ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಒಂದು ರೂಪಾಯಿ ಲಾಭಕ್ಕೆ ಸಮಾಜ ಹಾಳು’

Last Updated 13 ಡಿಸೆಂಬರ್ 2017, 20:24 IST
ಅಕ್ಷರ ಗಾತ್ರ

ಬೆಂಗಳೂರು: ‘ಬಸ್‌ ಸಂಖ್ಯೆಗಳನ್ನು ಹೆಚ್ಚಿಸಬೇಕು ಹಾಗೂ ಪ್ರಯಾಣದರ ಶೇ 50ರಷ್ಟು ಕಡಿಮೆ ಮಾಡಬೇಕು. ಮೆಟ್ರೊ ಬೋಗಿಗಳನ್ನು ಹೆಚ್ಚಿಸಬೇಕು. ಲೈಂಗಿಕ ಅಲ್ಪಸಂಖ್ಯಾತರಿಗೆ ಪ್ರತ್ಯೇಕ ಸಾರ್ವಜನಿಕ ಶೌಚಾಲಯ ಸೌಲಭ್ಯಗಳನ್ನು ಒದಗಿಸಬೇಕು’ ಎಂದು ನಗರದ ವಿವಿಧ ನಾಗರಿಕ ಸಂಘಟನೆಗಳು ಒತ್ತಾಯಿಸಿವೆ.

’ಬೇಕು ಬೇಡ ಸಂತೆ’ ಅಭಿಯಾನದ ಮೂಲಕ ನಗರದ ವಿವಿಧ ನಾಗರಿಕ ಸಂಘಟನೆಗಳು ಸಿದ್ಧಪಡಿಸಿದ್ದ ‘ಬೆಂಗಳೂರಿಗರ  ಪ್ರಣಾಳಿಕೆ’ಯನ್ನು  ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌. ದೊರೆಸ್ವಾಮಿ ಅವರು ನಗರದ ಸೇಂಟ್‌ ಜೋಸೆಫ್‌ ಕಾಲೇಜಿನಲ್ಲಿ ಮಂಗಳವಾರ ಬಿಡುಗಡೆ ಮಾಡಿದರು.

ಬಳಿಕ ಮಾತನಾಡಿದ ಅವರು, ‘ಮೊದಲೆಲ್ಲ ಪ್ರತಿಯೊಬ್ಬರ ಮನೆಯಲ್ಲಿ ಬಾವಿ ಇತ್ತು. ಪಾಲಿಕೆಯವರು ನೀರು ಕೊಡುವುದಾಗಿ ಹೇಳಿ ಬಾವಿ ಮುಚ್ಚಿಸಿದರು. 100 ಕೆರೆಗಳನ್ನು ಪುನಶ್ಚೇತನಗೊಳಿಸಿ, ಕಾವೇರಿ ನೀರಿಗೆ ಹೊಡೆದಾಡುವುದು ತಪ್ಪುತ್ತದೆ. ನಗರದಲ್ಲಿ ಕಸವನ್ನು ಸುರಿಯಲು ಜಾಗವೇ ಇಲ್ಲ. ಅದೇ ಕಸದಿಂದ ವಿದ್ಯುತ್‌ ಉತ್ಪಾದಿಸಿದರೆ, ತ್ಯಾಜ್ಯ ವಿಲೇವಾರಿ ಸುಲಭವಾಗುತ್ತದೆ’ ಎಂದು ಸಲಹೆ ನೀಡಿದರು. 

‘ರಸ್ತೆ ಗುಣಮಟ್ಟ ಸುಧಾರಣೆ, ಚರಂಡಿ ನೀರು ರಸ್ತೆಯಲ್ಲಿ ಹರಿಯುವುದನ್ನು ತಡೆಗಟ್ಟುವುದು, ಚರಂಡಿ ನೀರು ಕೆರೆಗಳಿಗೆ ಹರಿಯುವುದನ್ನು ತಡೆಯುವುದು, ರೇರಾ ಕಾಯಿದೆ ಪಾಲನೆ, ಪ್ರತಿ ಮನೆಗೆ ಉಚಿತ ನೀರು, ಸ್ವಚ್ಛ ಸಾರ್ವಜನಿಕ ಸೌಚಾಲಯ, ಪಾದಚಾರಿಗಳ ಸುರಕ್ಷತೆ, ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರ ವಿಸರ್ಜನೆ ತಡೆಯುವುದು, ಮರ ಕಡಿಯುವಾಗ ಸ್ಥಳೀಯರ ಸಲಹೆ ಪಡೆಯಬೇಕು, ಬೀದಿ ವ್ಯಾಪಾರಿಗಳ ಹಕ್ಕು ರಕ್ಷಣೆ ಮಾಡಬೇಕು’ ಎಂದು ಪ್ರಣಾಳಿಕೆಯಲ್ಲಿ ಒತ್ತಾಯಿಸಲಾಗಿದೆ.

‘ಮದ್ಯದ ಅಂಗಡಿಗಳನ್ನು ನಿಷೇಧಿಸಬೇಕು. ಮದ್ಯ ತರಲು ಮಕ್ಕಳನ್ನು ಬಳಸಿಕೊಳ್ಳಲಾಗುತ್ತಿದೆ. ಇದರಿಂದ ಪ್ರಭಾವಿತರಾದ ಮಕ್ಕಳು ಕುಡಿತ, ಧೂಮಪಾನಕ್ಕೆ ದಾಸರಾಗುತ್ತಿದ್ದಾರೆ’ ಎಂದು ಅಪ್ಸಾ ಸಂಘಟನೆಯ ವಿದ್ಯಾರ್ಥಿನಿ ಒತ್ತಾಯಿಸಿದಳು.

ಆಕೆಯ ಮಾತಿಗೆ ದನಿಗೂಡಿಸಿದ ದೊರೆಸ್ವಾಮಿ, ‘ ಮದ್ಯ ಮಾರಾಟದಿಂದ ಸರ್ಕಾರಕ್ಕೆ ಹೆಚ್ಚಿನ ಲಾಭ ಇಲ್ಲ. ₹10ರಲ್ಲಿ ಮದ್ಯ ಮಾರಾಟಗಾರರಿಗೆ ₹9 ಸಿಕ್ಕರೆ, ಸರ್ಕಾರಕ್ಕೆ ಸಿಗುವುದು ಕೇವಲ ₹1. ಒಂದು ರೂಪಾಯಿ ಲಾಭಕ್ಕಾಗಿ ಸರ್ಕಾರಗಳು ಸಮಾಜವನ್ನು ಹಾಳು ಮಾಡುತ್ತಿವೆ’ ಎಂದರು. 

ಡ್ರೀಮ್‌ ಸ್ಕೂಲ್‌ನ ವಿದ್ಯಾರ್ಥಿನಿ ಕೀರ್ತಿ, ‘ನಮಗೆ ಆಟವಾಡಲು ಆಟದ ಮೈದಾನ ಬೇಕು. ಜೊತೆಗೆ ಮೂಲಸೌಕರ್ಯಗಳು ಬೇಕು. ಮೊಬೈಲ್‌– ಕಾರುಗಳು ಅಷ್ಟೇ ಅಲ್ಲ ಇಂಥವರಿಗೇ ಮತಹಾಕಿ ಎಂದು ಅಪ್ಪ –ಅಮ್ಮನ ಮೇಲೆ ಪ್ರಭಾವ ಬೀರುವ ಸಾಮರ್ಥ್ಯ ನಮಗಿದೆ. ರಾಜಕೀಯ ಪಕ್ಷಗಳು, ಪ್ರತಿನಿಧಿಗಳು ನಮ್ಮ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಬೇಕು’ ಎಂದು ಒತ್ತಾಯಿಸಿದರು.

ಶಾಸಕ ದಿನೇಶ್‌ ಗುಂಡೂರಾವ್‌ ಮಾತನಾಡಿ, ‘ಕಳೆದ ಚುನಾವಣೆಯಲ್ಲಿ ಘೋಷಿಸಿದ್ದ 165 ಕಾರ್ಯಗಳಲ್ಲಿ 155 ಕಾರ್ಯಗಳನ್ನು ಜಾರಿ ಮಾಡಿದ್ದೇವೆ. ಎಲ್ಲವನ್ನೂ ಘೋಷಿಸಲು ಸಾಧ್ಯವಿಲ್ಲ. ಆದರೆ, ಪ್ರಣಾಳಿಕೆಯಲ್ಲಿ ಘೋಷಿಸಿದ್ದನ್ನು ಜಾರಿಗೆ ತರುತ್ತೇವೆ’ ಎಂದರು.

ಶಾಸಕ ಡಾ.ಸಿ.ಎನ್‌. ಅಶ್ವತ್ಥನಾರಾಯ, ‘ಮುಕ್ಕಾಲು ಭಾಗ ಬೆಂಗಳೂರು ಇಂದು ಯಾವುದೇ ಪೂರ್ವ ಯೋಜನೆ ಇಲ್ಲದೆ ರೂಪುಗೊಂಡಿದೆ. ನಗರದಲ್ಲಿ ಕಟ್ಟಡ ನಿರ್ಮಾಣ ಕಾರ್ಯದಿಂದ ಇಂದು ಶೇಕಡಾ 70 ಮಾಲಿನ್ಯ ಉಂಟಾಗುತ್ತಿದೆ. ಹೀಗಾಗಿ ಸರಿಯಾದ ವ್ಯಕ್ತಿಯನ್ನು ಆಯ್ಕೆ ಮಾಡಿ’ ಎಂದು ತಿಳಿಸಿದರು.

ಉಚಿತ ಆಕ್ಸಿಜನ್ ಮಾಸ್ಕ್‌ಗೆ ಒತ್ತಾಯ
‘ನಗರದಲ್ಲಿ ವಾಯು ಮಾಲಿನ್ಯ ಹಾಗೂ ಶಬ್ದ ಮಾಲಿನ್ಯ ಮಿತಿ ಮೀರಿದ್ದು, ಪ್ರತಿಯೊಬ್ಬರಿಗೂ ಆಕ್ಸಿಜನ್‌ ಮಾಸ್ಕ್‌ ನೀಡುವುದಾಗಿ ರಾಜಕೀಯ ಪಕ್ಷಗಳು ಪ್ರಣಾಳಿಕೆಯಲ್ಲಿ ಘೋಷಿಸಬೇಕು’ ಎಂದು ಎಚ್‌.ಎಸ್‌. ದೊರೆಸ್ವಾಮಿ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT