ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಂಕ್‌ ಠೇವಣಿ ಸುರಕ್ಷತೆ: ಅನುಮಾನ ಪರಿಹರಿಸಬೇಕು

Last Updated 13 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಕೇಂದ್ರ ಸರ್ಕಾರ ಕಳೆದ ಆಗಸ್ಟ್‌ನಲ್ಲಿ ಲೋಕಸಭೆಯಲ್ಲಿ ಮಂಡಿಸಿದ ‘ಹಣಕಾಸು ಪರಿಹಾರ ಮತ್ತು ಠೇವಣಿ ವಿಮೆ ಮಸೂದೆ’ ಜನಸಾಮಾನ್ಯರಲ್ಲಿ ಸಹಜವಾಗಿಯೇ ಒಂದಿಷ್ಟು ಅನುಮಾನ ಹುಟ್ಟಿಸಿದೆ. ಮಸೂದೆಯಲ್ಲಿನ ‘ಬೇಲ್‌ ಇನ್‌’ ಪ್ರಸ್ತಾವವೇ ಈ ಎಲ್ಲ ಕಳವಳದ ಕೇಂದ್ರ ಬಿಂದು. ದಿವಾಳಿ ಏಳುವ ಸಂದರ್ಭ ಬಂದರೆ ಠೇವಣಿದಾರರ ಹಣವನ್ನು ಪೂರ್ಣವಾಗಿ ಅಥವಾ ಭಾಗಶಃ ಬಳಸಿಕೊಳ್ಳಲು ಇದು ಆಯಾ ಬ್ಯಾಂಕ್‌ಗೆ ಅವಕಾಶ ಕೊಡುತ್ತದೆ. ಹೀಗಾಗಿ ತಾವಿಟ್ಟ ಹಣಕ್ಕೆ ಎಲ್ಲಿ ಸಂಚಕಾರ ಬರುತ್ತದೆಯೋ ಎಂದು ಜನ ಆತಂಕಪಟ್ಟಿದ್ದರೆ ಅದು ಸ್ವಾಭಾವಿಕ. ‘ಬ್ಯಾಂಕ್‌ಗಳಲ್ಲಿ ಜನ ಇಟ್ಟಿರುವ ಠೇವಣಿಗಳಿಗೆ ಸರ್ಕಾರ ಪೂರ್ಣ ಸುರಕ್ಷತೆ ಒದಗಿಸುತ್ತದೆ; ಯಾರೂ ಭಯಪಡುವ ಅಗತ್ಯವಿಲ್ಲ’ ಎಂದು ಹಣಕಾಸು ಸಚಿವ ಅರುಣ್‌ ಜೇಟ್ಲಿ ಭರವಸೆಯನ್ನೇನೋ ಕೊಟ್ಟಿದ್ದಾರೆ. ಮಸೂದೆಯಲ್ಲಿ ಮಾರ್ಪಾಡಿಗೆ ಸರ್ಕಾರ ಮುಕ್ತ ಮನಸ್ಸು ಹೊಂದಿದೆ ಎಂದೂ ಹೇಳಿದ್ದಾರೆ. ಅಂದರೆ ಮಾರ್ಪಾಡಿನ ಅಗತ್ಯ ಇದೆ ಎನ್ನುವುದು ಅವರಿಗೂ ಅರಿವಾದಂತಿದೆ. ಮಸೂದೆ ಇನ್ನೂ ಅಂಗೀಕಾರವಾಗಿಲ್ಲ. ಜಂಟಿ ಸಂಸದೀಯ ಸಮಿತಿಯ ಪರಾಮರ್ಶೆಗೆ ಒಪ್ಪಿಸಲಾಗಿದೆ. ಆದ್ದರಿಂದ ಅಂತಿಮ ರೂಪ ಕೊಡುವ ಅಥವಾ ಅಂಗೀಕರಿಸುವ ಹಂತದಲ್ಲಿ ಠೇವಣಿದಾರರ ಕಳವಳವನ್ನು ಸರ್ಕಾರ ಪರಿಗಣನೆಗೆ ತೆಗೆದುಕೊಳ್ಳಬೇಕು. ಜನ ಬ್ಯಾಂಕ್‌ಗಳಲ್ಲಿ ಹಣ ಇಡುವುದರ ಹಿಂದೆ ಒಂದು ನಿರ್ದಿಷ್ಟ ಉದ್ದೇಶ ಇದೆ. ಅದು ಕಷ್ಟದಿಂದ ಕೂಡಿಸಿಟ್ಟ ಹಣ; ಬೇಕಾದಾಗ ಸುಲಭವಾಗಿ ತೆಗೆಯಬಹುದು ಮತ್ತು ಬ್ಯಾಂಕ್‌ನಲ್ಲಿ ತಮ್ಮ ಹಣ ಸುರಕ್ಷಿತವಾಗಿ ಇರುತ್ತದೆ ಎಂದು. ಬ್ಯಾಂಕಿಂಗ್‌ ಕ್ಷೇತ್ರ ಇಷ್ಟು ದೊಡ್ಡದಾಗಿ ಬೆಳೆಯಲು, ದೇಶದ ಅಭಿವೃದ್ಧಿಗೆ ಮಹತ್ವದ ಕಾಣಿಕೆ ಕೊಡಲು ಸಾಧ್ಯವಾಗಿದ್ದರೆ ಅದಕ್ಕೆ ಮುಖ್ಯ ಕಾರಣ, ಠೇವಣಿದಾರರು ಬ್ಯಾಂಕ್‌ಗಳ ಬಗ್ಗೆ ಇಟ್ಟುಕೊಂಡಿರುವ ಈ ಭರವಸೆ. ಅದಕ್ಕೇನಾದರೂ ಚ್ಯುತಿ ಬಂದರೆ ಇಡೀ ಅರ್ಥವ್ಯವಸ್ಥೆಯ ಆರೋಗ್ಯಕ್ಕೆ ಅಪಾಯ ಉಂಟಾಗಬಹುದು. ಜನಧನ್‌ ಖಾತೆ ತೆರೆಯುವುದಕ್ಕೆ ಒತ್ತು ಕೊಡುವ ಮೂಲಕ ಬ್ಯಾಂಕಿಂಗ್‌ ಸೇವೆ ವಿಸ್ತರಣೆಗೆ ಮುಂದಾಗಿರುವ ಸರ್ಕಾರ ಇಂತಹ ಸೂಕ್ಷ್ಮ ವಿಷಯಗಳಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು.


ಬ್ಯಾಂಕುಗಳು, ವಿಮಾ ಸಂಸ್ಥೆಗಳು, ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳು ಮತ್ತು ಷೇರುಪೇಟೆಗಳು ನಷ್ಟಕ್ಕೆ ಒಳಗಾದರೆ ಅವನ್ನು ನಿಭಾಯಿಸಲು, ಅವಶ್ಯಕತೆಗೆ ಅನುಗುಣವಾಗಿ ಮುಚ್ಚಲು ಅಥವಾ ಪುನಶ್ಚೇತನ ನೀಡಲು ಅನುಸರಿಸಬೇಕಾದ ವಿಧಿವಿಧಾನಗಳನ್ನು ಈ ಮಸೂದೆ ಒಳಗೊಂಡಿದೆ. 2008ರ ಆರ್ಥಿಕ ಬಿಕ್ಕಟ್ಟು ಮತ್ತು ನಂತರದ ವರ್ಷಗಳಲ್ಲಿ ಅನೇಕ ಬ್ಯಾಂಕೇತರ ಹಣಕಾಸು ಸಂಸ್ಥೆಗಳು ದಿವಾಳಿ ಎದ್ದಿದ್ದರಿಂದ ಎಲ್ಲ ಬಗೆಯ ಬ್ಯಾಂಕಿಂಗ್‌ ಸಂಸ್ಥೆಗಳ ಸ್ವಾಸ್ಥ್ಯ ಕಾಪಾಡಲು ಸಮಗ್ರ ಮಸೂದೆಯೊಂದರ ಅಗತ್ಯ ಇತ್ತು. ಆದರೆ ಠೇವಣಿದಾರರಿಗೆ ರಕ್ಷಣೆ ಕೊಡುವುದು ಕೂಡ ಅಷ್ಟೇ ಮುಖ್ಯ. ಈಗ ಠೇವಣಿದಾರರ ₹ 1 ಲಕ್ಷದ ವರೆಗಿನ ಹಣಕ್ಕೆ ಠೇವಣಿ ವಿಮೆ ಮತ್ತು ಸಾಲ ಖಾತರಿ ನಿಗಮದ ಮೂಲಕ ಸರ್ಕಾರ ರಕ್ಷಣೆ ಕೊಡುತ್ತಿದೆ. ಅದಕ್ಕಿಂತ ಹೆಚ್ಚು ಮೊತ್ತಕ್ಕೆ ಈಗಲೂ ಯಾವುದೇ ಭದ್ರತೆ ಇಲ್ಲ. ₹ 1 ಲಕ್ಷದ ಮಿತಿಯನ್ನು ಹೆಚ್ಚಿಸಬೇಕು ಎಂಬ ಒತ್ತಾಯ ಇದ್ದರೂ ಹೊಸ ಮಸೂದೆಯಲ್ಲಿ ಇದನ್ನು ಸ್ಪಷ್ಟವಾಗಿ ನಿಗದಿಪಡಿಸಿಲ್ಲ. ಇವೆಲ್ಲವೂ ಅನುಮಾನ ಹೆಚ್ಚಿಸುತ್ತಲೇ ಹೋಗುತ್ತವೆ ಎಂಬುದನ್ನು ಸರ್ಕಾರವೂ ಅರ್ಥ ಮಾಡಿಕೊಳ್ಳಬೇಕು. ಬ್ಯಾಂಕುಗಳು ಸಂಕಷ್ಟದಲ್ಲಿ ಇದ್ದಾಗ ಬಂಡವಾಳ ಹೂಡುವ ಮೂಲಕ ಸರ್ಕಾರ ನೆರವಿಗೆ ಧಾವಿಸಿದ ಉದಾಹರಣೆಗಳಿವೆ. ರಿಸರ್ವ್‌ ಬ್ಯಾಂಕ್‌ ಕೂಡ ಕಾಲಕಾಲಕ್ಕೆ ಮಧ್ಯಪ್ರವೇಶಿಸುತ್ತ ಬಂದ ಕಾರಣ ನಮ್ಮ ದೇಶದಲ್ಲಿ ಇದುವರೆಗೂ ಯಾವುದೇ ಬ್ಯಾಂಕ್‌ ದಿವಾಳಿಯ ಹಂತದವರೆಗೆ ಹೋಗಿಲ್ಲ. ಆದರೆ ವಸೂಲಾಗದ ಸಾಲದ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅದರ ಬಗ್ಗೆ ತುರ್ತಾಗಿ ಗಮನ ಹರಿಸಬೇಕು. ಹೊಸ ಮಸೂದೆಯು ಠೇವಣಿದಾರರ ಹಣಕ್ಕೆ ಈಗಿರುವುದಕ್ಕಿಂತ ಹೆಚ್ಚು ಸುರಕ್ಷತೆ ಒದಗಿಸುತ್ತದೆ ಮತ್ತು ಹೆಚ್ಚು ಪಾರದರ್ಶಕವಾಗಿದೆ ಎಂದು ಸರ್ಕಾರ ಸ್ಪಷ್ಟೀಕರಣ ಕೊಟ್ಟರೆ ಸಾಲದು. ಅದು ಹೇಗೆ ಎಂಬುದನ್ನು ವಿವರಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT