7
ದೇವನಹಳ್ಳಿಯಲ್ಲಿ ಬೀಡುಬಿಟ್ಟ ಕುಟುಂಬಗಳು, ಜೀವನ ಅಭದ್ರತೆ

ಕುಲುಮೆ ಅಲೆಮಾರಿಗಳ ಸಂಕಷ್ಟದ ಬದುಕು

Published:
Updated:
ಕುಲುಮೆ ಅಲೆಮಾರಿಗಳ ಸಂಕಷ್ಟದ ಬದುಕು

ದೇವನಹಳ್ಳಿ: ಜೀವನ ನಿರ್ವಹಣೆ ಎಂಬುದು ಬಡವರಿಗೆ ಸವಾಲು, ಅದನ್ನು ಮೆಟ್ಟಿ ಬದುಕಬೇಕಾದರೆ ಯಾವುದಾದರೂ ಮಾರ್ಗ ಅನಿವಾರ್ಯ. ಇದೇ ಪರಿಸ್ಥಿತಿಯನ್ನು ಅರಿತಿರುವ ಕುಲುಮೆ ಕೆಲಸ ಮಾಡುವ ಅಲೆಮಾರಿಗಳ ಕುಟುಂಬಗಳು ನಗರದಲ್ಲಿ ಬೀಡುಬಿಟ್ಟಿವೆ.

ಪಾರಂಪರಿಕ ಕಬ್ಬಿಣದ ಕುಲುಮೆ ಕಸಬುದಾರರಿಗೆ ಭಾರಿ ಪೆಟ್ಟು ನೀಡಿದೆ. ಕೆಲಸ ನಿಧಾನವಾಗಿ ಕಡಿಮೆಯಾಗುತ್ತಿದೆ. ಇದರಿಂದ ಅರ್ಥಿಕ ಸಂಕಷ್ಟ ಎದುರಿಸಿ ಜೀವನ ನಡೆಸಲು ಕುಟುಂಬಗಳ ಸಮೇತ ನಗರ ಮತ್ತು ತಾಲ್ಲೂಕು, ಜನಸಂಖ್ಯೆ ಹೆಚ್ಚು ಇರುವ ಗ್ರಾಮಗಳಲ್ಲಿ ಬೀಡು ಬಿಡುತ್ತೇವೆ. ದೈನಂದಿನ ತುತ್ತಿನ ಚೀಲಕ್ಕಾಗಿ ಕಬ್ಬಿಣದ ಪರಿಕರ ತಯಾರಿಸಿ ಗ್ರಾಹಕರಿಗಾಗಿ ಚಾತಕ ಪಕ್ಷಿಯಂತೆ ಕಾಯಬೇಕಾದ ಸ್ಥಿತಿ ಎಂದು ಕುಲುಮೆ ಕುಟುಂಬಗಳದು.

ಭಾಷೆ ಗಡಿಯ ಗೊಡವೆ ಇಲ್ಲದ ಹನ್ನೊಂದು ಕುಟುಂಬಗಳು ಅಲೆಮಾರಿಗಳಾಗಿ ಬಂದು ನಗರದ ರಸ್ತೆಯಲ್ಲಿ ತಾತ್ಕಾಲಿಕ ಠಿಕಾಣಿ ಹೂಡಿವೆ. ಪ್ರತಿಯೊಂದು ಕುಟುಂಬ ತಲಾ ಒಂದೊಂದು ಸರಕು ಸಾಗಾಣಿಕೆ ಆಟೊ ಹೊಂದಿವೆ. ಹನ್ನೆರಡಕ್ಕೂ  ಹೆಚ್ಚು ಮಕ್ಕಳು ಇದ್ದಾರೆ. ಈ ಎಲ್ಲ ಮಕ್ಕಳಿಗೆ ಶಿಕ್ಷಣ ದೂರವಾಗಿದೆ. ಪೆನ್ಸಿಲ್ ಹಿಡಿಯಬೇಕಾದ ಮಕ್ಕಳು ತುಂಡು ಕಬ್ಬಿಣ ಹಿಡಿಯುತ್ತ ಹಿರಿಯರ ಕೆಲಸಗಳಿಗೆ ಸಾಥ್ ನೀಡುತ್ತಿವೆ.

ಅನಾರೋಗ್ಯ ವಯೋವೃದ್ಧರು ಜತೆಗಿದ್ದಾರೆ. ಭವಿಷ್ಯದ ಚಿಂತನೆ ಇಲ್ಲದ ಕುಟುಂಬಗಳು ದೈನಂದಿನ ಕೆಲಸದಲ್ಲಿ ಮಗ್ನವಾಗಿವೆ. ‘ಮಹಾರಾಷ್ಟ್ರ ರಾಜ್ಯದ ಕೊರೆಗಾಂವ ನಮ್ಮ ಗ್ರಾಮ. ನಮ್ಮದು ವಂಶ ಪರಂಪರೆಯ ವೃತ್ತಿ. ಕಳೆದ ಹತ್ತು ವರ್ಷಗಳಿಂದ ಕರ್ನಾಟಕದ ವಿವಿಧ ಪ್ರದೇಶದಲ್ಲಿ ಅಲ್ಲಲ್ಲಿ ಠಿಕಾಣಿ ಹೂಡಿ ಕಸಬುಗಾರಿಕೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದೇವೆ. ಗುಜರಿ ಅಂಗಡಿಯಲ್ಲಿ ಕಬ್ಬಿಣ ಮತ್ತು ಉಕ್ಕು ಕೆಜಿ ಲೆಕ್ಕಾಚಾರದಲ್ಲಿ ಖರೀದಿಸಿ ರೈತರಿಗೆ ಅವಶ್ಯವಿರುವ ಪರಿಕರ ತಯಾರಿಸಿ ಮಾರಾಟ ಮಾಡಲಾಗುತ್ತಿದೆ ಎಂದು ಕುಟುಂಬದ ವಿನೋದ್ ಹೇಳುತ್ತಾರೆ.

ಆಂಧ್ರ ಪ್ರದೇಶದ ಹಾಗೂ ತೆಲಂಗಾಣಕ್ಕೂ ಹೋಗುತ್ತೇವೆ. ಬೆಳೆ ಕೊಯ್ಲು ಸಂದರ್ಭದಲ್ಲಿ ಕನಿಷ್ಠ ನಾಲ್ಕು ತಿಂಗಳು ಅಲೆಮಾರಿಗಳಾಗಲೇಬೇಕು. ನಾನು ಪಿ.ಯು.ಸಿ ವ್ಯಾಸಂಗ ಮಾಡಿದ್ದೆ. ಕುಟುಂಬದ ಕಷ್ಟ ನೋಡಿ ಈ ವೃತ್ತಿಗೆ ಬಂದಿದ್ದೇನೆ ಎಂದು ಕನ್ನಡದಲ್ಲಿ ಸ್ಪಷ್ಟವಾಗಿ ತಿಳಿಸುತ್ತಾರೆ ವಿನೋದ್.

ಕುಟುಂಬಗಳಿಗೆ ಗೋಧಿ ಹಿಟ್ಟು ವಿತರಣೆ: ಶೈಕ್ಷಣಿಕವಾಗಿ ಮತ್ತು ಮೂಲ ಸೌಲಭ್ಯವಂಚಿತ ನೂರಾರು ಅಲೆಮಾರಿ ಸಮುದಾಯಗಳು ದೇಶದಲ್ಲಿವೆ, ಅಂತಹ ಕುಟುಂಬಗಳನ್ನು ಗುರುತಿಸಿ ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸ ಸರ್ಕಾರ ಮಾಡಬೇಕಾಗಿದೆ ಎಂದು ಕರ್ನಾಟಕ ಪ್ರದೇಶದ ಕಾಂಗ್ರೆಸ್ ಸಮಿತಿ ಪರಿಶಿಷ್ಟ ಪಂಗಡ ಘಟಕ ರಾಜ್ಯ ಉಪಾಧ್ಯಕ್ಷ ಮಜ್ಜಿಗೆ ಹೊಸಹಳ್ಳಿ ವೆಂಕಟೇಶ್ ತಿಳಿಸಿದರು.

ಇಲ್ಲಿನ ಪ್ರಮುಖ ರಸ್ತೆಯಲ್ಲಿ ಬೀಡು ಬಿಟ್ಟಿರುವ ಅಲೆಮಾರಿ ಕುಲುವೆ ಕಾರ್ಮಿಕರ ಪ್ರತಿ ಕುಟುಂಬ ಗೋಧಿ ಹಿಟ್ಟಿನ ಐದು ಕೆಜಿ ಪೊಟ್ಟಣವನ್ನು ಅವರು ವಿತರಿಸಿದರು.

*

ನಾಲ್ಕೈದು ಬಾರಿ ಈ ಪ್ರಕ್ರಿಯೆ

ಪ್ರತಿನಿತ್ಯ ಬೆಳಿಗ್ಗೆ 6 ಕ್ಕೆ ಆರಂಭವಾಗುವ ಕುಲುಮೆ ಕೆಲಸದಲ್ಲಿ ಮಹಿಳೆಯರು ಮತ್ತು ಮಕ್ಕಳು ಭಾಗವಹಿಸುತ್ತಾರೆ. ನಿಗಿನಿಗಿ ಕೆಂಡದಲ್ಲಿ ಕಾದ ಮಹಿಳೆಯರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಇರುವ ಸುತ್ತಿಗೆಯಿಂದ ಕಬ್ಬಿಣವನ್ನು ಬಡಿಯಬೇಕು.

ಬಡಿಯುತ್ತಿರುವಾಗಲೇ ಮತ್ತೊಬ್ಬ, ತಯಾರಿ ಮಾಡುವ ವಸ್ತುವಿಗೆ ತಿರುವು ಕೊಡುತ್ತಾ ಸಾಗಬೇಕು. ನಾಲ್ಕೈದು ಬಾರಿ ಈ ಪ್ರಕ್ರಿಯೆ ನಡೆದ ನಂತರವೇ ಬಂದು ಪರಿಕರ ಸ್ಪಷ್ಟರೂಪ ಪಡೆದುಕೊಳ್ಳುತ್ತದೆ. ಕುಡುಗೋಲು, ಚಾಕು, ಚೂರಿ ವಿವಿಧ ರೀತಿಯ ಮಚ್ಚುಗಳನ್ನು ಸ್ಥಳದಲ್ಲೇ ತಯಾರಿಸಿ ಮಾರಾಟ ಮಾಡಿ ಜೀವನ ನಿರ್ವಹಣೆ ನಿತ್ಯದ ಕಸುಬಾಗಿದೆ ಎನ್ನುತ್ತಾರೆ ಬೀಡುಬಿಟ್ಟಿರುವ ಕುಟುಂಬದ ಸದಸ್ಯ ವಿನೋದ್‌.

**

ರಾಷ್ಟ್ರ ನಾಯಕರ ಜಯಂತಿ, ಪುಣ್ಯ ಸ್ಮರಣೆ ಮತ್ತು ವೈಯುಕ್ತಿಕ ಜನ್ಮದಿನಾಚರಣೆಯಂತಹ ಸಂದರ್ಭಗಳಲ್ಲಿ ಇಂತಹ ಸಮುದಾಯಕ್ಕೆ ಪ್ರೋತ್ಸಾಹ ನೀಡಬೇಕು

-ಮಜ್ಜಿಗೆ ಹೊಸಹಳ್ಳಿ ವೆಂಕಟೇಶ್,

ಪ್ರದೇಶದ ಕಾಂಗ್ರೆಸ್ ಸಮಿತಿ ಪರಿಶಿಷ್ಟ ಪಂಗಡ ಘಟಕ ರಾಜ್ಯ ಉಪಾಧ್ಯಕ್ಷ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry