ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ಇರುವುದು ಕೇವಲ 250 ಸಿಎನ್‌ಜಿ ವಾಹನಗಳು

Last Updated 13 ಡಿಸೆಂಬರ್ 2017, 19:55 IST
ಅಕ್ಷರ ಗಾತ್ರ

ಬೆಂಗಳೂರು: ಭಾರತೀಯ ಅನಿಲ ಪ್ರಾಧಿಕಾರವು (ಗೇಲ್‌) ನಗರದಲ್ಲಿ ನಾಲ್ಕು ಸಾಂದ್ರೀಕೃತ ನೈಸರ್ಗಿಕ ಅನಿಲದ (ಸಿಎನ್‌ಜಿ) ಕೇಂದ್ರಗಳನ್ನು ಸ್ಥಾಪಿಸಿ ವರ್ಷ ಕಳೆದಿದ್ದು, ಇದುವರೆಗೆ 250 ವಾಹನಗಳಿಗೆ ಮಾತ್ರ ಸಿಎನ್‌ಜಿ ಕಿಟ್‌ಗಳನ್ನು ಅಳವಡಿಸಲಾಗಿದೆ.

ಪೆಟ್ರೋಲ್‌ ಹಾಗೂ ಡೀಸೆಲ್‌ ಸಹಾಯದಿಂದ ಸಂಚರಿಸುವ 72 ಲಕ್ಷ ವಾಹನಗಳು ನಗರದಲ್ಲಿವೆ. ಲಗ್ಗೆರೆಯಲ್ಲಿ, ಬಿಎಂಟಿಸಿ ಡಿಪೊಗಳಾದ ಸುಮನಹಳ್ಳಿ, ಪೀಣ್ಯ ಹಾಗೂ ಹೆಣ್ಣೂರಿನಲ್ಲಿ ಸಿಎನ್‌ಜಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. 2018ರ ಮಾರ್ಚ್‌ ಒಳಗೆ ನಗರದಾದ್ಯಂತ ಹತ್ತು ಸಿಎನ್‌ಜಿ ಕೇಂದ್ರಗಳನ್ನು ತೆರೆಯುವ ಉದ್ದೇಶವನ್ನು ಪ್ರಾಧಿಕಾರ ಹೊಂದಿದೆ.

‘ಸಿಎನ್‌ಜಿ ಅನಿಲವನ್ನು ವಾಹನಗಳಿಗೆ ಅಳವಡಿಸಿಕೊಳ್ಳಲು ಅದಕ್ಕೆ ಪೂರಕವಾದ ವ್ಯವಸ್ಥೆ ನಗರದಲ್ಲಿ ಇಲ್ಲ. ಹೀಗಾಗಿ, ಸಿಎನ್‌ಜಿ ಬಳಸುವ ವಾಹನಗಳ ಸಂಖ್ಯೆ ಕಡಿಮೆ ಇದೆ’ ಎಂದು ಸಾರಿಗೆ ಆಯುಕ್ತ ಬಿ.ದಯಾನಂದ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ನಿರೀಕ್ಷೆ ಮಟ್ಟದಲ್ಲಿ ಸಿಎನ್‌ಜಿ ಕಿಟ್‌ಗಳನ್ನು ಜನರು ತಮ್ಮ ವಾಹನಗಳಿಗೆ ಅಳವಡಿಸುತ್ತಿಲ್ಲ. ಲಗ್ಗೆರೆಯ ಕೇಂದ್ರದಲ್ಲಿರುವ ಕಂಪ್ರೈಸರ್‌ಗಳಿಗೆ ಪ್ರತಿ ತಾಸಿಗೆ 1,200 ಸ್ಟ್ಯಾಂಡರ್ಡ್‌ ಕ್ಯೂಬಿಕ್ ಮೀಟರ್‌ (ಎಸ್‌ಸಿಎಂಎಚ್‌) ಸಿಎನ್‌ಜಿ ಪೂರೈಸುವ ಸಾಮರ್ಥ್ಯವಿದೆ. ಇದರಿಂದ ದಿನಕ್ಕೆ ಸಾವಿರ ವಾಹನಗಳಿಗೆ ಸಿಎನ್‌ಜಿಯನ್ನು ಪೂರೈಸಬಹುದು. ನಗರದಲ್ಲಿ ಕೆಲವೇ ಸಿಎನ್‌ಜಿ ವಾಹನಗಳು ಇರುವುದರಿಂದ ಕೇಂದ್ರಕ್ಕೆ ಬರುವ ಗ್ರಾಹಕರ ಸಂಖ್ಯೆ ಕಡಿಮೆ ಇದೆ’ ಎಂದು ಗೇಲ್ ಅಧಿಕಾರಿಗಳು ಹೇಳುತ್ತಾರೆ.

‘ಪರಿಸರ ಹಾಗೂ ವಾಯು ಮಾಲಿನ್ಯವನ್ನು ತಡೆಗಟ್ಟಲು ಈ ಇಂಧನ ಬಳಕೆ ಅಗತ್ಯವಿದೆ. ಹೀಗಾಗಿ, ಅದರ ಬಳಕೆಗೆ ಸರ್ಕಾರಿ ಸಂಸ್ಥೆಗಳು ಜಾಗೃತಿ ಮೂಡಿಸಬೇಕು. ಸರ್ಕಾರಿ ಬಸ್ಸುಗಳಿಗೆ ಹಾಗೂ ಸರ್ಕಾರದ ವಾಹನಗಳಿಗೆ ಕಡ್ಡಾಯವಾಗಿ ಇದರ ಕಿಟ್‌ಗಳನ್ನು ಅಳವಡಿಸಬೇಕು. ಈ ಮೂಲಕ ಸಾರ್ವಜನಿಕರಿಗೆ ಮಾದರಿಯಾಗಬೇಕು’ ಎಂದು ಗೇಲ್‌ನ ಪ್ರಧಾನ ವ್ಯವಸ್ಥಾಪಕ (ಯೋಜನೆ) ಪಾರ್ಥಜಾನ ಹೇಳಿದರು.

ಕೇಂದ್ರಗಳ ಸ್ಥಾಪನೆಗೆ ಸರ್ಕಾರವೇ ಜಾಗ ನೀಡಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕೇಂದ್ರಗಳನ್ನು ಸ್ಥಾಪಿಸುವ ಉದ್ದೇಶ ಹೊಂದಿದ್ದೇವೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT