ಗುರುವಾರ , ಫೆಬ್ರವರಿ 25, 2021
29 °C
ಕೃಷ್ಣಾ 'ಬಿ'. ಸ್ಕೀಂ 3ನೇ ಹಂತದ ಯೋಜನೆಯ ಭೂಸ್ವಾಧೀನ ಸಭೆ

ನ್ಯಾಯಯುತ ಪರಿಹಾರ ನೀಡುವ ಭರವಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನ್ಯಾಯಯುತ ಪರಿಹಾರ ನೀಡುವ ಭರವಸೆ

ಕೊಪ್ಪಳ: ‘ರೈತರ ಜಮೀನಿಗೆ ನ್ಯಾಯಯುತ ಪರಿಹಾರ ಕೊಡಿಸುವ ಜವಾಬ್ದಾರಿ ತಮ್ಮದು’ ಎಂದು ಕೃಷ್ಣಾ 'ಬಿ'. ಸ್ಕೀಂ ಮೂರನೇ ಹಂತದ ಯೋಜನೆಯ ಭೂಸ್ವಾಧೀನ ಸಂಬಂಧಿಸಿ ಸಚಿವ ಸಂಪುಟ ಉಪಸಮಿತಿಯ ಅಧ್ಯಕ್ಷ, ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.

ಭೂಸ್ವಾಧೀನ ಸಂಬಂಧಿಸಿ ಇಲ್ಲಿನ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಬುಧವಾರ ನಡೆದ ರೈತರೊಂದಿಗಿನ ಸಂವಾದ ಸಭೆಯಲ್ಲಿ ಅವರು ಮಾತನಾಡಿದರು.

ಶಿವಮೊಗ್ಗ ಜಿಲ್ಲೆ ಸಾಗರ ಸಮೀಪ ಲಿಂಗನಮಕ್ಕಿ ಅಣೆಕಟ್ಟೆ ಕಟ್ಟಿದಾಗ ನಾನೂ ಭೂಮಿ ಕಳೆದುಕೊಂಡಿದ್ದೆ. ಆ ನೋವು ನನಗೂ ಗೊತ್ತು ಎಂದ ಅವರು, 20 ದಿನಗಳಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ಹೇಳಿದರು.

ಮಾಜಿ ಸಚಿವ ಅಮರೇಗೌಡ ಬಯ್ಯಾಪುರ ಅವರು ರೈತರ ಪರವಾಗಿ ಮಾತನಾಡಿ, ನೀರಾವರಿ ಮತ್ತು ಒಣ ಪ್ರದೇಶದ ಭೂಮಿಗೆ ಏಕರೂಪದ ದರ ನಿಗದಿ ಮಾಡಬೇಕು. ಒಪ್ಪಿತ ಬೆಲೆಯನ್ನು ಒಟ್ಟಿಗೇ ಕೊಡಬೇಕು ಎಂದು ಒತ್ತಾಯಿಸಿದರು.

ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿ, 'ನೀರಾವರಿ ವಿಚಾರದಲ್ಲಿ ನಾವು ರೈತಪ್ರೇಮ ಮೆರೆಯೋಣ. ಈ ಯೋಜನೆ ಈಗಾಗಲೇ ಜಾರಿಯಾಗಬೇಕಿತ್ತು. ಇನ್ನು ವಿಳಂಬ ಸಲ್ಲದು' ಎಂದರು.

ಶಾಸಕ ಶಿವರಾಜ ತಂಗಡಗಿ ಮಾತನಾಡಿ, ಕೊಪ್ಪಳ ಹಿಂದುಳಿದ ಜಿಲ್ಲೆ, ಕೈಗಾರಿಕೆ, ವಹಿವಾಟು ಎಲ್ಲ ವಿಷಯಗಳಲ್ಲೂ ಹಿಂದುಳಿದಿದೆ. ಆದ್ದರಿಂದ ಇಲ್ಲಿನ ರೈತರಿಗೆ ಬೇರೆ ಕಡೆಗಳಿಗಿಂತ ಹೆಚ್ಚು ಪರಿಹಾರ ಮೊತ್ತ ನೀಡಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಮಾತನಾಡಿ, 'ಕೊಪ್ಪಳ ಜಿಲ್ಲೆಯಲ್ಲಿ ಈ ಯೋಜನೆಗಾಗಿ 1,362 ಎಕರೆ ಭೂಮಿ ಸ್ವಾಧೀನಕ್ಕೊಳಪಡುತ್ತದೆ. ಇದು ಶೇ 1ರಷ್ಟು ಮಾತ್ರ. ಇಡೀ ಜಿಲ್ಲೆಗೆ ನೀರಾವರಿ ಮಾಡಲು ₹ 8 ಸಾವಿರ ಕೋಟಿ ಮೊತ್ತ ಬೇಕಾಗುತ್ತದೆ' ಎಂದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಎಚ್‌.ಕೆ.ಪಾಟೀಲ್‌, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ, ಶಾಸಕ ಕೆ.ರಾಘವೇಂದ್ರ ಹಿಟ್ನಾಳ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಲಕ್ಷ್ಮಮ್ಮ ನೀರಲೂಟಿ, ಬೆಳಗಾವಿಯ ಪ್ರಾದೇಶಿಕ ಆಯುಕ್ತ ಶಿವಯೋಗಿ ಕಳಸದ್‌, ಜಿಲ್ಲಾಧಿಕಾರಿ ಎಂ.ಕನಗವಲ್ಲಿ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ರುದ್ರೇಶ್‌ ಘಾಳಿ, ಉಪವಿಭಾಗಾಧಿಕಾರಿ ಗುರುದತ್‌ ಹೆಗ್ಡೆ ಇದ್ದರು.

ನಡೆಯದ ಸಂವಾದ

ಕಾರ್ಯಕ್ರಮ ಭೂಸ್ವಾಧೀನ ಸಂಬಂಧಿಸಿ ರೈತರೊಂದಿಗೆ ಸಂವಾದ ಎಂದಿದ್ದರೂ ಸಂವಾದ ನಡೆಯಲೇ ಇಲ್ಲ. ರೈತರ ಪರವಾಗಿ ಯಾರಾದರೂ ಮಾತನಾಡಲಿದ್ದಾರೆ ಎಂದು ಅಧಿಕಾರಿಗಳು ಘೋಷಿಸಿದರು. ಆದರೆ, ಯಾರೂ ಬರಲಿಲ್ಲ. ಪೂರ್ವನಿಗದಿಯೇನೋ ಎಂಬಂತೆ ಮಾಜಿ ಸಚಿವ ಅಮರೇಗೌಡ ಬಯ್ಯಾಪುರ ಅವರು ರೈತರ ಬೇಡಿಕೆಗಳನ್ನು ಮಂಡಿಸಿದರು.

‘ಸಂವಾದ ನಡೆಯದ ಬಗ್ಗೆ ಉಪಸಮಿತಿ ಅಧ್ಯಕ್ಷ ಕಾಗೋಡು ತಿಮ್ಮಪ್ಪ ಅವರನ್ನು ಪ್ರಶ್ನಿಸಿದಾಗ, ಬಾಗಲಕೋಟೆಯಲ್ಲಿಯೂ ರೈತರ ಪರವಾಗಿ ಯಾರಾದರೂ ಪ್ರತಿನಿಧಿಗಳು ಮಾತನಾಡುವಂತೆ ಸೂಚಿಸಿದ್ದೆವು. ಎಲ್ಲರಿಗೂ ಮಾತನಾಡುವ ಅವಕಾಶ ಕೊಟ್ಟಿರಲಿಲ್ಲ’ ಎಂದು ಸಮರ್ಥಿಸಿದರು.

ಕಾಲೆಳೆದ ಜಿಲ್ಲಾ ಪಂಚಾಯಿತಿ ಸದಸ್ಯ

‘ಸಿದ್ದರಾಮಯ್ಯ ಅವರು ಕಾಂಗ್ರೆಸ್‌ ನಡಿಗೆ ಕೃಷ್ಣೆಯ ಕಡೆಗೆ ಎಂದು ಪಾದಯಾತ್ರೆ ನಡೆಸಿದ್ದಾಗ ನಾನೂ ಪಾಲ್ಗೊಂಡಿದ್ದೆ. ಮುಂದಿನ ಐದು ವರ್ಷಗಳಲ್ಲಿ ಈ ಭೂಮಿಯಲ್ಲಿ ಹಸಿರು ರಾರಾಜಿಸಲಿದೆ ಎಂದಿದ್ದರು. ಈವರೆಗೂ ಹನಿ ನೀರು ಹರಿದಿಲ್ಲ. ಹಸಿರಾಗಲೂ ಇಲ್ಲ. ಇನ್ನಾದರೂ ಆಗಲಿ’ ಎಂದು ಕುಷ್ಟಗಿ ತಾಲ್ಲೂಕು ಹನುಮನಾಳು ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯ ನೇಮಣ್ಣ ಮೇಲಸಕ್ರಿ ಮಾತಿನಲ್ಲೇ ಕಾಲೆಳೆದರು.

‘ಅರಣ್ಯ ಭೂಮಿ ಎನ್ನುತ್ತೀರಿ ಒಂದು ಗಿಡವೂ ಇಲ್ಲ. ಊರುಗಳಿಗೆ ಸ್ಮಶಾನಗಳಿಲ್ಲ. ಇವೆಲ್ಲವನ್ನೂ ಪೂರೈಸಬೇಕು. ಸ್ಮಶಾನ ಭೂಮಿ ಸ್ವಾಧೀನಗೊಂಡರೆ ಅದಕ್ಕೂ ಒಂದೇ ರೀತಿಯ ಪರಿಹಾರ ಕೊಡಬೇಕು’ ಎಂದು ಸಚಿವ ಕಾಗೋಡು ತಿಮ್ಮಪ್ಪ ಅವರಿಗೆ ಒತ್ತಾಯಿಸಿದರು.

*

ಭೂಮಿ ಪೂರ್ಣ,ಭಾಗಶಃ ಕಳೆದುಕೊಂಡವರಿಗೆ ಒಂದೇ ರೀತಿಯ ಪರಿಹಾರವನ್ನು ಕೊಡಬೇಕು.

– ಅಮರೇಗೌಡ ಬಯ್ಯಾಪುರ, ಮಾಜಿ ಸಚಿಚ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.