ಶುಕ್ರವಾರ, ಮಾರ್ಚ್ 5, 2021
29 °C

ಜೆಡಿಎಸ್‌ನಿಂದಲೇ ಸ್ಪರ್ಧೆ ಖಚಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೆಡಿಎಸ್‌ನಿಂದಲೇ ಸ್ಪರ್ಧೆ ಖಚಿತ

ಕೋಲಾರ: ‘ರಾಜಕಾರಣ ಯಾರಪ್ಪನ ಸ್ವತ್ತಲ್ಲ. ನಾನು ಜೆಡಿಎಸ್ ಪಕ್ಷದಲ್ಲಿದ್ದೇನೆ. ಯಾರೇ ತಿಪ್ಪರಲಾಗ ಹಾಕಿದರೂ ನಾನು ಜೆಡಿಎಸ್‌ನಿಂದಲೇ ಸ್ಪರ್ಧಿಸುವುದು ಖಚಿತ’ ಎಂದು ಮಾಜಿ ಸಚಿವ ಕೆ.ಶ್ರೀನಿವಾಸಗೌಡ ಘೋಷಿಸಿದರು.

ಜೆಡಿಎಸ್ ಎಸ್‌ಸಿ ಘಟಕದ ಸಮಾವೇಶದ ಸಂಬಂಧ ನಗರದಲ್ಲಿ ಮಂಗಳವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಪಕ್ಷದ ಅನೇಕರು ತೆವಲಿಗೆ ವಿನಾಕಾರಣ ಇಲ್ಲಸಲ್ಲದ ವಿಚಾರಗಳನ್ನು ಪತ್ರಿಕೆಗಳಿಗೆ ನೀಡಿ ಬರೆಸುತ್ತಿದ್ದಾರೆ. ಅದು ಅವರ ಖುಷಿ. ತಾನು ಬೇಡ ಎನ್ನುವುದಿಲ್ಲ. ಅವರಿಗೆ ಒಳ್ಳೆಯದಾಗಲಿ. ಆದರೆ ಪತ್ರಿಕೆಯವರು ಜನರಲ್ಲಿ ಅಸಹ್ಯ ಹುಟ್ಟಿಸುವಂತೆ ವರದಿ ಪ್ರಕಟಿಸುವುದು ಸರಿಯಲ್ಲ ಎಂದರು.

ಬೆಂಗಳೂರಿನಲ್ಲಿ ನಡೆಯುವ ಎಸ್‌ಸಿ ಸಮಾವೇಶಕ್ಕೆ ತೆರಳುವುದಕ್ಕೆ ಕೋಲಾರ ವಿಧಾನಸಭಾ ಕ್ಷೇತ್ರದಿಂದ ಪ್ರತಿ ಗ್ರಾಮ ಪಂಚಾಯಿತಿಗೆ ತಲಾ ಒಂದು ಬಸ್ ವ್ಯವಸ್ಥೆ ಮಾಡಲಾಗಿದೆ. ಕೋಲಾರ ನಗರಕ್ಕೆ 7 ಬಸ್‌ಗಳನ್ನು ಕಲ್ಪಿಸಲಾಗಿದೆ. ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಮಾವೇಶ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಒಕ್ಕಲಿಗರಿಗೆ ಸೀಮಿತವಲ್ಲ: ‘ಜೆಡಿಎಸ್ ಪಕ್ಷ ಒಕ್ಕಲಿಗರಿಗೆ ಮಾತ್ರ ಸೀಮಿತವಲ್ಲ. ಪಕ್ಷವು ಎಲ್ಲಾ ಜಾತಿ, ಜನಾಂಗಗಳನ್ನೂ ಒಳಗೊಂಡಿದೆ. ಜೆಡಿಎಸ್‌ ಅಧಿಕಾರಕ್ಕೆ ಬಂದರೆ ಪರಿಶಿಷ್ಟ ಜಾತಿಯವರನ್ನು ಉಪ ಮುಖ್ಯಮಂತ ಕುಮಾರಸ್ವಾಮಿಯವರು ಭರವಸೆ ನೀಡಿದ್ದು, ಸಮುದಾಯದವರು ಸಮಾವೇಶದಲ್ಲಿ ಶಕ್ತಿ ಪ್ರದರ್ಶಿಸಬೇಕು’ ಎಂದು ಜೆಡಿಎಸ್‌ ಜಿಲ್ಲಾ ಎಸ್‌ಸಿ ಘಟಕದ ಅಧ್ಯಕ್ಷ ವೆಂಕಟೇಶ್ ಕರೆ ನೀಡಿದರು.

‘ಕೋಲಾರ ಕ್ಷೇತ್ರದಲ್ಲಿ 10 ವರ್ಷಗಳಿಂದ ದಲಿತ ಸಮುದಾಯಕ್ಕೆ ಸೌಲಭ್ಯಗಳು ಸಿಕ್ಕಿಲ್ಲ. ಕ್ಷೇತ್ರದಲ್ಲಿ ಹೆಗ್ಗಣ ಬಂದು ಸೇರಿಕೊಂಡಿದ್ದು, ಸಮುದಾಯದ ಸೌಲಭ್ಯಗಳನ್ನು ನುಂಗುತ್ತಿದೆ. ಗಂಗಾ ಕಲ್ಯಾಣ ಯೋಜನೆಯ ಕೊಳವೆ ಬಾವಿಗಳು ಶಾಸಕರ ಹಿಂಬಾಲಕರಿಗೆ ಸೀಮಿತವಾಗಿವೆ. ಶಾಸಕರು ದಲಿತ ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದು, ಅವರಿಗೆ ತಕ್ಕ ಪಾಠ ಕಲಿಸುವ ಸಮಯ ಸಮೀಪಿಸಿದೆ’ ಎಂದು ಪಕ್ಷದ ಮುಖಂಡ ಉಮಾಶಂಕರ್ ಶಾಸಕ ವರ್ತೂರು ಪ್ರಕಾಶ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ದಲಿತ ಸಮುದಾಯದಿಂದಲೇ ರಾಜಕಾರಣ ತೀರ್ಮಾನವಾಗಲಿದೆ. ಹೀಗಾಗಿ ಸಮುದಾಯಕ್ಕೆ ಏನು ಸೌಲಭ್ಯಗಳು ಬೇಕು ಎನ್ನುವ ಬಗ್ಗೆ ಚರ್ಚಿಸಲು ಜಿಲ್ಲೆಯ ಕಾರ್ಯಕರ್ತರು ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.

ಯಾಮಾರಿಸುವ ಕಾಂಗ್ರೆಸ್‌: ‘ಕ್ಷೇತ್ರದ ಶಾಸಕ ವರ್ತೂರು ಪ್ರಕಾಶ್‌ ಅವರಿಗೆ ಪ್ರತಿಭೆಯಿಲ್ಲ. ಅವರು ಹೆಸರಿಗೆ ಮಾತ್ರ ಅಹಿಂದ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ಜನರನ್ನು ಯಾಮಾರಿಸಿ ಎರಡು ಬಾರಿ ಶಾಸಕರಾಗಿರುವ ಅವರು ಈಗ ನಮ್ಮ ಕಾಂಗ್ರೆಸ್ ಎಂದು ಹೇಳುತ್ತಿದ್ದಾರೆ. ಅವರ ಪಕ್ಷ ಜನರನ್ನು ಯಾಮಾರಿಸುವ ಕಾಂಗ್ರೆಸ್’ ಎಂದು ಪಕ್ಷದ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಅನ್ವರ್‌ ಪಾಷಾ ಟೀಕಿಸಿದರು.

ದಲಿತರಿಗೆ ಉಳಿಗಾಲವಿಲ್ಲ: ‘ಸ್ಥಳೀಯ ಶಾಸಕರು ದಲಿತರಿಗೆ ಕಿರುಕುಳ ನೀಡುತ್ತಿರುವುದಕ್ಕೆ ಕೀಲುಕೋಟೆಯಲ್ಲಿ ನಡೆದ ಕುಮಾರ್‌ರ ಕೊಲೆಯೇ ಸಾಕ್ಷಿ’ ಎಂದು ಪಕ್ಷದ ಕಾರ್ಯಕರ್ತ ವೆಂಕಟಸ್ವಾಮಿ ಆರೋಪಿಸಿದರು.

ಶಾಸಕರ ಕುಮ್ಮಕ್ಕಿನಿಂದ ಕೀಲುಕೋಟೆಯಲ್ಲಿ ಈಗಾಗಲೇ 2 ಕೊಲೆಗಳಾಗಿವೆ. ಮೃತರ ಕುಟುಂಬಕ್ಕೆ ಸೇರಬೇಕಿದ್ದ ಪರಿಹಾರದ ಹಣವನ್ನು ಶಾಸಕರು ನುಂಗಿ ನೀರು ಕುಡಿದಿದ್ದಾರೆ. ಮುಂದಿನ ಚುನಾವಣೆಯಲ್ಲಿ ಶಾಸಕ ವರ್ತೂರು ಪ್ರಕಾಶ್‌ರನ್ನು ಕ್ಷೇತ್ರದಿಂದ ಓಡಿಸದಿದ್ದರೆ ದಲಿತರಿಗೆ ಉಳಿಗಾಲವಿಲ್ಲ. ಒಕ್ಕಲಿಗರು ಮತ್ತು ದಲಿತರು ಒಗ್ಗೂಡಿ ಶ್ರೀನಿವಾಸಗೌಡರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು. ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷ ಬಾಬು ಮೌನಿ, ಮುಖಂಡರಾದ ಬಾಬು, ಮಂಜು, ಕೆ.ಟಿ.ಅಶೋಕ್ ಪಾಲ್ಗೊಂಡಿದ್ದರು.

* * 

ಕಾಂಗ್ರೆಸ್‌ನವರು ಎಸ್‌ಸಿ, ಎಸ್‌ಟಿ ಅವರನ್ನು ಜೀತದಾ ಳುಗಳಾಗಿ ಮಾಡಿಕೊಂಡಿದ್ದಾರೆ. ದಲಿತ ಸಮುದಾಯಕ್ಕೆ ಮನ್ನಣೆ ಸಿಗಬೇಕಿದ್ದು, ಒಗ್ಗಟ್ಟು ಪ್ರದರ್ಶಿಸಬೇಕು ಚಂದ್ರಮೌಳಿ, ಜೆಡಿಎಸ್ ಜಿಲ್ಲಾ ಘಟಕದ ಉಪಾಧ್ಯಕ್ಷ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.