ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆ ವಿಮೆ ಪಾವತಿಗೆ 15 ದಿನ ಗಡುವು

ಜಿಲ್ಲಾ ಪಂಚಾಯ್ತಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ
Last Updated 14 ಡಿಸೆಂಬರ್ 2017, 6:59 IST
ಅಕ್ಷರ ಗಾತ್ರ

ಧಾರವಾಡ: ಜಿಲ್ಲೆಯಲ್ಲಿ ಬಾಕಿ ಉಳಿದಿರುವ ಬೆಳೆ ವಿಮೆ ಹಣವನ್ನು 15 ದಿನಗಳೊಳಗೆ ಪಾವತಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಕೃಷಿ ಇಲಾಖೆ ಜಂಟಿ ನಿರ್ದೇಶಕರಿಗೆ ಖಡಕ್‌ ಸೂಚನೆ ನೀಡಿದರು.

ಜಿಲ್ಲಾ ಪಂಚಾಯ್ತಿ ಸಭಾಭವನದಲ್ಲಿ ಬುಧವಾರ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

‘ಬೆಳೆ ವಿಮೆ ಹಣ ಬಾರದೆ ರೈತರು ಸಂಕಷ್ಟದಲ್ಲಿದ್ದಾರೆ. ಬಾಕಿ ಹಣ ಪಾವತಿಸಲು ಇರುವ ತೊಂದರೆಗಳೇನು. ರೈತರು ಪಾವತಿಸಿದ ಪ್ರೀಮಿಯಂ ಹಣದಿಂದ ವಿಮೆ ಕಂಪೆನಿಗಳು ಸುಮಾರು ₹ 600 ಕೋಟಿ ಲಾಭ ಮಾಡಿಕೊಂಡಿವೆ. ಹತ್ತಿ ಮತ್ತು ಮೆಣಸಿನಕಾಯಿ ಬೆಳೆ ಹಾನಿಗೆ ಸಂಬಂಧಿಸಿದಂತೆ ವಿಮೆ ಹಣ ಪಾವತಿ ಮಾಡುವುದು ಬಾಕಿ ಇದೆ. ವಿಮಾ ಕಂಪೆನಿ ಅಧಿಕಾರಿಗಳು ನಡೆಸುವ ಸಭೆಯಲ್ಲಿ ಜನಪ್ರತಿನಿಧಿಗಳು ಮತ್ತು ರೈತರಿಗೂ ಅವಕಾಶ ನೀಡಬೇಕು. ಅಂದಾಗ ಮಾತ್ರ ನಿಜವಾದ ಸಮಸ್ಯೆಗಳ ಅರಿವಾಗುತ್ತದೆ. ಕಂಪೆನಿಗಳಿಗೆ 15 ದಿನ ಕಾಲಾವಕಾಶ ನೀಡಿ, ಈ ಕುರಿತು ಕೆಡಿಪಿ ಸಭೆಯಲ್ಲಿ ನಿರ್ಣಯ ಕೈಗೊಂಡು, ನಿರ್ಣಯದ ಪ್ರತಿಯನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಕಳುಹಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಕೃಷಿ ಇಲಾಖೆ ಜಂಟಿ ನಿರ್ದೇಶಕ ಟಿ.ಎಸ್‌.ರುದ್ರೇಶಪ್ಪ, ‘2016 ರ ಮುಂಗಾರು ಬೆಳೆಗೆ ಸಂಬಂಧಿಸಿದಂತೆ ₹172 ಕೋಟಿ ಬೆಳೆ ವಿಮೆ ಹಣದಲ್ಲಿ ₹ 87 ಕೋಟಿ ಬಾಕಿ ಇತ್ತು. ಈ ಪೈಕಿ ಇದೀಗ ಹತ್ತಿ ಮತ್ತು ಮೆಣಸಿನಕಾಯಿ ಬೆಳೆಯ ₹ 72 ಕೋಟಿ ಹಣ ವಿಮೆ ಕಂಪೆನಿಯಿಂದ ಬ್ಯಾಂಕಿಗೆ ಬಂದಿದೆ’ ಎಂದು ಮಾಹಿತಿ ನೀಡಿದರು.

ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತ ಪಡಿಸಿದ ಸಚಿವ ವಿನಯ, ‘ಹತ್ತಿ, ಮೆಣಸಿನಕಾಯಿ ಸೇರಿದಂತೆ ಈ ವರ್ಷ ಮತ್ತೆ ಕಡಲೆಗೂ ಕೀಟಬಾಧೆ ತಗುಲಿದ್ದು,  ಬೆಳೆ ಕೈಸೇರುವುದು ಕಷ್ಟವಾಗಿದೆ. ಇಂತಹ ಸಂದರ್ಭದಲ್ಲಿ ಅವರಿಗೆ ಸೇರಬೇಕಿರುವ ಬೆಳೆವಿಮೆಯನ್ನು ಕೂಡಲೇ ತಲುಪಿಸುವುದಕ್ಕೆ ವ್ಯವಸ್ಥೆ ಮಾಡಿ. ಇಂದಿನ ಸಭೆಯಲ್ಲಿ ಒಂದು ಠರಾವು ಮಾಡಿ ಕೇಂದ್ರ, ರಾಜ್ಯ ಸರ್ಕಾರ ಮತ್ತು ವಿಮಾ ಕಂಪೆನಿಗಳಿಗೆ ಈ ಕುರಿತು ಪತ್ರ ಬರೆಯಿರಿ’ ಎಂದು ಸೂಚನೆ ನೀಡಿದರು.  

ಕೃಷಿ ಹೊಂಡ ನಿರ್ಮಿಸಿಕೊಂಡ ರೈತರಿಗೆ ಹಣ ಸಂದಾಯವಾಗಿಲ್ಲ ಎಂಬ ಸಚಿವರ ಪ್ರಶ್ನೆಗೆ ಉತ್ತರಿಸಿದ ರುದ್ರೇಶಪ್ಪ, ‘ಕೆಲವು ರೈತರು ಒಂದೇ ಕಡೆ ಕೃಷಿ ಹೊಂಡ ನಿರ್ಮಿಸಿದ್ದಾರೆ. ಅಲ್ಲದೇ, ಹಣ ಪಾವತಿಸಲು ಹಲವು ತಾಂತ್ರಿಕ ತೊಂದರೆಗಳಿವೆ’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ‘ನೀವು ಖುದ್ದಾಗಿ ಸ್ಥಳ ಪರಿಶೀಲನೆ ನಡೆಸಿ, ಸಮಸ್ಯೆ ಬಗೆಹರಿಸಿ. ಕೆಲವು ಅಧಿಕಾರಿಗಳು ರೈತರೊಂದಿಗೆ ಸರಿಯಾಗಿ ವರ್ತಿಸುತ್ತಿಲ್ಲ ಎನ್ನುವ ದೂರುಗಳಿವೆ. ಅಧಿಕಾರಿಗಳು ರೈತರೊಂದಿಗೆ ಸಭ್ಯತೆಯಿಂದ ವರ್ತಿಸಬೇಕು. ಸರ್ಕಾರದ ಸೌಲಭ್ಯಗಳನ್ನು ದೊರಕಿಸಿಕೊಡುವ ನಿಟ್ಟಿನಲ್ಲಿ ತಾಳ್ಮೆಯಿಂದ ವ್ಯವಹರಿಸಬೇಕು. ಈ ನಿಟ್ಟಿನಲ್ಲಿ ನಿಮ್ಮ ಅಧೀನ ಅಧಿಕಾರಿಗಳಿಗೆ ಸರಿಯಾದ ನಿರ್ದೇಶನ ನೀಡಿ’ ಎಂದು ಸಚಿವರು ಸೂಚಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ, ‘ಸಾರ್ವಜನಿಕರೊಂದಿಗೆ ಸರಿಯಾಗಿ ವರ್ತಿಸದ ಅಧಿಕಾರಿಗಳಿಗೆ ಲಿಖಿತ ಎಚ್ಚರಿಕೆ ನೀಡಿ, ವರ್ತನೆ ಸರಿಪಡಿಸಿಕೊಳ್ಳದಿದ್ದರೆ ಸೂಕ್ತ ಕ್ರಮ ಕೈಗೊಳ್ಳಿ’ ಎಂದು ಸೂಚನೆ ನೀಡಿದರು.

ಪ್ರಗತಿ ಪರಿಶೀಲನಾ ಸಭೆಗೆ ಬರುವ ಅಧಿಕಾರಿಗಳು ಸಮರ್ಪಕ ಮಾಹಿತಿ ಮತ್ತು ಸೂಕ್ತ ಸಿದ್ಧತೆಯೊಂದಿಗೆ ಬರಬೇಕು. ಸರ್ಕಾರದ ಯೋಜನೆಗಳು ಸಮರ್ಪಕವಾಗಿ ಜನರಿಗೆ ಮುಟ್ಟಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಸಭೆಗೆ ಸೂಕ್ತ ಮಾಹಿತಿ ನೀಡುವುದರ ಜೊತೆ ರೈತರಿಗೂ ಸೌಲಭ್ಯಗಳ ಕುರಿತು ಸರಿಯಾದ ಮಾಹಿತಿ ಒದಗಿಸಬೇಕು ಎಂದು ತೋಟಗಾರಿಕಾ ಇಲಾಖೆ ಅಧಿಕಾರಿಗೆ ಸಚಿವರು ಖಡಕ್‌ ಸೂಚನೆ ನೀಡಿದರು.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಚೈತ್ರಾ ಶಿರೂರ, ಸಿಇಒ ಸ್ನೇಹಲ್‌ ರಾಯಮಾನೆ, ಉಪಾಧ್ಯಕ್ಷ ಶಿವಾನಂದ ಕರಿಗಾರ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಇದ್ದರು.

**

ಜಿಲ್ಲೆಯಲ್ಲಿ ಸೀಮೆ ಎಣ್ಣೆ ಕಡಿಮೆ ಯಾಕೆ?

‘ಹಾವೇರಿ, ಗದಗ ಮತ್ತು ಬೆಳಗಾವಿ ಜಿಲ್ಲೆಯಲ್ಲಿನ ಪಡಿತರ ಚೀಟಿದಾರರಿಗೆ 3 ಲೀಟರ್‌ನಷ್ಟು ಸೀಮೆಎಣ್ಣೆ ಕೊಡಲಾಗುತ್ತಿದೆ. ಆದರೆ, ಧಾರವಾಡ ಜಿಲ್ಲೆಯಲ್ಲಿ ಮಾತ್ರ ಯಾಕೆ ಸೀಮೆ ಎಣ್ಣೆ ಕಡಿಮೆ ನೀಡಲಾಗುತ್ತಿದೆ. ಇದನ್ನು ಸರಿಯಾಗಿ ಮಾಹಿತಿ ಪಡೆದು ಕ್ರಮಕೈಗೊಳ್ಳುವಂತೆ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ನಿರ್ದೇಶಕ ಸದಾಶಿವ ಮರ್ಜಿ ಅವರಿಗೆ ಸಚಿವ ವಿನಯ ಸೂಚಿಸಿದರು.

ರಸ್ತೆಗೆ ಮಟ್ಟಿ ಬಳಸಿದರೆ ಗುಣಮಟ್ಟ ಹೇಗೆ ಸಾಧ್ಯ..?

ಹುಬ್ಬಳ್ಳಿ-ಗದಗ ಮಧ್ಯ ಮತ್ತು ಧಾರವಾಡದ ಜ್ಯುಬಿಲಿ ವೃತ್ತದಿಂದ ನರೇಂದ್ರ ಕ್ರಾಸ್ ವರೆಗೂ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ ಕಾಮಗಾರಿಯಲ್ಲಿ ರಸ್ತೆಗಳ ನಿರ್ಮಾಣಕ್ಕೆ ಗಟ್ಟಿ ಮಣ್ಣು ಮತ್ತು ಮೊರಂ ಬಳಸುವ ಬದಲು ಮಟ್ಟಿಯನ್ನ ಬಳಸಲಾಗುತ್ತಿದ್ದು, ಇದರಿಂದ ಗುಣಾತ್ಮಕ ರಸ್ತೆ ನಿರ್ಮಾಣ ಸಾಧ್ಯವಿಲ್ಲ. ಭದ್ರಾಪೂರದಿಂದ ಗದಗವರೆಗಿನ ರಸ್ತೆಯಲ್ಲಿ ಬರೀ ಮಟ್ಟಿ ಹಾಕಲಾಗುತ್ತಿದ್ದು, ಕೂಡಲೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸುವಂತೆಯೂ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಗಮನಕ್ಕೂ ತರುವಂತೆ ವಿನಯ ಕುಲಕರ್ಣಿ ಲೋಕೋಪಯೋಗಿ ಇಲಾಖೆ ಅಧಿಕಾರಿಗೆ ಸೂಚಿಸಿದರು.

**

ಬೆಳೆ ವಿಮೆ ಬಾಕಿ ಪಾವತಿಸದ ವಿಮೆ ಕಂಪೆನಿಗಳ ವಿರುದ್ಧವೇ ಹೋರಾಟ ಮಾಡಬೇಕಾಗುತ್ತದೆ. ರೈತರ ಪ್ರಿಮಿಯಂ ಹಣದಲ್ಲಿ ಲಾಭ ಮಾಡಿಕೊಳ್ಳುವ ಖಾಸಗಿ ವಿಮೆ ಕಂಪೆನಿಗಳು ಬಾಕಿ ನೀಡಲು ಯಾಕೆ ಹಿಂದೇಟು ಹಾಕುತ್ತಿವೆ
–ವಿನಯ ಕುಲಕರ್ಣಿ, ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT