ಶುಕ್ರವಾರ, ಫೆಬ್ರವರಿ 26, 2021
22 °C

ಜೈಲು ಅಧಿಕಾರಿಗಳಿಗೆ ‘4ಜಿ’ ತಲೆನೋವು

ಸಂತೋಷ ಜಿಗಳಿಕೊಪ್ಪ Updated:

ಅಕ್ಷರ ಗಾತ್ರ : | |

ಜೈಲು ಅಧಿಕಾರಿಗಳಿಗೆ ‘4ಜಿ’ ತಲೆನೋವು

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಕೆಲ ಕೈದಿಗಳು, ಜೈಲಿನಲ್ಲಾಗುವ ಬೆಳವಣಿಗೆಗಳನ್ನು ಹೊರಗಡೆಯವರಿಗೆ ತಲುಪಿಸಲು ಕದ್ದುಮುಚ್ಚಿ ‘4ಜಿ’ ತಂತ್ರಜ್ಞಾನ ಬಳಕೆ ಮಾಡುತ್ತಿದ್ದಾರೆ. ಇದು ಜೈಲು ಅಧಿಕಾರಿಗಳ ತಲೆನೋವಿಗೆ ಕಾರಣವಾಗಿದೆ.

ಜೈಲಿನಲ್ಲಿ ಮೊಬೈಲ್‌ ಬಳಕೆಗೆ ಕಡಿವಾಣ ಹಾಕಲು ಈಗಾಗಲೇ 19 ಜಾಮರ್‌ಗಳನ್ನು ಅಳವಡಿಸಲಾಗಿದ್ದು, ಅವುಗಳು ‘2ಜಿ’ ಹಾಗೂ ‘3ಜಿ‘ ತಂತ್ರಜ್ಞಾನಕ್ಕೆ ಮಾತ್ರ ಸೀಮಿತವಾಗಿವೆ. ‘4ಜಿ’ ತಂತ್ರಜ್ಞಾನದ ಬಳಕೆಯನ್ನು ತಡೆಯುವ ಸಾಮರ್ಥ್ಯ ಈ ಜಾಮರ್‌ಗಳಿಗೆ ಇಲ್ಲ. ಅದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲ ಕೈದಿಗಳು, ‘4ಜಿ’ ತಂತ್ರಜ್ಞಾನದ ಮೊಬೈಲ್‌ ಹಾಗೂ ಸಿಮ್‌ ಕಾರ್ಡ್‌ ಬಳಸಿ ಹೊರಗಿನ ವ್ಯಕ್ತಿಗಳೊಂದಿಗೆ ಸಂಪರ್ಕ ಸಾಧಿಸುತ್ತಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ, ಅ. 10ರಂದು ಜೈಲಿನಲ್ಲಿ ಐದು ‘4ಜಿ’ ಮೊಬೈಲ್‌ಗಳು ಸಿಕ್ಕಿವೆ.

‘ಕಾರಾಗೃಹದ ಕೈದಿಗಳನ್ನು ಸಮಾಧಾನಪಡಿಸುವುದು ಕಷ್ಟ. ಸಣ್ಣ ಪುಟ್ಟ ಗೊಂದಲಗಳು ಉಂಟಾಗುವುದು ಸಹಜ. ಅದನ್ನೇ ದೊಡ್ಡದು ಮಾಡುವ ಕೆಲ ಕೈದಿಗಳು, ಜೈಲು ಸಿಬ್ಬಂದಿಯ ಕಣ್ತಪ್ಪಿಸಿ ಹೊರಗಿನ ಜನರಿಗೆ ಸುದ್ದಿ ತಲುಪಿಸುತ್ತಿದ್ದಾರೆ. ಬಳಿಕ ಅವರ ಸಂಬಂಧಿಕರು, ವಕೀಲರು ಅದನ್ನು ಪ್ರಶ್ನಿಸುತ್ತಾರೆ. ಮಾಧ್ಯಮದಲ್ಲೂ ದೊಡ್ಡ ಸುದ್ದಿಯಾಗುತ್ತದೆ. ಸನ್ನಡತೆ ಮೇಲೆ ಬಿಡುಗಡೆಯಾಗಬೇಕಿದ್ದ ಕೆಲ ಕೈದಿಗಳು, ಮೊಬೈಲ್‌ ಬಳಸುವ ಕೆಲ ಕೈದಿಗಳ ತಪ್ಪಿನಿಂದಾಗಿ ಜೈಲಿನಲ್ಲಿಯೇ ಉಳಿಯುವಂತಾಗಿದೆ’ ಎಂದು ಜೈಲಿನ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘2013ರಲ್ಲಿ ಕೈದಿ ಜೈಶಂಕರ್ ಜೈಲಿನಿಂದ ಪರಾರಿಯಾಗಿದ್ದ. ಅದಾದ ನಂತರ ಪೊಲೀಸರು, ಜೈಲಿನ ಮೇಲೆ ದಾಳಿ ನಡೆಸಿ ಸಿಮ್ ಕಾರ್ಡ್ ಹಾಗೂ ಮೊಬೈಲ್‌ಗಳನ್ನು ಜಪ್ತಿ ಮಾಡಿದ್ದರು. ಅವಾಗಲೇ ₹6 ಕೋಟಿ ವೆಚ್ಚದಲ್ಲಿ 19 ಜಾಮರ್‌ಗಳನ್ನು ಜೈಲಿನಲ್ಲಿ ಅಳವಡಿಸಲಾಗಿದೆ. ಈ ಜಾಮರ್‌ಗಳ ತಂತ್ರಜ್ಞಾನ ಹಳೆಯದ್ದು. ಇದರಿಂದ ಜೈಲಿನಿಂದ ಹೊರಹೋಗುವ ಕರೆಗಳನ್ನು ನಿಯಂತ್ರಿಸಲು ಸಂಪೂರ್ಣವಾಗಿ ಸಾಧ್ಯವಾಗುತ್ತಿಲ್ಲ’ ಎಂದು ಹೇಳಿದರು.

ಒಪ್ಪಂದದ ನವೀಕರಣಕ್ಕೆ ಚಿಂತನೆ: ರಾಜ್ಯ ಸರ್ಕಾರದ ಒಡೆತನದ ಎಲೆಕ್ಟ್ರಾನಿಕ್ಸ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ ಕಂಪೆನಿಯ ಜತೆಗೆ ಒಪ್ಪಂದ ಮಾಡಿಕೊಂಡು ಜಾಮರ್‌ಗಳನ್ನು ಖರೀದಿಸಲಾಗಿದೆ. ನಿರ್ವಹಣೆ ಜವಾಬ್ದಾರಿಯನ್ನು ಕಂಪೆನಿಯ ಸಿಬ್ಬಂದಿ ನೋಡಿಕೊಳ್ಳುತ್ತಿದ್ದಾರೆ. ಈಗ ‘4ಜಿ’ ತಂತ್ರಜ್ಞಾನವನ್ನು ಅಳವಡಿಸುವ ಸಂಬಂಧ ಮತ್ತೊಂದು ಒಪ್ಪಂದ ಮಾಡಿಕೊಳ್ಳಬೇಕಿದ್ದು, ಆ ಬಗ್ಗೆ ಕಾರಾಗೃಹಗಳ ಇಲಾಖೆಯ ಉನ್ನತ ಅಧಿಕಾರಿಗಳು ಚಿಂತನೆ ನಡೆಸುತ್ತಿದ್ದಾರೆ.

‘ಇಂದಿನ ಆಧುನಿಕ ಬೆಳವಣಿಗೆಗೆ ತಕ್ಕಂತೆ ಜಾಮರ್‌ಗಳ ತಂತ್ರಜ್ಞಾನವನ್ನು ಬದಲಾಯಿಸಬೇಕಿದೆ. ಅದಕ್ಕೆ 10 ಕೋಟಿಕ್ಕಿಂತ ಹೆಚ್ಚಿನ ಹಣ ಬೇಕು. ಈ ಬಗ್ಗೆ ಗೃಹ ಇಲಾಖೆಗೆ ಮಾಹಿತಿ ನೀಡಿದ್ದು, ಪ್ರತಿಕ್ರಿಯೆಗೆ ಕಾಯುತ್ತಿದ್ದೇವೆ’ ಎಂದು ಹಿರಿಯ ಅಧಿಕಾರಿ ತಿಳಿಸಿದರು.

ತಂತ್ರಜ್ಞಾನ ಬದಲಾವಣೆಗಿಂತ ತಡೆಗಟ್ಟುವಿಕೆ ಮುಖ್ಯ

‘4ಜಿ ತಂತ್ರಜ್ಞಾನ ಅಳವಡಿಕೆಗೆ ಕೋಟ್ಯಂತರ ರೂಪಾಯಿ ಬೇಕು. ಅದರ ಬದಲು ಜೈಲಿನ ಒಳಗೆ ಮೊಬೈಲ್‌ ಹೋಗದಂತೆ ತಡೆಗಟ್ಟುವುದು ಮುಖ್ಯ. ಆ ಬಗ್ಗೆ ಜೈಲಿನ ಎಲ್ಲ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ’ ಎಂದು ಕಾರಾಗೃಹ ಇಲಾಖೆಯ ಎಡಿಜಿಪಿ ಎನ್‌.ಎಸ್‌.ಮೇಘರಿಕ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಿಬ್ಬಂದಿ ಹಾಗೂ ಜೈಲಿನ ಸುತ್ತಮುತ್ತಲ ನಿವಾಸಿಗಳು ಮೊಬೈಲ್‌ ಬಳಕೆ ಮಾಡುತ್ತಾರೆ. ಜಾಮರ್‌ ಅಳವಡಿಕೆಯಿಂದ ಅವರಿಗೆ ತೊಂದರೆಯಾಗಲಿದೆ. ಮೊಬೈಲ್‌ ಒಳಗೆ ಹೋಗದಂತೆ ನೋಡಿಕೊಳ್ಳುವುದೇ ಇದಕ್ಕೆ ಪರಿಹಾರ. ಈ ವಿಷಯವನ್ನು ಗೃಹ ಇಲಾಖೆಯ ಸಭೆಯಲ್ಲೂ ತಿಳಿಸಿದ್ದೇನೆ’ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.