ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಇಇ ಕಚೇರಿ, ಮನೆ ಮೇಲೆ ಎಸಿಬಿ ದಾಳಿ

ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗೆ ಸಂಬಂಧಿಸಿದ ನಾಲ್ಕು ಸ್ಥಳಗಳಲ್ಲಿ ಏಕಕಾಲಕ್ಕೆ ಶೋಧ
Last Updated 14 ಡಿಸೆಂಬರ್ 2017, 6:43 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಹೇಮಂತ್ ಅವರ ಕಚೇರಿ, ಫಾರ್ಮ್‌ ಹೌಸ್‌, ಮನೆಗಳು ಸೇರಿದಂತೆ ನಾಲ್ಕು ಕಡೆಗಳಲ್ಲಿ ಬುಧವಾರ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿ, ಅಕ್ರಮ ಆಸ್ತಿ ಮಾಹಿತಿ ಕಲೆ ಹಾಕಲು ತಪಾಸಣೆ ನಡೆಸಿದರು.

ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿರುವ ಹೇಮಂತ್‌ ನಿವಾಸ, ಶಿಡ್ಲಘಟ್ಟ ತಾಲ್ಲೂಕಿನ ಟಿ.ಪೆದ್ದನಹಳ್ಳಿಯಲ್ಲಿರುವ ಎಸ್‌ಜಿಎನ್ ಫಾರ್ಮ್‌ಹೌಸ್‌ನಲ್ಲಿರುವ ಅವರ ತಂದೆ, ತಾಯಿ ವಾಸವಿರುವ ಮನೆ, ಅವರ ಬಾಮೈದ ರಮೇಶ್ ಅವರು ನೆಲಮಂಗಲದಲ್ಲಿ ಬಾಡಿಗೆ ಇರುವ ಮನೆ ಮತ್ತು ಚಿಕ್ಕಬಳ್ಳಾಪುರದಲ್ಲಿರುವ ಕಚೇರಿ ಮೇಲೆ ಈ ದಾಳಿ ನಡೆದಿದೆ.

ಹೇಮಂತ್‌ ಅವರು ಆದಾಯವನ್ನು ಮೀರಿ ಆಸ್ತಿ ಸಂಪಾದಿಸಿದ್ದಾರೆ ಎನ್ನುವ ದೂರಿನ ಜಾಡು ಹಿಡಿದು ಎಸಿಬಿ ಅಧಿಕಾರಿಗಳು ಈ ದಾಳಿ ನಡೆಸಿದ್ದಾರೆ. ರಾಮನಗರ ಎಸಿಬಿ ಡಿವೈಎಸ್‌ಪಿ ಚಂದ್ರಶೇಖರ್, ಕೋಲಾರ ಡಿವೈಎಸ್‌ಪಿ ಮೋಹನ್, ಚಿಕ್ಕಬಳ್ಳಾಪುರ ಇನ್‌ಸ್ಪೆಕ್ಟರ್ ಲಕ್ಷ್ಮೀದೇವಿ , ರಾಮನಗರದ ಗೌತಮ್‌, ಪ್ರಕಾಶ್, ಬೆಂಗಳೂರಿನ ಇನ್‌ಸ್ಪೆಕ್ಟರ್‌ಗಳಾದ ಕುಮಾರಸ್ವಾಮಿ, ಹಾಲಪ್ಪ ಅವರು ಸೇರಿದಂತೆ ಸುಮಾರು 25 ಅಧಿಕಾರಿಗಳು ಈ ದಾಳಿಯಲ್ಲಿ ಭಾಗವಹಿಸಿದ್ದರು ಎಂದು ತಿಳಿದು ಬಂದಿದೆ.

ಬುಧವಾರ ಬೆಳಿಗ್ಗೆ 5.30ರ ಸುಮಾರಿಗೆ ವಿದ್ಯಾರಣ್ಯಪುರದಲ್ಲಿರುವ ಹೇಮಂತ್ ಅವರ ಮನೆ ಮೇಲೆ ಮೊದಲು ದಾಳಿ ನಡೆಸಿ ಅವರನ್ನು ವಶಕ್ಕೆ ಪಡೆದ ಅಧಿಕಾರಿಗಳು ಮನೆಯಲ್ಲಿದ್ದ ಎಲ್ಲರ ಮೊಬೈಲ್‌ಗಳನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದರು. ಬಳಿಕ ಕೆಲ ಹೊತ್ತಿನಲ್ಲಿಯೇ ಉಳಿದ ನಾಲ್ಕು ಕಡೆಗಳಲ್ಲಿ ದಾಳಿ ನಡೆದಿದೆ ಎನ್ನಲಾಗಿದೆ.

ಟಿ.ಪೆದ್ದನಹಳ್ಳಿಯ ದಾಸಪ್ಪ, ವೆಂಕಟಮ್ಮ ದಂಪತಿಯ ಹಿರಿಯ ಮಗನಾದ ಹೇಮಂತ್ ಅವರು ಕಳೆದ ಒಂದೂವರೆ ವರ್ಷದಿಂದ ಚಿಕ್ಕಬಳ್ಳಾಪುರದಲ್ಲಿ ಸಣ್ಣ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರ ಸಹೋದರರ ಪೈಕಿ ರಾಮಕೃಷ್ಣ ಎಂಬುವರು ಬೆಂಗಳೂರಿನ ಬಿಬಿಎಂಪಿಯಲ್ಲಿ ಗುತ್ತಿಗೆದಾರ ರಾಗಿದ್ದಾರೆ. ಕಿರಿಯ ಸಹೋದರ ಶ್ರೀನಿವಾಸ್ ಪೆದ್ದನಹಳ್ಳಿಯಲ್ಲಿ ವ್ಯವಸಾಯ ಮಾಡಿಕೊಂಡಿದ್ದಾರೆ.

ಹೇಮಂತ್ ಅವರ ಪತ್ನಿ ನೆಲಮಂಗಲ ತಾಲ್ಲೂಕಿನಲ್ಲಿ ಸರ್ಕಾರಿ ಶಾಲೆ ಶಿಕ್ಷಕಿಯಾಗಿದ್ದಾರೆ. ಈ ದಂಪತಿಗೆ ಮೂರು ಮಕ್ಕಳು ಇದ್ದಾರೆ. ಈ ಪೈಕಿ ಹಿರಿಯ ಮಗಳು ಐಎಎಸ್ ಪರೀಕ್ಷೆ ತರಬೇತಿ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಎಸಿಬಿ ಅಧಿಕಾರಿಗಳ ನಾಲ್ಕು ತಂಡಗಳು ದಿನವೀಡಿ ಅಕ್ರಮ ಆಸ್ತಿಗೆ ಪತ್ತೆ ಮಾಡಲು ಮಾಹಿತಿ, ಕಡತ, ದಾಖಲೆಗಳನ್ನು ಕಲೆ ಹಾಕುವಲ್ಲಿ ನಿರತವಾಗಿದ್ದವು. ತಡರಾತ್ರಿ ವರೆಗೆ ಆದಾಯದ ಲೆಕ್ಕ ಹಾಕುವ ಕಾರ್ಯದಲ್ಲಿ ನಿರತರಾಗಿದ್ದರು. ಹೀಗಾಗಿ ಆದಾಯವನ್ನು ಮೀರಿದ ಸಂಪತ್ತಿನ ಮಾಹಿತಿ ಲಭ್ಯವಾಗಲಿಲ್ಲ. ಬುಧವಾರ ತಡರಾತ್ರಿ ಅಥವಾ ಗುರುವಾರ ಅಕ್ರಮ ಆಸ್ತಿ ಮಾಹಿತಿಯನ್ನು ಅಧಿಕಾರಿಗಳು ಘೋಷಿಸುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT