ಗುರುವಾರ , ಮಾರ್ಚ್ 4, 2021
20 °C

ಗುಡಿಸಲಿನಲ್ಲಿ ಅರಳಿದ ಗುಲಾಬಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಡಿಸಲಿನಲ್ಲಿ ಅರಳಿದ ಗುಲಾಬಿ

ಅದು ಸರಿಗಮಪ ಲಿಟ್ಲ್‌ ಚಾಂಪ್ಸ್‌ ಸೀಸನ್ 14 ಸ್ಪರ್ಧೆ. ಜೀ ಕನ್ನಡ ವಾಹಿನಿಯ ಜನಪ್ರಿಯ ಸಂಗೀತ ರಿಯಾಲಿಟಿ ಷೋ. ಸಭಾಂಗಣ ಸಭಿಕರಿಂದ ತುಂಬಿ ತುಳುಕುತ್ತಿತ್ತು. ಎಂದಿನಂತೆ ಅನುಶ್ರೀಯ ನಿರೂಪಣಾ ಶೈಲಿ ಆರಂಭವಾಯಿತು. ಹನ್ನೊಂದನೆ ಸ್ಪರ್ಧಿಯಾಗಿ ಮೆಲ್ಲನೆ ಹೆಜ್ಜೆ ಹಾಕುತ್ತಾ ಬಂದಳು ಲಕ್ಷ್ಮಿ. ತೀರ್ಪುಗಾರರಾದ ‘ನಾದಬ್ರಹ್ಮ’ ಹಂಸಲೇಖ, ವಿಜಯಪ್ರಕಾಶ್‌ ಮತ್ತು ಅರ್ಜುನ್‌ ಜನ್ಯ ಅವರ ಕಣ್ಣುಗಳು ಕಪ್ಪುಪಟ್ಟಿಯಲ್ಲಿ ಬಂಧಿತವಾದವು.

ಕೈಯಲ್ಲಿ ಮೈಕ್‌ ಹಿಡಿದ ಲಕ್ಷ್ಮಿ ಹಾಡಿದ ‘ಯಾವ ದೇಶದ ಗಂಡು ಇವನು ರಂಗಿಲಾಲಾ...’ ಜನಪದ ಗೀತೆ ಕೆಲವೇ ಸೆಕೆಂಡ್‌ಗಳಲ್ಲಿ ತೀರ್ಪುಗಾರರ ಕಣ್ಣು ತೆರೆಸಿತು. ಪರದೆ ಮೇಲೆ ಒಪ್ಪಿಗೆಯ ಹಸಿರು ಮುದ್ರೆಯೂ ಮೂಡಿತು. ಲಕ್ಷ್ಮಿಯ ಕಂಠಕ್ಕೆ ಮನಸೋತ ಹಂಸಲೇಖ ಅವರ ಮೊಗದಲ್ಲಿ ಖುಷಿ ಉಕ್ಕಿತು. ಅವರು ಮೆಲ್ಲನೆ ಕುಣಿಯಲು ಆರಂಭಿಸಿದರು. ಕೊನೆಗೆ, ವೇದಿಕೆಗೆ ಬಂದ ಮೂವರು ತೀರ್ಪುಗಾರರು ಮತ್ತೊಮ್ಮೆ ಲಕ್ಷ್ಮಿಯಿಂದ ಈ ಗೀತೆ ಹಾಡಿಸಿ ಕುಣಿದು ಸಂತಸಪಟ್ಟರು.

ಸಭಿಕರು ಕೂಡ ತಮಗೆ ಅರಿವಿಲ್ಲದಂತೆ ಕುಣಿದು ಸಂಭ್ರಮಿಸಿದರು. ಲಕ್ಷ್ಮಿ ಹಾಡಿದ ಈ ಹಾಡು ಈಗ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದೆ. ಆಕೆಗೆ ಪ್ರೋತ್ಸಾಹ ನೀಡಲು ಅಭಿಮಾನಿ ಬಳಗವೂ ಹುಟ್ಟಿಕೊಂಡಿದೆ.

ಲಕ್ಷ್ಮಿಯ ಹುಟ್ಟೂರು ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲ್ಲೂಕಿನ ಘೋಡಗೇರಿ. ತಂದೆ ರಾಮಪ್ಪ ಮತ್ತು ತಾಯಿ ಸಂಗೀತಾ. ಕೂಲಿಯೇ ಕುಟುಂಬಕ್ಕೆ ಜೀವನಾಧಾರ. ಸ್ವಂತ ಜಮೀನು ಇಲ್ಲ. ಆಕೆ ತನ್ನ ಊರಿನಲ್ಲಿರುವ ಎಸ್‌.ಎಂ.ಎಸ್. ಪ್ರೌಢಶಾಲೆಯಲ್ಲಿ ಒಂಬತ್ತನೇ ತರಗತಿ. ಆಕೆ ಹಾಡುವುದರಲ್ಲಷ್ಟೇ ಮುಂದಿಲ್ಲ. ಓದಿನಲ್ಲಿಯೂ ಮುಂದಿದ್ದಾಳೆ. ಚಿತ್ರಕಲೆಯಲ್ಲಿಯೂ ಆಕೆಗೆ ಆಸಕ್ತಿ ಇದೆ.

ಸರಿಗಮಪ ಸ್ಪರ್ಧೆಯಲ್ಲಿ ತನ್ನ ಮಗಳು ಹಾಡಬೇಕೆಂಬುದು ತಂದೆ–ತಾಯಿಯ ಮಹದಾಸೆಯಾಗಿತ್ತು. ಆ ಕ್ಷಣವನ್ನು ಕಣ್ತುಂಬಿಕೊಳ್ಳಲು ಅವರಿಬ್ಬರು ಬೆಂಗಳೂರಿಗೆ ಬಂದಿದ್ದು ಉಂಟು. ಆದರೆ, ಕಾರ್ಯಕ್ರಮ ನಡೆಯುತ್ತಿದ್ದ ಸ್ಟುಡಿಯೋದ ಸ್ಥಳ ಅವರಿಗೆ ಗೊತ್ತಾಗಲಿಲ್ಲ. ಹಾಗಾಗಿ, ಅವರು

ಅಲ್ಲಿಗೆ ಹೋಗಲಾರದೆ ಮರಳಿ ಊರಿಗೆ ಹೋಗಬೇಕಾಯಿತು.

ಲಕ್ಷ್ಮಿಗೆ ಸಂಗೀತದ ಹಿನ್ನೆಲೆಯಿಲ್ಲ. ಆದರೆ, ಮೊಬೈಲ್‌ನಲ್ಲಿ ಜನಪದ ಗೀತೆ ಕೇಳಿ ಹಾಡುವುದನ್ನು ಕಲಿತಿದ್ದಾಳೆ. ಬಿ.ಕೆ. ಸುಮಿತ್ರಾ ಅವರು ಹಾಡಿರುವ ‘ಜಾನಪದ ಮಲ್ಲಿಗೆ’ ಹೆಸರಿನಲ್ಲಿ ಈ ಹಾಡು ಯೂಟ್ಯೂಬ್‌ನಲ್ಲಿದೆ. ಎರಡು ತಿಂಗಳ ಹಿಂದೆ ಹುಕ್ಕೇರಿಯಲ್ಲಿ ಜನಪದ ಗೀತೆ ಸ್ಪರ್ಧೆ ಏರ್ಪಡಿಸಲಾಗಿತ್ತಂತೆ. ಅಲ್ಲಿ ಸ್ಪರ್ಧಿಯೊಬ್ಬರು ಈ ಹಾಡು ಹಾಡಿದ್ದರು. ಸರಿಗಮಪದಲ್ಲಿ ಈ ಹಾಡು ಹಾಡಲು ಆಕೆಗೆ ಇದೇ ಪ್ರೇರಣೆಯಾಯಿತಂತೆ.

‘ನನ್ನೂರಿನಲ್ಲಿ ಸಂಗೀತ ಕಲಿಸುವ ಗುರುಗಳಿಲ್ಲ. ಮೊಬೈಲ್‌ನಲ್ಲಿ ಹಾಡು ಕೇಳಿಸಿಕೊಂಡು ಬಾಯಿಪಾಠ ಮಾಡಿದೆ. ಸ್ಪರ್ಧೆಯಲ್ಲಿ ಹಾಡಿದಾಗ ಎಲ್ಲರಿಂದಲೂ ಮೆಚ್ಚುಗೆ ಸಿಕ್ಕಿತು’ ಎಂದಳು ಲಕ್ಷ್ಮಿ.

ಲಕ್ಷ್ಮಿಗೆ ಒಬ್ಬ ಅಣ್ಣ ಇದ್ದಾನೆ. ಆತನ ಹೆಸರು ಮಾರುತಿ. ಅವರದ್ದು ಟೈಲರ್‌ ವೃತ್ತಿ.

‘ಟಿ.ವಿ.ಯಲ್ಲಿ ನಾನು ಹಾಡಿದ್ದನ್ನು ನೋಡಿ ಎಲ್ಲರೂ ಮೆಚ್ಚುಗೆ ಸೂಚಿಸುತ್ತಿದ್ದಾರೆ. ನನ್ನಪ್ಪ, ಅಮ್ಮನಿಗೂ ಖುಷಿಯಾಗಿದೆ. ಊರಿನವರು ಸನ್ಮಾನ ಮಾಡಿದ್ದಾರೆ. ಶಾಲೆಯಲ್ಲಿ ಶಿಕ್ಷಕರು ಖುಷಿಪಟ್ಟಿದ್ದಾರೆ. ಸ್ಪರ್ಧೆಯಲ್ಲಿ ಆಯ್ಕೆಯಾಗಿರುವುದಕ್ಕೆ ನನಗೆ ಸಂತಸವಾಗಿದೆ’ ಎನ್ನುತ್ತಾಳೆ ಲಕ್ಷ್ಮಿ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.