ಭಾನುವಾರ, ಮಾರ್ಚ್ 7, 2021
22 °C

ಸ್ಮಶಾನಕ್ಕೆ ದಾರಿಯಿಲ್ಲ, ಹೂಳಲು ಜಾಗವಿಲ್ಲ

ಕೆಂಪೇಗೌಡ ಎನ್. ವೆಂಕಟೇನಹಳ್ಳಿ Updated:

ಅಕ್ಷರ ಗಾತ್ರ : | |

ಸ್ಮಶಾನಕ್ಕೆ ದಾರಿಯಿಲ್ಲ, ಹೂಳಲು ಜಾಗವಿಲ್ಲ

ಚಿಕ್ಕಬಳ್ಳಾಪುರ: ತಾಲ್ಲೂಕಿನ ಮಂಚನಬಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಬ್ಬೇನಹಳ್ಳಿಯಲ್ಲಿ ದಲಿತರಿಗೆ ಮೀಸಲಿಟ್ಟ ಸ್ಮಶಾನಕ್ಕೆ ಅನೇಕ ವರ್ಷಗಳಿಂದ ದಾರಿಯೇ ಇಲ್ಲ. ಹೀಗಾಗಿ ಈ ಊರಿನಲ್ಲಿ ದಲಿತರು ಸತ್ತರೇ ಸಾವಿನ ಶೋಕಕ್ಕಿಂತಲೂ ಸ್ಮಶಾನಕ್ಕೆ ಶವ ಸಾಗಿಸುವ ನೋವೇ ಹೆಚ್ಚು ಬಾಧಿಸುವ ಸ್ಥಿತಿ ಇದೆ.

ಸಬ್ಬೇನಹಳ್ಳಿ ಜಿಲ್ಲಾ ಕೇಂದ್ರವಾದ ಚಿಕ್ಕಬಳ್ಳಾಪುರದಿಂದ ಮೂರು ಕಿ.ಮೀ ಅಂತರದಲ್ಲಿದೆ. ಇಷ್ಟಾದರೂ ಈ ಊರಿನ ದಲಿತರ ಸ್ಮಶಾನದ ನೋವಿನ ಕೂಗು ಈವರೆಗೆ ಜಿಲ್ಲಾಡಳಿತದ ಮನ ಕಲಕಿಲ್ಲ. ಸುಮಾರು ಒಂಬತ್ತು ಗುಂಟೆಯಷ್ಟಿರುವ ಸ್ಮಶಾನ ಒತ್ತುವರಿಯಾಗಿ ಹೆಣ ಹೂಳಲು ಜಾಗವಿಲ್ಲದ ಸ್ಥಿತಿ ತಲೆದೋರಿದೆ. ಇಷ್ಟಾದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸದಿರುವುದು ಗ್ರಾಮಸ್ಥರಲ್ಲಿ ಬೇಸರ ತರಿಸಿದೆ.

‘ಸಶ್ಮಾನಕ್ಕೆ ದಾರಿ ಇಲ್ಲದ ಸಮಸ್ಯೆ ಅನೇಕ ವರ್ಷಗಳಿಂದ ತೊಂದರೆ ನೀಡುತ್ತಿದೆ. ಸ್ಮಶಾನಕ್ಕೆ ಹೋಗಬೇಕಾದರೆ ರೈತರ ತೋಟಗಳಲ್ಲಿ ಬೆಳೆಗಳ ನಡುವೆ ಸರ್ಕಸ್‌ ಮಾಡಿಕೊಂಡು ಶವ ಎತ್ತಿಕೊಂಡು ಹೋಗಬೇಕಾಗಿದೆ. ಇದನ್ನು ಬಗೆಹರಿಸಲು ಗ್ರಾಮದ ಮುಖಂಡರು, ಗ್ರಾಮ ಪಂಚಾಯಿತಿ ಅಧಿಕಾರಿಗಳು, ಸದಸ್ಯರಾಗಲಿ ಯಾರೂ ತಲೆ ಕೆಡಿಸಿಕೊಳ್ಳುತ್ತಿಲ್ಲ’ ಎಂದು ರಾಜ್ಯ ದಲಿತ ಸಂಘರ್ಷ ಸಮಿತಿಯ ಸಂಘಟನಾ ಸಂಚಾಲಕ ಎಸ್‌.ಎಂ ರಾಜಣ್ಣ ಆಳಲು ತೋಡಿಕೊಂಡರು.

‘ಇತ್ತೀಚೆಗೆ ಗ್ರಾಮಲೆಕ್ಕಾಧಿಕಾರಿ ಬಳಿ ಹೋಗಿ ಸ್ಮಶಾನಕ್ಕೆ ಮೀಸಲಿಟ್ಟ ಜಾಗದ ಮಾಹಿತಿ ಕೇಳಿದರೆ, ಅವರು ಸಶ್ಮಾನ ಇದೆ ಅಂದ ಮೇಲೆ ದಾರಿ ಇರುತ್ತೆ ಹೋಗಯ್ಯಾ. ದಾರಿ ಸಮಸ್ಯೆ ಇದ್ದರೆ ನೀವೇ ಸರಿಪಡಿಸಿಕೊಳ್ಳಬೇಕು ಎಂದರೆ ವಿನಾ ದಾಖಲೆಗಳನ್ನು ನೀಡಲಿಲ್ಲ’ ಎಂದು ದೂರಿದರು.

‘ಗ್ರಾಮದಲ್ಲಿ ದಲಿತರಿಗೆ, ಸಾಮಾನ್ಯ ವರ್ಗದವರಿಗೆ ಎಂದು ಎರಡು ಸ್ಮಶಾನಗಳಿವೆ. ಎರಡಕ್ಕೂ ದಾರಿ ಇಲ್ಲ. ದಲಿತರ ಸ್ಮಶಾನಕ್ಕೆ ಅಂಟಿಕೊಂಡೆ ರಾಜ ಕಾಲುವೆ ಇರುವುದರಿಂದ ಶವ ಹೊತ್ತು ಸಾಗಲು ಕೂಡ ಆಗದ ಪರಿಸ್ಥಿತಿ ಇದೆ. ಈ ಬಗ್ಗೆ ಶಾಸಕರಿಗೆ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆವು. ಇತ್ತೀಚೆಗೆ ತಹಶೀಲ್ದಾರ್‌ ಅವರನ್ನು ವಿಚಾರಿಸಿದರೆ 15 ದಿನಗಳಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸುತ್ತೇವೆ ಎಂಬ ಆಶ್ವಾಸನೆ ನೀಡಿದ್ದಾರೆ’ ಎಂದು ಹೇಳಿದರು.

‘ಮಳೆಗಾಲದಲ್ಲಿ ನಮ್ಮೂರಲ್ಲಿ ಯಾರಾದರೂ ಸತ್ತರೆ ಸ್ಮಶಾನಕ್ಕೆ ಹೋಗಲು ಮೈ ನಡುಕ ಬರುತ್ತದೆ. ಮೊಣಕಾಲುದ್ದ ನೀರು ಕಾಲು ಜಾರುವ ಭಯದಲ್ಲಿ ಹೆಣ ಹೊತ್ತು ಸಾಗಬೇಕು. ಬೆಳೆಗಳನ್ನು ತುಳಿದರೆ ತೋಟದ ಮಾಲೀಕರಿಂದ ಬೈಗುಳ ಕೇಳಬೇಕು’ ಎಂದು ಗ್ರಾಮದ ಮುಖಂಡ ವೆಂಕಟೇಶ್‌ ಬೇಸರ ವ್ಯಕ್ತಪಡಿಸಿದರು.

‘ನಮ್ಮ ಕಷ್ಟಗಳನ್ನು ಯಾರಿಗೆ ಹೇಳುವುದು ಸ್ವಾಮಿ? ನಮಗೆ ಬಹು ಹಿಂದಿನಿಂದಲೂ ಈ ಪರಿಸ್ಥಿತಿ ಇದೆ. ದಲಿತರಿಗೆ ಸರ್ಕಾರ ಸಿಕ್ಕಾಪಟ್ಟೆ ಕೊಟ್ಟಿದೆ ಎಂದು ಹೇಳಿಕೊಳ್ಳುವವರೇ ಹೇಳಿ ಎಲ್ಲಿದೆ ಸ್ವಾಮಿ ನಮಗೆ ನ್ಯಾಯ? ಸ್ಮಶಾನ ಒತ್ತುವರಿಯಾಗಿದೆ. ಇತ್ತೀಚೆಗೆ ಗ್ರಾಮ ಪಂಚಾಯಿತಿಯವರು ಅದರಲ್ಲೇ ಗಿಡ ನೆಟ್ಟು ಹೋಗಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಕಾಶೆಯೇ ಇಲ್ಲ!

‘ಗ್ರಾಮ ಪಂಚಾಯಿತಿಯ ಪ್ರತಿ ಸಭೆಯಲ್ಲಿ ಸ್ಮಶಾನದ ದಾರಿ ವಿಚಾರ ಚರ್ಚೆಗೆ ಬರುತ್ತಿರುತ್ತದೆ. ಆದರೆ ಗ್ರಾಮ ನಕಾಶೆಯಲ್ಲಿ ಎಲ್ಲಿಯೂ ಸ್ಮಶಾನದ ಜಾಗ ಗುರುತಿಸದ ಕಾರಣ ಅಧಿಕಾರಿಗಳಿಗೆ ಏನು ಮಾಡಬೇಕು ಎನ್ನುವುದು ತೋಚುತ್ತಿಲ್ಲ. ಹಿಂದಿನಿಂದಲೂ ಹಿರಿಯರು ಸ್ಮಶಾನ ಎಂದು ತೋರಿಸಿದ ಜಾಗದಲ್ಲಿ ಹೂಳುತ್ತ ಬರಲಾಗಿತ್ತು. ಸದ್ಯ ಅದಕ್ಕೂ ಸಂಚಕಾರ ಬಂದಿದೆ’ ಎಂದು ಸಬ್ಬೇನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ನಾಗರಾಜ್‌ ತಿಳಿಸಿದರು.

ಸಮಸ್ಯೆ ಬಗೆಹರಿಸದಿದ್ದರೆ ಶವದೊಂದಿಗೆ ಪ್ರತಿಭಟನೆ

‘ಕಳೆದ 20 ದಿನಗಳ ಹಿಂದೆ ಊರಿನಲ್ಲಿ ಒಬ್ಬರು ಸತ್ತಿದ್ದರು. ಆಗ ಶವದೊಂದಿಗೆ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ಮಾಡಬೇಕು ಎಂದು ನಿರ್ಧರಿಸಿದೆವು. ಆದರೆ ಅವತ್ತು ಭಾನುವಾರವಾದ್ದರಿಂದ ಪ್ರತಿಭಟನೆ ನಿರ್ಧಾರ ಕೈಬಿಟ್ಟೆವು. ಈಗಲಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಸಮಸ್ಯೆ ಬಗೆಹರಿಸದಿದ್ದರೆ ಖಂಡಿತ ಒಂದು ಶವದೊಂದಿಗೆ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸುತ್ತೇವೆ’ ಎಂದು ಎಸ್‌.ಎಂ ರಾಜಣ್ಣ ತಿಳಿಸಿದರು.

* * 

ಅದುಳಿದ ಜಾಗದಲ್ಲಿ ಗಿಡಗಂಟಿಗಳು ಬೆಳೆದು ಸ್ಮಶಾನ ಅಕ್ಷರಶಃ ಸುಡಗಾಡಿನಂತಾಗಿದೆ. ಒಟ್ಟಿನಲ್ಲಿ ದಲಿತರಿಗೆ ಸಾವಿನಲ್ಲೂ ಸುಖವಿಲ್ಲದಂತಾಗಿದೆ.

ವೆಂಕಟೇಶ್‌, ಸಬ್ಬೇನಹಳ್ಳಿ ನಿವಾಸಿ 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.