ಬುಧವಾರ, 6 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳೆಯ ಅಪಾರ್ಟ್‌ಮೆಂಟ್‌ಗಳಿಗೆ ಎಸ್‌ಟಿಪಿ ಕಡ್ಡಾಯ ಬೇಡ: ಬಿಜೆಪಿ

Last Updated 13 ಡಿಸೆಂಬರ್ 2017, 19:48 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ 50 ಫ್ಲ್ಯಾಟ್‌ಗಳಿರುವ ಅಪಾರ್ಟ್‌ಮೆಂಟ್‌ಗಳು ತ್ಯಾಜ್ಯ ನೀರು ಸಂಸ್ಕರಣಾ ಘಟಕವನ್ನು(ಎಸ್‌ಟಿಪಿ) ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕೆಂಬ ಬೆಂಗಳೂರು ಜಲಮಂಡಳಿ ಆದೇಶವನ್ನು ಬಿಜೆಪಿ ಶಾಸಕರು ವಿರೋಧಿಸಿದ್ದಾರೆ.

‘ನಾವು ಎಸ್‌ಟಿಪಿ ವಿರೋಧಿಸುತ್ತಿಲ್ಲ. ಹೊಸದಾಗಿ ನಿರ್ಮಿಸುವ ಅಪಾರ್ಟ್‌ಮೆಂಟ್‌ಗಳಿಗೆ ಎಸ್‌ಟಿಪಿ ಕಡ್ಡಾಯಗೊಳಿಸಲು ನಮ್ಮ ತಕರಾರೂ ಇಲ್ಲ. ಆದರೆ, ಬಹಳ ವರ್ಷಗಳಿಂದ ಇರುವ ಅಪಾರ್ಟ್‌ಮೆಂಟ್‌ಗಳಿಗೆ ಆದೇಶ ಪೂರ್ವಾನ್ವಯಗೊಳಿಸುವುದು ಸರಿಯಲ್ಲ’ ಎಂದು ಬುಧವಾರ ಮಾಧ್ಯಮಗೋಷ್ಠಿಯಲ್ಲಿ ಶಾಸಕರಾದ ಎಸ್‌.ಸುರೇಶ್‌ ಕುಮಾರ್‌ ಮತ್ತು ಡಾ. ಅಶ್ವಥ್‌ ನಾರಾಯಣ ತಿಳಿಸಿದರು.

‘ಬಹಳ ಹಿಂದೆ ನಿರ್ಮಿಸಲಾಗಿರುವ ಅಪಾರ್ಟ್‌ಮೆಂಟ್‌ಗಳಲ್ಲಿ ತ್ಯಾಜ್ಯ ನೀರು ಸಂಸ್ಕರಿಸಿ ಬಳಕೆ ಮಾಡಿಕೊಳ್ಳುವ ವ್ಯವಸ್ಥೆ ಇಲ್ಲ. ಈಗ ಅಳವಡಿಸಿಕೊಳ್ಳುವುದೂ ಕಷ್ಟ. ಜಲಮಂಡಳಿ ನಿಯಮದ ಪ್ರಕಾರ ಸಂಸ್ಕರಿಸಿದ ನೀರನ್ನು ಚರಂಡಿಗೆ ಬಿಡುವಂತೆಯೂ ಇಲ್ಲ. ಹಾಗಿದ್ದರೆ, ಸಂಸ್ಕರಿಸಿದ ನೀರು ಏನು ಮಾಡಬೇಕು’ ಎಂದು ಸುರೇಶ್‌ ಕುಮಾರ್‌ ಪ್ರಶ್ನಿಸಿದರು.

‘ಜಲಮಂಡಳಿ ತನ್ನ ಅದೇಶವನ್ನು ಪೂರ್ವಾನ್ವಯಗೊಳಿಸುವುದು ಬೇಡ. ಹಳೆ ಅಪಾರ್ಟ್‌ಮೆಂಟ್‌ಗಳನ್ನು ಅಂದಿನ ಕಾನೂನಿಗೆ ತಕ್ಕಂತೆ ನಿರ್ಮಿಸಲಾಗಿದೆ. ಈಗ ವಿವೇಚನಾ ರಹಿತವಾಗಿ ಆದೇಶ ಹೊರಡಿಸಿರುವುದು ನಾಗರಿಕ ವಿರೋಧಿ ಕ್ರಮ. ಇದಕ್ಕೆ ಪರ್ಯಾಯವನ್ನು ಜಲಮಂಡಳಿಯೇ ಆಲೋಚಿಸಬೇಕು’ ಎಂದು ಅವರು ಹೇಳಿದರು.

ನಗರದಲ್ಲಿ ಮಾಲಿನ್ಯ ತಡೆಗಟ್ಟಲು ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ಅಳವಡಿಸಿಕೊಳ್ಳಲು ರಾಜ್ಯ ಮತ್ತು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಗಳು ಸೂಚನೆ ನೀಡಿರುವುದು ನಿಜ. ಆದರೆ, ಹಳೆಯ ಅಪಾರ್ಟ್‌ಮೆಂಟ್‌ಗಳಿಗೂ ಅಳವಡಿಕೆ ಮಾಡಿ ಎಂದೇನು ತಿಳಿಸಿಲ್ಲ. ಆದರೆ, ಜಲಮಂಡಳಿ ಹಠಮಾರಿ ಧೋರಣೆ ಅನುಸರಿಸುತ್ತಿದೆ ಎಂದರು.

ಸ್ವಾಧೀನಾನುಭವ ಪತ್ರ: ನೀರು ಮತ್ತು ಒಳಚರಂಡಿ ಸಂಪರ್ಕಕ್ಕೆ ಸಾಧೀನಾನುಭವ ಪತ್ರ ಸಲ್ಲಿಸದವರಿಗೆ ಶೇ 50 ರಷ್ಟು ದಂಡ ಶುಲ್ಕ ವಿಧಿಸುವ ಜಲಮಂಡಳಿಯ ಉದ್ದೇಶ ತರ್ಕಹೀನ. ಇದರಿಂದ ಸಾರ್ವಜನಿಕರಿಗೆ ಅನನುಕೂಲವಾಗುತ್ತದೆ ಎಂದು ಮಲ್ಲೇಶ್ವರ ಶಾಸಕ ಡಾ. ಅಶ್ವಥ್‌ನಾರಾಯಣ ಹೇಳಿದರು.

ಸಾಧೀನಾನುಭವ ಪತ್ರ ಹೊಂದಿಲ್ಲದಿದ್ದರೆ ಅಂತಹ ಕಟ್ಟಡವನ್ನು ಅಕ್ರಮ ಎಂದು ಹೇಳಿದಂತಾಗುತ್ತದೆ. ಹಾಗಿದ್ದರೆ, ನಿರ್ಮಾಣಕ್ಕೆ ಅವಕಾಶ ನೀಡಿದ್ದಾದರೂ ಹೇಗೆ. ತಪ್ಪು ಮಾಡಲು ಅವಕಾಶ ನೀಡಿ, ಈಗ ದಂಡ ಶುಲ್ಕ ಪಾವತಿಸಬೇಕೆಂದು ತಾಕೀತು ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಅವರು ಪ್ರಶ್ನಿಸಿದರು.

ನಾಗರಿಕರಿಗೆ ಗುಣಮಟ್ಟದ ಕುಡಿಯುವ ನೀರು ಪೂರೈಸುವ ಜವಾಬ್ದಾರಿ ಸರ್ಕಾರದ್ದು. ಸಾಧೀನಾನುಭವ ಪತ್ರ ನೀಡದಿದ್ದರೆ, ನೀರಿನ ಮತ್ತು ಒಳಚರಂಡಿ ಸಂಪರ್ಕ ನೀಡುವುದಿಲ್ಲ ಎಂದು ಹೇಳುವುದು ಕಾನೂನು ಬಾಹಿರ ಎಂದೂ ಅವರು ಹೇಳಿದರು.

ಇದೇ 16 ರಂದು ಪ್ರತಿಭಟನೆ: ಇದೇ 16 ರಂದು ಬೆಳಿಗ್ಗೆ 10.30 ಕ್ಕೆ ನಗರದ ಅಪಾರ್ಟ್‌ಮೆಂಟ್‌ ನಿವಾಸಿಗಳು ಮತ್ತು ಮಾಲೀಕರು ಪುರಭವನದಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಪ್ರತಿಭಟನಾ ಪಾದಯಾತ್ರೆ ನಡೆಸಲಿದ್ದಾರೆ ಎಂದು ಶಾಸಕರ ಎಸ್‌. ಸುರೇಶ್‌ ಕುಮಾರ್‌ ಹೇಳಿದರು.

ನಗರದಲ್ಲಿ 3700 ಕ್ಕೂ ಹೆಚ್ಚು ಅಪಾರ್ಟ್‌ಮೆಂಟ್‌ಗಳಿವೆ. ಜಲಮಂಡಳಿ ಈಗಾಗಲೇ 960 ಅಪಾರ್ಟ್‌ಮೆಂಟ್‌ಗಳಿಗೆ ನೊಟೀಸ್‌ ನೀಡಿದೆ ಎಂದು ಅವರು ತಿಳಿಸಿದರು.

*
ನೀರಿನ ಸಂಪರ್ಕಕ್ಕೆ ಸ್ವಾಧೀನಾನುಭವ ಪತ್ರ ಕೇಳುವ ಮೂಲಕ ಜಲಮಂಡಳಿ ಗದಾ ಪ್ರಹಾರ ನಡೆಸಿದೆ.
–ಎಸ್‌.ಸುರೇಶ್‌ ಕುಮಾರ್‌, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT