5

ಕನ್ನಡಕ್ಕೆ ಗಡಿ ಭಾಗಗಳಲ್ಲಿ ಸಮಸ್ಯೆ

Published:
Updated:

ವಿಜಯಪುರ: ಕನ್ನಡ ಭಾಷೆ ಎಂಬುದು ಒಂದು ಸಂಸ್ಕೃತಿ. ಕನ್ನಡ ಭಾಷೆ ಪ್ರಾಚೀನತೆ ಮತ್ತು ಏಕೀಕರಣದ ಹಾದಿಯನ್ನು ಪ್ರತಿಯೊಬ್ಬ ನಾಗರಿಕರು ತಿಳಿದುಕೊಳ್ಳಬೇಕು ಎಂದು ಪುರಸಭಾ ಸದಸ್ಯ ಎಂ.ಸತೀಶ್ ಕುಮಾರ್ ಹೇಳಿದರು.

ಒಕ್ಕಲಿಗರ ಬೀದಿಯಲ್ಲಿರುವ ಜೈ ಗಣೇಶ ಕನ್ನಡ ಗೆಳೆಯರ ಬಳಗದಿಂದ ಆಯೋಜಿಸಿದ್ದ ಕರ್ನಾಟಕ ರಾಜೋತ್ಸವ ಕಾರ್ಯಕ್ರಮದಲ್ಲಿ ದ್ವಜಾರೋಹಣ ಮಾಡಿ ಅವರು ಮಾತನಾಡಿದರು.

ಕನ್ನಡ ಏಕೀಕರಣದಲ್ಲಿ ಹಲವಾರು ಸಾಹಿತಿಗಳು, ಹೋರಾಟಗಾರರ ಪರಿಶ್ರಮವಿದೆ. ಇಂದಿಗೂ ಗಡಿಭಾಗಗಳಲ್ಲಿ ಗಡಿ ಸಮಸ್ಯೆ ಎದುರಿಸುತ್ತಿದ್ದೇವೆ. ಹೀಗೆ ಹತ್ತು ಹಲವಾರು ಸಮಸ್ಯೆಗಳು ಕಾಡುತ್ತಿವೆ. ಮಾತೃ ಭಾಷೆಗೆ ಹೆಚ್ಚು ಪ್ರಾಮುಖ್ಯತೆ ನೀಡಬೇಕು. ಕನ್ನಡ ಭಾಷೆಗೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಬಂದಿವೆ. ಕನ್ನಡ ಸಾಹಿತ್ಯ ಗಡಿಯಿಂದಾಚೆಗೂ ಪಸರಿಸಿ ಕನ್ನಡದ ಹಿರಿಮೆ ಹೆಚ್ಚಿಸಿ ಜನರ ಮನಸ್ಸು ಸೇರುವಂತಾಗಲಿ ಎಂದರು.

ಪುರಸಭಾ ಸದಸ್ಯ ಎಸ್.ಭಾಸ್ಕರ್ ಮಾತನಾಡಿ, ದ್ರಾವಿಡ ಭಾಷೆಗಳಲ್ಲಿ ಪ್ರಾಮುಖ್ಯವುಳ್ಳ ಭಾಷೆಯೂ ಭಾರತದ ಪುರಾತನವಾದ ಭಾಷೆಗಳಲ್ಲಿ ಒಂದಾಗಿರುವ ಕನ್ನಡ ಅದರ ವಿವಿಧ ರೂಪಗಳಲ್ಲಿ ಸುಮಾರು 45 ದಶಲಕ್ಷ ಜನರು ಆಡು ನುಡಿಯಾಗಿ ಬಳಸುತ್ತಿದ್ದಾರೆ. ಕನ್ನಡ ಕರ್ನಾಟಕದ ಆಡಳಿತ ಭಾಷೆ. ಜಗತ್ತಿನಲ್ಲಿ ಅತ್ಯಂತ ಹೆಚ್ಚು ಮಂದಿ ಮಾತನಾಡುವ ಭಾಷೆಯೆಂಬ ನೆಲೆಯಲ್ಲಿ ಇಪ್ಪತೊಂಬತ್ತನೇಯ ಸ್ಥಾನ ಕನ್ನಡಕ್ಕಿದೆ ಎಂದರು.

2001ರ ಜನಗಣತಿಯ ಪ್ರಕಾರ ಜಗತ್ತಿನಲ್ಲಿ 6.4 ಕೋಟಿ ಜನ ಕನ್ನಡ ಮಾತನಾಡುತ್ತಾರೆ. ಇವರಲ್ಲಿ 5.5 ಕೋಟಿ ಜನ ಮಾತೃಭಾಷೆ ಕನ್ನಡ. ಬ್ರಾಹ್ಮಿ ಲಿಪಿಯಿಂದ ರೂಪುಗೊಂಡ ಕನ್ನಡ ಲಿಪಿಯನ್ನು ಉಪಯೋಗಿಸಿ ಕನ್ನಡ ಬರೆಯಲಾಗುತ್ತದೆ. ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಮನ್ನಣೆಯೂ ದೊರೆತಿದೆ. ಆದರೆ, ಈ ಹೊತ್ತಿನ ಸ್ಥಿತಿ ಕಳವಳಕಾರಿಯಾಗಿದೆ ಎಂದರು.

ಆಂಗ್ಲ ಮಾಧ್ಯಮದಲ್ಲಿ ಮಕ್ಕಳು ಓದಬೇಕು, ಕಾನ್ವೆಂಟ್‌ ವಿದ್ಯಾಭ್ಯಾಸ ಪಡೆಯಬೇಕು ಎನ್ನುವ ಭಾವನೆ ಗ್ರಾಮೀಣ ಜನರಲ್ಲೂ ಬಂದಿರುವುದರಿಂದ ಕನ್ನಡಕ್ಕೆ ಕುತ್ತು ಬಂದಂತಾಗಿದ್ದು, ಮುಂದೇನು ಎಂಬ ಪ್ರಶ್ನೆ ಕಾಡುತ್ತಿದೆ. ಆದ್ದರಿಂದ ಪ್ರತಿಯೊಬ್ಬ ಕನ್ನಡಿಗರು ಕನ್ನಡದ ಉಳಿವಿಗಾಗಿ ಶ್ರಮಿಸಬೇಕು ಎಂದರು.

ಬಿಎಸ್‌ಎನ್‌ಎಲ್ ನಾಮ ನಿರ್ದೇಶಕ ಕನಕರಾಜು ಮಾತನಾಡಿ, ಕನ್ನಡ ಪ್ರೀತಿಸುವುದರ ಜತೆಗೆ ಅದನ್ನು ಅಭಿವೃದ್ಧಿಗೊಳಿಸುವ ಹೊಣೆಗಾರಿಕೆ ನಮ್ಮದು. ಯುವಜನರು ಭಾಷಾಭಿಮಾನ ಬೆಳೆಸಿಕೊಳ್ಳಬೇಕು ಎಂದರು.

ಕನ್ನಡ ಕಲಾವಿದರ ತಾಲ್ಲೂಕು ಘಟಕದ ಅಧ್ಯಕ್ಷ ಎನ್.ರಾಜಗೋಪಾಲ್, ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಮುಖಂಡ ಮಹೇಶ್ ಕುಮಾರ್, ಬಿಜೆಪಿ ನಗರ ಘಟಕದ ಅಧ್ಯಕ್ಷ ಚ.ವಿಜಯಬಾಬು, ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಬಿಜೆಪಿ ಮಹಿಳಾ ನಗರ ಘಟಕದ ಅಧ್ಯಕ್ಷೆ ರಜನಿಕನಕರಾಜು, ಮಂಜುನಾಥ್, ಮಧು, ಮಣಿ, ಹರೀಶ್, ಸಂದೀಪ್, ಕೃಷ್ಣ, ವಿನಯ್, ಶಿವಕುಮಾರ್, ಶ್ರೀಧರ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry