ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಕೃತಿ ಗಡಿಯಾರದ ಕಡೆಗೆ ಇರಲಿ ನೋಟ

Last Updated 13 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಆಧುನಿಕ ಕಾಲದ ಹಲವು ಆತಂಕಗಳಲ್ಲಿ ಒಂದು ‘ಕಾಲ’. ಕಾಲದ ಹಿಡಿತಕ್ಕೆ ಸಿಕ್ಕಬಾರದೆಂದು ನಾವೆಲ್ಲರೂ ಓಡುತ್ತಿರುವವರೇ; ಆದರೆ ಕಾಲದಿಂದ ಮಾತ್ರ ನಮಗೆ ಬಿಡುಗಡೆ ಇಲ್ಲವಾಗಿದೆ. ಅಧ್ಯಾತ್ಮದ ಚಿಂತನೆಯಲ್ಲೂ ಕಾಲಮೀಮಾಂಸೆ ತುಂಬ ಮುಖ್ಯವಾದ ವಿವರವೇ ಹೌದು.

ನಾವು, ಅದರಲ್ಲೂ ನಗರವಾಸಿಗಳು, ಏನು ಕೇಳಿದರೂ, ಎಲ್ಲದಕ್ಕೂ ನಮ್ಮ ಒಂದೇ ಉತ್ತರ ಎನ್ನುವಂತಾಗಿದೆ: ‘ಸಮಯ ಇಲ್ಲ!’ ಹಾಗಾದರೆ ಇರುವ ಸಮಯವನ್ನು ಏನು ಮಾಡುತ್ತಿದ್ದೇವೆ?

ಕಾಲ ಎಂದರೇನು? ಸಮಯ ಎಂದರೇನು? ಕಾಲ ಎನ್ನುವುದು ದಿಟವಾಗಿಯೂ ಇರುವಂಥದೇ? ಅಥವಾ ಅದು ನಮ್ಮ ಕಲ್ಪನೆಯೇ? – ಇಂಥ ವಿವರಗಳನ್ನು ಸದ್ಯ ಪಕ್ಕಕ್ಕೆ ಇಡೋಣ. ಜಗತ್ತಿನ ಹಲವರು ಶ್ರೇಷ್ಠ ಚಿಂತಕರು ಸಾವಿರಾರು ವರ್ಷಗಳಿಂದಲೂ ಕಾಲಮೀಮಾಂಸೆಯನ್ನು ಮಾಡಿದ್ದಾರೆ, ಮಾಡುತ್ತಲೂ ಇದ್ದಾರೆ.

ನಮ್ಮ ಬದುಕಿಗೂ ಕಾಲಕ್ಕೂ ನೇರವಾದ ನಂಟಿರುವುದನ್ನು ಯಾರೂ ತಳ್ಳಿಹಾಕುವಂತಿಲ್ಲ. ನಮ್ಮ ಹುಟ್ಟು–ಸಾವುಗಳೇ ಕಾಲಚಕ್ರದ ಉರುಳಾಟಕ್ಕೆ ದೊಡ್ಡ ನಿದರ್ಶನ. ನಮ್ಮ ನಿತ್ಯದ ಒಂದೊಂದು ಕ್ಷಣವೂ ಕಾಲದ ವಿವಿಧ ಅವಸ್ಥೆಗಳೇ ಹೌದು. ನಮ್ಮ ಊಟ, ಆಟ, ಪಾಠ, ನೋಟ, ಕಾದಾಟ, ಜಂಜಾಟ, ನೋವು, ನಲಿವು – ಹೀಗೆ ಪ್ರತಿ ವಿವರವೂ ಕಾಲವನ್ನೇ ಆಶ್ರಯಿಸಿವೆ. ಕಾಲದೊಂದಿಗೆ ಸಾಗುವ ಈ ಪಯಣ ಮನುಷ್ಯರಾದ ನಮಗಷ್ಟೆ ಸಲ್ಲುವ ವಿವರವಲ್ಲ; ಸೃಷ್ಟಿಯ ಪ್ರತಿ ವಿವರವೂ ಜೀವಿಯೂ ವಸ್ತುವೂ ಕಾಲಧರ್ಮದ ಭಾಗವೇ ಹೌದು. ಆದರೆ ಸೃಷ್ಟಿಯ ಬೇರೆ ಜೀವಿಗಳು ಅನುಸರಿಸುವ ಕಾಲಧರ್ಮಕ್ಕೂ ಮನುಷ್ಯನ ಕಾಲಧರ್ಮಕ್ಕೂ ಸ್ವಲ್ಪ ವ್ಯತ್ಯಾಸವಿದೆ. ಕಾಲವನ್ನು ಅಳೆಯುವಂಥ ಸೌಕರ್ಯಗಳನ್ನು ನಾವು ಸೃಷ್ಟಿಸಿಕೊಂಡಿದ್ದೇವೆ. ನಮಗೇ ಯಾವಾಗಲೂ ನಮ್ಮ ಸೃಷ್ಟಿಯ ಬಗ್ಗೆ ತುಂಬ ಅಭಿಮಾನ. ಈ ಅಭಿಮಾನ ಹಲವೊಮ್ಮೆ ಅಹಂಕಾರವೂ ಆಗುವುದರಲ್ಲಿ ಅಚ್ಚರಿಯೇನಿಲ್ಲ. ಹೀಗಾಗಿ ನಮಗೆ ನಮ್ಮ ಸೃಷ್ಟಿಯಾದ ‘ಗಡಿಯಾರ’ದ ಕಡೆಗೆ ಇರುವ ಗಮನ ಪ್ರಕೃತಿಯ ಸಹಜ ಗಡಿಯಾರದ ಬಗ್ಗೆ ಗಮನವಿಲ್ಲವಾಗಿದೆ. ನಮ್ಮ ನಿತ್ಯದ ಕಾರ್ಯನಿರ್ವಹಣೆಗೆ ನಮಗೆ ಬೇಕಿರುವುದು ನಮ್ಮ ಗಡಿಯಾರವೇ ವಿನಾ ಪ್ರಕೃತಿಯ ಗಡಿಯಾರವಲ್ಲ – ಎಂದು ವಾದ ಮಾಡಬಹುದು. ಆದರೆ ನಮ್ಮ ಭಾವಶ್ರೀಮಂತಿಕೆಗೆ ಬೇಕಿರುವುದು ಪ್ರಕೃತಿಯ ಕಾಲಯಂತ್ರವೇ ಹೌದು. ಆದರೆ ನಾವಿಂದು ಈ ಸೂಕ್ಷ್ಮನೋಟವನ್ನೇ ಕಳೆದುಕೊಂಡಿರುವುದರಿಂದ ಜೀವನದ ಎಷ್ಟೋ ಸೌಂದರ್ಯಸ್ಥಾನಗಳು ನಮ್ಮಿಂದ ಮರೆಯಾಗಿವೆ. ‘ಕಾಲದ ಮೀಮಾಂಸೆ’ಯ ಬಗ್ಗೆ ಸೊಗಸಾದ ಪ್ರಬಂಧವನ್ನು ಬರೆದಿರುವ ಕೀರ್ತಿನಾಥ ಕುರ್ತಕೋಟಿಯವರು ನಮ್ಮ ಈ ನಷ್ಟಭಾವದ ಬಗ್ಗೆ ಹೀಗೆಂದಿದ್ದಾರೆ:

‘ಒಕ್ಕಲಿಗನ ಗಡಿಯಾರ ಮನೆಯ ಹೊರಗಿನ ಪ್ರಕೃತಿಯಲ್ಲಿರುವುದು ಮಹತ್ವದ ಮಾತಾಗಿದೆ. ಯಾಂತ್ರಿಕವಾದ ಗಡಿಯಾರವನ್ನು ನೋಡಿಕೊಂಡು ವೇಳೆ ತಿಳಿಯಲು ಜಾಣತನವೇನೂ ಬೇಕಿಲ್ಲ... ಒಕ್ಕಲಿಗನ ಗಡಿಯಾರವನ್ನು ನೋಡುವ ಜಾಣತನ, ತಾಳ್ಮೆ ಎಷ್ಟು ಜನರಲ್ಲಿದೆ? ಆಗ್ನೇಯದ ಮೂಲೆಯಿಂದ ಮೋಡಗಳು ಏರಿಬಂದರೆ ಮಳೆ ಬಂದೇ ಬರುತ್ತದೆಂದು ಅವನಿಗೆ ಗೊತ್ತು – ಅದು ‘ಹರಿಶ್ಚಂದ್ರನ ದಿಕ್ಕು’ ಎಂದು ಹೆಸರಾಗಿರುತ್ತದೆ. ಕಟ್ಟಿರುವೆಗಳ ಸಾಲು, ಹಕ್ಕಿಗಳ ಕಲರವ ಮುಂತಾದವುಗಳು ಅವನಿಗೆ ಹವಾಮಾನದ ಸೂಚನೆಯನ್ನು ಕೊಡುತ್ತಿರುತ್ತವೆ. ಪ್ರಕೃತಿಯ ಗಡಿಯಾರ ಖಚಿತವಾದದ್ದಲ್ಲ. ಆದರೆ ಅದರ ಸತ್ಯ ನಮ್ಮ ಅನುಭವಕ್ಕೆ ಗೋಚರವಾಗುವಂಥದು. ಚಂದ್ರನ ಏರಿಳಿತಗಳು, ಸೂರ್ಯನ ಸಂಕ್ರಮಣ, ಬೆಳ್ಳಿ ಚುಕ್ಕೆಯ ಮೂಡು ಮುಳುಗುಗಳು, ಚನ್ನಮ್ಮನ ದಂಡೆಗೂ ಮೃಗಶಿರದ ನೇಗಿಲಕ್ಕೂ ಇರುವ ಅಂತರ, ಮುಂಚೆಯ ಬಾಗಿಲಿನಿಂದ ನಡುಮನೆಯವರೆಗೆ ನಿಧಾನವಾಗಿ ಸರಿಯುವ ಬಿಸಿಲು, ಹಿತ್ತಲ ಗೋಡೆಯನ್ನೇರುವ ನೆರಳು – ಇವೆಲ್ಲ ಗಡಿಯಾರದಂತೆ ಖಚಿತವಾದ ಕಾಲಸೂಚಕಗಳಲ್ಲ. ಆದರೆ ಅವುಗಳಿಂದ ದೊರೆಯುವ ಅನುಭವ ಮಾತ್ರ ಅಪೂರ್ವವಾದದ್ದು.’

ನಿಸರ್ಗದ ವಿದ್ಯಮಾನಗಳ ವಿಸ್ತರಣವೇ ನಮ್ಮ ಜೀವನದ ಏರಿಳಿತಗಳು. ಆದರೆ ನಮಗಿಂದು ಈ ವಿವೇಕವೇ ದೂರವಾಗಿದೆ. ಪ್ರಕೃತಿ ನಮ್ಮ ಬದುಕಿನ ಭಾಗವಾದಾಗ, ಅನುಭವದ ವಿವರವಾದಾಗ ಒದಗುವ ವ್ಯಕ್ತಿತ್ವವೇ ದಿಟವಾದ ವ್ಯಕ್ತಿತ್ವ. ಅಂಥ ವ್ಯಕ್ತಿತ್ವಕ್ಕೆ ಮಾತ್ರವೇ ಅಧ್ಯಾತ್ಮದ ದಾರಿಯಲ್ಲಿ ಪ್ರಶ್ನೆಗಳನ್ನು ಹಾಕಲೂ, ಎದುರಿಸಲೂ ಅರ್ಹತೆಯಿರುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT