4

ಮಹೀಂದ್ರಾದಿಂದ ಹೊಸ ‘ಇವಿ’ಗಳು

Published:
Updated:
ಮಹೀಂದ್ರಾದಿಂದ ಹೊಸ ‘ಇವಿ’ಗಳು

ಭಾರತದಲ್ಲಿ ಸದ್ಯ ಬ್ಯಾಟರಿಚಾಲಿತ ಕಾರುಗಳನ್ನು (ಇ.ವಿ; ವಿದ್ಯುತ್‌ಚಾಲಿತ; ಇ–ಕಾರು) ಮಾರಾಟ ಮಾಡುತ್ತಿರುವ ಏಕೈಕ ಕಂಪನಿ ಮಹೀಂದ್ರಾ. ಮುಂದಿನ ವರ್ಷ

ಇ–ಕಾರುಗಳ ಮೂರು ಹೊಸ ಆವೃತ್ತಿಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಅದು ಸಿದ್ಧತೆ ನಡೆಸಿದೆ.

‘ಅತ್ಯುತ್ತಮ ಸಾಮರ್ಥ್ಯದ ಈ ಕಾರುಗಳು ಪ್ರತಿ ಗಂಟೆಗೆ ಕ್ರಮವಾಗಿ 150, 186 ಹಾಗೂ 190 ಕಿ.ಮೀ. ವೇಗದಲ್ಲಿ ಚಲಿಸುವ ಶಕ್ತಿಯನ್ನು ಹೊಂದಿವೆ’ ಎಂದು ಹೇಳುತ್ತಾರೆ ಮಹೀಂದ್ರಾ ಎಲೆಕ್ಟ್ರಿಕ್‌ ಮೊಬಿಲಿಟಿ ಕಂಪನಿ ಸಿಇಒ ಮಹೇಶ್‌ ಬಾಬು. ಈ ಕಾರುಗಳಲ್ಲಿ 0–100 ಕಿ.ಮೀ. ವೇಗ ವೃದ್ಧಿಗೆ ಕ್ರಮವಾಗಿ 8, 9 ಹಾಗೂ 11 ಸೆಕೆಂಡ್‌ಗಳು ಸಾಕು ಎಂದು ಅವರು ಹೆಮ್ಮೆಯಿಂದ ವಿವರಿಸುತ್ತಾರೆ.

‘ಭಾರತದಲ್ಲಿ 2030ರಿಂದ ಬ್ಯಾಟರಿಚಾಲಿತ ವಾಹನಗಳ ಮಾರಾಟಕ್ಕಷ್ಟೇ ಅವಕಾಶ ಇರಲಿದೆ. ಸರ್ಕಾರದ ಈ ನಿರ್ಧಾರ ಆಟೊಮೊಬೈಲ್‌ ಉದ್ಯಮದಲ್ಲಿ ದೊಡ್ಡ ಕ್ರಾಂತಿಯನ್ನೇ ಉಂಟು ಮಾಡುತ್ತಿದೆ. ಬ್ಯಾಟರಿಚಾಲಿತ ವಾಹನಗಳಿಗೆ ಬೇಕಾದ ಮೂಲಸೌಕರ್ಯ ರೂಪಿಸುವತ್ತ ಸರ್ಕಾರ ಕಾರ್ಯಪ್ರವೃತ್ತವಾಗಿದ್ದು, ಆಟೊಮೊಬೈಲ್‌ ಕಂಪನಿಗಳ ತಯಾರಿಕಾ ದಿಕ್ಕೇ ಬದಲಾಗುತ್ತಿದೆ’ ಎಂದು ಅವರು ವಿಶ್ಲೇಷಿಸುತ್ತಾರೆ.

ಎಸ್‌ಯುವಿಗಳಿಗೆ (ಸ್ಪೋರ್ಟ್ಸ್‌ ಯುಟಿಲಿಟಿ ವೆಹಿಕಲ್‌) ಹೆಸರಾಗಿರುವ ಮಹೀಂದ್ರಾ, ವಿದ್ಯುತ್‌ ಚಾಲಿತ ಕಾರುಗಳಲ್ಲಿ ಈಗಾಗಲೇ ನಾಲ್ಕು ಮಾದರಿಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಅವುಗಳೆಂದರೆ ಇ2ಒ (ಹ್ಯಾಚ್‌ಬ್ಯಾಕ್‌), ಇ–ವೆರಿಟೊ (ಸೇಡಾನ್‌), ಇ–ಸುಪ್ರೊ (ಮಿನಿ ವ್ಯಾನ್‌) ಮತ್ತು ಇ–ಅಲ್ಫಾ (ಆಟೊ).

ಮುಂದಿನ ವರ್ಷ ಬಿಡುಗಡೆ ಆಗಲಿರುವ ಹೊಸ ಆವೃತ್ತಿಗಳಲ್ಲಿ ಕೆಯುವಿ100 (ಎಸ್‌ಯುವಿ) ಮೊದಲ ಸಾಲಿನಲ್ಲಿದ್ದು, ಉಳಿದ ಎರಡು ಆವೃತ್ತಿಗಳು ಎಸ್‌ಯುವಿ ಹಾಗೂ ಸೆಡಾನ್‌ ಎರಡರ ಅಂಶಗಳನ್ನೂ ಒಳಗೊಂಡ ಹೈಬ್ರಿಡ್‌ ಕಾರುಗಳಾಗಿವೆ. ಕಾರುಗಳ ಚಾರ್ಜಿಂಗ್‌ ಅವಧಿಯನ್ನು ಕಡಿತಗೊಳಿಸುವ ಹೊಸ ತಂತ್ರಜ್ಞಾನ ಅಳವಡಿಕೆಗೂ ಪ್ರಯತ್ನಗಳು ನಡೆದಿವೆ. ಸದ್ಯ ಚಾರ್ಜಿಂಗ್‌ಗೆ ತೆಗೆದುಕೊಳ್ಳುವ 90 ನಿಮಿಷಗಳ ಅವಧಿಯನ್ನು 40 ನಿಮಿಷಗಳಿಗೆ ಇಳಿಸುವ ತಂತ್ರಜ್ಞಾನವನ್ನು ಇ–ಕಾರುಗಳು ಅತಿ ಶೀಘ್ರದಲ್ಲೇ ಪಡೆಯಲಿವೆ. 2020ರ ವೇಳೆಗೆ ಬ್ಯಾಟರಿಗಳ ದರ ಸಹ ಕಡಿಮೆಯಾಗುವ ನಿರೀಕ್ಷೆಯಿದ್ದು, ಬ್ಯಾಟರಿಚಾಲಿತ ಕಾರುಗಳ ಬೆಲೆ ಗಣನೀಯವಾಗಿ ಇಳಿಕೆಯಾಗಲಿದೆ ಎಂಬುದು ಆಟೊಮೊಬೈಲ್‌ ಮಾರುಕಟ್ಟೆ ತಜ್ಞರ ವಿಶ್ಲೇಷಣೆಯಾಗಿದೆ.

ಭಾರತದಲ್ಲಿ ಸದ್ಯ ಬ್ಯಾಟರಿಚಾಲಿತ ಕಾರುಗಳು ಬಲು ತುಟ್ಟಿಯಾಗಿವೆ. ಈ ಕಾರುಗಳಿಗೆ ಬೇಕಾದ ಲೀಥಿಯಂ–ಐಯಾನ್‌ ಬ್ಯಾಟರಿಗಳನ್ನು ಈಗ ವಿದೇಶಗಳಿಂದ ಆಮದು ಮಾಡಿಕೊಳ್ಳಬೇಕಾಗಿರುವ ಕಾರಣ ಅವುಗಳು ದುಬಾರಿಯಾಗಿವೆ. ಉದಾಹರಣೆಗೆ, ಇ2ಒ ಕಾರಿನ ಬೆಲೆ ₹ 7.46 ಲಕ್ಷದಿಂದ ಶುರುವಾಗುತ್ತದೆ.

ಟಾಟಾ ಮೋಟಾರ್ಸ್‌ನ ಮೊದಲ ಬ್ಯಾಟರಿಚಾಲಿತ ಕಾರು ‘ಟೈಗರ್‌ ಇವಿ’ ಗುಜರಾತ್‌ನ ಸಾನಂದ್‌ ಘಟಕದಿಂದ ಕಳೆದ ವಾರವಷ್ಟೇ ಹೊರಬಂದಿದೆ. ಮಹೀಂದ್ರಾದ ‘ವೆರಿಟೊ’ವನ್ನು ಹೋಲುವ ಈ ಕಾರಿನ ಮಾರಾಟ ಇನ್ನೂ ಆರಂಭವಾಗಿಲ್ಲ. ಕೇಂದ್ರ ಇಂಧನ ಇಲಾಖೆಯ ಅಧೀನದಲ್ಲಿ ಕೆಲಸ ಮಾಡುವ ಎನರ್ಜಿ ಎಫಿಶಿಯನ್ಸಿ ಸರ್ವೀಸಸ್‌ ಲಿಮಿಟೆಡ್‌ (ಇಇಎಸ್‌ಎಲ್‌) ವತಿಯಿಂದ ಈ ಕಾರುಗಳ ಖರೀದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.

ಇಇಎಸ್‌ಎಲ್‌ ಒಟ್ಟಾರೆ 10 ಸಾವಿರ ಬ್ಯಾಟರಿಚಾಲಿತ ಕಾರುಗಳಿಗೆ ಟೆಂಡರ್‌ ಕರೆದಿತ್ತು. ಆ ಟೆಂಡರ್‌ ಟಾಟಾ ಮೋಟಾರ್ಸ್‌ನ ಪಾಲಾಗಿತ್ತು. ಒಪ್ಪಂದದ ಪ್ರಕಾರ ಮೊದಲ ಹಂತದಲ್ಲಿ ‘250 ಟೈಗರ್‌ ಇವಿ’ಗಳನ್ನು ಇಇಎಸ್‌ಎಲ್‌ಗೆ ಪೂರೈಸಬೇಕಿದೆ. ಭಾರತೀಯ ಕಾರು ಮಾರುಕಟ್ಟೆಯು ಜಗತ್ತಿನಲ್ಲೇ ಅತಿ ವೇಗವಾಗಿ ಬೆಳೆಯುತ್ತಿದೆ. ಕಳೆದ ವರ್ಷ 30 ಲಕ್ಷ ಕಾರುಗಳು (ಪೆಟ್ರೋಲ್‌ ಮತ್ತು ಡೀಸೆಲ್‌) ದೇಶದಲ್ಲಿ ಮಾರಾಟವಾಗಿವೆ.

ಹವಾಮಾನ ವೈಪರೀತ್ಯಕ್ಕೆ ಪರಿಹಾರ ಕಂಡುಕೊಳ್ಳುವ ಜತೆ ಜತೆಗೆ ವಾಯು ಮಾಲಿನ್ಯವನ್ನು ತಡೆಗಟ್ಟುವ ಸಲುವಾಗಿ ಬ್ಯಾಟರಿಚಾಲಿತ ವಾಹನಗಳ ಸಂಖ್ಯೆಯನ್ನು ಪ್ರತಿವರ್ಷ ಹೆಚ್ಚಿಸುತ್ತಾ ಹೋಗಲು ಸರ್ಕಾರ ನಿರ್ಧರಿಸಿದೆ. ಹತ್ತು ವರ್ಷಗಳಲ್ಲಿ ಪೆಟ್ರೋಲ್‌ ಹಾಗೂ ಡೀಸೆಲ್‌ ವಾಹನಗಳ ಮಾರಾಟವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವ ಉದ್ದೇಶವನ್ನೂ ಅದು ಹೊಂದಿದೆ. ಹೀಗಾಗಿ ಬ್ಯಾಟರಿಚಾಲಿತ ವಾಹನಗಳ ಮಾರುಕಟ್ಟೆ ವಿಸ್ತೃತವಾಗಿ ಬೆಳೆಯುತ್ತಿದೆ.

ಎಲ್ಲ ಪ್ರಮುಖ ಕಾರು ತಯಾರಿಕಾ ಕಂಪನಿಗಳು ಮಹೀಂದ್ರಾದಂತೆ ತಮ್ಮ ಕ್ರಿಯಾ ಯೋಜನೆಯನ್ನು ಆಮೂಲಾಗ್ರವಾಗಿ ಬದಲಾಯಿಸುತ್ತಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry