ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೋಡಿ ನೋಡಲು ಹೋದಾಗ

Last Updated 13 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಕುಣಿಗಲ್ ಚೆಲುವೆಗೆ ಮನಸೋತೆ

ಆಗ ತಾನೆ ರೈಲ್ವೆ ಇಲಾಖೆಯಲ್ಲಿ ಸಹ ಚಾಲಕನಾಗಿ ಉದ್ಯೋಗ ದೊರಕಿತ್ತು. ಸೋದರಮಾವ, ಸೋದರತ್ತೆ ಇಬ್ಬರೂ ಕುಣಿಗಲ್‌ನಲ್ಲಿ ತಮಗೆ ಗೊತ್ತಿರುವ ಒಂದು ಹುಡುಗಿಯನ್ನು ನೋಡೋಣ ಬಾ ಎಂದು ಕರೆದುಕೊಂಡು ಹೋದರು. ನಮ್ಮನ್ನು ನೋಡುತ್ತಲೇ ಮನೆಯಂಗಳದಲ್ಲಿ ಪಾತ್ರೆ ತೊಳೆಯುತ್ತಾ ಕುಳಿತಿದ್ದ ಹುಡುಗಿಯೊಬ್ಬಳು ಚಂಗನೆ ಒಳಗೆ ಓಡಿದಳು. ನನಗೆ ತೋರಿಸುವ ಹುಡುಗಿ ಇದೇ ಆಗಿರಬಾರದೆ ಎಂದು ಮೊದಲ ನೋಟದಲ್ಲೇ ಅನಿಸಿತು.

ಸರಿ, ಒಳಗಡೆ ಹೋದೆವು. ಸಿಹಿತಿಂಡಿಯ ತಟ್ಟೆಯೊಂದಿಗೆ ಹುಡುಗಿ ಬಂದಳು. ಇಬ್ಬರಿಗೂ ಒಪ್ಪಿಗೆಯಾಯಿತು. ಆಗ ಹಾಸ್ಯ ಸ್ವಭಾವದ ನನ್ನ ಸೋದರ ಮಾವ ಹುಡುಗಿಗೆ ಕೇಳಿಸುವಂತೆ ‘ಹುಡುಗನಿಗೆ ತಲೆಯಲ್ಲಿ ಸ್ವಲ್ಪ ಕೂದಲು ಕಮ್ಮಿ’ ಎಂದರು. ಆಗ ಹುಡುಗಿ, ‘ಪರವಾಗಿಲ್ಲ, ಆದರೆ ತಲೆಯ ಒಳಗಡೆ ಬುದ್ಧಿ ಇದ್ದರೆ ಸಾಕು’ ಎಂದಳು. ಎಲಾ ಚಾಲಾಕಿ ಹುಡುಗಿ ಎಂದುಕೊಂಡೆ.

ಕೆಲವು ಕಾರಣಗಳಿಗೆ ಹುಡುಗಿಯ ಅಪ್ಪ ಒಪ್ಪಲಿಲ್ಲ. ಸರಿ, ನೋಡೋಣ ಎಂದು ಹೇಳಿ ಬಂದುಬಿಟ್ಟೆವು. ಹೀಗೆ ಹುಡುಗಿಯನ್ನು ನೋಡುವುದು ನಡೆದೇ ಇತ್ತು. ಆದರೆ ಕುಣಿಗಲ್ ಹುಡುಗಿ ಮನದ ಮೂಲೆಯಲ್ಲಿ ಅವಿತು ಕುಳಿತಿದ್ದಳು. ಆಗ ಒಂದು ತಮಾಷೆಯ ಪ್ರಸಂಗ ನಡೆಯಿತು.

ಒಂದು ದಿನ ದಲ್ಲಾಳಿಯ ಮೂಲಕ ಹುಡುಗಿಯನ್ನು ನೋಡಲು ಹೋದೆವು. ಸಿಹಿ, ಖಾರ ಸೇವನೆಯಾಯಿತು, ಸಮಾಧಾನವಾಗಲಿಲ್ಲ ವಾಪಸ್ ಬಂದೆವು. ಅದೇ ದಿನ ಸಂಜೆ ಇನ್ನೊಬ್ಬ ದಲ್ಲಾಳಿ ರಾಜಾಜಿನಗರದಲ್ಲಿ ಇರುವ ಹುಡುಗಿಯನ್ನು ನೋಡೋಣ ಬನ್ನಿ ಎಂದು ಕರೆದುಕೊಂಡು ಹೋದರು. ಹುಡುಗಿ ಬಂದಳು, ಕಣ್ಣು ಕಣ್ಣು ಸಂಧಿಸಿದವು. ಏನಾಶ್ಚರ್ಯ! ಬೆಳಿಗ್ಗೆ ನೋಡಿದ ಹುಡುಗಿಯೇ! ಹುಡುಗಿಗೂ ಇದು ಗೊತ್ತಾಯಿತು. ಪ್ಲೇಟನ್ನು ಅಲ್ಲೇ ಕುಕ್ಕಿ ಒಳಗೆ ಓಡಿದಳು. ಇಬ್ಬರು ಬೇರೆ ಬೇರೆ ದಲ್ಲಾಳಿಗಳು ಒಂದೇ ಹುಡುಗಿಯನ್ನು ತೋರಿಸಿದ್ದರು. ಅವರಿಗೂ ಇದು ಗೊತ್ತಿರಲಿಲ್ಲ.

ತಕ್ಷಣವೇ ಅಲ್ಲಿಂದ ಜಾಗ ಖಾಲಿ ಮಾಡಿದೆವು. ನಂತರ ಎಷ್ಟೋ ಕಡೆ ನೋಡಿದರೂ ಮೊದಲು ನೋಡಿದ ಚೆಲುವೆಯ ಮೊಗವೇ ಕಣ್ಮುಂದೆ ಸುಳಿಯುತ್ತಿತ್ತು.

ಅಣ್ಣನಿಗೆ ಹೇಳಿದೆ. ಹೇಗಾದರೂ ಮಾಡಿ ಕುಣಿಗಲ್ ಹುಡುಗಿ ಮನೆಯವರನ್ನು ಒಪ್ಪಿಸು ಎಂದು. ಅಣ್ಣನ ರಾಯಭಾರದ ನಂತರ ಕುಣಿಗಲ್‌ನಲ್ಲಿ ವಿವಾಹವಾದೆ.

–ಹಿರೇಮನೆ ಗಂಗರಾಜ, ಬೆಂಗಳೂರು

***

‘ಹುಡುಗ ನಾನಲ್ಲ...’

ಡಿಗ್ರಿ ಮುಗಿಯುವವರೆಗೂ ಮದುವೆಯಾಗೊಲ್ಲ ಅಂತ ಹಟ ಹಿಡಿದರೂ ನನ್ನ ಮಾತಿಗೆ ಸೊಪ್ಪು ಹಾಕದೆ ‘ಒಳ್ಳೇ ಮನೆತನ, ಹುಡುಗ ಒಳ್ಳೇ ಕೆಲಸದಲ್ಲಿದ್ದಾನಂತೆ. ಹೇಳಿದಷ್ಟು ಕೇಳು’ ಅಂತ ಹೇಳಿ ಅಮ್ಮ ಬಾಯಿ ಮುಚ್ಚಿಸಿದ್ದರು.

ಇದ್ದಕ್ಕಿದ್ದಂತೆಯೇ ಒಂದು ಸಂಜೆ ಬಂದ ಹುಡುಗನ ಮನೆಯವರಿಗೆ ತಿಂಡಿ–ತೀರ್ಥದ ಉಪಚಾರವನ್ನು ಮನೆಯವರು ಮಾಡುತ್ತಿದ್ದರು. ನನ್ನ ತಮ್ಮ ‘ಅವರೇ ಹುಡುಗ ನೋಡು’ ಅಂತ ತೋರಿಸಿದಾಗ ಸಹಜ ಕುತೂಹಲದಿಂದ ಪರದೆ ಸಂದಿಯಿಂದ ನೋಡಿದೆ. ಕರ್‍ರಗೆ, ಗುಂಡಗೆ ಒಳ್ಳೆ ಜಟ್ಟಿಯಂತಿದ್ದ ವ್ಯಕ್ತಿಯನ್ನು ನೋಡಿ ಬೆಚ್ಚಿ ಭೂಮಿಗಿಳಿದು ಹೋದೆ. ನನ್ನ ಕಲ್ಪನೆಯ ರಾಜಕುಮಾರನಿಗೆ ತದ್‌ ವಿರುದ್ಧವಾಗಿದ್ದನಾತ.

ಕಾಫಿ ತುಂಬಿದ ಲೋಟಗಳ ಟ್ರೇಯನ್ನು ಅಮ್ಮ ಕೈಗೆ ಕೊಡುತ್ತಾ ‘ಹೋಗಿ ಕೊಟ್ಟು ಬಾ; ಅಂದಾಗ ‘ಅಮ್ಮ ಪ್ಲೀಸ್‌, ಬೇಡ ನಂಗೆ ಈ ಮದುವೆ’ ಅಂತ ಗೋಗರೆದರೂ ‘ನಿಮ್ಮಪ್ಪಂಗೆ ಗೊತ್ತಾದರೆ ಬೈತಾರೆ ಸುಮ್ಮನೆ ಕೊಟ್ಟು ಬಾ. ನಂತರ ಉಳಿದ ಮಾತು’ ಅಂದಾಗ ವಿಧಿಯಿಲ್ಲದೆ ಹೊರ ಬಂದೆ.

ಎಲ್ಲರಿಗೂ ಕಾಫಿ ಕೊಡುತ್ತಿರುವಾಗ ಯಾರೋ ಒಬ್ಬ ಹಿರಿಯರು ‘ಒಳ್ಳೇ ಲಕ್ಷಣವಾಗಿದ್ದೀಯಮ್ಮ! ಯಾರನ್ನೂ ಒಪ್ಪದ ನಮ್ಮ ಹುಡುಗ ನಿನ್ನನ್ನು ಕಾಲೇಜ್‌ ಬಳಿ ನೋಡಿದವನೇ ಒಪ್ಪಿಗೆ ಸೂಚಿಸಿಬಿಟ್ಟ. ನನಗಂತೂ ತುಂಬಾ ಮೆಚ್ಚುಗೆಯಾಯ್ತು. ಇನ್ನು ನೀನು ಒಪ್ಪಿದರೆ ಎಲ್ಲಾ ಮುಗಿದಂತೆ’ ಅಂದಾಗ.

‘ಹೂ! ಒಪ್ಪದೇ ಏನು ಮಾಡ್ತಾನೆ?’ ಅಂತ ಮನದೊಳಗೇ ಬೈದುಕೊಳ್ಳುತ್ತಾ ಆ ಜಟ್ಟಿಯಂತಿದ್ದವನ ಮುಖವನ್ನು ದುರುಗುಟ್ಟಿ ನೋಡಿದಾಗ, ಅವರು ನಗುತ್ತಾ ‘ನಿನ್ನ ನೋಟವನ್ನು ಸ್ವಲ್ಪ ಆ ಕಡೆಗೆ ಹೊರಳಿಸಮ್ಮಾ ನಂಗೆ ದೃಷ್ಟಿಯಾಗುತ್ತೆ. ಹುಡುಗ ನಾನಲ್ಲ’, ಅನ್ನುತ್ತಾ ಬಾಗಿಲ ಕಡೆ ಕೈ ತೋರಿಸಿದರು.

ಏತಕ್ಕೋ ಆಚೆಗೆ ಹೋಗಿದ್ದ ಆ ಯುವಕ ಮೀಸೆಯಡಿಯಲ್ಲೇ ನಸು ನಗುತ್ತಾ ಬಾಗಿಲಲ್ಲಿ ನಿಂತಿದ್ದನ್ನು ಕಂಡು ನಾಚಿ ನೀರಾಗಿ ಆ ನಗುವಿಗೆ ಮನಸೋತೆ. ತಮಾಷೆಗೆ ತಮ್ಮ ಸುಳ್ಳು ಹೇಳಿದ್ದ ಅಂತ ಆಮೇಲೆ ತಿಳಿಯಿತು.

‘ಊರಿಗೆ ಹೋಗಿ ಕಾಗದ ಬರಿತೀವಿ ಅನ್ನೋ ಗಂಡಿನವರು ಗತ್ತು ಬಿಂಕವಿಲ್ಲದ ಸನ್ನಡತೆಯ ಒಳ್ಳೇ ಜನ. ಅಪ್ಪ ಅಮ್ಮ ಎಲ್ಲಾ ವಿಚಾರಿಸಿಯೇ ಮುಂದುವರಿದಿದ್ದಾರೆ ಅನ್ನಿಸಿ, ಮದುವೆಯ ನಂತರ ಡಿಗ್ರಿ ಮುಗಿಸಿದರಾಯಿತೆಂದುಕೊಂಡು ಮದುವೆಯೆಂಬ ಪ್ರೀತಿಯ ಸಂಕೋಲೆಗೆ ಕೊರಳನ್ನೊಡ್ಡಿದೆ.

–ದಿನಮಣಿ ಹೇಮರಾಜ್‌, ಕೊಡಗು

***

ಕೈ ಹಿಡಿವ ಹುಡುಗಿ ಯಾರಿರಬಹುದು?

ನನ್ನ ಸ್ವಂತ ಊರು ಕೊಡಗಿನ ತೊರೆನೂರು. ಕೊಡಗಿನ ಗೌಡಹಳ್ಳಿ ಗ್ರಾಮದ ವಧುವಿನ ಸಂಬಂಧಿಕರು ನಮ್ಮ ಸಮೀಪದ ಬಂಧುಗಳು. ನಾನು ಆಗ ಚಾಮರಾಜನಗರ ಜಿಲ್ಲೆ ಕಾಗಲವಾಡಿಯ ಮಿಡಲ್‌ ಸ್ಕೂಲಿನಲ್ಲಿ ಶಿಕ್ಷಕನಾಗಿದ್ದೆ.

ಗೌಡಹಳ್ಳಿಯ ಸಂಬಂಧಿಕರು, ನಮ್ಮ ತಂದೆಗೆ ಮೈಸೂರಿನಲ್ಲಿ ಸಿಕ್ಕಿ, ತಮ್ಮ ಮಗಳ ಬಗ್ಗೆ ಪ್ರಸ್ತಾಪ ಮಾಡಿದ್ದರು. ಬೇಸಿಗೆ ರಜೆಯಲ್ಲಿ ತಾಯಿ ಮತ್ತು ನಾನು ಅಲ್ಲಿಗೆ ಹೋದೆವು. ಮನೆಗೆ ಹೋದಾಗ ಮುಸ್ಸಂಜೆ. ನಾನು ಜಗಲಿ ಮೇಲೆ ಕುಳಿತೆ, ತಾಯಿ ಒಳಗೆ ಹೋದರು. ಲಂಗ ಹಾಕಿದ್ದ ಹುಡುಗಿ ಬುಡ್ಡಿ ದೀಪದ ಬಳಿ ನಿಂತು ಕಳ್ಳನೋಟ ಬೀರುತ್ತಿದ್ದಳು. ನಾನು ಗುಂಗುರು ಕೂದಲಿನ 22 ವರ್ಷದ ಯುವಕ.

ಎಲ್ಲರ ಊಟವಾದ ನಂತರ ಹುಡುಗಿಯ ಜೊತೆಯಲ್ಲಿ ತಂದೆ ತಾಯಿ ಕುಳಿತು ಕುಶಲೋಪರಿ ವಿಚಾರಿಸಿದರು. ಹುಡುಗಿಯ ತಾಯಿ ನನ್ನನ್ನು ಸಂಬಳವೆಷ್ಟು ಎಂದು ಕೇಳಿದರು. ಏನೋ ಪಿಸುಗುಟ್ಟಿದರು. ಅಂದು ರಾತ್ರಿ ಅಲ್ಲೇ ಕಳೆದೆವು.

ಬೆಳಿಗ್ಗೆ ಗದ್ದೆ ಬಯಲಿಗೆ ಹೋಗಿ, ಚಿಕ್ಕ ಹೊಳೆಯಲ್ಲಿ ಮುಖ ಮಜ್ಜನ ಮಾಡಿ ಬಂದು ಜಗಲಿ ಮೇಲೆ ಕುಳಿತೆನು. ಲಂಗದ ಹುಡುಗಿ ಓಡಾಡುತ್ತಿದ್ದಳು. ನಾನು ಅವಳ ಓಡಾಟ ಗಮನಿಸಿ, ಹುಡುಗಿ ಇವಳ ಅಕ್ಕ ಇರಬಹುದೆಂದು ಊಹಿಸಿದೆ.

