ ಮತ್ತು ಕಟಾವು ಸಂದರ್ಭದಲ್ಲಿ ಯಂತ್ರೋಪಕರಣಗಳು ಲಭ್ಯವಾಗುವಂತೆ ಮಾಡಲು ಕೃಷಿ ಯಂತ್ರಧಾರೆ ಯೋಜನೆಯನ್ನು ವಿಸ್ತರಿಸಬೇಕು. ಬ್ರಹ್ಮಾವರ ಸಕ್ಕರೆ ಕಾರ್ಖಾನೆಯನ್ನು ಪುನಃ ಆರಂಭಿಸಬೇಕು ಎಂದು ಹೇಳಿದರು. ಪ್ರಧಾನ ಕಾರ್ಯದರ್ಶಿ ಕುದಿ ಶ್ರೀನಿವಾಸ ಭಟ್, ಉಪಾಧ್ಯಕ್ಷ ಶ್ರೀನಿವಾಸ ಬಲ್ಲಾಳ್, ಕಾರ್ಯದರ್ಶಿ ರವೀಂದ್ರ ಪೂಜಾರಿ ಗುಜ್ಜರಬೆಟ್ಟು ಇದ್ದರು.

* * 

ಷಿಕರ ಮಕ್ಕಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ನೀಡಬೇಕು.

ರಾಮಕೃಷ್ಣ ಶರ್ಮಾ

ಅಧ್ಯಕ್ಷ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry