ಮಂಗಳವಾರ, ಮಾರ್ಚ್ 9, 2021
23 °C

ರೇಷ್ಮೆಗೆ ಸುಣ್ಣ ಕಟ್ಟು ರೋಗ, ಬಿಚ್ಚಾಣಿಕೆದಾರರಿಗೆ ಸಂಕಷ್ಟ

ಎಂ.ಮುನಿನಾರಾಯಣ Updated:

ಅಕ್ಷರ ಗಾತ್ರ : | |

ರೇಷ್ಮೆಗೆ ಸುಣ್ಣ ಕಟ್ಟು ರೋಗ, ಬಿಚ್ಚಾಣಿಕೆದಾರರಿಗೆ ಸಂಕಷ್ಟ

ವಿಜಯಪುರ: ಮೋಡ ಮುಸುಕಿದ ವಾತಾವರಣ ಹಾಗೂ ವಾತಾವರಣದಲ್ಲಿ ಹೆಚ್ಚಾಗುತ್ತಿರುವ ಹಿಮದಿಂದಾಗಿ ರೇಷ್ಮೆ ಹುಳುಗಳಿಗೆ ಕಾಡುತ್ತಿರುವ ಸುಣ್ಣ ಕಟ್ಟು ರೋಗದ ಪರಿಣಾಮ ಮಾರುಕಟ್ಟೆಗೆ ಬರುವ ಗೂಡಿನ ಆವಕ ಪ್ರಮಾಣದಲ್ಲಿ ಗಣನೀಯವಾಗಿ ಇಳಿಮುಖ ಕಂಡುಬರುತ್ತಿರುವುದರಿಂದ ನೂಲು ಬಿಚ್ಚಾಣಿಕೆದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಇಲ್ಲಿನ ಮಾರುಕಟ್ಟೆಗೆ ಬರುತ್ತಿರುವ ಗೂಡಿನ ಪ್ರಮಾಣ 300 ಲಾಟುಗಳವರೆಗೂ ಇತ್ತು. ಈಗ ಬರುತ್ತಿರುವ ಪ್ರಮಾಣ ಕೇವಲ 80 ಲಾಟುಗಳಿಗೆ ಇಳಿಮುಖ ಆಗಿರುವುದರಿಂದ ರೇಷ್ಮೆ ಉದ್ಯಮವನ್ನೇ ನಂಬಿಕೊಂಡು ಜೀವನ ಮಾಡುತ್ತಿರುವ ನೂರಾರು ಮಂದಿ ರೇಷ್ಮೆ ನೂಲು ಬಿಚ್ಚಾಣಿಕೆ ಘಟಕಗಳ ಮಾಲೀಕರು ಗೂಡಿನ ಅಭಾವದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ.

ರೀಲರ್ ಬಾಬಾ ಜಾನ್ ಮಾತನಾಡಿ, ರೇಷ್ಮೆ ನೂಲು ಬಿಚ್ಚಾಣಿಕೆ ಘಟಕದಲ್ಲಿ ಕೆಲಸ ಮಾಡಲು ಕಾರ್ಮಿಕರನ್ನು ನೇಮಕ ಮಾಡಿಕೊಂಡಿದ್ದೇವೆ. ಅವರ ಕಷ್ಟಗಳಿಗೆ ಮೊದಲೇ ಹಣ ಕೊಟ್ಟಿರುತ್ತೇವೆ. ಇರೋದಿಕ್ಕೆ ಮನೆ ಕೊಟ್ಟಿದ್ದೇವೆ. ಒಂದು ವೇಳೆ ಗೂಡಿನ ಕೊರತೆಯಿಂದ ಘಟಕದಲ್ಲಿ ಕೆಲಸ ನಿಂತರೆ ನಮ್ಮೊಂದಿಗೆ ಅವರಿಗೂ ಕಷ್ಟ. ಈ ಉದ್ಯಮ ಬಿಟ್ಟರೆ ಬೇರೆ ಉದ್ಯಮ ಗೊತ್ತಿಲ್ಲ ತುಂಬಾ ಸಂಕಷ್ಟ ಎದುರಿಸುತ್ತಿದ್ದೇವೆ ಎಂದರು.

ರೇಷ್ಮೆ ಗೂಡು ಮಾರುಕಟ್ಟೆ ಉಪನಿರ್ದೇಶಕ ಎಂ.ಎಸ್. ಭೈರಾರೆಡ್ಡಿ ಮಾತನಾಡಿ, ರೈತರು ಹುಳು ಸಾಕಾಣಿಕೆ ಮನೆಗಳಲ್ಲಿನ ಕಿಟಕಿಗಳನ್ನು ಸಂಪೂರ್ಣವಾಗಿ ಬಂದ್ ಮಾಡ್ತಾರೆ. ಹುಳುಗಳಿಗೆ ಹಾಕಿರುವ ಹಿಪ್ಪುನೇರಳೆ ಹಾಸಿಗೆ ಕಾಲ ಕಾಲಕ್ಕೆ ತೆಗೆಯುವುದಿಲ್ಲ. ಹಿಕ್ಕೆಯಲ್ಲಿ ಉತ್ಪತ್ತಿಯಾಗುವ ಉಷ್ಣಾಂಶ ಮನೆಯಲ್ಲಿ ಹೆಚ್ಚಾಗುತ್ತದೆ ಎಂದರು.

ಸುಣ್ಣ ಕಟ್ಟು ಸೋಂಕು ಉಂಟು ಮಾಡುವ ಫಂಗಸ್ ಸೂಕ್ಷ್ಮಾಣು ಜೀವಿಯಾಗಿದ್ದು, ಗಾಳಿಯಲ್ಲಿರುತ್ತದೆ. ಹೊರಗೆ ಹೋಗಲು ಅವಕಾಶವಿಲ್ಲದ ಕಾರಣ ಹುಳಗಳ ಮೇಲೆ ಕುಳಿತುಕೊಂಡ ನಾಲ್ಕೈದು ದಿನಗಳಲ್ಲಿ ಹುಳುಗಳು ಉಸಿರಾಡಲು ಅವಕಾಶವಿಲ್ಲದೆ. ಸೊಪ್ಪಿನ ಒಳಗೆ ಸೇರಿ ಸಾಯುತ್ತವೆ.  ನಂತರ ಇಡೀ ದೇಹದ ಭಾಗವೆಲ್ಲಾ ಸುಣ್ಣದಂತಾಗುತ್ತದೆ. ಒಂದು ಹುಳುವಿನಲ್ಲಿ ಕೋಟ್ಯಂತರ ಬ್ಯಾಕ್ಟೀರಿಯಾಗಳು ಉತ್ಪತ್ತಿಯಾಗಿ ಇಡೀ ಬೆಳೆಗೆ ಹರಡುತ್ತದೆ ಎಂದರು.

ರೈತರು ಮುಂಜಾಗ್ರತಾ ಕ್ರಮವಾಗಿ ವಿಜೇತ, ಬಿ.ಪೌಡರ್, ಡೈಥೀನ್ ಮಿಶ್ರಿತ ಸುಣ್ಣ, ಕ್ಯಾಪ್ ಟಾಪ್ ಮಿಶ್ರಿತ ಸುಣ್ಣವನ್ನು ಸಿದ್ಧಪಡಿಸಿಕೊಂಡು ನಿಯಮಿತ ಪ್ರಮಾಣದಲ್ಲಿ ಸಿಂಪಡಣೆ ಮಾಡಿಕೊಳ್ಳಬೇಕು. ಹುಳುಗಳನ್ನು ತೆಳ್ಳಗೆ ಇರುವಂತೆ ನೋಡಿಕೊಳ್ಳಬೇಕು. ಗಾಳಿ ಸರಾಗವಾಗಿ ಒಳಬಂದು ಹೊರಹೋಗುವಂತೆ ನೋಡಿಕೊಳ್ಳಬೇಕು ಎಂದರು.

ಕೈಗಳಿಗೆ ಕೈ ಚೀಲಗಳನ್ನು ತೊಟ್ಟುಕೊಳ್ಳಬೇಕು. ಪರಿಕರಗಳನ್ನು ಪಾರ್ಮಲೀನ್ ದ್ರಾವಣದಲ್ಲಿ ತೊಳೆಯಬೇಕು. ಹುಳು ಸಾಕಾಣಿಕೆ ಮನೆಗಳ ಸುತ್ತಮುತ್ತಲಿನಲ್ಲಿ ಸ್ವಚ್ಛತೆ ಕಾಪಾಡುವ ಮೂಲಕ ರೋಗ ನಿಯಂತ್ರಣ ಮಾಡಬಹುದಾಗಿದೆ ಎಂದರು.

ಕಾರ್ಮಿಕರಿಗೆ ಕೂಲಿ ಕೊಡಲಿಕ್ಕೂ ಹಣ ಇಲ್ಲ

ರೈತ ಮುನಿಆಂಜಿನಪ್ಪ ಮಾತನಾಡಿ, ಈ ವಾತಾವರಣದಲ್ಲಿ ರೇಷ್ಮೆ ಹುಳುಗಳನ್ನು ಸಾಕುವುದು ತುಂಬಾ ಕಷ್ಟದ ಕೆಲಸ. ಒಂದು ದಿನ ಬಿಸಿಲು ಹೆಚ್ಚಾಗಿದ್ದಾಗ ಉಷ್ಣಾಂಶ ಹೆಚ್ಚಾಗಿರುತ್ತದೆ. ಸಂಜೆಯಾಗುತ್ತಿದ್ದಂತೆ ಹಿಮ ಬೀಳುವುದರಿಂದ ವಾತಾವರಣದಲ್ಲಿ ನೀರಿನ ಅಂಶ ಹೆಚ್ಚಾಗುವುದರಿಂದ ಹುಳು ಸಾಕಾಣಿಕೆ ಮನೆಗಳಲ್ಲಿ ಹುಳುಗಳಿಗೆ ಅಗತ್ಯವಾಗಿರುವ ಉತ್ತಮ ವಾತಾವರಣ ನಿರ್ಮಾಣ ಮಾಡುವುದು ಕಷ್ಟವಾಗುತ್ತಿದೆ ಎಂದರು.

ಇದರಿಂದ ಸುಣ್ಣ ಕಟ್ಟು ರೋಗ ಆವರಿಸಿಕೊಂಡು ಹೆಚ್ಚಿನ ಪ್ರಮಾಣದಲ್ಲಿ ಹುಳುಗಳು ಸಾಯುತ್ತಿವೆ. ಬೆಳೆಗಳು ಕೈಗೆ ಸಿಗುತ್ತಿಲ್ಲ. ತಿಂಗಳು ಪೂರ್ತಿ ಕಷ್ಟಪಟ್ಟರೂ ಕೂಲಿ ಸಿಗುತ್ತಿಲ್ಲ, ಉದ್ಯಮಕ್ಕೆ ತೊಡಗಿಸಿಕೊಳ್ಳುವ ಕೂಲಿ ಕಾರ್ಮಿಕರಿಗೆ ಕೊಡಲಿಕ್ಕೂ ಹಣವಿಲ್ಲದಂತಾಗುತ್ತಿದೆ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.