ಶನಿವಾರ, ಫೆಬ್ರವರಿ 27, 2021
31 °C

ಮೂವರು ಶಿಕ್ಷಕರ ಅಮಾನತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೂವರು ಶಿಕ್ಷಕರ ಅಮಾನತು

ಕೊರಟಗೆರೆ: ಶೈಕ್ಷಣಿಕ ಪ್ರವಾಸದ ವೇಳೆ ವಿದ್ಯಾರ್ಥಿಗಳಿಗೆ ಮದ್ಯ ಕುಡಿಸಿದ ಆರೋಪದ ಮೇಲೆ ತಾಲ್ಲೂಕಿನ ಬೊಮ್ಮಲದೇವಿಪುರ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ಸಚ್ಚಿದಾನಂದ ಮೂರ್ತಿ, ಶಿಕ್ಷಕರಾದ ಶೇಕ್ ಮುಜಾಮಿಲ್, ಧನಸಿಂಗ್ ರಾಥೋಡ್ ಅವರನ್ನು ಬುಧವಾರ ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಉಪ ನಿರ್ದೇಶಕ (ಡಿಡಿಪಿಐ) ರವಿಶಂಕರರೆಡ್ಡಿ ಅಮಾನತುಗೊಳಿಸಿದ್ದಾರೆ.

ಡಿ.6 ರಿಂದ ಮೂರು ದಿನ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ರಾತ್ರಿ ಶಿಕ್ಷಕರು ಮದ್ಯ ಸೇವಿಸುತ್ತಿದ್ದರು. ಜೂಜಾಡುತ್ತಿದ್ದರು. ಶನಿವಾರ (ಡಿ.9) ಅರಸೀಕೆರೆ ಬಳಿ ವಿಶ್ರಾಂತಿಗಾಗಿ ಬಸ್ ನಿಲ್ಲಿಸಿದ್ದಾಗ ಮದ್ಯ ಸೇವಿಸಿದ್ದಾರೆ. ನೀರಿನ ಬಾಟಲಿಗೆ ಮದ್ಯ ಸುರಿದು ವಿದ್ಯಾರ್ಥಿಗಳಿಗೂ ಕುಡಿಸಿದ್ದಾರೆ. ಇದರಿಂದಕೆಲ ವಿದ್ಯಾರ್ಥಿಗಳು ಅಸ್ವಸ್ಥಗೊಂಡು ವಾಂತಿ ಮಾಡಿಕೊಂಡಿದ್ದಾರೆ. ಉಳಿದ ಶಿಕ್ಷಕರು ಮಕ್ಕಳನ್ನು ಆರೈಕೆ ಮಾಡಿದ್ದಾರೆ. ಪ್ರವಾಸ ಮುಗಿಸಿ ಬಂದ ವಿದ್ಯಾರ್ಥಿಗಳು, ಶಿಕ್ಷಕರ ಕೃತ್ಯದ ಬಗ್ಗೆ ಪೋಷಕರು ಹಾಗೂ ಶಾಲಾಭಿವೃದ್ಧಿ ಸಮಿತಿ ಸದಸ್ಯರ ಗಮನಕ್ಕೆ ತಂದಿದ್ದಾರೆ.

ಬುಧವಾರ ಪೋಷಕರು ಶಾಲೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಸ್ಥಳಕ್ಕೆ ಬಂದ ಡಿಡಿಪಿಐ ಬಳಿ ಶಿಕ್ಷಕರನ್ನು ಅಮಾನತು ಮಾಡುವಂತೆ ಒತ್ತಾಯಿಸಿದರು. ಡಿಡಿಪಿಐ ಒಂದು ತಾಸು ವಿದ್ಯಾರ್ಥಿಗಳ ವಿಚಾರಣೆ ನಡೆಸಿದರು.

‘ಶಿಕ್ಷಕರು ಅಸಭ್ಯವಾಗಿ ವರ್ತಿಸಿ ಮದ್ಯ ಕುಡಿಸಿದರು ಎಂದು ವಿದ್ಯಾರ್ಥಿಗಳು ದೂರಿದ್ದಾರೆ. ಈ ಶಿಕ್ಷಕರ ಬಗ್ಗೆ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ, ಪೋಷಕರಿಗೂ ಒಳ್ಳೆಯ ಅಭಿಪ್ರಾಯ ಇಲ್ಲ. ಶಾಲೆಗೆ ಸರಿಯಾಗಿ ಬರುತ್ತಿಲ್ಲ ಎಂಬ ಆರೋಪ ಸಹ ಇದೆ.

ವಿಚಾರಣೆ ಕಾಯ್ದಿರಿಸಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಶಿಕ್ಷಕರನ್ನು ಅಮಾನತು ಮಾಡಿದ್ದೇನೆ’ ಎಂದು

ರವಿ ಶಂಕರರೆಡ್ಡಿ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.