ಬೆಳಿಗ್ಗೆ ಉಪಾಹಾರ ಮುಗಿಸಿ ಬಸ್ಸಿಗೆ ಹೊರಟೆವು. ಹುಡುಗಿಯೊಂದಿಗೆ ತಂದೆ, ತಾಯಿ ಬಂದು ಬೀಳ್ಕೊಟ್ಟರು. ಬಸ್ಸಿನಲ್ಲಿ ನನ್ನ ತಾಯಿ ‘ಹುಡುಗಿ ನೋಡಿದೆಯಾ’ ಎಂದರು. ನಾನು ‘ಯಾವ ಹುಡುಗಿ’ ಎಂದೆ. ‘ಅದೆ, ಓಡಾಡುತ್ತಿದ್ದ ಹುಡುಗಿ, ಎಷ್ಟು ಮುದ್ದಾಗಿ ಇದೆ’ ಎಂದರು ನನ್ನ ತಾಯಿ.

ಊರಿಗೆ ಸೇರಿದ ಮೇಲೆ ರಜೆ ನಂತರ ಕಾಗಲವಾಡಿಗೆ ಹೋದೆನು. ಇದಾದ 10 ತಿಂಗಳ ನಂತರ ನನ್ನ ಸೋದರ ಲಗ್ನ ಪತ್ರಿಕೆ ತಂದುಕೊಟ್ಟನು. ‘ಯಾರದು ಮದ್ವೆ’ ಎಂದೆ. ಆತ ನಿಮ್ಮದು ಎಂದನು. ನನಗೆ ಆಶ್ಚರ್ಯವಾಯಿತು. ದಿಢೀರನೆ ಹೇಗೆ ನಿರ್ಧಾರವಾಯಿತು ಎಂದು ಯೋಚಿಸಿದೆ. ಲಗ್ನಪತ್ರಿಕೆಯಲ್ಲಿ ಹುಡುಗಿಯ ಹೆಸರು ಮುತ್ತಮ್ಮ ಎನ್ನುವ ಬದಲಿಗೆ ಕೆಂಚಮ್ಮ ಎಂದಿತ್ತು. ಅಂದು ರಾತ್ರಿ ನಿದ್ರೆಯೇ ಬರಲಿಲ್ಲ. ತಂದೆ, ತಾಯಿ ಒಪ್ಪಿದರೆ ಆಯಿತು ಎನ್ನುವ ಕಾಲ.

ಬೆಳಿಗ್ಗೆ ಸೈಕಲ್‌ ಬಾಡಿಗೆ ಪಡೆದು ಚಾಮರಾಜನಗರಕ್ಕೆ ಬಂದು ರೈಲು ಏರಿ, ಕೆ.ಆರ್‌.ನಗರಕ್ಕೆ ಬಂದೆನು. ತಾಯಿಯೊಡನೆ ಸಮಾಲೋಚಿಸಿದೆ. ಹಾಗೋಹೀಗೋ ಮದುವೆ ನಡೆಯಿತು. ಅಂದಿನ ರಾತ್ರಿ ಎತ್ತಿನ ಗಾಡಿಯಲ್ಲಿ ಊರಿನ ಬೀದಿಯಲ್ಲಿ ಮೆರವಣಿಗೆ ನಡೆಯಿತು. ಆಗ ನಾನು ಹುಡುಗಿಯ ಮುಖ ನೋಡಿ ಮಾತನಾಡಿದೆ. ಹತ್ತು ಬಾರಿ ಗ್ಯಾಸ್‌ ಬೆಳಕಿನಲ್ಲಿ ನೋಡಿ ಖುಷಿಪಟ್ಟೆನು. ಅಂದೇ ನಾನು ನನ್ನ ಜೋಡಿಯನ್ನು ಕಣ್ತುಂಬ ತುಂಬಿಕೊಂಡಿದ್ದು.

–ಟಿ.ಕೆ. ಚಿನ್ನಸ್ವಾಮಿ ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT