6

ಬದಲಾಗುತ್ತಿದೆ ಸ್ಮಾರ್ಟ್‌ ಚಾರ್ಜಿಂಗ್ ಪೋರ್ಟ್

Published:
Updated:
ಬದಲಾಗುತ್ತಿದೆ ಸ್ಮಾರ್ಟ್‌ ಚಾರ್ಜಿಂಗ್ ಪೋರ್ಟ್

ಮೊಬೈಲ್, ಲ್ಯಾಪ್‌ಟಾಪ್‌ಗಳ ಬ್ಯಾಟರಿ ಬೇಗ ಚಾರ್ಜ್ ಆಗುತ್ತಿಲ್ಲ; ಸದಾ ಚಾರ್ಜರ್‌ಗಳನ್ನು ಹೊತ್ತು ತಿರುಗಲು ಆಗಲ್ಲ; ಅನೇಕ ಬಾರಿ ಸರಿಯಾದ ಚಾರ್ಜಿಂಗ್ ಪಿನ್ ಸಿಗಲ್ಲ ಎಂಬ ಸಮಸ್ಯೆಗೆ ಕೊನೆ ಹಾಡಲು ಬಂದಿದೆ ಹೊಸ ಚಾರ್ಜಿಂಗ್ ಪೋರ್ಟ್. ಅದುವೇ ಯುಎಸ್‌ಬಿ

‘ಟೈಪ್ ಸಿ’.

ಇದು ‘ಟೈಪ್ ಬಿ’ನ ಸುಧಾರಿತ ಆವೃತ್ತಿಯಾಗಿದ್ದು, 24 ಮೈಕ್ರೊ ಪಿನ್‌ ಒಳಗೊಂಡಂತೆ ಎಲ್ಲಾ ಡಿವೈಸ್‌ಗಳನ್ನೂ ಸಂಪರ್ಕಿಸುವ ರೀತಿಯಲ್ಲಿ ವಿನ್ಯಾಸ ಮಾಡಲಾಗಿದೆ. ಹೆಡ್‌ಫೋನ್ ಮತ್ತು ಚಾರ್ಜಿಂಗ್‌ಗೆ ಪ್ರತ್ಯೇಕ ಪೋರ್ಟ್ ಬೇಡ, ಇವೆರಡಕ್ಕೂ ಒಂದೇ ಪೋರ್ಟ್ ಇದ್ದರೆ ಚೆನ್ನ ಎನ್ನುವವರಿಗೆ ಇದು ಉಪಯುಕ್ತ.

ಈ ಹಿಂದೆ ಅನೇಕ ಪೋರ್ಟ್‌ಗಳನ್ನು ಒಂದೇ ಡಿವೈಸ್‌ನಲ್ಲಿ ಅಳವಡಿಸುವುದರಿಂದ ಗಾತ್ರ ಸಹ ಹಿಗ್ಗುತ್ತಿತ್ತು. ಆದರೆ, ಎಲ್ಲ ಪೋರ್ಟ್‌ಗಳ ಕಾರ್ಯವನ್ನು ಮಾಡುವ ಯುಎಸ್‌ಬಿ ‘ಟೈಪ್ ಸಿ’ ಬಳಕೆಯಿಂದ ಲ್ಯಾಪ್‌ಟಾಪ್‌, ಮೊಬೈಲ್ ವಿನ್ಯಾಸವು ತೆಳುವಾಗಲಿದ್ದು ಗ್ರಾಹಕರನ್ನು ಆಕರ್ಷಿಸುತ್ತಿದೆ.

ಮಾರುಕಟ್ಟೆಗೆ ಲಗ್ಗೆ ಇಡುತ್ತಿರುವ ಹೊಸ ಗ್ಯಾಜೆಟ್‌ಗಳೆಲ್ಲವೂ ಇದೇ ಮಾದರಿ ಅನುಸರಿಸುತ್ತಿದ್ದು, ಗ್ರಾಹಕಸ್ನೇಹಿಯಾಗಿವೆ.

ಈ ಪೋರ್ಟ್‌ನಿಂದ ಚಾರ್ಜಿಂಗ್ ಮತ್ತು ಡೇಟಾ ವಿನಿಮಯವನ್ನು ಏಕಕಾಲದಲ್ಲಿ ಮಾಡಬಹುದು. ತ್ವರಿತವಾಗಿ ಚಾರ್ಜಿಂಗ್ ಆಗುವಂತೆ ಅದನ್ನು ವಿನ್ಯಾಸ ಮಾಡಲಾಗಿದ್ದು, ಪ್ರತಿ ಸೆಕೆಂಡಿಗೆ 10 ಜಿ.ಬಿಯಷ್ಟು ಡೇಟಾ ವರ್ಗಾಯಿಸಬಹುದು. ಚಾರ್ಜಿಂಗ್ ಪಿನ್ ಬಹುಬೇಗ ಹಾಳಾಗುವುದಿಲ್ಲ, ರಿವರ್ಸಬೆಲ್ (ಉಲ್ಟಾ ಪಲ್ಟಾ) ಆಗಿ ಸಂಪರ್ಕಿಸುವಂತೆ ವಿನ್ಯಾಸ ಮಾಡಲಾಗಿದೆ.

ತನ್ನ ಉತ್ಪನ್ನಗಳಿಗೆ ಯುಎಸ್‌ಬಿ ಮಾದರಿಯನ್ನು ಅಳವಡಿಸಲು ಹಿಂಜರಿಯುತ್ತಿದ್ದ ಆಪಲ್ ಸಂಸ್ಥೆಯೂ ಮ್ಯಾಕ್ ಬುಕ್ ಲ್ಯಾಪ್‌ಟಾಪ್‌ಗಳಿಗೆ ‘ಟೈಪ್ ಸಿ’ಯನ್ನು ಪರಿಚಯಿಸಿದೆ.

ಈ ಮೊದಲು ಲ್ಯಾಪ್‌ಟಾಪ್‌ಗೆ ಹೆಚ್ಚುವರಿ ಮಾನಿಟರ್ ಜೋಡಿಸಬೇಕಿದ್ದರೆ ವಿಜಿಐ, ಡಿವಿಐ, ಎಚ್‌ಡಿಎಂಐ ಕನೆಕ್ಟರ್ ಅಗತ್ಯವಿತ್ತು. ಆದರೆ ಈ ‘ಟೈಪ್ ಸಿ’ ಮಾದರಿಯಲ್ಲಿ ಕನೆಕ್ಟರ್‌ಗಳ ಅವಶ್ಯಕತೆ ಇಲ್ಲದೇ ಸಂಪರ್ಕಿಸಿ ಉಪಯೋಗಿಸಬಹುದಾಗಿದೆ.

ನಾವು ‘ಟೈಪ್ ಬಿ’ ಪೋರ್ಟ್ ಡಿವೈಸ್‌ಗಳನ್ನು ಹೊಂದಿದ್ದೇವೆ, ‘ಟೈಪ್ ಸಿ’ ಗ್ಯಾಜೆಟ್‌ಗಳೊಂದಿಗೆ ಹೇಗೆ ಜೋಡಿಸುವುದು ಎಂಬ ಸಮಸ್ಯೆಗೂ ಪರಿಹಾರವಿದೆ. ಹಳೇ ಮಾದರಿಗಳ ಪಿನ್‌ಗಳಿಗೆ ಹೊಂದಿಕೊಳ್ಳುವಂತಹ ಸಣ್ಣ ಕನೆಕ್ಟರ್‌ಗಳು ಸಹ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಅವುಗಳ ಮೂಲಕ ‘ಟೈಪ್ ಸಿ’ ಅನುಕೂಲತೆಗಳನ್ನು ಪಡೆಯಬಹುದಾಗಿದೆ.

ಮಾರ್ಚ್‌ನಲ್ಲಿ ಯೂಟ್ಯೂಬ್‌ ರಿಮಿಕ್ಸ್‌

ಇಂಟರ್‌ನೆಟ್‌ ದೈತ್ಯ ಗೂಗಲ್‌ನ ಅಂಗಸಂಸ್ಥೆಯಾದ ಯೂಟ್ಯೂಬ್‌ ಮುಂದಿನ ವರ್ಷ ಮಾರ್ಚ್‌ ತಿಂಗಳಲ್ಲಿ ಪೇಡ್‌ ಮ್ಯೂಸಿಕ್‌ ಚಾನಲ್‌ ಆರಂಭಿಸಲು ಸಿದ್ಧತೆ ನಡೆಸಿದೆ.

ಜಗತ್ತಿನ ಪ್ರಮುಖ ಮ್ಯೂಸಿಕ್‌ ಕಂಪನಿಗಳ ಜತೆ ಮಾತುಕತೆಯಲ್ಲಿ ನಿರತವಾಗಿರುವ ಯೂಟ್ಯೂಬ್‌ ಸಂಸ್ಥೆಯು ಈಗಾಗಲೇ ವಾರ್ನರ್‌, ಸೋನಿ, ಯೂನಿವರ್ಸಲ್‌ ಮ್ಯೂಸಿಕ್‌ ಕಂಪನಿಗಳ ಜತೆ ಒಪ್ಪಂದಕ್ಕೆ ಸಹಿ ಹಾಕಿದೆ.

ಮಾರ್ಚ್‌ನಲ್ಲಿ ಲಾಂಚ್‌ ಆಗಲಿರುವ ಯೂಟ್ಯೂಬ್‌ ರಿಮಿಕ್ಸ್‌, ಪ್ರಸ್ತುತ ಬಳಕೆಯಲ್ಲಿರುವ ಗೂಗಲ್‌ ಪ್ಲೇ ಮ್ಯೂಸಿಕ್‌ ಮತ್ತು ಯೂಟ್ಯೂಬ್‌ ರೆಡ್‌ನ ಮಿಶ್ರಿತ ಆವೃತ್ತಿ ಆಗಿರಲಿದೆ.

ಸತತ ಮೂರನೇ ಬಾರಿಗೆ ಪೇಡ್‌ ಮ್ಯೂಸಿಕ್‌ ಚಾನಲ್‌ ಸ್ಥಾಪಿಸಲು ನಿರತವಾಗಿರುವ ಯೂಟ್ಯೂಬ್‌ ಈ ಹಿಂದೆ ಅಷ್ಟರ ಮಟ್ಟಿಗೆ ಯಶಸ್ಸು ಕಂಡಿರಲಿಲ್ಲ, ಸಂಸ್ಥೆಯ ಆರ್ಥಿಕ ಮಟ್ಟವನ್ನು ಹೆಚ್ಚಿಸಲು ಹೊಸ ಯೋಜನೆಗಳನ್ನು ರೂಪಿಸುತ್ತಿರುವ ಯೂಟ್ಯೂಬ್‌ ವಿಶೇಷವಾಗಿ ಮ್ಯೂಸಿಕ್‌ ಪ್ರಿಯರನ್ನು ಗಮನದಲ್ಲಿ ಇರಿಸಿಕೊಂಡು ಚಾನಲ್‌ ಬಿಡುಗಡೆ ಮಾಡುತ್ತಿದೆ.

ತನ್ನ ಹೊಸ ಸೇವೆಯನ್ನು ಬೇಗ ಪ್ರಚಾರ ಮಾಡಿ ಗ್ರಾಹಕರ ಗಮನ ಸೆಳೆಯಲು ಖ್ಯಾತ ಕಲಾವಿದರ ಸಂಗೀತವನ್ನು ಆಪಲ್‌ ಸಂಸ್ಥೆಯ ಐ ಟ್ಯೂನ್ಸ್‌ ಮಾದರಿಯಲ್ಲಿ ರಿಮಿಕ್ಸ್‌ ಚಾನಲ್‌ನಲ್ಲಿ ಅಳವಡಿಸಲಿದೆ. ಈಗಾಗಲೇ ಪ್ರಸಿದ್ಧ ಪಡೆದಿರುವ ಮ್ಯೂಸಿಕ್‌ ವಿಡಿಯೊಗಳಿಗೆ ತನ್ನ ಹೊಸ ಅವತರಣಿಕೆಯಲ್ಲಿ ಸ್ಥಾನ ಕಲ್ಪಿಸಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry