ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀಚವಲ್ಲದ ‘ನೀಚ’!

Last Updated 13 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಈ ದಿನಗಳಲ್ಲಿ ಸುದ್ದಿ ಮಾಡುತ್ತಿರುವ ‘ನೀಚ’ ಶಬ್ದ ಹಿಂದೆಯೂ ಬಹಳ ಗೊಂದಲ ಉಂಟು ಮಾಡಿದೆ. ಈ ಪದ ಸಂಸ್ಕೃತದ್ದೇನೋ ನಿಜ. ಅದರ ಅರ್ಥ ಬೇರೆ ಬೇರೆ ಸಂದರ್ಭಗಳಲ್ಲಿ ಬೇರೆ ಬೇರೆ- ಉಪಯೋಗಕ್ಕೆ ಅನುಕೂಲವಾಗುವಂತೆ. ಮೊದಲ ಬಾರಿ ನಾನು ಕೇಳಿಕೊಂಡಂತೆ ಇದರ ಅರ್ಥ ‘ಸಣ್ಣ’ ಬುದ್ಧಿಯವನು. ಮುಂದೆ ಖಗೋಳದ ಸಂಸ್ಕೃತ ಪುಸ್ತಕಗಳು ಕೈಗೆ ಬಂದಾಗ ನೀಚದ ಜೊತೆ ಉಚ್ಚವೂ ಸೇರಿಕೊಂಡಿತು. ಗ್ರಹಗಳು ಕೆಲವೊಮ್ಮೆ ನೀಚವಾಗುತ್ತಿದ್ದವು; ಕೆಲವೊಮ್ಮೆ ಉಚ್ಚವಾಗುತ್ತಿದ್ದವು. ಏಕೆ? ಈ ಲೆಕ್ಕ ಮಾಡಿ ಇದರ ಪ್ರಕಾರ ಹೀಗೆ ಉತ್ತರ ಬಂದರೆ ನೀಚ- ಹೀಗೆ ಉತ್ತರ ಬಂದರೆ ಉಚ್ಚ ಎಂದಷ್ಟೇ ಉತ್ತರ ಸಿಗುತ್ತಿತ್ತು. ನಾನು ಇದರ ಒಳ ಅರ್ಥ ತಿಳಿಯಲು ಕಷ್ಟ

ಪಡಬೇಕಾಯಿತು. ಪಾಪ! ಈ ಎಲ್ಲ ‘ನವ’ಗ್ರಹಗಳೂ ನಿಯತಕಾಲಿಕವಾಗಿ ನೀಚವಾಗಬೇಕೇಕೆ?

ನಾವು ಪುಸ್ತಕದಲ್ಲಿ ಸೌರ ವ್ಯೂಹವನ್ನು ಚಿತ್ರ ಬರೆದು ಸೂಚಿಸುವಂತೆ ಅವು ಆಕಾಶದಲ್ಲಿಲ್ಲ. ಏಕೆಂದರೆ ನಾವು ಭೂಮಿಯ ಮೇಲೆ ನಿಂತು ಆಕಾಶವನ್ನು ನೋಡುತ್ತಿದ್ದೇವೆ. ಪಠ್ಯದ ಚಿತ್ರ, ಸೌರ ಮಂಡಲದಾಚೆ ನಿಂತು ನೋಡುವ ನೋಟವನ್ನು ಕೊಡುತ್ತದೆ. ಆದ್ದರಿಂದ ಪೂರ್ವದಿಂದ ಸರಿಸುಮಾರು ನೆತ್ತಿಗೆ ಆಮೇಲೆ ಪಶ್ಚಿಮಕ್ಕೆ ಊಹಿಸಿಕೊಳ್ಳಬಹುದಾದ ವೃತ್ತವೊಂದರ ಮೇಲೆ ಸೂರ್ಯ ಮುಂತಾದ ಎಲ್ಲ ಆಕಾಶಕಾಯಗಳೂ ಚಲಿಸುತ್ತವೆ. ಉಚ್ಚ ಎಂದರೆ ಸೂರ್ಯನಿಗೂ ಮೇಲೆ; ನೀಚ ಎಂದರೆ ಸೂರ್ಯನಿಗಿಂತ ಕೆಳಗೆ. ಹಾರಾಡುವ ಹದ್ದನ್ನು ಊಹಿಸಿಕೊಳ್ಳಿ. ಅದರ ಮೇಲೆ ಮೋಡ; ಕೆಳಗೆ ಒಂದು ಗುಬ್ಬಿ. ವ್ಯತ್ಯಾಸವೆಂದರೆ ಗುಬ್ಬಿ ಮೋಡದ ಮೇಲೆ ಹೋಗಲಾರದು. ಬುಧ ಗ್ರಹ ಸೂರ್ಯನ ಕೆಳಗೆ ಬರಬಹುದು; ಮೇಲೂ ಹೋಗಬಹುದು. ಗುರುಗ್ರಹವೂ ಸೂರ್ಯನ ಮೇಲೆ ಹೋಗಬಹುದು. ಈ ಅದ್ಭುತ ಪರಿಕಲ್ಪನೆ ಅವುಗಳ ಕಕ್ಷೆಯ ಬಗ್ಗೆ ತಿಳಿಸಿಕೊಡುವ ಉಪಾಯವಲ್ಲವೇ?

ಲೆಕ್ಕ ಮಾಡಲು ಅನುಕೂಲವಾಗಲು ಇನ್ನೊಂದು ಅಂಶವನ್ನು ಪರಿಕಲ್ಪನೆ ಮಾಡಿಕೊಂಡಿದ್ದಾರೆ ನಮ್ಮ ಹಿರಿಯರು. ಅವು ವೃತ್ತಾಕಾರದಲ್ಲಿ ಸುತ್ತುತ್ತವೆ ಎಂದು ಭಾವಿಸಿ ಸ್ಥಾನವನ್ನು ಲೆಕ್ಕ ಮಾಡಿ ಅದರ ಸ್ಥಾನ ಕಂಡುಹಿಡಿಯುತ್ತಾರೆ. ಆಮೇಲೆ ಅದಕ್ಕೊಂದು ತಿದ್ದುಪಡಿ ಮಾಡಿ ನೈಜ ಸ್ಥಾನವನ್ನು ಲೆಕ್ಕ ಹಾಕುತ್ತಾರೆ. ಈ ಸ್ಥಾನಗಳನ್ನು ಮಧ್ಯಮ ಗ್ರಹ ಮತ್ತು ನಿಜ ಗ್ರಹ ಎಂದು ಸೂಚಿಸುತ್ತಾರೆ.

ಸಂಸ್ಕೃತ ಪಠ್ಯಗಳು ಇಂಗ್ಲಿಷ್‌ಗೆ ಹೋಗಿ ಅಲ್ಲಿಂದ ಕನ್ನಡಕ್ಕೆ ಬರುತ್ತವೆ. ಈ ಹಾದಿಯಲ್ಲಿ ನೀಚ ಎಂಬ ಪದ ಬೇರೊಂದು ಅರ್ಥವನ್ನು ತಂದಿಟ್ಟು ಗೊಂದಲ ಮಾಡಿತು. ಮಧ್ಯಮ ಗ್ರಹ ಎಂಬ ಪದ ಸಂಸ್ಕೃತದಿಂದ ಇಂಗ್ಲಿಷಿಗೆ ಹೋದಾಗ ಮೀನ್ (mean) ಎಂದಾಯಿತು. ಪುನಃ ಕನ್ನಡಕ್ಕೆ ಬರುವಾಗ ಮೀನ್ ಶಬ್ದ (mean) ನೀಚ ಎಂದಾಯಿತು. ಹಾಗಾಗಿ ಭಾರತ ಸರ್ಕಾರ ಪ್ರಕಟಿಸುವ ರಾಷ್ಟ್ರೀಯ ಪಂಚಾಂಗದ ಕನ್ನಡ ಅವತರಣಿಕೆಯಲ್ಲಿ ಗ್ರಹಗಳು ನೀಚವಾಗಿಬಿಟ್ಟವು. ಹೀಗೆ ಗ್ರಹಗಳು ಅನವಶ್ಯಕವಾಗಿ ನೀಚವಾಗಿರುವುದನ್ನು ಪ್ರತಿಭಟಿಸಿ ದೂರುಗಳು ಕೋಲ್ಕತ್ತ ತಲುಪಿದವು. ಕನ್ನಡ ಬಾರದ ಆ ಸಂಸ್ಥೆ ಕೈ ಚೆಲ್ಲಿ ಕುಳಿತಿತ್ತು (ಜೊತೆಗೆ ಕಲಿ ಅಹರ್ಗಣ ಎಂಬ ಸಂಖ್ಯೆ ಕಾಳಿ ಅಹರ್ಗಾಣ ಆಗಿತ್ತು).
ಈಗಲಾದರೂ ಗ್ರಹಗಳಿಗೆ ಈ ನೀಚ ಸ್ಥಾನದಿಂದ ಮುಕ್ತಿ ಸಿಕ್ಕಿರಬಹುದು ಕಾದು ನೋಡೋಣ.

–ಬಿ.ಎಸ್.ಶೈಲಜಾ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT