ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಲ್ನೋಟಕ್ಕೆ ಸಹಜ; ಮನದೊಳಗೆ ದುಗುಡ

ಶಿರಸಿ: ಎಲ್ಲೆಲ್ಲೂ ಗಲಭೆಯ ಮಾತು, ಅಂಗಡಿಕಾರರಿಗೆ ಸಾಂತ್ವನ, ಪೊಲೀಸರ ಬಿಗಿ ಬಂದೋಬಸ್ತ್
Last Updated 14 ಡಿಸೆಂಬರ್ 2017, 9:08 IST
ಅಕ್ಷರ ಗಾತ್ರ

ಶಿರಸಿ: ನಗರದಲ್ಲಿ ಮಂಗಳವಾರ ನಡೆದ ಹಿಂಸಾಚಾರದ ಭೀತಿಯಿಂದ ಜನರು ಹೊರಬಂದಿಲ್ಲ. ವಾಹನ ಸಂಚಾರ, ಜನಜೀವನ ಎಂದಿನಂತೆ ಮುಂದುವರಿದಿದ್ದರೂ ಜನರ ಮನದೊಳಗಿನ ದುಗುಡ ದೂರವಾಗಿಲ್ಲ.

ಬುಧವಾರ ಮಧ್ಯಾಹ್ನ 3 ಗಂಟೆಯ ಸುಮಾರಿಗೆ ನಗರದಲ್ಲಿ ಮತ್ತೆ ಗಲಾಟೆ, ಕಲ್ಲು ತೂರಾಟ ಆರಂಭವಾಗಿದೆ ಎಂಬ ವದಂತಿ ಕಾಳ್ಗಿಚ್ಚಿನಂತೆ ಹಬ್ಬಿತು. ಸಿ.ಪಿ. ಬಜಾರ, ನಟರಾಜ ರಸ್ತೆ, ಹೊಸಪೇಟೆ ರಸ್ತೆಗಳಲ್ಲಿ ವ್ಯಾಪಾರ ನಡೆಸುತ್ತಿದ್ದ ಅಂಗಡಿಕಾರರು ಸರಸರನೆ ಅಂಗಡಿ ಮುಚ್ಚಿ ಮನೆಯ ಕಡೆಗೆ ಹೆಜ್ಜೆ ಹಾಕಿದರು. ವಾಟ್ಪ್‌ ಆ್ಯಪ್ ಗ್ರೂಪ್‌ಗಳಲ್ಲೂ ಈ ಸುದ್ದಿ ಹರಿದಾಡಿತು. ಪೇಟೆ ಕೆಲಸಕ್ಕೆ ಬಂದವರು, ಕೂಲಿಕಾರರು, ಮಕ್ಕಳನ್ನು ಶಾಲೆಗೆ ಕಳುಹಿಸಿದ ಪಾಲಕರು ಆತಂಕಗೊಂಡರು. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಅಂಗಡಿಕಾರರ ಮನವೊಲಿಸಿ ಪುನಃ ಅಂಗಡಿಯ ಬಾಗಿಲು ತೆರೆಯಿಸಿದರು.

ವಿಭಿನ್ನ ವಿಶ್ಲೇಷಣೆ: ಹಿಂದೆಂದೂ ಕಾಣದ ಹಿಂಸಾಚಾರವನ್ನು ದೃಶ್ಯ ಮಾಧ್ಯಮಗಳ ಮೂಲಕ ನೋಡಿರುವ ಜನರು ಅಕ್ಷರಶಃ ಬೆಚ್ಚಿಬಿದ್ದಿದ್ದಾರೆ. ಘಟನೆಯ ಬಗ್ಗೆ ವಿವಿಧ ಬಗೆಯ ವಿಶ್ಲೇಷಣೆಗಳು ನಡೆಯುತ್ತಿವೆ.

‘ನಾವು, ಅಕ್ಕಪಕ್ಕದ ಮನೆಯಲ್ಲಿರುವ ಹಿಂದೂ–ಮುಸ್ಲಿಮರು ಸಹೋದರತ್ವದಿಂದ ಜೀವನ ನಡೆಸುತ್ತೇವೆ. ಶಾಂತಿಗೆ ಹೆಸರಾಗಿರುವ ಶಿರಸಿಯಲ್ಲಿ ಇಂತಹ ಕಾರಣಕ್ಕೆ ಸುದ್ದಿಯಾಗಬಾರದಿತ್ತು’ ಎಂದು ಸಾಮಾಜಿಕ ಮುಖಂಡ ರಾಜು ಉಗ್ರಾಣಕರ ಅಭಿಪ್ರಾಯಪಟ್ಟರು.

‘ಶಿರಸಿಯ ಜನರು ಶಾಂತಿ ಕಾಪಾಡಿಕೊಳ್ಳಬೇಕು. ಮುಸ್ಲಿಂ ಸಮುದಾಯದ ಅನೇಕರ ಆಸ್ತಿಪಾಸ್ತಿಗಳಿಗೆ ಹಾನಿಯಾಗಿದೆ. ಜಿಲ್ಲಾಡಳಿತ, ಪೊಲೀಸರು ಈ ಬಗ್ಗೆ ತನಿಖೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಿದ್ದಾರೆ’ ಎಂದು ಕಾಂಗ್ರೆಸ್‌ ಮುಖಂಡ ಅಬ್ಬಾಸ್ ತೋನ್ಸೆ
ಹೇಳಿದರು.

ನೈಜ ಆರೋಪಿಗಳಿಗೆ ಶಿಕ್ಷೆಯಾಗಲಿ: ‘ನನ್ನ ಜೀವನದಲ್ಲಿ ನಾನು ಇಂತಹ ಸಂದರ್ಭ ನೋಡಿದ್ದು ಇದೇ ಮೊದಲು. ನಮ್ಮ ಊರಿನಲ್ಲಿ ಇದು ನಡೆಯಬಾರದಾಗಿತ್ತು. ನಮ್ಮ ಅಂಗಡಿಯ ಮೇಲೂ ಕಲ್ಲು ಬಿದ್ದು ಹಾನಿಯಾಗಿದೆ. ಮುಸ್ಲಿಂ ಸಮುದಾಯಕ್ಕೆ ಸೇರಿದ 20–25 ಆಸ್ತಿಗಳು, ನಾಲ್ಕೈದು ಮಸೀದಿಗಳಿಗೆ ಧಕ್ಕೆಯಾಗಿದೆ. ಕೈಯಲ್ಲಿ ರಾಡ್ ಹಿಡಿದು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬಂದ ಯುವಕರಲ್ಲಿ ಬಹುತೇಕರು 18ರಿಂದ 22 ವಯಸ್ಸಿನವರು. ಅವರ ಭಾಷೆ ಸಹ ಸ್ಥಳೀಯ ಆಡುಮಾತಿಗಿಂತ ಭಿನ್ನವಾಗಿತ್ತು. ಇದನ್ನು ನೋಡಿದಾಗ ಗದ್ದಲ ಮಾಡಲೆಂದೇ ಹೊರಗಿನಿಂದ ಜನರನ್ನು ಕರೆತಂದಂತೆ ಅನ್ನಿಸುತ್ತದೆ’ ಎಂದು ಎ.ಕೆ. ಎಂಟರ್ ಪ್ರೈಸಸ್‌ನ ಮುನೀರ್ ಅಹಮ್ಮದ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಈ ಯುವಕರನ್ನು ಪ್ರೇರೇಪಿಸಿ ಗಲಾಟೆ ಮಾಡಲು ಕರೆತಂದವರನ್ನು ಪತ್ತೆ ಹಚ್ಚಬೇಕು. ನಮ್ಮ ಅಂಗಡಿಯ ಸಿಸಿಟಿವಿ ಫೂಟೇಜ್‌ಗಳನ್ನು ಪೊಲೀಸರಿಗೆ ನೀಡಲಾಗುವುದು. ಅದರ ಮೂಲಕ ಆರೋಪಿಗಳನ್ನು ಪತ್ತೆ ಹಚ್ಚಬಹುದು’ ಎಂದು ಆಗ್ರಹಿಸಿದರು.

ಅಂಗಡಿಗಳಿಗೆ ಭೇಟಿ: ಸಾಂತ್ವನ: ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ ಕಾರ್ಯಕರ್ತರೊಡಗೂಡಿ ಹಾನಿ ಅನುಭವಿಸಿರುವ ಅಂಗಡಿಗಳಿಗೆ ಭೇಟಿ ನೀಡಿ ಸಾಂತ್ವನ ಹೇಳಿದರು. ‘ಜಿಲ್ಲೆಯಲ್ಲಿ ಹಿಂದೆಂದೂ ಕಾಣದ ವಾತಾವರಣ ನಿರ್ಮಾಣವಾಗಿದೆ. ಇಂತಹ ಸಂದರ್ಭಗಳು ನಮಗೆ ಅಗತ್ಯವಿತ್ತೇ ಎಂಬ ಪ್ರಶ್ನೆ ಜನರನ್ನು ಕಾಡುತ್ತಿದೆ. ಯುದ್ಧದ ವಾತಾವರಣ ಸೃ‌ಷ್ಟಿಗೆ ಕಾರಣರಾದವರು ಯಾರು ಎಂಬ ಸತ್ಯ ಹೊರಬರಬೇಕು. ರಾಜಕೀಯ ಸ್ವಾರ್ಥಕ್ಕೆ ಇಂತಹ ಕೆಲಸ ಮಾಡಬಾರದು’ ಎಂದು ಅವರು ಹೇಳಿದರು.

ಹೊರ ಜಿಲ್ಲೆಗಳಿಂದ ಬಂದಿರುವ ಪೊಲೀಸರು ನಗರದ ಎಲ್ಲೆಡೆ ಬೀಡು ಬಿಟ್ಟಿದ್ದಾರೆ. ಧಾರ್ಮಿಕ ಸ್ಥಳಗಳಿಗೆ ವಿಶೇಷ ರಕ್ಷಣೆ ನೀಡಲಾಗಿದೆ.

62 ಜನರ ವಿರುದ್ಧ ಪ್ರಕರಣ

ಬಿಜೆಪಿ ಹಾಗೂ ಹಿಂದುತ್ವದ ಕೆಲ ಸಂಘಟನೆಗಳು ಪ್ರತಿಭಟನೆ ನಡೆಸಿದ ದಿನ ಐಜಿಪಿ ಹೇಮಂತ ನಿಂಬಾಳ್ಕರ್, ಗದಗ, ಕೊಪ್ಪಳ, ಕಾರವಾರದ ಎಸ್ಪಿಗಳು, ಚಿತ್ರದುರ್ಗದ ಹೆಚ್ಚುವರಿ ಎಸ್ಪಿ ಇಲ್ಲಿದ್ದರು. ಶಿಗ್ಗಾವಿ, ಶಿವಮೊಗ್ಗದಿಂದ ಬಂದಿದ್ದ ಎಂಟು ಕೆಎಸ್‌ಆರ್‌ಪಿ ತುಕಡಿಗಳು, ರಾಜ್ಯದ ವಿವಿಧೆಡೆಗಳಿಂದ ಬಂದಿದ್ದ 350ಕ್ಕೂ ಅಧಿಕ ಪೊಲೀಸರು ಬಂದೋಬಸ್ತಿನಲ್ಲಿದ್ದರು.

ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿ 9 ಜನರು ಸ್ವಯಂ ಪ್ರೇರಣೆಯಿಂದ ಬಂಧನಕ್ಕೆ ಒಳಗಾಗಿದ್ದಕ್ಕೆ ಅವರಿಗೆ ಬೇಲ್ ದೊರೆತಿದೆ. ಗಲಭೆಗೆ ಕಾರಣರಾಗಿರುವ 62 ಜನರ ಮೇಲೆ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಮೈಕ್‌ನಲ್ಲಿ ಪ್ರಚಾರ

ನಗರದಲ್ಲಿ ಮತ್ತೆ ಯಾವುದೇ ಗಲಾಟೆ ನಡೆದಿಲ್ಲ. ಜನರು ಅನಗತ್ಯ ಆತಂಕಕ್ಕೆ ಒಳಗಾಗಬಾರದು. ಎಲ್ಲರೂ ಶಾಂತಿಯಿಂದ ಇರಬೇಕು ಎಂದು ಬುಧವಾರ ಸಂಜೆ ಪೊಲೀಸರು ಮೈಕ್‌ನಲ್ಲಿ ಪ್ರಚಾರ ನಡೆಸಿದರು.

ಸಚಿವರ ನಿಕಟವರ್ತಿಗಳು ಎಲ್ಲಿ?

‘ಪ್ರತಿಭಟನೆಯಲ್ಲಿ ಕೇಂದ್ರ ಸಚಿವ ಅನಂತಕುಮಾರ್‌ ಹೆಗಡೆ ಭಾಗವಹಿಸುವರೆಂಬ ಸುದ್ದಿ ಹರಡಿತ್ತು. ಆದರೆ ಅವರು ಅದೇ ದಿನ ಬೆಳಗಾವಿಗೆ ತೆರಳಿದ್ದರು. ಪ್ರತಿಭಟನೆಯ ಮೊದಲ ದಿನ ಹಾಗೂ ಮರುದಿನ ಶಿರಸಿಯಲ್ಲಿ ಇದ್ದ ಅವರು ಹಾಗೂ ಅವರ ನಿಕಟವರ್ತಿಗಳು ಆ ದಿನ ಮಾತ್ರ ಯಾಕೆ ಊರಿನಲ್ಲಿ ಇರಲಿಲ್ಲ. ಅವರಿಗೆ ಗಲಾಟೆ ನಡೆಯುವ ಸುಳಿವು ಇತ್ತೇ’ ಎಂದು ಕಾಂಗ್ರೆಸ್ ಪಕ್ಷದ ಹಿರಿಯರೊಬ್ಬರು ಪ್ರಶ್ನಿಸಿದರು.

**

ಬುಧವಾರ ನಗರದಲ್ಲಿ ಯಾವುದೇ ರೀತಿಯ ಗಲಾಟೆ ನಡೆದಿಲ್ಲ. ಕೆಲವರು ಸುಮ್ಮನೆ ಸುಳ್ಳು ಸುದ್ದಿ ಹಬ್ಬಿಸಿದ್ದರು.

–ನಾಗೇಶ ಶೆಟ್ಟಿ, ಡಿವೈಎಸ್ಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT