ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮುದಾಯ ಭವನ ನಿರ್ಮಾಣ ಪ್ರತಿಧ್ವನಿ

Last Updated 13 ಡಿಸೆಂಬರ್ 2017, 10:21 IST
ಅಕ್ಷರ ಗಾತ್ರ

ಚನ್ನರಾಯಪಟ್ಟಣ: ಪಟ್ಟಣದಲ್ಲಿ ಬಾಬುಜಗಜೀವನರಾಂ ಸಮುದಾಯ ಭವನ ನಿರ್ಮಾಣದ ವಿಚಾರ ಪುರಸಭೆಯ ವಿಶೇಷ ಸಭೆಯಲ್ಲಿ ಮಂಗಳವಾರ ಪ್ರತಿಧ್ವನಿಸಿತು. ಪುರಸಭಾಧ್ಯಕ್ಷ ಸಿ. ಕೆ. ಗೋಪಾಲಕೃಷ್ಣ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಪುರಸಭೆಯ ವಿಶೇಷ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ಪರಶುರಾಮ್, ಜಗಜೀವನರಾಂ ಭವನ ನಿರ್ಮಿಸಲು ಸರ್ಕಾರ ₹ 1ಕೋಟಿ ಮಂಜೂರು ಮಾಡಿದೆ. ಗಣಪತಿ ಪೆಂಡಾಲ್‌ ಪಕ್ಕದಲ್ಲಿರುವ ಜಾಗದಲ್ಲಿ ಜಗಜೀವನರಾಂ ಸಮುದಾಯ ಭವನ ನಿರ್ಮಿಸಲು ಅವಕಾಶ ನೀಡಬೇಕೆಂದು ಆಗ್ರಹಿಸಿದರು.

ಸದಸ್ಯ ಎಚ್‌.ಬಿ. ಪ್ರವೀಣ್‌ಕುಮಾರ್‌ ಮಾತನಾಡಿ, ಈ ಜಾಗವನ್ನು 2003ರಲ್ಲಿ ಗಣಪತಿ ಸೇವಾ ಸಮಿತಿಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಸುವ ದೃಷ್ಟಿಯಿಂದ ನೀಡಲಾಗಿದೆ. ಇದರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ಅನುಕೂಲವಾಗುತ್ತದೆ. ಪಟ್ಟಣದಲ್ಲಿ ಬೇರೆಡೆ ಜಗಜೀವನರಾಂ ಭವನ ನಿರ್ಮಿಸಬಹುದು ಎಂದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯ ಪರಶುರಾಮ್, ಗಣಪತಿ ಪೆಂಡಾಲ್‌ ಪಕ್ಕದಲ್ಲಿರುವ ಜಾಗದಲ್ಲಿಯೇ ಜಗಜೀವನರಾಂ ಸಮುದಾಯ ಭವನ ನಿರ್ಮಿಸಬೇಕು. ಯಾವ ಕಾರಣಕ್ಕಾಗಿ ಈ ಜಾಗ ನೀಡುತ್ತಿಲ್ಲ ಎಂಬುದು ಅರ್ಥವಾಗುತ್ತಿಲ್ಲ ಎಂದರು. ಪಟ್ಟಣದಲ್ಲಿ ಸೂಕ್ತ ಜಾಗದಲ್ಲಿ ಸಮುದಾಯ ಭವನ ನಿರ್ಮಿಸಬೇಕು ಎಂದು ಹಲವು ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದರು.

ಶಾಸಕ ಸಿ.ಎನ್‌. ಬಾಲಕೃಷ್ಣ ಮಾತನಾಡಿ, ಗಣಪತಿ ಪೆಂಡಾಲ್‌ ಪಕ್ಕದಲ್ಲಿರುವ ಜಾಗದಲ್ಲಿ ಜಗಜೀವನರಾಂ ಸಮುದಾಯ ಭವನ ನಿರ್ಮಿಸಬೇಕೆಂದು ಪ್ರತಿಷ್ಠೆ ಬೇಡ. ಪಟ್ಟಣದ ಹೃದಯಭಾಗ ಮೈಸೂರು ರಸ್ತೆಯಲ್ಲಿರುವ ಜಾಗದಲ್ಲಿ ಭವನ ನಿರ್ಮಿಸೋಣ ಎಂದರು.

ಪಟ್ಟಣದ ಮೈಸೂರು ರಸ್ತೆಯಲ್ಲಿರುವ ಜಾಗದಲ್ಲಿ ಜಗಜೀವನರಾಂ ಸಮುದಾಯ ಭವನ ನಿರ್ಮಿಸಲಾಗುವುದು. ಈ ಜಾಗದಲ್ಲಿ ಶಿಥಿಲಗೊಂಡ ಮೂರು ಕಟ್ಟಡವನ್ನು ತೆರವುಗೊಳಿಸಿ ಇನ್ನೂ 20 ದಿನದಲ್ಲಿ ಈ ಜಾಗವನ್ನು ಜಗಜೀವನರಾಂ ಸಮುದಾಯ ನಿರ್ಮಿಸುವ ಕುರಿತು ಸಮಾಜ ಕಲ್ಯಾಣ ಇಲಾಖೆಗೆ ಹಸ್ತಾಂತರಿಸಲು ಪುರಸಭೆಯ ಸದಸ್ಯರು ತೀರ್ಮಾನಿಸಿದರು.

ನಂತರ ಈ ತೀರ್ಮಾನವನ್ನು ಕಚೇರಿಯ ಆವರಣದಲ್ಲಿ ಧರಣಿ ನಡೆಸುತ್ತಿದ್ದ ದಲಿತ ಮುಖಂಡರನ್ನು ಕರೆಸಿ ತಿಳಿಸಲಾಯಿತು. ಅವರು ಒಪ್ಪಿದ ಬಳಿಕ ಶಾಸಕರು, ದಲಿತರು ಧರಣಿ ನಡೆಸುತ್ತಿದ್ದ ಸ್ಥಳಕ್ಕೆ ತೆರಳಿ ಮೈಸೂರು ರಸ್ತೆಯಲ್ಲಿ ಜಾಗದಲ್ಲಿ ಜಗಜೀವನರಾಂ ಸಮುದಾಯ ಭವನ ನಿರ್ಮಿಸುವುದಾಗಿ ಹೇಳಿದರು. ಆದರೆ ಇದಕ್ಕೆ ಒಪ್ಪದ ಪ್ರತಿಭಟನಾಕಾರರು ಘೋಷಣೆ ಕೂಗುತ್ತಾ ಪ್ರತಿಭಟನೆ ಮುಂದುವರಿಸಿದರು

ಪುರಸಭೆಯ ಕಿಟಕಿ ಗಾಜು ಜಖಂ

ಚನ್ನರಾಯಪಟ್ಟಣ: ಬಾಬು ಜಗಜೀವನರಾಂ ಸಮುದಾಯ ಭವನ ನಿರ್ಮಾಣದ ಸ್ಥಳ ಕುರಿತು ಪುರಸಭೆಯ ವಿಶೇಷ ಸಭೆಯಲ್ಲಿ ಚರ್ಚೆ ನಡೆಯುತ್ತಿದ್ದ ವೇಳೆ, ಪ್ರತಿಭಟನಾಕಾರರು ಕಚೇರಿಗೆ ನುಗ್ಗಲು ಯತ್ನಿಸಿ, ಕಿಟಕಿ ಗಾಜು ಒಡೆದು ಆಕ್ರೋಶ ವ್ಯಕ್ತಪಡಿಸಿದರು. ಗಣಪತಿ ಪೆಂಡಾಲ್‌ ಪಕ್ಕದಲ್ಲಿರುವ ಖಾಲಿ ನಿವೇಶನದಲ್ಲಿ ಸಮುದಾಯ ಭವನ ನಿರ್ಮಿಸಲು ಅವಕಾಶ ನೀಡಬೇಕು ಎಂದು ಪ್ರತಿಭಟನಕಾರರು ಘೋಷಣೆ ಕೂಗಿದರು.

ಪುರಸಭೆಯ ಕಚೇರಿಯಲ್ಲಿ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಶಾಸಕರು, ಹಲವು ಸದಸ್ಯರು ಧರಣಿ ನಿರತರ ಈ ಕ್ರಮದ ಕುರಿತು ಅಸಮಾಧಾನ ವ್ಯಕ್ತಪಡಿಸಿದರು. ಅಷ್ಟರಲ್ಲಿ ಪೊಲೀಸರು ಸ್ಥಳಕ್ಕೆ ಬಂದು ಪ್ರತಿಭಟನಾಕಾರರನ್ನು ಅಲ್ಲಿಂದ ಕಳುಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT