ಭಾನುವಾರ, ಮಾರ್ಚ್ 7, 2021
20 °C
ಅಯ್ಯನಹಳ್ಳಿಯಲ್ಲಿ ಮಹಿಳಾ ಸಾಮೂಹಿಕ ಶೌಚಾಲಯ ಹೆಸರಿಗಷ್ಟೇ

ಮಹಿಳೆಯರಿಗೆ ಬಯಲೇ ಗತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಹಿಳೆಯರಿಗೆ ಬಯಲೇ ಗತಿ

ಮರಿಯಮ್ಮನಹಳ್ಳಿ: ಒಂದೆಡೆ ಈ ಪುಟ್ಟ ಹಳ್ಳಿಯನ್ನು ಬಯಲು ಶೌಚ ಮುಕ್ತ ಗ್ರಾಮವನ್ನಾಗಿಸುವ ನಿಟ್ಟಿನಲ್ಲಿ ಪಂಚಾಯ್ತಿ ಮುಂದಾಗಿದ್ದರೆ, ಇನ್ನೊಂದೆಡೆ ಇರುವ ಮಹಿಳಾ ಸಾಮೂಹಿಕ ಶೌಚಾಲಯದ ನಿರ್ವಹಣೆ ಕೊರತೆಯಿಂದಾಗಿ ಮಹಿಳೆಯರ ಪಾಡು ಹೇಳತೀರದಂತಾಗಿದೆ. ಇದರಿಂದ ಮಹಿಳೆಯರಿಗೆ ಬಯಲೇ ಗತಿ ಎನ್ನುವಂತಾಗಿದೆ. ಹಗಲಿನಲ್ಲಿ ಜನ ಓಡಾಡುತ್ತಾರೆ ಎನ್ನುವ ಕಾರಣ ಸಂಜೆಯಾದ ನಂತರ ಮಹಿಳೆಯರು ಬಹಿರ್ದೆಸೆಗೆ ಹೋಗುತ್ತಾರೆ.

ಇದು ಪಟ್ಟಣ ಸಮೀಪದ ಡಣಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿ ಪುಟ್ಟ ಗ್ರಾಮ ಹಳೆ ಅಯ್ಯನಹಳ್ಳಿ ಮಹಿಳೆಯರ ಸಮಸ್ಯೆ. ಗ್ರಾಮದಲ್ಲಿರುವ ಮೂರೂ ಮಹಿಳಾ ಶೌಚಾಲಯಗಳ ನಿರ್ವಹಣೆ ಇಲ್ಲ. ಸುಮಾರು 1,500 ಜನಸಂಖ್ಯೆ ಹೊಂದಿರುವ ಗ್ರಾಮದಲ್ಲಿ ಸುಮಾರು 200 ಮನೆಗಳಿದ್ದು, ಗ್ರಾಮ ಪಂಚಾಯ್ತಿ ಉಪಾಧ್ಯಕ್ಷೆ ರಾಧಿಕಾ ರಾಮಚಂದ್ರ ಅವರು ಸೇರಿದಂತೆ ಮೂವರು ಗ್ರಾಮ ಪಂಚಾಯ್ತಿ ಸದಸ್ಯರಿದ್ದಾರೆ. ಆದರೆ, ಯಾರೂ ಮಹಿಳೆಯರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಪ್ರಯತ್ನಿಸಿಲ್ಲ.

ನಿರ್ವಹಣೆ ಕೊರೆಯಿಂದಾಗಿ ಮಹಿಳೆಯರು ಶೌಚಾಲಯಕ್ಕೆ ಹೋಗುವುದಿಲ್ಲ. ಊರ ಹೊರಗಿನ ಸರ್ಕಾರಿ ಶಾಲೆಯ ಹಿಂಭಾಗದಲ್ಲಿ ನಿರ್ಮಿಸಿರುವ ಮಹಿಳಾ ಶೌಚಾಲಯದ ಸ್ಥಿತಿ ಕೂಡ ಹೇಳತೀರದಂತಾಗಿದೆ.ಸುತ್ತ ಸುಮಾರು ಆರು ಅಡಿ ಎತ್ತರದ ಕಲ್ಲು ಬಂಡೆಗಳನ್ನು ನಿಲ್ಲಿಸಿ ಮಾಡಿದ ಶೌಚಾಲಯಕ್ಕೆ ಹೋಗಲು ಸರಿಯಾದ ದಾರಿ ಇಲ್ಲ. ಮಹಿಳೆಯರು ಕಲ್ಲು,ಮುಳ್ಳು ದಾಟಿಕೊಂಡು ತೆರಳಬೇಕಿದೆ. ಜೊತೆಗೆ ರಸ್ತೆಗೆ ಅನತಿ ದೂರದಲ್ಲಿ ತಗ್ಗು ಪ್ರದೇಶದಲ್ಲಿ ಇರುವುದರಿಂದ ದಾರಿಹೋಕರಿಗೆ ಕಂಡು ಬರುವುದರಿಂದ ಮಹಿಳೆಯರು ಹೋಗುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಹುಳ, ಹುಪ್ಪಡಿಗಳ ಕಾಟ ಒಂದೆಡೆಯಾದರೆ, ಕತ್ತಲಾದ ನಂತರ ಬೆಳಕಿನ ವ್ಯವಸ್ಥೆ ಇಲ್ಲದಿರುವುದರಿಂದ ಯಾರೂ ಆ ಕಡೆ ಮುಖ ಮಾಡುವುದಿಲ್ಲ. ಇನ್ನೆರಡು ಮಹಿಳಾ ಶೌಚಾಲಯಗಳ ಸ್ಥಿತಿ ಕೂಡ ಅವುಗಳಿಗಿಂತ ಭಿನ್ನವಾಗೇನೂ ಇಲ್ಲ. ಒಳ ಮತ್ತು ಹೊರ ಆವರಣ ತಿಪ್ಪೆಯಾಗಿದೆ. ಮುಳ್ಳುಕಂಟಿ ಬೆಳೆದು ನಿಂತಿದೆ. ಹುಳ, ಹುಪ್ಪಡಿ ಕಾಟಕ್ಕೆ ಮಹಿಳೆಯರು ಬೇಸತ್ತು ಹೋಗಿದ್ದಾರೆ. ಪರ್ಯಾಯ ವ್ಯವಸ್ಥೆ ಇಲ್ಲದ ಕಾರಣ ಅನಿವಾರ್ಯವಾಗಿ ಅದರಲ್ಲೇ ಹೋಗಿ ಬರುತ್ತಾರೆ.

‘ವೈಯಕ್ತಿಕ ಶೌಚಾಲಯ ಕಟ್ಟಿಸಿಕೊಳ್ಳಲು ಸರ್ಕಾರ ಪಂಚಾಯ್ತಿಗಳ ಮೂಲಕ ಅನುದಾನ ನೀಡುತ್ತದೆ. ಆದರೆ, ನಮ್ಮ ಗ್ರಾಮದ ಬಹುತೇಕ ಕಡೆ ಬಂಡೆ ನೆಲಹಾಸು ಇರುವುದರಿಂದ ಗುಂಡಿ ತೊಡಲು ಆಗುವುದಿಲ್ಲ. ಹಾಗಾಗಿ ಶೌಚಾಲಯ ನಿರ್ಮಿಸಿಕೊಡಲು ಆಗುವುದಿಲ್ಲ ಎಂದು ಹೇಳುತ್ತಿದ್ದಾರೆ’ ಎನ್ನುತ್ತಾರೆ ಗ್ರಾಮದ ಜಯಮ್ಮ, ಕಮಲಾಕ್ಷಿ, ರಾಧಾ, ಶ್ವೇತಾ, ಲಕ್ಷ್ಮಿ.

‘ಪುರುಷರು ಹೇಗೋ ಬಯಲಿಗೆ ಹೋಗಿ ಬರುತ್ತಾರೆ. ಮಹಿಳೆಯರು ಏನು ಮಾಡುವುದು. ಹಗಲಿನಲ್ಲಿ ಜನ ಓಡಾಡುತ್ತಾರೆ ಎಂದು ಮಹಿಳೆಯರು ರಾತ್ರಿ ವೇಳೆ ಬಹಿರ್ದೆಸೆಗೆ ಹೋಗುವುದನ್ನು ರೂಢಿಸಿಕೊಂಡಿದ್ದಾರೆ’ ಎಂದರು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಉಮೇಶ್‌ ಜಹಗೀರದಾರ್‌ ಅವರನ್ನು ಸಂಪರ್ಕಿಸಿದಾಗ, ‘ಗ್ರಾಮದಲ್ಲಿ 118 ವೈಯಕ್ತಿಕ ಶೌಚಾಲಯ ನಿರ್ಮಿಸುವ ಗುರಿ ಹೊಂದಲಾಗಿದ್ದು, ಗ್ರಾಮದ ಬಹುತೇಕ ಕಡೆ ನೆಲಹಾಸು ಬಂಡೆ ಇರುವುದರಿಂದ ಸಮಸ್ಯೆಯಾಗಿದೆ’ ಎಂದರು.

**

ಮಹಿಳಾ ಶೌಚಾಲಯಗಳನ್ನು ವರ್ಷದಲ್ಲಿ ಮೂರ್ನಾಲ್ಕು ಬಾರಿ ನಿರ್ವಹಣೆ ಮಾಡಲಾಗುತ್ತದೆ. ಒಂದುವೇಳೆ ಅಲ್ಲಿ ಕೊರತೆ ಕಂಡು ಬಂದರೆ ಕ್ರಮ ತೆಗೆದುಕೊಳ್ಳಲಾಗುವುದು.

-ರಾಧಿಕಾ ರಾಮಚಂದ್ರ, ಉಪಾಧ್ಯಕ್ಷರು, ಡಣಾಪುರ ಗ್ರಾಮ ಪಂಚಾಯಿತಿ

*

-ಎಚ್‌.ಎಸ್‌. ಶ್ರೀಹರಪ್ರಸಾದ್‌

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.