ಮಂಗಳವಾರ, ಮಾರ್ಚ್ 2, 2021
23 °C

ಸ್ವಾಮಿ ಎಂಬ ಸೌಂದರ್ಯ ವರ್ಧಕ!

ಸುರೇಖಾ ಹೆಗಡೆ Updated:

ಅಕ್ಷರ ಗಾತ್ರ : | |

ಸ್ವಾಮಿ ಎಂಬ ಸೌಂದರ್ಯ ವರ್ಧಕ!

ಸಿನಿಮಾ ಸೀರಿಯಲ್‌ಗಳಲ್ಲಿ ಅಭಿನಯಿಸುವ ಚೆಲುವೆಯರ ಚೆಲುವು ಕಣ್ತುಂಬಿಕೊಳ್ಳುತ್ತಾ ನಿಮ್ಮನ್ನು ನೀವು ಮರೆತಿರುತ್ತೀರಿ. ಇವರ ಸೌಂದರ್ಯಕ್ಕೆ ಮೆರುಗು ಕೊಡುವವರು ಪ್ರಸಾಧನ ಕಲಾವಿದರು (ಮೇಕಪ್‌ ಆರ್ಟಿಸ್ಟ್‌ಗಳು). ಈ ಕಾಯಕದಲ್ಲಿ 14 ವರ್ಷಗಳಿಂದ ತೊಡಗಿಕೊಂಡಿದ್ದಾರೆ ಬಿ.ಆರ್‌.ಸ್ವಾಮಿ.

ತುಮಕೂರಿನ ಕೃಷಿ ಕುಟುಂಬದಿಂದ ಬಂದವರು ಸ್ವಾಮಿ. ಶಿಕ್ಷಣದ ಬಗ್ಗೆ ಅವರಿಗೆ ಹೆಚ್ಚೇನೂ ಆಸಕ್ತಿ ಇರಲಿಲ್ಲ. ಓದಿದ್ದು 10ನೇ ತರಗತಿ. ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡಬೇಕು ಎಂಬುದು ಅವರ ಬಾಲ್ಯದ ಕನಸು. ಸ್ವಾಮಿ ಅವರ ಅಣ್ಣ ಹಾಗೂ ಭಾವ ಸಿನಿಮಾ ಕ್ಷೇತ್ರದಲ್ಲಿ ಮೇಕಪ್‌ ಕಲಾವಿದರಾಗಿ ಗುರುತಿಸಿಕೊಂಡಿದ್ದರು. ಸ್ವಾಮಿ ಅವರು ತಾವೂ ಬ್ಯಾಗ್‌ ಏರಿಸಿ ಬೆಂಗಳೂರಿನತ್ತ ಮುಖ ಮಾಡಿದರು.

‘ಸಿನಿಮಾ ಕ್ಷೇತ್ರದಲ್ಲಿ ಗುರುತಿಸಿಕೊಳ್ಳಬೇಕು ಎಂಬುದು ನನಗಿದ್ದ ಹುಚ್ಚು. ಕ್ಯಾಮೆರಾಮೆನ್‌, ಲೈಟ್‌ಮನ್‌ ಏನೋ ಒಂದು. ಒಟ್ಟಿನಲ್ಲಿ ಸಿನಿ ಮಂದಿಯ ಮಧ್ಯೆ ಇರಬೇಕು ಎನಿಸುತ್ತಿತ್ತು. ಕೊನೆಗೆ ಅಣ್ಣ ಭಾವಂದಿರ ದಾರಿಯಾಗಿದ್ದ ಮೇಕಪ್‌ ಕ್ಷೇತ್ರವೇ ನನ್ನ ಕೈಹಿಡಿಯಿತು’ ಎನ್ನುತ್ತಾರೆ ಸ್ವಾಮಿ.

ಧಾರಾವಾಹಿಗಳಲ್ಲಿ ಸಹಾಯಕ ಮೇಕಪ್‌ಮನ್‌ ಆಗಿ ಕೆಲಸ ಪ್ರಾರಂಭಿಸಿದ ಅವರು ಅಂಬರೀಷ್‌ ಮೇಕಪ್‌ ಆರ್ಟಿಸ್ಟ್‌ ಸಂಸ್ಥೆಯಲ್ಲಿ ಕೆಲ ಸಮಯ ಕಲಿತರು. ಭಾವ ಮಧುಗಿರಿ ಮಲ್ಲಿಕಾರ್ಜುನ, ಕಲಾವಿದರಾದ ರಾಮಕೃಷ್ಣ ಸೇರಿದಂತೆ ಇನ್ನೂ ಕೆಲವರು ಮೇಕಪ್‌ ವಿಧಾನವನ್ನು ಕಲಿಸಿಕೊಟ್ಟರು.

ಅನೇಕ ಸಿನಿಮಾಗಳಲ್ಲಿ ಕೆಲಸ ಮಾಡಿರುವ ಅವರು ಇತ್ತೀಚೆಗೆ ಧಾರಾವಾಹಿಗಳು, ರಿಯಾಲಿಟಿ ಶೋಗಳು, ಫ್ಯಾಷನ್‌ ಶೋ, ‌ಫೋಟೊಶೂಟ್‌ಗಳು ಹಾಗೂ ಬ್ರೈಡಲ್‌ ಮೇಕಪ್‌ ಕ್ಷೇತ್ರವನ್ನು ಹೆಚ್ಚಾಗಿ ನೆಚ್ಚಿಕೊಂಡಿದ್ದಾರೆ. ಬಂಗಾರ, ಸಂಬಂಧ, ತಕಧಿಮಿತ, ಕಸ್ತೂರಿ, ಪದ್ಮಾವತಿ, ಸೂಪರ್‌ ಟಾಕ್‌ ಟೈಮ್‌, ಸೂಪರ್‌ ಮಿನಿಟ್‌, ನೃತ್ಯ ಕಾರ್ಯಕ್ರಮಗಳು, ಕಳೆದ ಬಾರಿ ಬಿಗ್‌ಬಾಸ್‌ ಕಲಾವಿದರಿಗೆ ಸ್ವಾಮಿ ಮೇಕಪ್‌ ಮಾಡಿದ್ದಾರೆ.

‘ಈಗ ಮೇಕಪ್‌ ಕಲಿಯುವುದು ಸುಲಭ. ದುಡ್ಡು ಕೊಟ್ಟರೆ ಹೇಳಿಕೊಡುತ್ತಾರೆ. ಆದರೆ ನಾನು ಈ ಕ್ಷೇತ್ರಕ್ಕೆ ಬಂದಾಗ ಚಿತ್ರಣ ಬೇರೆಯದೇ ಆಗಿತ್ತು. ಹಿರಿಯ ಮೇಕಪ್‌ಮ್ಯಾನ್‌ಗಳು ಕಿರಿಯರನ್ನು ಒಂದಲ್ಲ ಒಂದು ಕಾರಣ ಒಡ್ಡಿ ಹೊರಗಡೆ ಕಳುಹಿಸಿ ಬಿಡುತ್ತಿದ್ದರು. ಅಂದರೆ ಅವರ ತಂತ್ರಗಾರಿಕೆಯನ್ನು ನಾವು ಕಲಿಯಬಾರದು ಎಂದು. ಏನಾದರೊಂದು ನೆಪ ಹೇಳುತ್ತಾ, ಅಲ್ಲೇ ಇದ್ದು ಮೇಕಪ್‌ ಮಾಡುವುದನ್ನು ನೋಡಿ ಕಲಿಯಬೇಕಾಗುತ್ತಿತ್ತು. ವರ್ಷಗಳ ಪ್ರಯತ್ನದ ನಂತರವೇ ನಮಗೆ ಮೇಕಪ್‌ ಮಾಡುವ ಅವಕಾಶ ಸಿಗುತ್ತಿತ್ತು. ಈಗ ಎಲ್ಲವೂ ಸುಲಭವಾಗಿದೆ ಎನ್ನಿ. ಮೊದಲೆಲ್ಲಾ ಒಬ್ಬರ ತ್ವಚೆಯ ಬಣ್ಣಕ್ಕೆ ಸರಿಹೊಂದುವಂಥ ಮೇಕಪ್‌ ಮಾಡಬೇಕು ಎಂದರೆ ಮಿಕ್ಸಿಂಗ್‌ ಮಾಡಬೇಕಿತ್ತು. ಆದರೆ ಈಗ ಎಲ್ಲ ಬಗೆಯ ಸ್ಕಿನ್‌ ಟೋನ್‌ಗೆ ಸರಿಹೊಂದುವಂತೆ ಬಣ್ಣಗಳು ಬಂದುಬಿಟ್ಟಿವೆ’ ಎನ್ನುವ ಅವರು ಇಂದಿನ ಬದಲಾದ ಮೇಕಪ್‌ ಟ್ರೆಂಡ್‌ಗಳಿಗೆ ತಕ್ಕಂತೆ ಅಪ್‌ಡೇಟ್‌ ಆಗುತ್ತಿದ್ದರೆ ಮಾತ್ರ ಇಲ್ಲಿ ಉಳಿಗಾಲ ಎಂದು ಹೇಳುವುದನ್ನು ಮರೆಯುವುದಿಲ್ಲ.

ಹೀಗೆ ನಿಧಾನವಾಗಿ ಈ ಕ್ಷೇತ್ರದಲ್ಲಿ ಅಸ್ತಿತ್ವ ಕಂಡುಕೊಂಡ ಸ್ವಾಮಿ, ಕಾರ್ಯಕ್ರಮ ಯಾವುದು ಎನ್ನುವುದರ ಮೇಲೆ ಬೇರೆ ಬೇರೆ ಉತ್ಪನ್ನಗಳನ್ನು ಬಳಸುತ್ತಾರೆ. ‘ಶೂಟಿಂಗ್‌ಗಳಿಗೆ ಮೇಕಪ್‌ ಫಿಕ್ಸರ್‌, ಸ್ಟುಡಿಯೊಪಿಕ್ಚರ್‌, ಕ್ರೈಲಾನ್‌, ಮ್ಯಾಕ್‌, ಡರ್ಮಾ ಕಲರ್ಸ್‌ ಇದೆ. ಈಗ ಶೂಟಿಂಗ್‌ಗೆ ಡರ್ಮಾ ಕಲರ್‌ ಬಳಸುವುದು ಹೆಚ್ಚು. ಮದುವೆಗಳಿಗೆ ಆದರೆ ಮ್ಯಾಕ್‌ ಹೆಚ್ಚು ಬಳಸುತ್ತಾರೆ’ ಎನ್ನುವುದು ಅವರ ಅನುಭವ. ಅಂದಹಾಗೆ ಇತ್ತೀಚೆಗೆ ಸ್ವಾಮಿ ಹೆಚ್ಚು ಇಷ್ಟಪಡುತ್ತಿರುವುದು ಮದುಮಗಳ (ಬ್ರೈಡಲ್‌) ಮೇಕಪ್.

‘ಸ್ಮ್ಯಾಶ್‌ ಲುಕ್‌’ ಎನ್ನುವ ಹೆಸರಿನಲ್ಲಿ ಅವರದ್ದೇ ಆದ ಮೇಕಪ್‌ ತಂಡವೂ ಇದೆ. ಐದಾರು ಜನರ ತಂಡವದು. ಸಿನಿಮಾ, ಸೀರಿಯಲ್‌, ಫ್ಯಾಷನ್‌ ಶೋಗಳಿಗೆ ಮೇಕಪ್‌ ಮಾಡಿಕೊಡುತ್ತಾರೆ. ಆದರೆ ಸ್ವಾಮಿ ಅವರ ಮೊದಲ ಆದ್ಯತೆ ಮಾತ್ರ ಬ್ರೈಡಲ್‌ ಮೇಕಪ್‌. ‘ಮೊದಲೆಲ್ಲಾ ಮದುವೆಗೆ ಮೇಕಪ್‌ ಮಾಡುವುದು ಎಂದರೆ ಯಾವುದೇ ಮೇಕಪ್‌ಮನ್ ತಯಾರಾಗುತ್ತಿರಲಿಲ್ಲ. ಆದರೆ ಈಗ ಅಲ್ಲಿ ದುಡ್ಡೂ ಹೆಚ್ಚಿದೆ, ಕ್ರಿಯಾಶೀಲತೆಗೆ ಅವಕಾಶವೂ ಇದೆ’ ಎನ್ನುವುದು ಅವರ ಅನುಭವ.

‘ಸಿನಿಮಾ ಧಾರಾವಾಹಿ ಎಂದಮೇಲೆ ಅದಕ್ಕೆ ಸಂಬಂಧಿಸಿದವರು ಚೆಂದದ ನಟ ನಟಿಯರನ್ನೇ ಆಯ್ಕೆ ಮಾಡಿರುತ್ತಾರೆ. ಅವರನ್ನು ಇನ್ನಷ್ಟು ಚೆಂದವಾಗಿಸಿದರಾಯಿತು. ಅದೂ ಅಲ್ಲದೆ ಮುಂಚಿನಂತೆ ಪಾತ್ರಕ್ಕೆ ತಕ್ಕಂತೆ ಮೇಕಪ್‌ ಮಾಡಬೇಕು ಎನ್ನುವ ಪರಿಕಲ್ಪನೆ ಧಾರಾವಾಹಿಗಳಲ್ಲಿ ಇಲ್ಲ. ಮನೆಕೆಲಸದವಳೇ ಆದರೂ ಚೆನ್ನಾಗಿಯೇ ಮೇಕಪ್‌ ಮಾಡಿಕೊಳ್ಳುತ್ತಾರೆ. ಆದರೆ ಮದುವೆ ಎಂದರೆ ಹಾಗಲ್ಲ. ಮದುಮಗಳು ಹೇಗೇ ಇರಲಿ, ಚೆನ್ನಾಗಿ ಕಾಣಿಸುವಂತೆ ಮಾಡಬೇಕಷ್ಟೇ. ಹೆಚ್ಚಾಗಿ ನೋಡಲು ಅಂತ ಸುಂದರಿಯರಲ್ಲದವರೇ ಬ್ರೈಡಲ್‌ ಮೇಕಪ್‌ ಮೊರೆ ಹೋಗುತ್ತಾರೆ’ ಎಂದು ವಿವರಿಸುತ್ತಾರೆ ಅವರು. ಅಂದಹಾಗೆ ಸ್ವಾಮಿ ಬ್ರೈಡಲ್‌ ಮೇಕಪ್‌ಗೆ ಪಡೆಯುವ ಹಣ ₹25 ಸಾವಿರ. ಇತ್ತೀಚೆಗೆ ನಗರದಲ್ಲಿ ನಡೆದ ರಾನಾ ದಗ್ಗುಭಾಟಿ ತಂಗಿ ಮದುವೆಯಲ್ಲೂ ಸ್ವಾಮಿ ಮೇಕಪ್‌ ಚಳಕವಿದೆ.

ಸಾಧು ಕೋಕಿಲಾ, ಅಕುಲ್‌ ಬಾಲಾಜಿ, ಸಂಯುಕ್ತ ಹೊರನಾಡು, ಮಯೂರಿ, ಶೀತಲ್‌ ಶೆಟ್ಟಿ, ಫಸ್ಟ್‌ ರ‍್ಯಾಂಕ್‌ ರಾಜು ನಾಯಕಿ, ಶ್ರದ್ಧಾ ಶ್ರೀನಾಥ್‌, ಪ್ರಥಮ್‌ ಹೀಗೆ ಚಿತ್ರರಂಗದ ಸಾಕಷ್ಟು ಜನರಿಗೆ ಸ್ವಾಮಿ ಮೇಕಪ್‌ ಮಾಡಿದ್ದಾರೆ.

‘ನಮ್ಮನ್ನು ನಂಬಿ ಮುಖವೊಡ್ಡುವವರ ಸೌಂದರ್ಯ ಹೆಚ್ಚಿಸುವ ಕೆಲಸ ಮಾಡಬೇಕು. ಎಲ್ಲಿಯವರೆಗೆ ಅವರ ನಂಬಿಕೆ ಉಳಿಸಿಕೊಳ್ಳುತ್ತೇವೆಯೋ, ಅಲ್ಲಿಯವರೆಗೆ ಈ ಕ್ಷೇತ್ರದಲ್ಲಿ ಒಳ್ಳೆಯ ಹೆಸರೂ ಇರುತ್ತದೆ, ಅವಕಾಶವೂ ಸಿಗುತ್ತದೆ’ ಎನ್ನುವ ಸ್ವಾಮಿಗೆ ಅವರು ಮಾಡಿರುವ ಎಲ್ಲಾ ಕೆಲಸಗಳೂ ತೃಪ್ತಿ ನೀಡಿವೆಯಂತೆ.

ಸ್ವಾಮಿ ಸಂಪರ್ಕಕ್ಕೆ–99027 11166

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.