7

ವ್ಯಕ್ತಿ ಚಿತ್ರಣಕ್ಕೆ ಹೇಳಿಮಾಡಿಸಿದ ಲೆನ್ಸ್

ಯು.ಬಿ. ಪವನಜ
Published:
Updated:
ವ್ಯಕ್ತಿ ಚಿತ್ರಣಕ್ಕೆ ಹೇಳಿಮಾಡಿಸಿದ ಲೆನ್ಸ್

ಒಂದು ಕಾಲದಲ್ಲಿ ಫಿಲ್ಮ್ ಕ್ಯಾಮೆರಾಗಳಿದ್ದವು. ಆ ಕಾಲದಲ್ಲೂ ಸಾಮಾನ್ಯ ಏಮ್-ಆಂಡ್-ಶೂಟ್ ಕ್ಯಾಮೆರಾ ಮತ್ತು ವೃತ್ತಿನಿರತರು ಬಳಸುತ್ತಿದ್ದ ಎಸ್‌ಎಲ್‌ಆರ್ ಕ್ಯಾಮೆರಾಗಳಿದ್ದವು. ಎಸ್‌ಎಲ್‌ಆರ್ ಅಂದರೆ single lens reflect. ಈ ನಮೂನೆಯ ಕ್ಯಾಮೆರಾಗಳಲ್ಲಿ ಫೋಟೊ ತೆಗೆಯುತ್ತಿರುವ ದೃಶ್ಯವನ್ನು ನೋಡಲು ಒಂದು, ಚಿತ್ರೀಕರಣಕ್ಕೆ ಇನ್ನೊಂದು ಮಸೂರ (ಲೆನ್ಸ್) ಇರುವುದಿಲ್ಲ. ಈ ನಮೂನೆಯ ಕ್ಯಾಮೆರಾಗಳಲ್ಲಿ ಲೆನ್ಸ್‌ಗಳನ್ನು ಬದಲಿಸಬಹುದು. ಈಗಿನ ಕಾಲದಲ್ಲಿ ಫಿಲ್ಮ್ ಕ್ಯಾಮೆರಾಗಳ ಬಳಕೆ ಇಲ್ಲವೇ ಇಲ್ಲ ಎನ್ನುವಂತಾಗಿದೆ. ಈ ಎಸ್‌ಎಲ್‌ಆರ್ ಕ್ಯಾಮೆರಾಗಳ ಡಿಜಿಟಲ್ ಅವತಾರವನ್ನೇ ಡಿಎಸ್‌ಎಲ್‌ಆರ್ ಕ್ಯಾಮೆರಾ ಎನುವುದು. ಈ ಕ್ಯಾಮೆರಾಗಳಲ್ಲೂ ಲೆನ್ಸ್ ಬದಲಿಸಬಹುದು. ಬೇರೆ ಬೇರೆ ಕೆಲಸಗಳಿಗೆ ಬೇರೆ ಬೇರೆ ಲೆನ್ಸ್‌ಗಳು ಮಾರುಕಟ್ಟೆಯಲ್ಲಿ ದೊರೆಯುತ್ತವೆ.

ಎಲ್ಲ ನಮೂನೆಯ ಕೆಲಸಗಳಿಗೆ ಬಳಸಬಹುದಾದ ಲೆನ್ಸ್‌ಗಳನ್ನು ಬಹುತೇಕ ಮಂದಿ ಸಾಮಾನ್ಯವಾಗಿ ಬಳಸುತ್ತಾರೆ. ಇವುಗಳ ಫೋಕಲ್ ಲೆಂತ್ ಬದಲಿಸಬಹುದು. ಇವುಗಳಿಗೆ ಝೂಮ್ ಲೆನ್ಸ್ ಎನ್ನುತ್ತಾರೆ. ಈ ನಮೂನೆಯ ಲೆನ್ಸ್‌ಗಳ ಒಂದು ಬಾಧಕ ಎಂದರೆ ಅವುಗಳ ಎಫ್ ಸಂಖ್ಯೆ ಜಾಸ್ತಿ ಇರುವುದು. ಉದಾಹರಣೆಗೆ ಎಫ್ 3.5 ರಿಂದ 5.6 ತನಕ, ಅಂದರೆ ಈ ಲೆನ್ಸ್‌ಗಳು ಕಡಿಮೆ ಬೆಳಕನ್ನು ಒಳಬಿಡುತ್ತವೆ ಎಂದು ಅರ್ಥ. ಇನ್ನೊಂದು ನಮೂನೆಯ ಲೆನ್ಸ್‌ಗಳಲ್ಲಿ ಅವುಗಳ ಫೋಕಲ್ ಲೆಂತ್ ಬದಲಿಸಲು ಆಗುವುದಿಲ್ಲ. ಇಂತಹ ಲೆನ್ಸ್‌ಗಳ ಎಫ್ ಸಂಖ್ಯೆ ಕಡಿಮೆ ಇರುತ್ತದೆ.

ಉದಾಹರಣೆಗೆ ಎಫ್ 1.4, 1.8, ಇತ್ಯಾದಿ. ಈ ಎಫ್ ಸಂಖ್ಯೆ ಕಡಿಮೆ ಇದ್ದಷ್ಟು ಅದು ಹೆಚ್ಚು ಬೆಳಕನ್ನು ಒಳಬಿಡುತ್ತದೆ ಎಂದು ತಿಳಿಯಬೇಕು. ಇಂತಹ ಸ್ಥಿರ ಫೋಕಲ್ ಲೆಂತ್‌ನ ಲೆನ್ಸ್‌ಗಳಿಗೆ ಪ್ರೈಮ್ ಲೆನ್ಸ್ ಎಂದೂ ಕರೆಯುತ್ತಾರೆ. ಈ ಲೆನ್ಸ್‌ಗಳನ್ನು ಬಹು ಮಟ್ಟಿಗೆ ವ್ಯಕ್ತಿಚಿತ್ರಣಕ್ಕೆ (portrait photography) ಬಳಸುತ್ತಾರೆ.

ಅಂತಹ ಒಂದು ಲೆನ್ಸ್ ಸಿಗ್ಮ 135 ಮಿ.ಮೀ. ಎಫ್/1.8 ಪ್ರೈಮ್ ಲೆನ್ಸ್ (Sigma 135mm F/1.8 DG HSM Art Lens) ನಮ್ಮ ಈ ವಾರದ ಗ್ಯಾಜೆಟ್.

ಲೆನ್ಸ್ ನೋಡಲು ಸುಂದರವಾಗಿದೆ. ರಚನೆ ಮತ್ತು ವಿನ್ಯಾಸ ಎಲ್ಲ ದುಬಾರಿ ಲೆನ್ಸ್‌ಗಳಂತೆ ಚೆನ್ನಾಗಿಯೇ ಇದೆ. ಲೆನ್ಸ್ ತುಂಬ ತೂಕ ಇದೆ. ಕ್ಯಾಮೆರಾಕ್ಕೆ ಜೋಡಿಸಿ ಕುತ್ತಿಗೆಗೆ ನೇತುಹಾಕಿಕೊಂಡರೆ ಸುಮಾರು ಒಂದೂಮುಕ್ಕಾಲು ಕಿಲೋ ತೂಕ ನಿಮ್ಮ ಕುತ್ತಿಗೆಗೆ ಬಿದ್ದಿರುತ್ತದೆ.

ಈ ಲೆನ್ಸ್ ಬೇರೆ ಬೇರೆ ಕ್ಯಾಮೆರಾಗಳಿಗೆ ಸರಿಹೊಂದುವ ಜೋಡಣೆಯೊಂದಿಗೆ (ಮೌಂಟ್) ಬರುತ್ತದೆ. ನನಗೆ ವಿಮರ್ಶೆಗೆ ಬಂದುದು ಕ್ಯಾನನ್ ಡಿಎಸ್‌ಎಲ್‌ಆರ್ ಕ್ಯಾಮೆರಾದ ಜೋಡಣೆಯೊಂದಿಗೆ ಇರುವಂತದ್ದು. ನನ್ನಲ್ಲಿ ಇರುವುದು ಕ್ಯಾನನ್ 1000ಡಿ ಡಿಎಸ್‌ಎಲ್‌ಆರ್ ಕ್ಯಾಮೆರಾ. ಇದು ಪೂರ್ತಿ ಫ್ರೇಂ ಡಿಎಸ್‌ಎಲ್‌ಆರ್ ಕ್ಯಾಮೆರಾ ಅಲ್ಲ. ಈ ಲೆನ್ಸ್‌ನ ಪೂರ್ತಿ ಪ್ರಯೋಜನ ಪಡೆಯಬೇಕಾದರೆ ಇದನ್ನು ಪೂರ್ತಿ ಫ್ರೇಂ ಡಿಎಸ್‌ಎಲ್‌ಆರ್ ಕ್ಯಾಮೆರಾಕ್ಕೆ ಜೋಡಿಸಬೇಕು. ಕ್ಯಾನನ್ 1000ಡಿ ಕ್ಯಾಮೆರಾ ಕ್ಯಾನನ್ ಕಂಪನಿಯ ಡಿಎಸ್‌ಎಲ್‌ಆರ್ ಕ್ಯಾಮೆರಾಗಳಲ್ಲಿ ಪ್ರವೇಶ ಮಟ್ಟದ್ದು. ಆದರೂ ಈ ಲೆನ್ಸ್ ಜೋಡಿಸಿ ಫೋಟೊ ತೆಗೆದರೆ ವ್ಹಾ ಎನ್ನಬಹುದಾದ ಫೋಟೊಗಳು ಮೂಡಿಬರುತ್ತವೆ.

ಇದರಲ್ಲಿ ಮೂರು ನಮೂನೆಯಲ್ಲಿ ದೂರದ ಆಯ್ಕೆಯನ್ನು ಮಾಡಿಕೊಳ್ಳಬಹುದು – 0.875 -1.5 ಮೀ., 1.5 ಮೀ. –ಅನಂತ ಮತ್ತು ಪೂರ್ತಿ. 0.875 -1.5 ಮೀ. ಎಂದು ಆಯ್ಕೆ ಮಾಡಿಕೊಂಡರೆ ವಸ್ತು ಕ್ಯಾಮೆರಾದಿಂದ 87.5 ಸೆ.ಮೀ. ಮತ್ತು 1.5 ಮೀ. ದೂರದ ಒಳಗೆ ಇರತಕ್ಕದ್ದು. 87.5 ಸೆ.ಮೀ.ಗಿಂತ ಹತ್ತಿರದ ವಸ್ತುಗಳ ಫೋಟೊವನ್ನು ಈ ಲೆನ್ಸ್ ಬಳಸಿ ತೆಗೆಯಲು ಸಾಧ್ಯವಿಲ್ಲ.

ಇದು ವೃತ್ತಿನಿರತರಿಗೆ ಹೆಚ್ಚು ಆಪ್ಯಾಯಮಾನವಾಗಬಹುದಾದ ಲೆನ್ಸ್. ಇದು ಅವರಿಗಾಗಿಯೆಂದೇ ತಯಾರಾಗಿರುವ ವಿಶೇಷ ಲೆನ್ಸ್. ಇದನ್ನು ಎಲ್ಲ ನಮೂನೆಯ ಫೋಟೊಗಳನ್ನು ತೆಗೆಯಲು ಬಳಸಬಹುದು. ಉದಾಹರಣೆಗೆ, ಪ್ರಕೃತಿ, ಹೂವು, ವ್ಯಕ್ತಿ ಚಿತ್ರಣ, ಅತಿ ಕಡಿಮೆ ಬೆಳಕಿನಲ್ಲಿ ಛಾಯಾಗ್ರಹಣ, ಇತ್ಯಾದಿ. ಆಟೊಫೋಕಸಿಂಗ್ ವಿಧಾನದಲ್ಲಿ ವಸ್ತುಗಳಿಗೆ ಅತ್ಯಂತ ನಿಖರವಾಗಿ ಫೋಕಸ್ ಆಗುತ್ತದೆ. ಕೆಲವೊಮ್ಮೆ ಮ್ಯಾನ್ಯುವಲ್ ವಿಧಾನದಲ್ಲೂ ಫೋಕಸ್ ಮಾಡಬೇಕಾಗುತ್ತದೆ. ಅಂತಹ ಸಂದರ್ಭಗಳಲ್ಲೂ ಫೋಕಸ್ ಅತಿ ನಿಖರವಾಗಿರುತ್ತದೆ. ಈ ಸಿಗ್ಮ ಲೆನ್ಸ್ ಅತಿ ವೇಗವಾಗಿ ಮತ್ತು ನಿಖರವಾಗಿ ಫೋಕಸ್ ಮಾಡುತ್ತದೆ.

ಇದರ ಫೋಕಲ್ ಲೆಂತ್ ಸ್ವಲ್ಪ ಹೆಚ್ಚೇ (135 ಮಿ.ಮೀ.) ಇರುವುದರಿಂದ ಸ್ವಲ್ಪ ಜಾಸ್ತಿ ಕವಾಟದ ತೆರೆಯುವಿಕೆ (ಅಪೆರ್ಚರ್) ಇಟ್ಟುಕೊಂಡರೆ ಆಗ ವಸ್ತು ಮಾತ್ರ ಸ್ಪಷ್ಟವಾಗಿದ್ದು ಹಿನ್ನೆಲೆ ಮಸುಕಾಗುತ್ತದೆ. ಇದಕ್ಕೆ ಡೆಪ್ತ್ ಆಫ್ ಫೀಲ್ಡ್ ಎನ್ನುತ್ತಾರೆ. ಆದುದರಿಂದ ಇದು ವ್ಯಕ್ತಿಚಿತ್ರಣಕ್ಕೆ ಮತ್ತು ಹೂವು, ಮಾರಾಟಕ್ಕಿಟ್ಟ ವಸ್ತುಗಳು, ಮಾಡೆಲ್ ಫೋಟೊಗ್ರಫಿ, ಇತ್ಯಾದಿಗಳಿಗೆ ಉತ್ತಮ ಲೆನ್ಸ್. ಇದನ್ನು ಮಧ್ಯಮ ಫೋಕಲ್ ಲೆಂತ್‌ನ ಟೆಲಿಫೋಟೊ ಲೆನ್ಸ್ ಎಂದೂ ಕರೆಯಬಹುದು.

ಈ ಲೆನ್ಸ್ ಹೆಚ್ಚು ಪ್ರಖ್ಯಾತವಾಗಿರುವುದು ವ್ಯಕ್ತಿಚಿತ್ರಣಕ್ಕೆ. ಆದುರಿಂದಲೇ ಇದಕ್ಕೆ ಪೋರ್ಟ್ರೇಟ್‌ ಲೆನ್ಸ್ ಎಂಬ ಹೆಸರೂ ಇದೆ. ವ್ಯಕ್ತಿಚಿತ್ರಣಕ್ಕೆ ಇದು ನಿಜಕ್ಕೂ ಅತ್ಯುತ್ತಮ ಲೆನ್ಸ್ ಎನ್ನುವುದರಲ್ಲಿ ಎರಡು ಮಾತಿಲ್ಲ. ಅತಿ ಕಡಿಮೆ ಬೆಳಕಿನಲ್ಲೂ, ಮನೆಯ ಒಳಗಡೆ ದೀಪದ ಬೆಳಕಿನಲ್ಲೂ, ಉತ್ತಮ ಪೋರ್ಟ್ರೇಟ್‌ ಫೋಟೊ ತೆಗೆಯಬಹುದು.

ಒಟ್ಟಿನಲ್ಲಿ ಹೇಳುವುದಾದರೆ, ಸ್ವಲ್ಪ ದುಬಾರಿ ಎನ್ನಬಹುದಾದರೂ, ಇದರ ಗುಣಮಟ್ಟಕ್ಕೆ ಹೋಲಿಸಿದರೆ, ಇದು ನಿಜಕ್ಕೂ ನೀಡುವ ಹಣಕ್ಕೆ ಉತ್ತಮ ಕೊಳ್ಳುವಿಕೆ (value for money) ಎನ್ನಬಹುದು.

***

ವಾರದ ಆ್ಯಪ್:  ಉಚಿತ ವಿ-ಪುಸ್ತಕಗಳು

ವಿದ್ಯುನ್ಮಾನ ಮಾಧ್ಯಮದಲ್ಲಿ ಲಭ್ಯವಿರುವ ಪುಸ್ತಕವನ್ನು ವಿ-ಪುಸ್ತಕ ಅಥವಾ ಇ-ಬುಕ್ ಎನ್ನುತ್ತಾರೆ. ಇವುಗಳನ್ನು ಓದಲು ಹಲವು ಸಾಧನಗಳು ಲಭ್ಯವಿವೆ. ಸ್ಮಾರ್ಟ್‌ಫೋನಿನಲ್ಲಿ ಇವುಗಳನ್ನು ಓದಲು ಹಲವು ಕಿರುತಂತ್ರಾಂಶಗಳು (ಆ್ಯಪ್‌) ಲಭ್ಯವಿವೆ. ನಿಮಗೆ ಹಲವು ವಿ-ಪುಸ್ತಕಗಳು ಉಚಿತವಾಗಿ ಬೇಕೇ? ಹಾಗಿದ್ದರೆ ನೀವು ಗೂಗಲ್‌ ಪ್ಲೇ ಸ್ಟೋರಿನಲ್ಲಿ 50000 Free eBooks & Free AudioBooks ಎಂದು ಹುಡುಕಬೇಕು ಅಥವಾ http://bit.ly/gadgetloka307 ಜಾಲತಾಣಕ್ಕೆ ಭೇಟಿ ನೀಡಬೇಕು. ಇದರಲ್ಲಿ ಪ್ರಾಜೆಕ್ಟ್ ಗುಟೆನ್‌ಬರ್ಗ್‌ನಲ್ಲಿ ಇರುವ ಪುಸ್ತಕಗಳಲ್ಲದೆ ಇತರೆ ಉಚಿತ ಪುಸ್ತಕಗಳೂ ಇವೆ. ಹಿಂದಿ ಭಾಷೆಯ ಪುಸ್ತಕಗಳು ಇರುವುದನ್ನು ಗಮನಿಸಿದೆ. ಆದರೆ ಕನ್ನಡ ಭಾಷೆಯ ಪುಸ್ತಕಗಳು ನನಗೆ ಕಂಡುಬರಲಿಲ್ಲ. ವಿ-ಪುಸ್ತಕಗಳಲ್ಲದೆ ಆಡಿಯೊ ಪುಸ್ತಕಗಳೂ ಇದರಲ್ಲಿವೆ.

***

ಗ್ಯಾಜೆಟ್ ತರ್ಲೆ

ಕೆಲಸದ ಅವಧಿ ಮುಗಿದ ನಂತರವೂ ಕೆಲಸ ಮಾಡುತ್ತಿರುವ ಉದ್ಯೋಗಿಗಳನ್ನು ಮನೆಗೆ ಕಳುಹಿಸಿಲು ಜಪಾನ್ ದೇಶದಲ್ಲಿ ಉದ್ಯೋಗಿಯ ತಲೆ ಮೇಲೆ ಹಾರಾಡುತ್ತ ಕಿರುಚುವ ಡ್ರೋನ್ ಬಳಸಲು ಪ್ರಾರಂಭಿಸುತ್ತಿದ್ದಾರೆ. ಎಷ್ಟೆಂದರೂ ಅವರು ಜಪಾನಿಗಳು ತಾನೆ? ಅಂದ ಮೇಲೆ ಗ್ಯಾಜೆಟ್ ಪ್ರಿಯರೂ ಆಗಿರಲೇಬೇಕಲ್ಲವೇ? ಕಂಪನಿ ಚಾಪೆ ಕೆಳಗೆ ನುಗ್ಗಿದರೆ ಉದ್ಯೋಗಿ ರಂಗೋಲಿ ಕೆಳಗೆ ನುಗ್ಗುತ್ತಾರೆ. ಅವರೇನು ಮಾಡುತ್ತಾರೆ ಗೊತ್ತಾ? ಕಿವಿಗೆ ಶಬ್ದನಿವಾರಕ ಹೆಡ್‌ಫೋನ್ ಹಾಕಿಕೊಂಡು ಕೆಲಸ ಮಾಡುತ್ತಾರೆ!

***

ಗ್ಯಾಜೆಟ್ ಸಲಹೆ

ಟಿ.ಜಿ. ವಿಶ್ವನಾಥರ ಪ್ರಶ್ನೆ: ನನಗೆ ಕಿವಿಯ ಶಸ್ತ್ರಚಿಕಿತ್ಸೆ ಫಲಕಾರಿಯಾಗದೆ ಕಿವಿ ಸರಿಯಾಗಿ ಕೇಳಿಸದೆ ತೊಂದರೆ ಆಗಿದೆ. ಉತ್ತಮ ಧ್ವನಿಯ ಫೋನ್ ಮತ್ತು ಇಯರ್‌ಫೋನ್ ಬಳಸಬೇಕಾಗಿದೆ. ಯಾವ ಫೋನ್ ಮತ್ತು ಇಯರ್‌ಫೋನ್ ಬಳಸಬಹುದು?

ಉ: ನೀವು ವಿವೊ ವಿ1 ಮ್ಯಾಕ್ಸ್ ಫೋನ್ ಬಳಸಬಹುದು. ಇದರ ವಿಮರ್ಶೆ ಗ್ಯಾಜೆಟ್‌ಲೋಕದಲ್ಲಿ ಪ್ರಕಟವಾಗಿತ್ತು (ಸೆಪ್ಟೆಂಬರ್ 24, 2015). ಜೊತೆಗೆ ಕ್ರಿಯೇಟಿವ್ ಇಪಿ 630 ಇಯರ್‌ಬಡ್ ಬಳಸಬಹುದು.

***

ಗ್ಯಾಜೆಟ್ ಸುದ್ದಿ : ಅಧಿಕ ಕೆಲಸ ಮಾಡುವವರನ್ನು ಮನೆಗೆ ತಳ್ಳುವ ಡ್ರೋನ್

ಜಪಾನ್ ದೇಶದಲ್ಲಿ ವಿಚಿತ್ರ ಸಮಸ್ಯೆಯಿದೆ. ಅಲ್ಲಿ ಕೆಲಸಗಾರರು ಮನೆಗೆ ಹೋಗುವುದೇ ಇಲ್ಲ. ಕಚೇರಿಯಲ್ಲೇ ಹೆಚ್ಚು ಹೆಚ್ಚು ಸಮಯ ಕಳೆಯುತ್ತಾರೆ. ಇದರಿಂದಾಗಿ ಕೌಟುಂಬಿಕ ಹಾಗೂ ಮಾನಸಿಕ ಸಮಸ್ಯೆಗಳು ಹೆಚ್ಚುತ್ತಿವೆ. ಕೆಲಸಗಾರರನ್ನು ಮನೆಗೆ ಕಳುಹಿಸಲು, ರಜೆ ತೆಗೆದುಕೊಳ್ಳುವಂತೆ ಮಾಡಲು ಕಂಪನಿಗಳು ಪ್ರಯತ್ನಿಸುತ್ತಲೇ ಇವೆ. ಈ ಸಾಲಿಗೆ ಹೊಸದಾಗಿ ಒಂದು ಡ್ರೋನ್ ಸೇರ್ಪಡೆಯಾಗಿದೆ. ಇದು ಕೆಲಸದ ಅವಧಿ ಮುಗಿದ ನಂತರವೂ ಕಚೇರಿಯಲ್ಲಿರುವವರ ತಲೆ ಮೇಲೆ ಹಾರುತ್ತ ಜೋರಾಗಿ ಕೆಟ್ಟ ಸಂಗೀತ ಪ್ಲೇ ಮಾಡುತ್ತದೆ. ಇದರ ಕಾಟ ತಡೆಯಲಾರದೆ ಉದ್ಯೋಗಿ ಮನೆಗೆ ತೆರಳಬಹುದು ಎಂಬುದು ಅವರ ಆಲೋಚನೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry