ಸೋಮವಾರ, ಮಾರ್ಚ್ 8, 2021
26 °C
ಕಾಂಗ್ರೆಸ್‌ ನೇತೃತ್ವದ ಹಿಂದಿನ ಸರ್ಕಾರದ ವಿರುದ್ಧ ಮತ್ತೆ ಹರಿಹಾಯ್ದ ಪ್ರಧಾನಿ ಮೋದಿ

‘ವಸೂಲಾಗದ ಸಾಲ ಯುಪಿಎಯ ಹಗರಣ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ವಸೂಲಾಗದ ಸಾಲ ಯುಪಿಎಯ ಹಗರಣ’

ನವದೆಹಲಿ: ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರದ ವಿರುದ್ಧ ಹರಿಹಾಯ್ದಿರುವ ಪ್ರಧಾನಿ ನರೇಂದ್ರ ಮೋದಿ, ‘ಆಯ್ದ ಉದ್ಯಮಿಗಳಿಗೆ ಕೋಟ್ಯಂತರ ರೂಪಾಯಿ ಸಾಲ ನೀಡಲು ಹಿಂದಿನ ಸರ್ಕಾರ ಬ್ಯಾಂಕುಗಳ ಮೇಲೆ ಒತ್ತಡ ಹಾಕಿತ್ತು. ಇದು 2ಜಿ, ಕಲ್ಲಿದ್ದಲು ಹಂಚಿಕೆ ಮತ್ತು ಕಾಮನ್‌ವೆಲ್ತ್‌ ಕ್ರೀಡಾಕೂಟಕ್ಕಿಂತಲೂ ದೊಡ್ಡ ಹಗರಣ’ ಎಂದು ಹೇಳಿದರು.

ಭಾರತೀಯ ವಾಣಿಜ್ಯೋದ್ಯಮ ಮಹಾಸಂಘಗಳ ಒಕ್ಕೂಟದ (ಫಿಕಿ) 90ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ‘ವಸೂಲಾಗದ ಸಾಲವು (ಎನ್‌ಪಿಎ) ಹಿಂದಿನ ಆಡಳಿತದ ‘ಆರ್ಥಿಕ ತಜ್ಞರು’ ನಮ್ಮ ಮೇಲೆ ಹೇರಿರುವ ಹೊರೆ’ ಎಂದು ಹೇಳಿದರು.

‘ಬ್ಯಾಂಕುಗಳ ಮೇಲೆ ಒತ್ತಡ ಹಾಕಿ ಆಯ್ದ ಉದ್ಯಮಿಗಳಿಗೆ ಮಾತ್ರ ಸಾಲ ನೀಡುವಂತೆ ಮಾಡಿ ಸಾರ್ವಜನಿಕರ ಹಣ ಲೂಟಿ ಮಾಡಲಾಗಿದೆ’ ಎಂದು ಅವರು ಆರೋಪಿಸಿದರು.

ತಮ್ಮ ಸರ್ಕಾರದ ಬಡವರ ಪರ ನೀತಿಗಳನ್ನು ಪ್ರಸ್ತಾಪಿಸಿದ ಅವರು, ಮಹಿಳೆಯರಿಗೆ ಉಚಿತವಾಗಿ ಅಡುಗೆ ಅನಿಲ ಸಂಪರ್ಕ, ಪ್ರತಿ ಕುಟುಂಬಕ್ಕೂ ಬ್ಯಾಂಕ್‌ ಖಾತೆ, ಯುವಜನರಿಗೆ ಸಾಲ ಮತ್ತು ಕೈಗೆಟಕುವ ದರದಲ್ಲಿ ಮನೆ ನಿರ್ಮಾಣ ಯೋಜನೆಗಳನ್ನು ಪಟ್ಟಿಮಾಡಿದರು.

‘ಉದ್ಯಮಗಳ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ನೀತಿಗಳನ್ನು ರೂಪಿಸುತ್ತಿದೆ; ಅನಗತ್ಯವಾಗಿರುವ ಹಳೆಯ ಕಾನೂನುಗಳನ್ನು ತೆಗೆದುಹಾಕುತ್ತಿದೆ’ ಎಂದರು.

‘ದೇಶದ ಉದ್ಯಮ ವಲಯ ದೀರ್ಘ ಸಮಯದಿಂದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಗಾಗಿ ಬೇಡಿಕೆ ಇಟ್ಟಿತ್ತು. ಬಿಜೆಪಿ ಸರ್ಕಾರ ಅದನ್ನು ಜಾರಿಗೆ ತಂದಿದೆ. ಕಡಿಮೆ ತೆರಿಗೆಯ ಪ್ರಯೋಜನವನ್ನು ಉದ್ದಿಮೆಗಳು ಜನಸಾಮಾನ್ಯರಿಗೆ ವರ್ಗಾಯಿಸಬೇಕು ಎಂಬ ಉದ್ದೇಶದಿಂದ ಲಾಭಕೋರತನ ತಡೆಯಂತಹ ಕ್ರಮಗಳನ್ನು ಜಾರಿಗೆ ತರಲಾಗಿದೆ’ ಎಂದು ಅವರು ವಿವರಿಸಿದರು.

‘ಕಳೆದ ಮೂರು ವರ್ಷಗಳಲ್ಲಿ ಕೇಂದ್ರ ಸರ್ಕಾರವು ರಕ್ಷಣೆ, ಹಣಕಾಸು ಮತ್ತು ಆಹಾರ ಸಂಸ್ಕರಣಾ ವಲಯಗಳಲ್ಲಿ 87 ಮಹತ್ವದ ಸುಧಾರಣೆಗಳನ್ನು ಮಾಡಿದೆ’ ಎಂದರು.

‘ದೇಶದ ಜನರ ಆಕಾಂಕ್ಷೆ ಮತ್ತು ಅಗತ್ಯಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ನೀತಿಗಳನ್ನು ರೂಪಿಸಲು ಸರ್ಕಾರ ಪ್ರಯತ್ನಿಸಿದೆ. ಬಡವರು ಎದುರಿಸುತ್ತಿರುವ ಸಮಸ್ಯೆಗಳನ್ನು ಗುರುತಿಸಿ, ಅವುಗಳನ್ನು ಪರಿಹರಿಸಲು ನಾವು ಯತ್ನಿಸುತ್ತಿದ್ದೇವೆ’ ಎಂದು ಮೋದಿ ಹೇಳಿದರು.

ಎಫ್‌ಆರ್‌ಡಿಐ ಮಸೂದೆ: ವದಂತಿಗೆ ಆಕ್ರೋಶ

‘ಪ್ರಸ್ತಾವಿತ ಹಣಕಾಸು ಮತ್ತು ಠೇವಣಿ ವಿಮೆ (ಎಫ್‌ಆರ್‌ಡಿಐ) ಮಸೂದೆ–2017ರ ಬಗ್ಗೆ ವದಂತಿಗಳನ್ನು ಹರಡಲಾಗುತ್ತಿದೆ. ಬ್ಯಾಂಕ್‌ ಗ್ರಾಹಕರು ಮತ್ತು ಅವರ ಠೇವಣಿಗಳ ಹಿತಾಸಕ್ತಿ ರಕ್ಷಿಸುವ ನಿಟ್ಟಿನಲ್ಲಿ ಸರ್ಕಾರ ಕಾರ್ಯನಿರ್ವಹಿಸುತ್ತಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟಪಡಿಸಿದರು.

‘ಗ್ರಾಹಕರು ಮತ್ತು ಅವರ ಠೇವಣಿಗಳನ್ನು ರಕ್ಷಿಸುವುದಕ್ಕಾಗಿ ಸರ್ಕಾರ ಪ್ರಯತ್ನಿಸುತ್ತಿದ್ದರೆ, ಅದಕ್ಕೆ ವಿರುದ್ಧವಾದ ಸುದ್ದಿಯನ್ನು ಹರಡಲಾಗುತ್ತಿದೆ’ ಎಂದರು.

‘ದೇಶದ ಬ್ಯಾಂಕಿಂಗ್‌ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಲು ಸರ್ಕಾರ ಕೆಲಸ ಮಾಡುತ್ತಿದೆ. ಬ್ಯಾಂಕ್‌ ಮತ್ತು ಗ್ರಾಹಕರನ್ನು ರಕ್ಷಿಸಿದರೆ, ದೇಶದ ಹಿತಾಸಕ್ತಿಯೂ ಸುರಕ್ಷಿತವಾಗಿರುತ್ತದೆ. ಮಸೂದೆ ಬಗ್ಗೆ ಹಬ್ಬಿರುವ ವದಂತಿಗಳನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಫಿಕಿ ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು.

ಕರಡು ಮಸೂದೆಯಲ್ಲಿನ ‘ಬೇಲ್‌–ಇನ್‌’ ನಿಯಮದ ಬಗ್ಗೆ ಆಕ್ಷೇಪ ವ್ಯಕ್ತವಾಗಿದ್ದು, ಇದು ಗ್ರಾಹಕರ ಉಳಿತಾಯ ಠೇವಣಿಗೆ ಸಂಚಕಾರ ತರುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಆಗಸ್ಟ್‌ನಲ್ಲಿ ಲೋಕಸಭೆಯಲ್ಲಿ ಮಂಡಿಸಲಾಗಿರುವ ಈ ಕರಡು ಮಸೂದೆಯನ್ನು ಜಂಟಿ ಸಂಸದೀಯ ಸಮಿತಿ ಪರಿಶೀಲಿಸುತ್ತಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.