5
ಹೊಂಗಾಣಿದೊಡ್ಡಿ ಗ್ರಾಮದಲ್ಲಿ ಉಚಿತ ನೇತ್ರ ತಪಾಸಣೆ ಶಿಬಿರ

ಮರಣದ ನಂತರ ಕಣ್ಣು ದಾನ ಮಾಡಿ

Published:
Updated:

ಸಾತನೂರು (ಕನಕಪುರ): ಮನುಷ್ಯನ ಅಂಗಾಂಗಗಳಲ್ಲಿ ಕಣ್ಣು ಅತ್ಯಂತ ಮುಖ್ಯವಾದುದು. ಅದನ್ನು ಜೋಪಾನ ಮಾಡಬೇಕು. ಮರಣದ ನಂತರ ಮತ್ತೊಬ್ಬರಿಗೆ ದಾನಮಾಡಿ ಅವರ ಬಾಳಿಗೆ ಬೆಳಕಾಗಿ ಎಂದು ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ವಾಸು ಹೇಳಿದರು.

ತಾಲ್ಲೂಕಿನ ಸಾತನೂರು ಹೋಬಳಿ ಹೊಂಗಾಣಿದೊಡ್ಡಿ ಗ್ರಾಮದಲ್ಲಿ ರಾಜ್ಯ ರೈತ ಸಂಘದ ಹಾಗೂ ದೃಷ್ಟಿ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಉಚಿತ ನೇತ್ರ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದರು.

‘ನಮ್ಮ ಆಹಾರ ಪದ್ದತಿಯಿಂದ ಅತಿ ಬೇಗನೆ ಕಣ್ಣಿನಲ್ಲಿ ಪೊರೆ ಬೆಳೆಯುತ್ತಿದೆ. ಕಣ್ಣಿನ ಸಮಸ್ಯೆ ತಲೆದೋರುತ್ತಿದೆ. ಗ್ರಾಮೀಣ ಭಾಗದ ಜನತೆ ಕಣ್ಣು ಸೇರಿದಂತೆ ಯಾವುದೇ ಆರೋಗ್ಯ ಸಮಸ್ಯೆಯಿದ್ದರೂ ಅದನ್ನು ನಿರ್ಲಕ್ಷಿಸದೆ ವೈದ್ಯರಿಗೆ ತೋರಿಸಿ ಅವರ ಮಾರ್ಗದರ್ಶನದಂತೆ ಚಿಕಿತ್ಸೆ ಪಡೆದು ಗುಣಪಡಿಸಿಕೊಳ್ಳಿ’ ಎಂದು ಹೇಳಿದರು.

ಗ್ರಾಮೀಣ ಪ್ರದೇಶದಲ್ಲಿ ಸಾಕಷ್ಟು ಹಣ್ಣು, ಸೊಪ್ಪು, ತರಕಾರಿಗಳು ಸಿಗುತ್ತಿದ್ದು ಅದನ್ನು ಯಥೇಚ್ಛವಾಗಿ ಬಳಸುವುದರಿಂದ ರೋಗಗಳನ್ನು ತಡೆಗಟ್ಟಬಹುದು. ಆರೋಗ್ಯವನ್ನು ಕಾಪಾಡಬಹುದೆಂದು ತಿಳಿಸಿದರು.

ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಚೀಲೂರು ಮುನಿರಾಜು ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಪ್ರತಿಯೊಬ್ಬರಿಗೂ ಅರೋಗ್ಯ ಸೇವೆ ದೊರಕಬೇಕೆಂಬ ಉದ್ದೇಶದಿಂದ ನೇತ್ರ ತಪಾಸಣೆ, ಅರೋಗ್ಯ ತಪಾಸಣೆ ಶಿಬಿರವನ್ನು ಆಯೋಜಿಸುತ್ತಿದ್ದೇವೆ. ಇದರ ಉಪಯೋಗವನ್ನು ಪಡೆದುಕೊಳ್ಳಬೇಕೆಂದು ಹೇಳಿದರು.

ರೈತರಿಗೆ ಯಾವುದೆ ಆರ್ಥಿಕ ಭದ್ರತೆ ಇರುವುದಿಲ್ಲ. ವಯೋವೃದ್ಧರಿಗೆ ನೀಡುತ್ತಿರುವ ಮಾಸಾಶನ ಯಾವುದಕ್ಕೂ ಸಾಕಾಗುವುದಿಲ್ಲ, ಇಳಿವಯಸ್ಸಿನಲ್ಲಿ ಹೆಚ್ಚಿನ ಕಾಯಿಲೆಗೆ ತುತ್ತಾಗುವುದರಿಂದ ರೈತರಿಗೂ ಹೆಚ್ಚಿನ ಮಾಸಾಶನ ನೀಡಬೇಕು. ಆರೋಗ್ಯ ಕಾರ್ಡುಗಳನ್ನು

ನೀಡಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಲೇಖಕರ ವೇದಿಕೆ ಅಧ್ಯಕ್ಷ ಕೂ.ಗಿ.ಗಿರಿಯಪ್ಪ ಮಾತನಾಡಿ, ಗ್ರಾಮೀಣ ಪ್ರದೇಶದ ಜನತೆ ಮುಗ್ಧರು ಹಾಗೂ ಅವಿದ್ಯಾವಂತರಾಗಿದ್ದು ಅವರಿಗೆ ಆರೋಗ್ಯದ ಬಗ್ಗೆ ಹೆಚ್ಚು ಜಾಗೃತಿ ಇರುವುದಿಲ್ಲ. ವಿದ್ಯೆ ಕಲಿಯುತ್ತಿರುವ ಶಾಲಾ ವಿದ್ಯಾರ್ಥಿಗಳ ಮನೆಗಳಲ್ಲಿ ಪೋಷಕರಿಗೆ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಬೇಕು. ಮನೆಯ ಸುತ್ತಲಿನ ವಾತಾವರಣದ ಸ್ವಚ್ಛತೆಯನ್ನು ಕಾಪಾಡಬೇಕೆಂದು ಹೇಳಿದರು.

ರೈತಪರ ಹೋರಾಟ ಸಂಘದ ಅಧ್ಯಕ್ಷ ಲೋಕೇಶ್‌ಗೌಡ, ರೈತ ಸಂಘದ ಜಿಲ್ಲಾ ಮುಖಂಡರಾದ ಶ್ರೀನಿವಾಸ್‌, ಬಸವರಾಜು, ತಾಲ್ಲೂಕು ಘಟಕದ ಅಧ್ಯಕ್ಷ ಶಶಿಕುಮಾರ್‌, ಹೋಬಳಿ ಘಟಕದ ಅಧ್ಯಕ್ಷ ಮರಳವಾಡಿ ಚಂದ್ರು, ಗ್ರಾಮ ಶಾಖೆಯ ಅಧ್ಯಕ್ಷ ದೇವರಾಜು, ಹಿರಿಯ ರೈತ ಮುಖಂಡ ಸಿದ್ದೇಗೌಡ, ಸ್ಥಳೀಯ ಮುಖಂಡರು ಹಾಗೂ ದೃಷ್ಟಿ ಕಣ್ಣಿನ ಆಸ್ಪತ್ರೆಯ ವೈದ್ಯೆ ಡಾ.ರಶ್ಮಿ,  ಶಿಬಿರದ  ಮ್ಯಾನೇಜರ್‌ ನವೀನ್‌ ಹಾಗೂ ಸಿಬ್ಬಂದಿ ತಪಾಸಣೆಯಲ್ಲಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry