ಸೋಮವಾರ, ಮಾರ್ಚ್ 8, 2021
31 °C

ಹಿಂಗಾರು ಬೆಳೆಗೆ ವರವಾದ ಬೆಣ್ಣೆತೊರಾ ನೀರು

ಅವಿನಾಶ್ ಎಸ್‌. ಬೋರಂಚಿ Updated:

ಅಕ್ಷರ ಗಾತ್ರ : | |

ಹಿಂಗಾರು ಬೆಳೆಗೆ ವರವಾದ ಬೆಣ್ಣೆತೊರಾ ನೀರು

ಸೇಡಂ: ಬೆಣ್ಣೆತೊರಾ ಎಡದಂಡೆ ಕಾಲುವೆ ನೀರು ಸೇಡಂ ತಾಲ್ಲೂಕಿನ ಕೆಲವು ಗ್ರಾಮಗಳ ಕಾಲುವೆಗಳಿಗೆ ಹರಿಯುತ್ತಿರುವುದರಿಂದ ರೈತರಲ್ಲಿ ಸಂತಸ ಹೆಚ್ಚಿದೆ. ತಾಲ್ಲೂಕಿನ ಸಂಗಾವಿ(ಎಂ) ತೊಟ್ನಳ್ಳಿ, ಮೀನಹಾಬಾಳ, ಕುಕ್ಕುಂದಾ, ಯಡಗಾ ಗ್ರಾಮದ ರೈತರು ಕಾಲುವೆ ನೀರನ್ನು ಜೋಳ ಹಾಗೂ ಕಡಲೆ ಬೆಳೆಗಳಿಗೆ ಹರಿಸುತ್ತಿದ್ದಾರೆ. ಕಾಲುವೆ ಪಾತ್ರದ ರೈತರು ಸಮಪರ್ಕವಾಗಿ ನೀರನ್ನು ಸದ್ಬಳಕೆ ಮಾಡಿಕೊಂಡರೆ ದೂರದಲ್ಲಿರುವ ರೈತರು ಸುಮಾರು ಪೈಪ್‌ಗಳ ಮೂಲಕ ಯಂತ್ರ ಬಳಸಿ ನೀರನ್ನು ಬೆಳೆಗೆ ಹರಿಸುವ ಪ್ರಯತ್ನ ಮಾಡುತ್ತಿದ್ದಾರೆ.

ಸುಮಾರು 20 ದಿನಗಳಿಂದ ಬೆಣ್ಣೆತೊರಾ ನದಿ ನೀರನ್ನು ಬಿಡಲಾಗುತ್ತಿದ್ದು, ಈ ನೀರು ಹಿಂಗಾರು ಬೆಳೆಗಳಿಗೆ ವರದಾನವಾಗಿ ಪರಿಣಮಿಸಿದೆ. ಕಾಲುವೆ ನೀರು ಹರಿಸುತ್ತಿರುವುದರಿಂದ ಜೋಳ ಹಾಗೂ ಕಡಲೆ ಬೆಳೆಗಳು ಸಲೀಸಾಗಿ ಬೆಳೆದು ನಳನಳಿಸುತ್ತಿವೆ. ಜೋಳ 3-4 ಅಡಿಗಿಂತ ಎತ್ತರ ಬೆಳೆದಿದೆ. ಕಡಲೆ ಕಾಯಿಕಟ್ಟುವ ಹಂತದಲ್ಲಿದೆ. ರೈತರು ಸ್ಪಿಂಕ್ಲರ್ ಮತ್ತು ಪೈಪ್‌ನಿಂದ ಬೆಳೆಗಳಿಗೆ ನೀರುಣಿಸುತ್ತಿರುವುದರಿಂದ ಭೂಮಿಯಲ್ಲಿ ತೇವಾಂಶ ಹೆಚ್ಚಿದೆ. ನೀರುಣಿಸಲು ರೈತರು ವಿದ್ಯುತ್ ಜನರೇಟರ್ ಹಾಗೂ ಟ್ರ್ಯಾಕ್ಟರ್ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಟೆಂಗಳಿ ಹಾಗೂ ತೊನಸನಳ್ಳಿ ಗ್ರಾಮದ ಸೀಮೆಯಂಚಿನಿಂದ ತಾಲ್ಲೂಕಿಗೆ ಪ್ರವೇಶಿಸುವ ಎಡದಂಡೆ ಕಾಲುವೆ ನೀರು ಸುಮಾರು 15 ಕಿ.ಮಿ.ಗಿಂತಲೂ ಅಧಿಕ ಮಾರ್ಗದಲ್ಲಿ ಹಾದು ಹೋಗಿದೆ.

‘ನೀರು ಆಗಮಿಸಿದ್ದರಿಂದ ರೈತರಲ್ಲಿ ಸಂತಸ ತಂದಿದೆ. ಮುಂದಿನ ದಿನಗಳಲ್ಲಿ ರೈತರು ಮುಂಗಾರಿನಲ್ಲಿ ಉದ್ದು-ಹೆಸರು ಹಾಕಿ ಹಿಂಗಾರಿನಲ್ಲಿ ಕಡಲೆ ಅಥವಾ ಜೋಳ ಬಿತ್ತನೆ ಮಾಡುವ ವಿಚಾರದಲ್ಲಿ ಇದ್ದೇನೆ’ ಎಂದು ಅಣ್ಣಾರಾವ ಜಮಾದಾರ ತಿಳಿಸಿದರು.

‘ಈ ಹಿಂದೆ ಎಡದಂಡೆ ಕಾಲುವೆಗೆ ನೀರು ಹರಿಸಲು ಪ್ರಯತ್ನಿಸಿದಾಗ ಕೇವಲ 20 ಕಿ.ಮಿ ಮಾತ್ರ ಹರಿದು ಹೋಗಿತ್ತು. ಆದರೆ, ಈ ವರ್ಷ ಸುಮಾರು 60 ಕಿ.ಮಿ.ವರೆಗೂ ನೀರು ನಿರಂತರವಾಗಿ ಹರಿಯತ್ತಿದೆ’ ಎಂದು ಬೆಣ್ಣೆತೊರಾ ಯೋಜನೆಯ ಅಧಿಕಾರಿ ಜಗನ್ನಾಥ ಹಲಂಗೆ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಕೃಷಿ ಚಟುವಟಿಕೆಗಳಿಗೆ ನೀರು ಉಪಯೋಗವಾಗಲಿ ಎನ್ನುವ ಉದ್ದೇಶದಿಂದ ಈ ಹಿಂದೆ ಸರ್ಕಾರ ಕಾಲುವೆ ತೋಡಿ ಪರ್ಸಿಗಳನ್ನು ಕಾಲುವೆಗೆ ಹಾಕಲಾಗಿತ್ತು. ಆದರೆ, ನೀರು ಹರಿಯದೇ ಇರುವುದರಿಂದ ಜನರು ಕಾಲುವೆಗೆ ಹಾಕಲಾಗಿದ್ದ ಪರ್ಸಿಗಳು ಕಿತ್ತುಕೊಂಡು ಹೋಗಿದ್ದರು. ಕಾಲುವೆ ಸಂಪೂರ್ಣ ಮಣ್ಣಿನಿಂದ ಇದ್ದುದ್ದರಿಂದ ಅಧಿಕಾರಿಗಳು ನೀರು ಹರಿಸಲು ಸಾಧ್ಯವಾಗಿರಲಿಲ್ಲ.

‘2015-16 ರಲ್ಲಿ ಸುಮಾರು ₹17.2 ಕೋಟಿ ಖರ್ಚು ಮಾಡಿ ಕಾಂಕ್ರಿಟ್ ಕಾಲುವೆ ನಿರ್ಮಿಸಲಾಗಿದೆ. 2016ರಲ್ಲಿ ಹೆಬ್ಬಾಳ ಸಮೀಪದ ಹೆರೂರು ಗ್ರಾಮದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರು ಅಧಿಕಾರಿಗಳನ್ನು ಮತ್ತು ರೈತರನ್ನು ಕರೆಸಿ, ಸಂವಾದ ನಡೆಸಿ ಕಾಲುವೆ ನೀರು ಹರಿಸುವಂತೆ ತಾಕೀತು ಮಾಡಿದ್ದರಿಂದ ಇಂದು ಕಾಲುವೆಗೆ ನೀರು ಹರಿದಿದೆ. ಅವರು ಹೇಳಿದ ಒಂದು ವರ್ಷದಲ್ಲಿಯೇ ನೀರು ಕಾಲುವೆಗೆ ಹರಿದು ಬಂದಿದೆ’ ಎಂದು ಚೆನ್ನಬಸ್ಸಪ್ಪ ಹಾಗರಗಿ ಹೇಳುತ್ತಾರೆ.

ಸೇಡಂ ತಾಲ್ಲೂಕಿನ 5 ಗ್ರಾಮಗಳಿಗೆ ನೀರು ಹರಿದಿದೆ. ಸಂಗಾವಿ(ಎಂ), ತೊಟ್ನಳ್ಳಿ, ಮೀನಹಾಬಾಳ, ಕುಕ್ಕುಂದಾ ಹಾಗೂ ಯಡಗಾ ಗ್ರಾಮದ ಕೆಲವು ಕಡೆಗಳಲ್ಲಿನ ರೈತರು ನೀರನ್ನು ಸದ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಒಟ್ಟಾರೆ ತಾಲ್ಲೂಕಿಗೆ ನೀರು ಬಂದಿರುವುದರಿಂದ ಜನರಲ್ಲಿ ಸಂತಸ ಹೆಚ್ಚಿದ್ದು, ಸಚಿವರಿಗೆ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.

ಈ ವರ್ಷ ಹಿಂಗಾರು ಬೆಳೆಗಳ ಸಮಯದಲ್ಲಿ ನೀರು ಬಂದಿದೆ. ಮುಂದಿನ ವರ್ಷದ ಮುಂಗಾರು ಬಿತ್ತನೆ ಸಮಯದಲ್ಲಿ ಬೆಣ್ಣೆತೊರಾ ನದಿ ನೀರು ಬಿಟ್ಟರೆ ರೈತರಿಗೆ ಅನುಕೂಲವಾಗಲಿದೆ. ವರ್ಷದಲ್ಲಿ ಎರಡು ಬೆಳೆ ತೆಗೆದು ಅಧಿಕ ಇಳುವರಿ ಪಡೆದುಕೊಳ್ಳಲಿದ್ದೇವೆ ಎನ್ನುವುದು ರೈತರ ಅಭಿಪ್ರಾಯವಾಗಿದೆ.

* * 

ಸಚಿವ ಡಾ.ಶರಣಪ್ರಕಾಶ ಪಾಟೀಲರ ಶ್ರಮದಿಂದ ಬೆಣ್ಣೆತೊರಾ ನೀರು ನಮ್ಮ ತಾಲ್ಲೂಕಿಗೆ ಹರಿದುಬಂದಿದೆ. ರೈತರಲ್ಲಿ ಹರ್ಷ ಹೆಚ್ಚಿದ್ದು, ನೀರನ್ನು ಬೆಳೆಗಳಿಗೆ ಹರಿಸುತ್ತಿದ್ದಾರೆ.

ಚೆನ್ನಬಸ್ಸಪ್ಪ ಹಾಗರಗಿ,

ತಾಲ್ಲೂಕು ಪಂಚಾಯಿತಿ ಸದಸ್ಯ

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.